22.7 C
Bengaluru
Tuesday, June 25, 2024

ಐದು ದಶಕಗಳಿಂದ ಭೂಮಾಲೀಕರಿಗೆ ಪರಿಹಾರ ನೀಡಲು ವಿಫಲವಾದ ಬಿಡಿಎಗೆ ದಂಡ ವಿಧಿಸಿದ ಹೈಕೋರ್ಟ್ !

ಬೆಂಗಳೂರು (ಅ.28): ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಐದು ದಶಕಗಳೇ ಕಳೆದರೂ ಪರಿಹಾರ ನೀಡದ ಬಿಡಿಎ ಕ್ರಮವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.ಅಲ್ಲದೆ, ಬಿಡಿಎ ಇನ್ನಾದರೂ ಬುದ್ಧಿ ಕಲಿಯಬೇಕು ಎಂದು ಹೇಳಿರುವ ನ್ಯಾಯಾಲಯ, ‘ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು,” ಎಂದು ಎಚ್ಚರಿಕೆ ನೀಡಿ ಪ್ರಾಧಿಕಾರಕ್ಕೆ 25 ಸಾವಿರ ರೂ. ದಂಡ ವಿಧಿಸಿದೆ.

ಆರ್.ಟಿ.ನಗರದ ಕಾವಲ್ಬೈರಸಂದ್ರದ ಎ.ಲಕ್ಷ್ಮೀಪತಿ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಸಿಜೆ ಪಿ.ಬಿ.ವರ್ಲೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಭೂಮಾಲೀಕರಿಗೆ ಪಾವತಿಸಬೇಕಾದ 45,150 ರೂ. ಪರಿಹಾರ ಮೊತ್ತ ಹಾಗೂ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ 25 ಸಾವಿರ ರೂ.ಗಳನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

‘‘ಅರ್ಜಿದಾರರು ಕಾನೂನು ಹೋರಾಟಕ್ಕೂ ಆರ್ಥಿಕ ಸಮಸ್ಯೆ ಎದುರಿಸಿದ್ದಾರೆ. ಬಿಡಿಎ ನಿರ್ಲಕ್ಷ್ಯದಿಂದ ಇದೆಲ್ಲವೂ ಬಿಡಿಎಗೆ ಬಿಸಿ ತಟ್ಟಿದೆ. ಬಿಡಿಎ ಬುದ್ಧಿ ಕಲಿತು ಮುಂದೆ ಹೀಗಾಗಬಾರದು. ಹಾಗಾಗಿ 25 ಸಾವಿರ ರೂ. ದಂಡ ವಿಧಿಸಲಾಗುತ್ತಿದ್ದು, ಬಿಡಿಎ ಭೂಮಿ ಕಳೆದುಕೊಂಡವರಿಗೆ ಹಣ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:
1972-73ರಲ್ಲಿ ಬಡಾವಣೆ ನಿರ್ಮಾಣಕ್ಕಾಗಿ ಮಠದಹಳ್ಳಿಯಲ್ಲಿ ಅರ್ಜಿದಾರರಿಗೆ ಸೇರಿದ 3 ಎಕರೆ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಅದಕ್ಕಾಗಿ 45,150 ರೂ. ಪರಿಹಾರವನ್ನು ನಿವಾರಿಸಲಾಗಿದೆ. ಆದರೆ, ಐದು ದಶಕಗಳು ಕಳೆದರೂ ಪರಿಹಾರ ಸಿಕ್ಕಿಲ್ಲ. ನ್ಯಾಯ ದೊರಕಿಸಿಕೊಡಲು ಜಮೀನು ಕಳೆದುಕೊಂಡವರು ಕಚೇರಿಯಿಂದ ಕಚೇರಿಗೆ ಅಲೆದಾಡಿ ಕೊನೆಗೆ ನ್ಯಾಯಾಲಯದ ಮೊರೆ ಹೋದರು. ಏಕಸದಸ್ಯ ಪೀಠವು ಭೂ ಪರಿಹಾರಕ್ಕೆ ಸಂಬಂಧಿಸಿದಂತೆ 2022ರ ನವೆಂಬರ್ 3ರಂದು ಆದೇಶ ನೀಡಿತ್ತು.ಆದರೆ ನ್ಯಾಯಾಲಯದ ಆದೇಶವನ್ನ ಬಿಡಿಎ ಪಾಲಿಸಿಲ್ಲ. ಅದಕ್ಕಾಗಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಅಂದಿನ ಬಿಡಿಎ ಆಯುಕ್ತ ಕುಮಾರ್ ನಾಯಕ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.

Related News

spot_img

Revenue Alerts

spot_img

News

spot_img