26.7 C
Bengaluru
Sunday, December 22, 2024

ಇ-ಸ್ಟಾಂಪ್ ಪೇಪರ್ ಮಹತ್ವವೇನು? ಬಿಳಿ ಹಾಳೆ ಮೇಲೆ ಬರೆದರೆ ಬೆಲೆ ಇಲ್ಲವೇ?

ಮನೆ, ಆಸ್ತಿ, ಬಾಡಿಗೆ, ಒಪ್ಪಂದಗಳು, ನೋಂದಣಿ, ವ್ಯವಹಾರ, ಸಾಲ, ಬ್ಯಾಂಕ್ ವಹಿವಾಟುಗಳು ಹೀಗೆ ಯಾವುದೇ ರೀತಿಯ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಡಿಕೊಳ್ಳಬೇಕು ಎಂದರೆ ಮೊದಲು ಕೇಳಿ ಬರುವುದು ಇ-ಸ್ಟಾಂಪ್. ಹೀಗೆ ಯಾವುದೇ ಒಪ್ಪಂದಗಳನ್ನು ಅಧಿಕೃತಗೊಳಿಸುವ ದಾಖಲೆಯೇ ಇ-ಸ್ಟಾಂಪ್. ಪ್ರತಿನಿತ್ಯ ಲಕ್ಷಾಂತರ ಇ-ಸ್ಟ್ಯಾಂಪ್‌ಗಳು ಖರೀದಿಯಾಗುತ್ತವೆ. ತಮ್ಮ ದಾಖಲೆಗಳನ್ನು ಇ-ಸ್ಟ್ಯಾಂಪ್ ನಲ್ಲಿ ಮುದ್ರಿಸಿ ಸಹಿ ಮಾಡಿಟ್ಟುಕೊಂಡರೆ ಎಷ್ಟೋ ಜನಕ್ಕೆ ನೆಮ್ಮದಿ ಎನಿಸುತ್ತದೆ.

ಕರ್ನಾಟಕದಲ್ಲಿ ಸ್ಟ್ಯಾಂಪ್ ಪೇಪರ್ ಎಂದರೆ ಎಷ್ಟು ಹತ್ತಿರವಾಗುತ್ತದೋ ಗೊತ್ತಿಲ್ಲ. ಆದರೆ, ಛಾಪಾ ಕಾಗದ ಎಂದರೆ ಎಲ್ಲರಿಗೂ ನೆನಪಿನಲ್ಲಿದೆ. ಎಸ್‌ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ಬಯಲಿಗೆ ಬಂದ ಛಾಪಾ ಕಾಗದ ಹಗರಣ ಮತ್ತು ಕರೀಂ ಲಾಲ್ ತೆಲಗಿ ಎಂಬ ಹೆಸರುಗಳು ಬಹುತೇಕರಿಗೆ ನೆನಪಿದೆ. ಇಲ್ಲಿ ನಡೆದ ನೂರಾರು ಕೋಟಿ ರೂಪಾಯಿ ಹಗರಣದಲ್ಲಿ ಹಲವರು ಪಾಲು ಪಡೆದಿದ್ದ ಆರೋಪಗಳಿವೆ.

ಕರ್ನಾಟಕದಲ್ಲಿ ಸ್ಟ್ಯಾಂಪ್ ಪೇಪರ್‌ಗಳು ಕರೀಂ ಲಾಲ್ ತೆಲಗಿ ಹಗರಣದಿಂದ ಬ್ಯಾನ್ ಆಗಿದ್ದವು. ಆನೇಕ ವರ್ಷಗಳ ಕಾಲ ಜನರು ತೊಂದರೆ ಅನುಭವಿಸಿದರು. ಬಳಿಕ ಸ್ಟ್ಯಾಂಪ್ ಪೇಪರ್‌ಗಳ ಕೊರತೆ ನೀಗಿಸಲು ಕರ್ನಾಟಕ ಸರ್ಕಾರ, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ (ಭಾರತ ಸರ್ಕಾರದ ಒಂದು ಉದ್ಯಮ) ನಡುವೆ ಒಪ್ಪಂದ ಏರ್ಪಟ್ಟು ಇ-ಸ್ಟ್ಯಾಂಪ್ ಪೇಪರ್‌ಗಳನ್ನು ನೀಡಲು ಅನುಮತಿ ಕೊಡಲಾಗಿದೆ.

ಇ-ಸ್ಟ್ಯಾಂಪ್ ಪೇಪರ್‌ಗಳು ನೋಂದಣಿ ಮಾಡಿಸದೇ (Non registrable documents) ಇರುವಂತಹ ದಾಖಲೆಗಳಿಗೆ ಉಪಯೋಗಿಸಲು ಬಿಡಲಾಗಿದೆ. ಸಾಮಾನ್ಯವಾಗಿ ಕಡಿಮೆ ಮೊತ್ತದ ಮುದ್ರಾಂಕ ಶುಲ್ಕ ಕಟ್ಟುವ ಸಂದರ್ಭಗಳಲ್ಲಿ ಇ-ಸ್ಟ್ಯಾಂಪ್ ಪೇಪರ್ ಉಪಯೋಗಿಸುವ ಪದ್ಧತಿ ಇದೆ. ಇ-ಸ್ಟ್ಯಾಂಪ್ ಪೇಪರ್‌ಗಳನ್ನು ನೀಡಲು ಕರ್ನಾಟಕ ಸರ್ಕಾರ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಕೆಲವು ಸಹಕಾರ ಬ್ಯಾಂಕ್‌ಗಳಿಗೆ, ಮಹಿಳಾ ಸಹಕಾರಿ ಬ್ಯಾಂಕ್‌ಗಳಿಗೆ ಈ ರೀತಿಯ ಸಂಸ್ಥೆಗಳಿಗೆ ಮಾತ್ರ ಅನುಮತಿ ನೀಡಿರುತ್ತಾರೆ. ಅದು ಬಿಟ್ಟು ಖಾಸಗಿಯಾಗಿ ಯಾರಿಗೂ ಅನುಮತಿ ನೀಡಿರುವುದಿಲ್ಲ.

ಇ-ಸ್ಟ್ಯಾಂಪ್ ಪೇಪರ್‌ಗಳ ನೈಜತೆ ಬಗ್ಗೆ ಪರಿಶೀಲಿಸಿ ಪಾರ್ಟಿಗಳು ತಮ್ಮ ಪತ್ರಗಳನ್ನು ಮುದ್ರಿಸಿಕೊಳ್ಳುವುದು ಒಳ್ಳೆಯದು. ಇ-ಸ್ಟ್ಯಾಂಪ್ ಪೇಪರ್‌ಗಳ ನಿರ್ವಹಣೆ ಹಾಗೂ ಸಾರ್ವಜನಿಕ ಪಾತ್ರ ಇವುಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ನಿರ್ದೇಶನ ಇರುವುದಿಲ್ಲ. ಇ ಸ್ಟ್ಯಾಂಪ್‌ ಪೇಪರ್‌ನಲ್ಲಿ ಪಡೆಯುವವರು ಮತ್ತು ಕೊಡುವವರ ಹೆಸರಿನ ಕಾಲಂಗಳಿದ್ದು, ಅದನ್ನು ಮುದ್ರಿಸಿ ನೀಡುತ್ತಾರೆ. ಉದಾಹರಣೆಗೆ ಫಸ್ಟ್ ಪಾರ್ಟಿ ಸೆಕೆಂಡ್ ಪಾರ್ಟಿ ಎಂದಿರುತ್ತದೆ. ಅದಾಗ್ಯೂ ಸಹ ಇ- ಸ್ಟ್ಯಾಂಪ್‌ ಪೇಪರ್‌ಗಳಲ್ಲಿ ಬೇರೆಯವರ ಹೆಸರುಗಳ ಪತ್ರಗಳನ್ನು ಮುದ್ರಿಸಿಕೊಂಡರೆ ಅಂತಹವುಗಳ ಕಾನೂನು ಮಾನ್ಯತೆ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟತೆ ಇಲ್ಲ. ಇದರಿಂದ ಇ-ಸ್ಟ್ಯಾಂಪ್ ಪೇಪರ್ ಮರು ಉಪಯೋಗ, ದುರ್ಬಳಕೆ ಮಾಡುವ ಸಾಧ್ಯತೆ ಇರುತ್ತದೆ.

ನೋಂದಣಿಗೆ ಹೋದಾಗ ಮಾತ್ರ ಇ-ಸ್ಟ್ಯಾಂಪ್ ಪೇಪರ್‌ಗಳನ್ನು ಲಾಕ್ ಮಾಡಿ ಮರು ಉಪಯೋಗದ ಮಾಡದ ರೀತಿಯಲ್ಲಿ ನಿರ್ಬಂಧಿಸುವ ವ್ಯವಸ್ಥೆ ಹಿಂದೆ ಇತ್ತು. ಆದರೆ, ಅದು ಈಗ ಕಂಡು ಬರುವುದಿಲ್ಲ.

ನೋಂದಣಿಗೆ ಬಾರದ ಇ-ಸ್ಟ್ಯಾಂಪ್ ಪೇಪರ್‌ಗಳ ನೈಜತೆ ಹಾಗೂ ಮರು ಉಪಯೋಗ ಮಾಡುವುದನ್ನು ತಡೆಗಟ್ಟುವ ಬಗ್ಗೆ ಸರ್ಕಾರ ಯಾವುದೇ ಕ್ರಮ ವಹಿಸಿರುವುದಿಲ್ಲ. ಇ-ಸ್ಟ್ಯಾಂಪ್ ಪೇಪರ್‌ಗೆ ಸಂಬಂಧಪಟ್ಟಂತೆ ಕರ್ನಾಟಕ ಸರ್ಕಾರವು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದವರು ಕರ್ನಾಟಕ ಸರ್ಕಾರಕ್ಕೆ ಏನು ಅಂಕಿ ಅಂಶಗಳನ್ನು ನೀಡುತ್ತಾರೊ ಅದನ್ನೇ ನಂಬಿಕೊಳ್ಳಲಾಗಿದೆ.

ಇ-ಸ್ಟ್ಯಾಂಪ್ ಪೇಪರ್‌ಗೆ ಸಾರ್ವಜನಿಕರು ಕಟ್ಟುವ ಮೊತ್ತವು ಮೊದಲು ಅದು ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪೆನಿಗೆ ಹೋಗುತ್ತದೆ. ಅದರ ನಂತರ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪೆನಿ ತಮ್ಮ ಕಮಿಷನ್ ಇಟ್ಟುಕೊಂಡು ನೋಂದಣಿ ಪತ್ರದ ಮೊತ್ತವನ್ನು ಕಂದಾಯ ಇಲಾಖೆಯ (ನೋಂದಣಿ ಮತ್ತು ಮುದ್ರಾಂಕ ಇಲಾಖೆ)ಗೆ ಮರುಪಾವತಿಸಬೇಕು.

ಬಿಳಿ ಹಾಳೆ ಮೇಲೆ ಬರೆದರೆ ಬೆಲೆ ಇಲ್ಲವೇ?
ಯಾವುದಾದರೂ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದಾದರೆ ಸ್ಟಾಂಪ್ ಪೇಪರ್ ಖರೀದಿಸಲೇಬೇಕೆ, ಬಿಳಿ ಹಾಳೆಯ ಮೇಲೆ ಬರೆದರೆ ಅದಕ್ಕೆ ಮಾನ್ಯತೆ ಇಲ್ಲವೇ ಎಂಬ ಅಂಶ ಹಲವರನ್ನು ಕಾಡಬಹುದು. ಯಾವುದೇ ಒಪ್ಪಂದಗಳನ್ನು ನೀವು ಬಿಳಿ ಹಾಳೆಯ ಮೇಲೆ ಬರೆದಿಟ್ಟುಕೊಂಡರೆ ಅದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಅದಕ್ಕೆ ಕಾನೂನು ಮಾನ್ಯತೆ ಬರಬೇಕು ಎಂದಾದರೆ ಅದನ್ನು ನೋಂದಣಿ ಮಾಡಬೇಕು. ನೋಂದಣಿ ಮಾಡಿಸಬೇಕು ಎಂದಾದರೆ ಉಪನೋಂದಣಾಧಿಕಾರಿಗಳ ಕಚೇರಿಗೆ ಹೋಗಿ ಒಪ್ಪಂದದ ಮೌಲ್ಯದ ಆಧಾರದ ಮೇಲೆ ಸರ್ಕಾರಕ್ಕೆ ಇಂತಿಷ್ಟು ಶುಲ್ಕ ಭರಿಸಿ ಬಳಿಕ ಆ ಪತ್ರವನ್ನು ನೋಂದಣಿ ಮಾಡಿಸಬೇಕು. ಈ ತಾಪತ್ರಯ ಬೇಡ ಎಂದೇ ಮೊದಲಿಗೆ ಸರ್ಕಾರಕ್ಕೆ ಶುಲ್ಕ ಭರಿಸಲಾದ ಇ-ಸ್ಟ್ಯಾಂಪ್ ಪೇಪರ್‌ಗಳನ್ನು ಖರೀದಿಸಿ ಅದರಲ್ಲಿ ಬರೆದು ಸಹಿಮಾಡಿಟ್ಟುಕೊಳ್ಳುತ್ತಾರೆ.

Related News

spot_img

Revenue Alerts

spot_img

News

spot_img