25.6 C
Bengaluru
Monday, December 23, 2024

ಪ್ರೊಬೇಟ್ ಎಂದರೇನು? ಮರಣ ಶಾಸನ ಕೋರ್ಟ್ ಮೂಲಕ ಜಾರಿ ಮಾಡುವ ಸುಲಭ ವಿಧಾನ

ಪ್ರೊಬೇಟ್ ಮೂಲಕ ಮರಣ ಶಾಸನ ಜಾರಿ ಮಾಡಿದ್ರೆ ಏನು ಪ್ರಯೋಜನ

ಒಂದು ಮನೆಯ ಯಜಮಾನ ತನ್ನ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಉಯಿಲು ಬರೆದಿಟ್ಟು ಮೃತಪಟ್ಟಿದ್ದ. ಯಜಮಾನನಿಗೆ ಮೂವರು ಮಕ್ಕಳಿದ್ದರು. ಐದಾರು ಮಂದಿ ಮೊಮ್ಮಕ್ಕಳಿದ್ದರು. ಉಯಿಲಿನಂತೆ ಆಸ್ತಿಯನ್ನು ವಿಭಾಗ ಮಾಡಿಕೊಂಡರೆ ಭವಿಷ್ಯದಲ್ಲಿ ವಂಶಸ್ತರು ತಗಾದೆ ತೆಗೆದರೆ ಕೋರ್ಟ್ ನಲ್ಲಿ ಹೋರಾಟ ನಡೆಸಬೇಕು. ಅದರ ಬದಲಿಗೆ ಪ್ರೊಬೇಟ್ ಮೂಲಕ ಮರಣ ಶಾಸನ ಜಾರಿ ಮಾಡಿದ್ದಲ್ಲಿ ಏನೆಲ್ಲಾ ಅನುಕೂಲಗಳಾಗುತ್ತವೆ ? ಪ್ರೊಬೇಟ್ ಮೂಲಕ ಮರಣ ಶಾಸನ ಜಾರಿ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ರೈತ ಸಮುದಾಯ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಹತ್ವದ ವಿಚಾರವಿದು.

ಅಜ್ಜನಿಗೆ ಐದಾರು ಜನ ಮಕ್ಕಳಿದ್ದರು. ಆದರೆ ದೊಡ್ಡ ಮಗನ ಮೇಲೆ ತುಂಬಾ ಪ್ರೀತಿ. ಜತೆಗೆ ಅಜ್ಜನನ್ನು ದೊಡ್ಡ ಮಗನೇ ಹಾರೈಕೆ ಮಾಡಿಕೊಂಡಿದ್ದರು. ಅಜ್ಜ ತನ್ನ ಆಸ್ತಿಯ ಪಾಲು ಯಾರಿಗೆ ಎಷ್ಟು ಸೇರಬೇಕು ಎಂಬುದನ್ನು ಮರಣ ಶಾಸನದಲ್ಲಿ ಬರೆದಿಟ್ಟಿದ್ದರು. ಅಜ್ಜ ಮೃತಪಟ್ಟಿದ್ದ. ಆನಂತರ ಆ ವಿಲ್ ನಲ್ಲಿರುವ ಅಂಶಗಳನ್ನು ಕಾನೂನು ಬದ್ಧವಾಗಿ ಜಾರಿಗೆ ತರಬೇಕು. ಜಾರಿಗೆ ಬಂದ ನಂತರ ಮತ್ತೆ ಬೇರೆ ಯಾರೂ ತಕರಾರು ತೆಗೆಯಬಾರದು. ಹೀಗೆ ಆಗಬೇಕಾದರೆ ಮರಣ ಶಾಸನವನ್ನು ಪ್ರೊಬೇಟ್ ಮೂಲಕ ಜಾರಿಗೆ ತರುವುದು ಸೂಕ್ತ.

ಅಂದಹಾಗೆ ಪ್ರೊಬೇಟ್ ಅಂದರೆ, ವಿಲ್ ನ ಕಾನೂನು ಬದ್ಧತೆಯನ್ನು ಪರಿಶೀಲಿಸುವ ಕಾನೂನು ಪ್ರಕ್ರಿಯೆ. ಸಿವಿಲ್ ನ್ಯಾಯಾಲಯವು ಈ ಕಾರ್ಯವನ್ನು ನಿರ್ವಹಿಸುತ್ತದೆ. ಪ್ರೊಬೇಟ್ ಎಂದರೆ ಘೋಷಣೆ ಅಥವಾ ಒಪ್ಪಿಗೆ ಎಂದರ್ಥ. ಯಾವುದೇ ವ್ಯಕ್ತಿಯು, ತನ್ನ ಮರಣದ ನಂತರ ತನ್ನ ಆಸ್ತಿಯನ್ನು ಯಾರಿಗೆ ಸಲ್ಲಬೇಕು ಎಂಬ ಬಗ್ಗೆ ಮರಣ ಶಾಸನ ಅಥವಾ ವಿಲ್ ಬರೆದಿಟ್ಟಿರುತ್ತಾನೆ. ವಿಲ್ ಪತ್ರವು ಪತ್ರ ಬರೆದ ವ್ಯಕ್ತಿಯ ಮರಣದ ನಂತರ ಜಾರಿಗೆ ಬರುತ್ತದೆ.

ವಿಲ್ ಎಂದರೆ, ಬರೆದ ವ್ಯಕ್ತಿಯು ಮರಣ ನಂತರ ಜಾರಿಗೆ ಬರುವ ಒಂದು ಪತ್ರವಾಗಿದೆ. ವಿಲ್ ಪತ್ರವನ್ನು ಬರೆದವರು ಅವರ ಜೀವತಾವಧಿಯಲ್ಲಿ ರದ್ದು ಪಡಿಸುವ ಅಥವಾ ತಿದ್ದು ಪಡಿ ಮಾಡುವ ಅಧಿಕಾರ ಇರುತ್ತದೆ. ವಿಲ್ ಪತ್ರ ಮಾತ್ರ ನೋಂದಣಿಯಾದ ತಕ್ಷಣ ಜಾರಿಗೆ ಬರುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ವಿಲ್ ಪತ್ರದಲ್ಲಿ ತಿದ್ದುಪಡಿ ಮಾಡಿದರೆ ಆ ಪತ್ರಕ್ಕೆ ತಾಂತ್ರಿಕವಾಗಿ ‘ಕೋಡೋ ಸಿಲ್’ ಎಂದು ಕರೆಯುತ್ತಾರೆ. ವ್ಹಿಲ್ ಪತ್ರದ ಮೂಲಕ ಆಸ್ತಿಗಳ ವಿಭಾಗವನ್ನು ಮಾಡಲು ಅವಕಾಶವಿದೆ.

ವಿಲ್ ಪತ್ರಕ್ಕೆ ನೋಂದಣಿ ಮಾಡಬೇಕಾದರೆ ಕಾಲಮಿತಿ ಇರುವುದಿಲ್ಲ. ವ್ಹಿಲ್ ಪತ್ರದಲ್ಲಿ ಮೌಖಿಕ ವಿಲ್ ಗೂ ಕಾನೂನು ಮಾನ್ಯತೆ ಇರುತ್ತದೆ. ವಿಲ್ ನನ್ನು ಬರೆದ ವ್ಯಕ್ತಿಯ ಮರಣದ ನಂತರವೂ ನೋಂದಣಿ ಮಾಡಿಸಬಹುದು. ವಿಲ್ ಪತ್ರವು ಗೌಪ್ಯ ಪತ್ರವಾಗಿದ್ದು, ಬರೆದ ವ್ಯಕ್ತಿಯ ಜೀವಿತಾವಧಿಯಲ್ಲಿ ಅವರು ಮಾತ್ರ ಆ ಪತ್ರದ ಪ್ರತಿ ಪಡೆಯಬಹುದು. ಅವರ ಹೊರತು ಬೇರೆ ಯಾರೂ ಪಡೆಯಲು ಅವಕಾಶ ವಿಲ್ಲ.
ವಿಲ್ ಪತ್ರ ಬರೆದ ವ್ಯಕ್ತಿ ಮರಣವಾದರೆ, ಅವರ ಮರಣ ಸಮರ್ಥನೆ ಪ್ರಮಾಣ ಪತ್ರವನ್ನು ಸೂಕ್ತ ಘೋಷಣಾ ಪತ್ರ ( ಅಫಿಡವಿಟ್ ) ದ ಜತೆ ಉಪ ನೋಂದಣಾಧಿಕಾರಿಗಳ ಬಳಿ ಅರ್ಜಿ ಸಲ್ಲಿಸಿದರೆ ಯಾರು ಬೇಕಾದರೂ ಪಡೆಯಬಹುದಾಗಿದೆ. ವಿಲ್ ಪತ್ರಗಳಿಗೆ ಮುದ್ರಾಂಕ ಶುಲ್ಕ ಇರುವುದಿಲ್ಲ. ನೋಂದಣಿ ಶುಲ್ಕ ಮಾತ್ರ ಇರುತ್ತದೆ. ವಿಲ್ ಪತ್ರಕ್ಕೆ ಕನಿಷ್ಠ ಇಬ್ಬರು ಸಾಕ್ಷಿಗಳ ಹೆಸರು ಕಡ್ಡಾಯವಾಗಿರುತ್ತದೆ. ಯಾವುದೇ ವಿಲ್ ಪತ್ರವೂ ಯಾವುದೇ ಕಾಲದಲ್ಲಾದರೂ ನ್ಯಾಯಾಲಯದ ವ್ಯಾಜ್ಯಕ್ಕೆ ಒಳಪಡುಬಹುದಾಗಿದೆ. ಆದ್ದರಿಂದ, ವಿಲ್ ಪತ್ರಗಳಿಗೆ ಪ್ರೊಬೇಟ್ ಮಾಡಿಸುವುದು ಸೂಕ್ತ ಎಂದು ಕಾನೂನು ಹೇಳುತ್ತದೆ.

ಪ್ರೊಬೇಟ್ ಎಂದರೆ, ಘೋಷಣೆ ಅಂತ ಅಥವಾ ಕನ್‌ಫರ್ಮೇಷನ್ ಎಂದರ್ಥ. ಪ್ರೊಬೇಟ್ ಎಂದರೆ ಸ್ವತ್ತಿನ ಹಕ್ಕು ಘೋಷಣೆಯಾದಂತೆ. ಪ್ರೊಬೇಟ್ ಹಾಕಿದ ನಂತರ, ವಂಶಾವಳಿ ಸಹಿತ ಪ್ರೊಬೇಟ್ ನ್ನು ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಬೇಕು. ಪ್ರೊಬೇಟ್ ಸಲ್ಲಿಸಿದ ನಂತರ ನ್ಯಾಯಾಲಯವು ವಂಶದವರ ವಿಚಾರಣೆಯನ್ನು ಮಾಡಿ, ಸಾಕ್ಷಿ ಪಡೆದು, ವಿಲ್ ಹಕ್ಕುನ್ನು ದೃಢಪಡಿಸಿ ನ್ಯಾಯಾಲಯವು ವಿಲ್ ನ ಕಾನೂನು ಬದ್ಧತೆ ಪ್ರಕ್ರಿಯೆ ಮುಗಿಸುತ್ತದೆ. ಆನಂತರ ಆಸ್ತಿಯನ್ನು ವಿಲ್ ನಲ್ಲಿ ಉಲ್ಲೇಖಿಸಿದವರ ಹೆಸರಿಗೆ ಡಿಕ್ರಿ ಮಾಡಿಕೊಡುತ್ತದೆ. ಪ್ರೊಬೇಟ್ ಆದ ನಂತರ ವಿಲ್ ನಲ್ಲಿ ಇರುವ ಅಂಶಗಳು ಜಾರಿಗೆ ಬರುತ್ತವೆ. ಅದೇ ಪ್ರಕಾರ ಸಂಬಂಧಪಟ್ಟ ಕಂದಾಯ ಕಚೇರಿಗಳಲ್ಲಿ ಖಾತಾ ಇನ್ನಿತರ ದಾಖಲೆಗಳನ್ನು ಅಪ್‌ಡೇಟ್ ಆಗಿ ಕಂದಾಯ ಮುಂತಾದ ಕಂದಾಯ ಪ್ರಕ್ರಿಯೆಗಳು ಮುಕ್ತಾಯವಾಗುತ್ತವೆ. ಪ್ರೊಬೇಟ್ ಮೂಲಕ ವಿಲ್ ಜಾರಿ ಮಾಡುವುದರಿಂದ ಆನಂತರ ವಿಲ್ ನ ಅಂಶಗಳನ್ನು ಪ್ರಶ್ನೆ ಮಾಡಲು ಅವಕಾಶ ಇರುವುದಿಲ್ಲ. ಪ್ರೊಬೇಟ್ ಮೂಲಕ ಮರಣ ಶಾಸನ ಜಾರಿಗೆ ಬಂದ ಬಳಿಕ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರೂ ಗೆಲುವು ಪಡೆಯುವುದು ಅಸಾಧ್ಯ.

ಹೀಗಾಗಿ ಮರಣ ಪತ್ರವನ್ನು ಜಾರಿ ಮಾಡುವಾಗ ಪ್ರೊಬೇಟ್ ಮೂಲಕ ಜಾರಿ ಮಾಡುವುದು ಸುಕ್ತ ಎಂಬುದು ಕಾನೂನು ತಜ್ಞರ ಸಲಹೆ. ವಿಲ್ ಪತ್ರವನ್ನು ಬರೆದ ವ್ಯಕ್ತಿಯ ಮರಣದ ನಂತರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿ ಜಾರಿಗೆ ತರಬಹುದು. ಒಂದು ವೇಳೆ ಮರಣ ಶಾಸನ ಜಾರಿಗೆ ಬಂದ ನಂತರ ಅದರ ಅಂಶಗಳ ಬಗ್ಗೆ ಯಾರಾದರೂ ತಕರಾರು ತೆಗೆದು ನ್ಯಾಯಾಲಯದ ಮೊರೆ ಹೋಗಲು ಅವಕಾಶವಿರುತ್ತದೆ. ಅದೇ ಪ್ರೊಬೇಟ್ ಮೂಲಕ ಜಾರಿ ಮಾಡಿದ್ದಲ್ಲಿ ಪುನಃ ವಿಲ್ ಬಗ್ಗೆ ತಕರಾರುಗಳು ಏಳುವುದು ತೀರಾ ವಿರಳ. ಹಿಗಾಗಿ ವಿಲ್ ಪತ್ರಗಳನ್ನು ಪ್ರೊಬೇಟ್ ಮೂಲಕ ಜಾರಿ ಮಾಡುವುದು ಅತಿ ಸೂಕ್ತವಾದ ವಿಧಾನ ಎಂಬುದು ಕಾನೂನು ತಜ್ಞರ ಅಭಿಮತ.

Related News

spot_img

Revenue Alerts

spot_img

News

spot_img