ಬೆಂಗಳೂರು, ಡಿ. 07: ಯಾವುದೇ ಆಸ್ತಿಯ ದಾಖಲೆಗಳನ್ನು ಪರಿಗಣಿಸುವಾಗ ಗ್ರಾಮ ನಕ್ಷೆಯನ್ನು ನೋಡುತ್ತಾರೆ. ಅಂದಹಾಗೆ ಗ್ರಾಮ ನಕ್ಷೆ ಎಂದರೇನು ? ಅದರ ಮಹತ್ವ ಏನು ?ಇದರ ಸ್ವರೂಪ ಹೇಗಿರುತ್ತದೆ ? ಗ್ರಾಮ ನಕ್ಷೆಯಲ್ಲಿ ಏನೆಲ್ಲಾ ವಿಚಾರಗಳು ಇರುತ್ತವೆ ಎಂಬುದರ ಸಮಗ್ರ ವಿವರ ಇಲ್ಲಿದೆ. ಇದು ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು!
ಗ್ರಾಮ ನಕ್ಷೆ:- ಗ್ರಾಮ ನಕ್ಷೆಯು ಒಂದು ರೇಕಾ ಚಿತ್ರ(Sketch). ಇದು ಒಂದು ಗಡಿಯನ್ನು ಹೊಂದಿರುತ್ತದೆ. ಇದು ಆ ಗ್ರಾಮಕ್ಕೆ ಸಂಬಂಧಪಟ್ಟ ಜಮೀನುಗಳು, ಮನೆಗಳು, ಗ್ರಾಮಠಾಣಾ ನಿವೇಶನಗಳು , ಸರ್ವೇ ನಂಬರ್‌ಗಳು, ಮನೆ ನಂಬರ್‌ಗಳು, ರಸ್ತೆಗಳು, ಬಂಡಿದಾರಿ, ಗೋಮಾಳಾ, ಕೆರೆ, ನದಿ, ಅರಣ್ಯ, ದೇವಾಲಯ, ಚರ್ಚ್, ಮಸೀದಿ, ಸ್ಮಾಶಾನ, ರೈಲ್ವೆ ಅಳಿ ಹಾಗೂ ಇನ್ನಿತರ ಎಲ್ಲಾ ಅಂಶಗಳನ್ನು ಹೊಂದಿರುತ್ತದೆ.
ಗ್ರಾಮನಕ್ಷೆಯನ್ನು ತಹಶೀಲ್ದಾರರು, ಸರ್ವೇ ಅಧಿಕಾರಿಗಳು ನಿರ್ವಹಿಸುತ್ತಾರೆ. ಗ್ರಾಮನಕ್ಷೆಯಲ್ಲಿ ಜನರು ವಾಸಿಸುವ ಮೂಲ ನಿವೇಶನ ಹಾಗೂ ಮನೆಗಳು ಇರುವ ಜಾಗವನ್ನು ಗ್ರಾಮಠಾಣಾ ಎನ್ನುತ್ತಾರೆ. ಗ್ರಾಮಠಾಣಾ ನಿವೇಶನ/ಮನೆಯನ್ನು ಖಾನೇಶುಮಾರಿ ನಂಬರ್‌ಗಳಿಂದ ಗುರುತಿಸುತ್ತಾರೆ. ಗ್ರಾಮಠಾಣಾ ನಿವೇಶನಗಳಿಗೆ ಭೂಪರಿವರ್ತನೆ ಹಾಗೂ ನಕ್ಷೆಯ ಅವಶ್ಯಕತೆ ಇರುವುದಿಲ್ಲ ಅದ್ದರಿಂದ ಇತ್ತಿಚ್ಚಿನ ನೂನಿನ ಅನ್ವಯ ಯಾವುದೇ ತೊಡಕಿಲ್ಲದೆ ಗ್ರಾಮಪಂಚಾಯಿತಿ ಕಛೇರಿಯಲ್ಲಿ ಇ-ಸ್ವತ್ತು ಖಾತಾ ಸಿಗುತ್ತದೆ.
ಈ ಹಿಂದೆ ಸ್ವಾಧೀನ ಹಾಗೂ ಅನುಭೋಗಗಳ ಅನ್ವಯ ಗ್ರಾಮಗಳಲ್ಲಿನ ಜಮೀನುಗಳನ್ನು ವಿಂಗಡಿಸಿ ಅವುಗಳಿಗೆ ಸರ್ವೇನಂಬರ್‌ಗಳನ್ನು ನೀಡಿರುತ್ತಾರೆ. ಕೆಲವು ಗ್ರಾಮಗಳು ಕೇವಲ ಬೆರಳೆಣಿಕೆಯಷ್ಟು ಸರ್ವೇನಂಬರ್‌ಗಳುಳ್ಳ ಸಣ್ಣ ಗ್ರಾಮಗಳಾಗಿರಬಹುದು. ಇನ್ನೂ ಕೆಲವು ಗ್ರಾಮಗಳು ನೂರಾರು ಸರ್ವೇನಂಬರ್‌ಗಳುಳ್ಳ ದೊಡ್ಡಗ್ರಾಮಗಳಿರಬಹುದು. ಇವುಗಳಲ್ಲಿ ಕೆಲವು ಸರ್ವೇನಂಬರ್‌ಗಳಲ್ಲಿ ಕೆರೆ ಇದ್ದು ಆರ್.ಟಿ.ಸಿ ಯಲ್ಲಿ ಅದನ್ನು ಸರ್ಕಾರಿ ಕೆರೆಯೆಂದು ದಾಖಲಿಸಿರುತ್ತಾರೆ.
ಇನ್ನೂ ಕೆಲವು ಸರ್ವೇನಂಬರ್‌ಗಳಲ್ಲಿ ಬೆಟ್ಟ ಅಥವಾ ಗುಡ್ಡ, ನದಿ ಗೋಮಾಳ, ಮುಫತ್ ಕಾವಲ್ ಎಂದು ದಾಖಲಿಸಿ ಇವೆಲ್ಲ ಸರ್ಕಾರ ಎಂದು ಆರ್.ಟಿ.ಸಿ ಯಲ್ಲಿ ನಮೂದಿಸಿರುತ್ತಾರೆ. ಇನ್ನೂ ಕೆಲವು ವಿಶೇಷ ಸಂದರ್ಭಗಳಲ್ಲಿ ಭೂಮಿಯು ತುಂಬಾ ಶಿಥಿಲವಾಗಿ ಅಲ್ಲಿಗೆ ಕಾಲಿಟ್ಟರೆ ಆ ಮನುಷ್ಯನು ಮುಳುಗುತ್ತಾನೆ, ಬೆಳೆ ನಿಲ್ಲುವುದಿಲ್ಲ ಈ ರೀತಿ ಜಮೀನು ಸಹ ಖಾಸಗಿ ಅಥವಾ ಸರ್ಕಾರಿ ಜಮೀನುಗಲಾಗಿರಬಹುದು.
ವರ್ಷಗಳು ಕಳೆದಂತೆ ಸರ್ಕಾರ ಎಂದು ಆರ್.ಟಿ.ಸಿಯಲ್ಲಿ ನಿಗದಿ ಪಡಿಸಿರುವ ಜಮೀನುಗಳು ಭೂಮಿಯ ಹವಮಾನದ ಪರಿಣಾಮವಾಗಿ ಕೆಲವು ಜಮೀನುಗಳು ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಸೂಕ್ತವಾಗಬಹುದು. ಇವುಗಳನ್ನು ಸರ್ಕಾರವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಾದ ನಿವೃತ ಮಿಲಿಟರಿ ಅಧಿಕಾರಿಗಳು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದೂಳಿದ ವರ್ಗಗಳಿಗೆ ಸೂಕ್ತ ನಿಬಂಧನೆಗಳ ಮೇರೆಗೆ ಗ್ರಾಂಟ್ ಸಹ ಮಾಡಬಹುದು.
ಈ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದವರಿಗೆ ನೀಡಿದ ಜಮೀನುಗಳು ಪಿಟಿಸಿಎಲ್ ಕಾಯಿದೆ ವ್ಯಾಪ್ತಿಗೆ ಬಂದು ಅದನ್ನು ಮಾರಲು ಸಾಕಷ್ಟು ನಿರ್ಭಂದಗಳಿರುತ್ತವೆ. ಅನಿವಾರ್ಯವಾದರೆ ಸರ್ಕಾರದಿಂದ ಅನುಮತಿಯನ್ನು ಪಡೆದು ಅಷ್ಟೇ ಜಮೀನನ್ನು ಬೇರೆ ಕಡೆ ಖರೀದಿಮಾಡಿ ಮಾರಬಹುದಾಗಿದೆ.
ಇನ್ನಿತರ ಜನಾಂಗದವರಿಗೆ ಸರ್ಕಾರವು ನೀಡುವ ಜಮೀನುಗಳಿಗೆ ಪರಭಾರೆ ಅವಧಿ ಮುಗಿದ ನಂತರ ಮಾರಟ ಮಾಡಲು ಯಾವುದೇ ಅಡೇ ತಡೆಗಳಿರುವುದಿಲ್ಲ.
ಎಲ್ಲಾ ರೀತಿಯ ಸರ್ಕಾರ ನೀಡಿರುವ ಜಮೀನುಗಳಿಗೆ ಅವಧಿಗೆ ಮುಂಚೆ ಮಾರಾಟ ಮಾಡಿದರೆ ಆ ಜಮೀನಿನ ಕಿಮ್ಮತ್ತನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸರ್ಕಾರದ ಅನುಮತಿ ಇಲ್ಲದೇ ಮಾರಿದರೆ ಅವರಲ್ಲಿ ಯಾರಾದರೂ ಒಬ್ಬರು ಸಹಾಯಕ ಆಯುಕ್ತರಿಗೆ ಅರ್ಜಿ ಸಲ್ಲಿಸದರೆ ಸಹಾಯಕ ಆಯುಕ್ತರು ಆ ಕ್ರಯಾ ಪತ್ರವನ್ನು ರದ್ದುಪಡಿಸಿ ಪುನಃ ಮೂಲಮಂಜೂರಾತಿದಾರರಿಗೆ ಮಂಜೂರು ಮಾಡಬಹುದಾಗಿದೆ. ಈ ವಿಚಾರದಲ್ಲಿ ಕೊಟ್ಟವನು ಕೊಡಂಗಿ ಇಸ್ಕೋಂಡವ್ನು ವೀರಭದ್ರವೆಂಬ ರೀತಿ ಆಗುತ್ತದೆ. ಅಂದರೆ ಖರೀದಿದಾರರು ಹಣ ಮತ್ತು ಜಮೀನನ್ನು ಕಳದುಕೊಳ್ಳಬೇಕಾಗುತ್ತದೆ.
ಒಂದು ವೇಳೆ ಸರ್ಕಾರಿ ಜಮೀನುಗಳನ್ನು ಹಾರಾಜಿನಲ್ಲಿ ತೆಗೆದುಕೊಂಡರೆ ಅದು ಅವರ ಸ್ವಯಾರ್ಜಿತವಾಗಿ ಇಚ್ಚೆಯ ರೀತಿಯಲ್ಲಿ ಪರಭಾರೆಯನ್ನು ಮಾಡಬಹುದಾಗಿದೆ.