ಬೆಂಗಳೂರು, ಜು. 19 : ಆಪ್ ಆಧಾರಿತ ಡಿಜಿಟಲ್ ಬ್ಯಾಂಕಿಂಗ್ ಗೆ ಜನ ಹೆಚ್ಚು ಹೆಚ್ಚು ಮೊರೆ ಹೋಗುತ್ತಿದ್ದಾರೆ. ಯುಪಿಐ, ಫೋನ್ ಪೇ ಗೂಗಲ್ ಪೇ, ಪೇಟಿಯಂ, ಡಿಜಿಟಲ್ ವಾಲೆಟ್ ಗಳ ಮೂಲಕ ಎಲ್ಲರೂ ತಮ್ಮ ಹಣ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಯುಪಿಐ ಎಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಏಕೀಕೃತ ಪಾವತಿ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಇದನ್ನು ಬ್ಯಾಂಕ್ ಖಾತೆ ಹೊಂದಿರುವ ಪ್ರತಿಯೊಬ್ಬರೂ ಐಡಿ ರಚಿಸುವ ಮೂಲಕ ಈ ವ್ಯವಸ್ಥೆಯನ್ನು ಪಡೆಯಬಹುದು.
ಪ್ರತಿಯೊಬ್ಬರೂ ಕೆಲ ಬಿಲ್ ಗಳನ್ನು ಕಟ್ಟಲು, ಅಂಗಡಿಗಳಲ್ಲಿ ಹಣ ಸಂದಾಯ ಮಾಡಲು ಬಳಸುತ್ತಾರೆ. ಇದೀಗ ರುಪೇ ಕಾರ್ಡ್ ಎಂಬುದು ಬ್ಯಾಂಕುಗಳು ನೀಡುವ ದೇಶೀಯ ಪಾವತಿ ಜಾಲವಾಗಿದೆ. ರುಪೇ ಕಾರ್ಡ್ 2012 ರಲ್ಲಿ ಎನ್ಪಿಸಿಐನಿಂದ ಬಿಡುಗಡೆಯಾದ ಭಾರತೀಯ ದೇಶೀಯ ಕಾರ್ಡ್ ಆಗಿದೆ. ಭಾರತೀಯ ಪಾವತಿ ನೆಟ್ವರ್ಕ್ ಆಗಿರುವುದರಿಂದ, ರುಪೇ ಕಾರ್ಡ್ಗಳನ್ನು ಭಾರತದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ವೀಸಾ ಮತ್ತು ಮಾಸ್ಟರ್ಕಾರ್ಡ್ನಂತಹ ವಿದೇಶಿ ಪಾವತಿ ಜಾಲಗಳ ಏಕಸ್ವಾಮ್ಯವನ್ನು ಕಡಿಮೆ ಮಾಡಲು ಇದನ್ನು ಪ್ರಾರಂಭಿಸಲಾಯಿತು.
ಇದೀಗ ರುಪೇ ಕ್ರೆಡಿಟ್ ಕಾರ್ಡ್ ಮೂಲಕ ಯುಪಿಐ ವಹಿವಾಟನ್ನು ಕೂಡ ನಡೆಸಬಹುದಾಗಿದೆ. ಈ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಘೋಷಿಸಿದೆ. ಯುಪಿಐ, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮುಂತಾದ ಪಾವತಿ ಅಪ್ಲಿಕೇಶನ್ ಗಳನ್ನು ಹೊಂದಿರುವವರು ಇದಕ್ಕೆ ಕ್ರೆಡಿಟ್ ಕಾರ್ಡ್ ವಿವರಗಳನ್ನು ಸೇರಿಸಿ ಯುಪಿಐ ಪಾವತಿಗಳನ್ನು ಮಾಡಬಹುದಾಗಿದೆ. ಇತರ ಯುಪಿಐ ವಹಿವಾಟುಗಳಂತೆಯೇ ದೈನಂದಿನ ಮಿತಿ 1 ಲಕ್ಷ ರೂ.ಗಳ ವಹಿವಾಟು ನಡೆಸಬಹುದು.