ಬೆಂಗಳೂರು, ಮಾ. 29 : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಅವ್ಯವಹಾರ ಪ್ರಕರಣ ಸಂಬಂಧ ಸಂಸ್ಥೆಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಜಾರಿ ನಿರ್ದೇಶನಾಲಯ ಬ್ಯಾಂಕ್ ನ 114.19 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಶ್ರೀ ಗುರು ರಾಗವೇಂದ್ರ ಸಹಕಾರ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುವ ಆಮೀಷ ಒಡ್ಡಿ ಗ್ರಾಹಕರಿಂದ ಹಣ ಠೇವಣಿ ಮಾಡಿಕೊಂಡಿತ್ತು. ಆದರೆ, ಅವ್ಯವಹಾರ ನಡೆಸಿದ ಸಂಬಂಧ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಅವ್ಯವಹಾರ ಹಾಗೂ ಠೇವಣಿದಾರರ ಹಣ ದುರ್ಬಳಕೆ ಸಂಬಂಧ ಶ್ರೀ ಬ್ಯಾಂಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹೀಗಾಗಿ ಬ್ಯಾಂಕ್ ನ ಖಾಲಿ ಜಮೀನುಗಳು, ವಸತಿ ಗೃಹಗಳು, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳೂ ಸೇರಿದಂತೆ ಒಟ್ಟು 21 ಸ್ಥಿರಾಸ್ತಿಗಳನ್ನು ಇಡಿ ವಶಕ್ಕೆ ಪಡೆದಿದೆ. ಅಷ್ಟೇ ಅಲ್ಲದೇ, ಸಂಸ್ಥೆಯ ಖಾತೆಯಲ್ಲಿ ಬಾಕಿ ಉಳಿದಿದ್ದ 3.15 ಕೋಟಿ ರೂ. ಅನ್ನು ಕೂಡ ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಇನ್ನು ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವ ಮುನ್ನವೇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಿಗೆ ಸಂಬಂಧಿಸಿದ ಚರಾಸ್ತಿ ಹಾಗೂ ಸ್ಥಿರಾಸ್ತಿ ಅನ್ನು ಜಪ್ತಿ ಮಾಡಿತ್ತು.
ಬ್ಯಾಂಕ್ ಆಡಳಿತ ಮಂಡಳಿಯ ಸದಸ್ಯರ ಒಟ್ಟು 45.33 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿ ಅನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದರೊಂದಿಗೆ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಸೇರಿದಂತೆ ನಾಲ್ವರನ್ನು ಬಂಧನ ಮಾಡಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ಜೊತೆಗೆ ಶಾಮೀಲಾಗಿ ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು. ನಕಲಿ ದಾಖಲೆಗಳ ಮೂಲಕ ಸಾಲಕ್ಕೆ ಸೂಕ್ತ ಭದ್ರತೆ ಪಡೆಯದೆ ಖಾಸಗಿ ವ್ಯಕ್ತಿಗಳಿಗೆ ಸಾಲವನ್ನು ನೀಡಿತ್ತು. ಅದೂ ಕೂಡ ಭಾರಿ ಮೊತ್ತದ ಸಾಲ ನೀಡಿ, ಠೇವಣಿದಾರರಿಗೆ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ಬಿಂಬಿಸಿತ್ತು.
ಹೀಗಾಗಿ ಹೆಚ್ಚೆಚ್ಚು ಸಾಲದ ಖಾತೆಗಳಿಗೆ ಮಿತಿಯನ್ನು ಮೀರಿ ಹಣ ವರ್ಗಾಯಿಸಿತ್ತು. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ಕೋಟ್ಯಾಮತರ ರೂ. ಠೇವಣಿ ಇಟ್ಟಿದ್ದರು. ಸಾಲ ಪಡೆದವರು ಮರು ಪಾವತಿ ಮಾಡದೇ ವಂಚಿಸಿದ್ದರು. ಇದೆಲ್ಲವೂ ಇಡಿ ತನಿಖೆಯಲ್ಲಿ ಬಹಿರಂಗವಾಗಿದ್ದು, ಇದೀಗ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.