23.2 C
Bengaluru
Friday, October 4, 2024

The Registration Karnataka Amendment Bill 2023: ನಕಲಿ ದಾಖಲೆಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳೇ ಹೊಣೆ!

#Bill #Amendment, #The Registration Karnataka amendment Bill 2023, #Registartion,

ಬೆಂಗಳೂರು, ಜು. 19: ನಕಲಿ ದಾಖಲೆಗಳ ನೋಂದಣಿಗೆ ಕಡಿವಾಣ ಹಾಕುವ ಉದ್ದೇಶದಿಂದ ತಮಿಳುನಾಡು ಸರ್ಕಾರದ ಮಾದರಿಯಲ್ಲಿ ಕರ್ನಾಟಕದಲ್ಲಿನೋಂದಣಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಈ ಕುರಿತು ರೂಪಿಸಿರುವ ನೋಂದಣಿ ( ಕರ್ನಾಟಕ ಅಮೆಂಡ್‌ಮೆಂಟ್) ಬಿಲ್ – 2023 ಮಸೂದೆಗೆ ಬುಧವಾರ ವಿಧಾನಸಭೆಯ ಎರಡೂ ಸದನಗಳಲ್ಲಿ ಅಂಗೀಕಾರ ದೊರೆತಿದೆ. ಇನ್ನೇನು ರಾಷ್ಟ್ರಪತಿಗಳ ಅಂಕಿತ ಆದ ಕೂಡಲೇ ಅದು ಕರ್ನಾಟಕದಲ್ಲಿ ಜಾರಿಗೆ ಬರಲಿದೆ. ಇದು ಜಾರಿಗೆ ಬಂದ ಬಳಿಕ ನಕಲಿ ದಾಖಲೆಗಳ ನೋಂದಣಿ ಮಾಡಿದರೆ ಉಪ ನೋಂದಣಾಧಿಕಾರಿಗಳು ಕ್ರಿಮಿನಲ್ ದಾವೆ ಎದುರಿಸಲಿದ್ದಾರೆ. ರಾಜ್ಯದ ಮಹಾನಗರ ಪಾಲಿಕೆ, ನಗರ ಸಭೆಗಳ ಸ್ವತ್ತುಗಳು ಇಂಟಿಗ್ರೇಡ್ ಅಗಿರದ ಕಾರಣ ನಕಲಿ ಆಸ್ತಿ ನೋಂದಣಿ ಪತ್ತೆ ಹಚ್ಚುವುದೇ ಕಷ್ಟವಾಗಿದ್ದು, ಉಪ ನೋಂದಣಾಧಿಕಾರಿಗಳನ್ನು ಈ ತಿದ್ದುಪಡಿ ಮಸೂದೆ ಆತಂಕಕ್ಕೆ ತಳ್ಳಿದೆ.

2021 ರಲ್ಲಿ ತಮಿಳುನಾಡು ಸರ್ಕಾರ ಇದೇ ಮಾದರಿಯ ನೋಂದಣಿಗೆ ತಿದ್ದುಪಡಿ ಬಿಲ್ ನ್ನು ಪಾಸು ಮಾಡಿತ್ತು. ರಾಷ್ಟ್ರಪತಿಗಳ ಅಂಕಿತವೂ ದೊರೆತಿದೆ. ಮೂಲ ನೋಂದಣಿ ನಿಯಮಗಳಿಗೆ ತದ್ವಿರುದ್ಧವಾಗಿದೆ ಎಂದು ಅಪಸ್ವರ ಎತ್ತಿ ಹೈಕೋರ್ಟ್‌ ಮೊರೆ ಹೋಗಿದ್ದರೂ ಹೈಕೋರ್ಟ್‌ ವಿಭಾಗೀಯ ಪೀಠ ತಮಿಳುನಾಡು ಸರ್ಕಾರದ ಮಸೂದೆಯನ್ನು ಅಂಗೀಕರಿಸಿ ಆದೇಶ ಹೊರಡಿಸಿತ್ತು. ಅದೇ ಮಾದರಿಯ ನೋಂದಣಿ ತಿದ್ದುಪಡಿ ನಿಯಮಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ. ಈ ತಿದ್ದುಪಡಿ ಮಸೂದೆಯ ಉದ್ದೇಶ ಸರಿಯಿದೆ. ಆದರೆ, ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಸ್ವತ್ತುಗಳ ಮಾದರಿಯಲ್ಲಿ ನಗರಸಭೆ, ಮಹಾನಗರ ಪಾಲಿಕೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸ್ವತ್ತುಗಳು ಆನ್‌ಲೈನ್ ನಲ್ಲಿ ಇಂಟ್ರಿಗ್ರೇಟ್ ಅಗಿರದ ಕಾರಣ ನಕಲಿ ನೊಂದಣಿ ತಡೆಯುವುದು ಉಪ ನೋಂದಣಾಧಿಕಾರಿಗಳ ಕಷ್ಟವಾಗಲಿದೆ. ಇದರಿಂದ ಅಗುವ ನಕಲಿ ದಾಸ್ತವೇಜುಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳು ತಲೆಯೊಡ್ಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ನೋಂದಣಿ ನಿಯಮಗಳ ತಿದ್ದುಪಡಿ ಕಾಯಿದೆ ಬಗ್ಗೆ ಉಪ ನೋಂದಣಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನಕಲಿ ದಾಖಲೆಗಳನ್ನು ಆಧರಿಸಿ ನೋಂದಣಿ ಮಾಡುವ ಅಕ್ರಮ ವಹಿವಾಟುಗಳಿಗೆ ಕಡಿವಾಣ ಹಾಕುವ ಸದುದ್ದೇಶ ಹೊಂದಿದ್ದರೂ ಈ ತಿದ್ದುಪಡಿ ನಿಯಮಗಳು ಭ್ರಷ್ಟಾಚಾರ ಹಾಗೂ ವಿಳಂಬಕ್ಕೆ ಕಾರಣವಾಗಲಿದೆ. ನೋಂದಣಿಗೆ ಬರುವ ದಾಸ್ತವೇಜುಗಳ ಪರಿಶೀಲನೆಗೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ನಕಲಿ ದಾಖಲೆಗಳ ತಪಾಸಣೆಗೆ ಪ್ರತ್ಯೇಕ ಅಧಿಕಾರಿಗಳನ್ನೇ ನೇಮಿಸಬೇಕು. ಇಲ್ಲವೇ ನಗರಸಭೆ, ಮಹಾನಗರ ಪಾಲಿಕೆಗಳ ಸ್ವತ್ತುಗಳು ಇಂಟಿಗ್ರೇಡ್ ಮಾಡಬೇಕು. ಕಾಯಿದೆ ಜಾರಿ ಜೊತೆಗೆ ಸರ್ಕಾರ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಬೇಕಿದೆ ಎಂಬ ಮಾತು ಉಪ ನೋಂದಣಾಧಿಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.

ಇಲ್ಲದಿದ್ದರೆ, ಪಾಲಿಕೆಗಳಲ್ಲಿ ನೀಡುವ ನಕಲಿ ದಾಖಲೆ, ಪಾಲಿಕೆಗಳ ಹೆಸರಿನಲ್ಲಿ ವ್ಯಕ್ತಿಗಳು ಸೃಷ್ಟಿಸುವ ನಕಲಿ ದಾಖಲೆಗಳನ್ನು ತ್ವರಿತವಾಗಿ ಪರಿಶೀಲನೆ ಮಾಡುವುದು ಸದ್ಯದ ವ್ಯವಸ್ಥೆಯಲ್ಲಿ ಕಷ್ಟಕರವಾಗಲಿದೆ. ಆಕಸ್ಮಿಕ ನಕಲಿ ದಾಖಲೆಗಳ ನೋಂದಣಿಯಾದರೆ ಉಪ ನೋಂದಣಾಧಿಕಾರಿಗಳೇ ಹೊಣೆಯಾಗಲಿದ್ದು, ಕ್ರಿಮಿನಲ್ ದಾವೆ ಎದುರಿಸುವಂತಾಗಲಿದೆ.

ನೋಂದಣಿ ( ಕರ್ನಾಟಕ ತಿದ್ದುಪಡಿ ) 2023 ಮಸೂದೆಯನ್ನು ರಾಜ್ಯ ಸರ್ಕಾರ ಎರಡೂ ಸದನದಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದಿದೆ. ಅನುಮೋದನೆ ಬಳಿಕ ಕೇಂದ್ರ ಕಾಯಿದೆ ಆಗಿರುವ ಕಾರಣ ರಾಷ್ಟ್ರಪತಿಗಳ ಅಂಕಿತ ಪಡೆದ ಬಳಿಕ ಕಾಯ್ದೆಯಾಗಿ ರಾಜ್ಯಕ್ಕೆ ಅನ್ವಯ ಆಗುವಂತೆ ಜಾರಿಗೆ ಬರಲಿದೆ. ಭಾರತೀಯ ಮೂಲ ನೋಂದಣಿ ಕಾಯ್ದೆ 1908 ಯ ನಿಯಮಕ್ಕೆ 22a, 22b, 22c ಹಾಗೂ 22d ಸೇರ್ಪಡೆ ಮಾಡಿದ್ದು ಇದನ್ನು ನೋಂದಣಿ (ಕರ್ನಾಟಕ ತಿದ್ದುಪಡಿ) ಕಾಯ್ದೆಎಂದು ಹೇಳಲಾಗಿದೆ.

Amendment bill Rule : 22B: ಹೊಸ ನಿಯಮ ಸೇರ್ಪಡೆ ಮಾಡಿದ್ದು ಇದರ ಪ್ರಕಾರ, ನಕಲಿ ದಾಖಲೆಗಳನ್ನು ಅಥವಾ ಕಾನೂನು ಅಡಿಯಲ್ಲಿ ನಿಷೇಧಿತ ದಾಖಲೆಗಳನ್ನು ಉಪ ನೋಂದಣಾಧಿಕಾರಿ ಇಂತಹ ನೋಂದಣಿ ನಿರಾಕರಿಸಬೇಕು.

ನಕಲಿ ದಾಖಲೆಗಳು, ಕೇಂದ್ರ ಅಥವಾ ರಾಜ್ಯ ಕಾಯ್ದೆಗಳ ಅಡಿ ನಿಷೇದಿತ ದಾಖಲೆಗಳು, ಸೇಲ್ ಡೀಡ್, ಗಿಫ್ಟ್ ಡೀಡ್, ಯಾವುದೇ ಅಸ್ತಿಗಳ ಪತ್ರಗಳನ್ನು ತನಿಖಾ ಸಂಸ್ಥೆಗಳು ಜಪ್ತಿ ಮಾಡಿಕೊಂಡಿದ್ದರೆ ಅಂತಹ ಅಸ್ತಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುವ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ನೋಂದಣಿ ಮಾಡಬಾರದು ಎಂದು ಹೇಳಲಾಗಿದೆ.

ವಾಸ್ತವದಲ್ಲಿ ನಕಲಿ ದಾಖಲೆಗಳನ್ನು ಕಂಡು ಹಿಡಿಯಲು ಉಪ ನೋಂದಣಾಧಿಕಾರಿಗಳಿಗೆ ಯಾವುದೇ ಹಾದಿ ಇಲ್ಲ. ನೋಂದಣಿಗಾಗಿ ಸಲ್ಲಿಸುವ ದಾಸ್ತವೇಜುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ನೈಜತೆ ಬಗ್ಗೆ ದೃಢೀಕರಿಸಿಕೊಂಡೇ ನೋಂದಣಿ ಮಾಡಬೇಕಾಗುತ್ತದೆ. ಈ ಕಾರ್ಯ ಮಾಡಿ ನೊಂದಣಿ ಮಾಡಬೇಕಾದರೆ ಒಂದು ದಾಸ್ತವೇಜು ನೋಂದಣಿಗೆ ತಿಂಗಳುಗಳೇ ಬೇಕಾಗುತ್ತದೆ ಎಂದು ಉಪ ನೋಂದಣಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಉಪ ನೋಂದಣಾಧಿಕಾರಿಗಳ ಹುದ್ದೆ ಕರ್ತವ್ಯದ ಬಗ್ಗೆ ಭಾರತೀಯ ನೋಂದಣಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಉಪ ನೋಂದಣಾಧಿಕಾರಿಗಳು ದಾಸ್ತವೇಜುಗಳನ್ನು ನೋಂದಣಿ ಮಾಡಿ ಸರ್ಕಾರಕ್ಕೆ ಬರಬೇಕಾಗಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹಿಸುವ ಸರ್ಕಾರದ ಪ್ರತಿನಿಧಿಗಳು. ಇವರು ದಾಖಲೆಗಳ ಅಸಲಿ , ನೈಜತೆ ಪರಿಶೀಲಿಸುವ ಹೊಣೆ ಅವರಿಗೆ ವಹಿಸಿಲ್ಲ. ಆದ್ರೆ ಅಕ್ರಮಕ್ಕೆ ತಡೆಯೊಟ್ಟುವ ನೆಪದಲ್ಲಿ ದಾಸ್ತವೇಜುಗಳ ನೋಂದಣಿ ವಿಚಾರದಲ್ಲಿ ದಾಖಲೆಗಳ ಪರಿಶೀಲನೆಯನ್ನು ಉಪ ನೋಂದಣಾಧಿಕಾರಿಗಳಿಗೆ ಹೊರಿಸಿರುವುದು ಬಾರೀ ಚರ್ಚೆಗೆ ನಾಂದಿ ಹಾಡಿದೆ.

Amendment bill Rule : 22C ಏನೇಳುತ್ತದೆ ? : ನಕಲಿ ದಾಖಲೆಗಳನ್ನು ಅಧರಿಸಿ ಯಾವುದೇ ಪತ್ರಗಳನ್ನು ಉಪ ನೋಂದಣಾಧಿಕಾರಿ ನೋಂದಣಿ ಮಾಡಿದ್ದರೆ, ಈ ಸಂಬಂಧ ಸಂತ್ರಸ್ತರು ಜಿಲ್ಲಾ ನೋಂದಣಾಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅಥವಾ ಸಂತ್ರಸ್ಥರ ದೂರು ಆಧರಿಸಿ ಉಪ ನೋಂದಣಾಧಿಕಾರಿ ಮಾಡಿರುವಂತಹ ನೋಂದಣಿಯನ್ನು ರದ್ದು ಪಡಿಸಬಹುದು. ರದ್ದು ಪಡಿಸುವ ಮುನ್ನ ಎರಡೂ ಕಡೆ ಪಾರ್ಟಿಗಳನ್ನು ವಿಚಾರಣೆ ನಡೆಸಿ ನೋಂದಣಿ ರದ್ದು ಪಡಿಸಿ ಸಂಬಂಧಿಸಿದ ನೋಂದಣಿ ಪುಸ್ತಕಗಳಲ್ಲಿ ನಮೂದಿಸಬಹುದು. ಈ ತಿದ್ದುಪಡಿ ಮಸೂದೆಯಲ್ಲಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ನಕಲಿ ನೋಂದಣಿಗಳನ್ನು ರದ್ದು ಪಡಿಸಲು ಸುಮೋಟೋ ಅಧಿಕಾರವನ್ನು ನೀಡಲಾಗಿದೆ.

ಈ ನಿಯಮದ ಬಗ್ಗೆ ಯಾವುದೇ ಅಪಸ್ವರವಿಲ್ಲ. ಈ ನಿಯಮ ಸೇರ್ಪಡೆಯಿಂದ ಅಕ್ರಮ ನೋಂದಣಿಗಳನ್ನು ಜಿಲ್ಲಾ ನೋಂದಣಾಧಿಕಾರಿಗಳು ರದ್ದು ಪಡಿಸಬಹುದು. ಇದರಿಂದ ಅಕ್ರಮ ನೋಂದಣಿ ರದ್ದತಿಗೆ ಜನರು ಕೋರ್ಟ್‌ ಕಚೇರಿ ಅಲೆಯುವುದು ತಪ್ಪಿಸಿದಂತಾಗಿದೆ. ಈ ನಿಯಮ ಅಗತ್ಯವಿತ್ತು ಎಂಬ ಅಭಿಪ್ರಾಯ ಹೊರ ಬೀಳುತ್ತಿದೆ.

22D ನಿಯಮ: ಈ ಹೊಸ ನಿಯಮ ಸೇರ್ಪಡೆಯಿಂದಾಗಿ, ಜಿಲ್ಲಾ ನೋಂದಣಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಇನ್‌ಸ್ಪೆಕ್ಟರ್ ಜನರಲ್ ಅಫ್ ರಿಜಿಸ್ಟ್ರೇಷನ್ ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜಿಲ್ಲಾ ನೋಂದಣಾಧಿಕಾರಿಗಳ ಆದೇಶ ತಿದ್ದುಪಡಿ, ರದ್ದು ಮಾಡುವ ಅಧಿಕಾರ ಐಜಿಅರ್ ಗೆ ನೀಡಲಾಗಿದೆ.

ನೋಂದಣಿ ಕಾಯ್ದೆ 1908 ( ಪ್ರಧಾನ ಕಾಯ್ದೆ) ಸೆಕ್ಷನ್ 69 ಕ್ಕೆ ತಿದ್ದುಪಡಿ ಮಾಡಿ ಉಪ ಸೆಕ್ಷನ್ 1 ಅಡಿ ನೋಂದಣಿ ದಾಖಲೆಗಳ ರದ್ದು ಪಡಿಸುವ ಸಂಬಂಧ ಉಪ ನಿಯಮಗಳನ್ನು ಸೇರ್ಪಡೆ ಮಾಡಲಾಗಿದೆ.

ದಂಡನಾರ್ಹ ಸೆಕ್ಷನ್ ಸೇರ್ಪಡೆ: ಮೂಲ ನೋಂದಣಿ ಕಾಯ್ದೆ 1908 ರ ಸೆಕ್ಷನ್ 81 ಕ್ಕೆ 81-A, 81-B ಸೇರ್ಪಡೆ ಮಾಡಿದ್ದು, ನಕಲಿ ದಾಖಲೆಗಳನ್ನು ನೋಂದಣಿ ಮಾಡಿದರೆ ಕೈಗೊಳ್ಳಬಹುದಾದ ಕ್ರಮ ಕುರಿತ ದಂಡನಾರ್ಹ ಶಿಕ್ಷೆಗಳನ್ನು ಅಳವಡಿಸಲಾಗಿದೆ.

81 -A : ಇದರ ಪ್ರಕಾರ, ನಕಲಿ ದಾಖಲೆಗಳನ್ನು ನೋಂದಣಿ ಮಾಡಿದರೆ ಅಂತವರ ವಿರುದ್ಧ ಮೂರು ವರ್ಷ ಸಾಧಾರಣ ಸಜೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ನೀಡಿದೆ.

81 -B ಅಕ್ರಮ ಎಸಗಿದ ಸಂಸ್ಥೆ, ವ್ಯಕ್ತಿ , ಟ್ರಸ್ಟ್ ಇನ್ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಶಿಕ್ಷಾರ್ಹ ಕ್ರಮ ಜರುಗಿಸಬಹುದು ಎಂದು ತಿದ್ದುಪಡಿ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

ಆತಂಕದಲ್ಲಿ ಉಪ ನೋಂದಣಾಧಿಕಾರಿಗಳು: ಕರ್ನಾಟಕ ಸರ್ಕಾರ ತರುತ್ತಿರುವ ನೋಂದಣಿ ( ಕರ್ನಾಟಕ ತಿದ್ದುಪಡಿ – 2023) ನಿಯಮ ತಿದ್ದುಪಡಿ ಮಸೂದೆಯಲ್ಲಿ ನಕಲಿ ದಾಖಲೆಗಳ ನೋಂದಣಿಗೆ ಉಪ ನೋಂದಣಾಧಿಕಾರಿಗಳನ್ನೇ ಹೊಣೆ ಮಾಡಲಾಗಿದೆ. ನೋಂದಣಿಗೆ ಬರುವ ದಾಸ್ತವೇಜುಗಳ ನೈಜತೆ ಪರಿಶೀಲಿಸಲು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಅದಕ್ಕಿಂತಲೂ ಮಿಗಿಲಾಗಿ ಮಹಾನಗರ ಪಾಲಿಕೆಯ ಸ್ವತ್ತುಗಳು ಗ್ರಾಮ ಪಂಚಾಯಿತಿ ಇ ಸ್ವೊತ್ತು ಮಾದರಿಯಲ್ಲಿ ತಂತ್ರಜ್ಞಾನದಲ್ಲಿ ಲಭ್ಯವಿಲ್ಲ. ಹೀಗಾಗಿ ನಗರಸಭೆ, ಮಹಾನಗರ ಪಾಲಿಕೆ, ಪಾಲಿಕೆ ಸ್ವತ್ತುಗಳ ನೋಂದಣಿ ಸಂದರ್ಭ ಎದುರಾದರೆ, ನಕಲಿ ಅಸಲಿ ನೈಜತೆ ಪರಿಶೀಲನೆ ನಡೆಸುವುದು ಉಪ ನೋಂದಣಾಧಿಕಾರಿಗಳಿಗೆ ಈಗಿನ ಕೆಲಸದ ಒತ್ತಡದಲ್ಲಿ ಸಾಧ್ಯವೇ ಇಲ್ಲ. ಹೀಗಾಗಿ ದಾಖಲೆಗಳ ನೈಜತೆ ಪರಿಶೀಲನೆಗೆ ಒಬ್ಬ ಡಿಸಿಗ್ನೇಟೆಡ್ ಅಧಿಕಾರಿಯನ್ನು ನೇಮಿಸುವುದು ಸೂಕ್ತ. ಅಲ್ಲದೇ ಪಾಲಿಕೆ ಆಸ್ತಿಗಳ ದಾಖಲೆಗಳ ನೈಜತೆಯನ್ನು ತಂತ್ರಜ್ಞಾನ ಬಳಸಿ ಪರಿಶೀಲನೆ ಮಾಡಲು ವ್ಯವಸ್ಥೆ ಮಾಡುವ ತುರ್ತು ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಈ ವಿಷಯದ ಬಗ್ಗೆ ಮಾನ್ಯ ಕಂದಾಯ ಸಚಿವರು ಗಮನ ಹರಿಸಬೇಕಿದೆ ಎಂ ಬ ಅಭಿಪ್ರಾಯಗಳು ಅಧಿಕಾರಿ ವಲಯದಲ್ಲಿ ಕೇಳಿ ಬರುತ್ತಿವೆ.

 

Related News

spot_img

Revenue Alerts

spot_img

News

spot_img