22.9 C
Bengaluru
Friday, July 5, 2024

ಮನೆ ಬಾಡಿಗೆ, ಲೀಸ್ ವಿವಾದಗಳ ಬಗ್ಗೆ ದೂರು ಬಂದರೆ ಪೊಲೀಸರು ಏನು ಮಾಡಬೇಕು?

ಬೆಂಗಳೂರು: ನ. 30: ಬೆಂಗಳೂರು ಸೇರಿದಂತೆ ನಗರಗಳಲ್ಲಿ ಬಹುತೇಕರು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ವರ್ಷದ ಬಾಡಿಗೆ ಕರಾರು/ ಲೀಸ್ ಕರಾರು ಅವಧಿ ಮುಗಿದರೂ ಬಾಡಿಗೆದಾರರು ಮನೆ ಖಾಲಿ ಮಾಡುವುದಿಲ್ಲ. ಇನ್ನೂ ಕೆಲವು ಸಂದರ್ಭದಲ್ಲಿ ಮನೆ ಖಾಲಿ ಮಾಡಿದರೂ ಮನೆ ಮಾಲೀಕರು ಮುಂಗಡ ಹಣ ನೀಡದೇ ನಾಮ ಹಾಕಿರುತ್ತಾರೆ. ಇಂತಹ ಪ್ರಕರಣಗಳು ಬೆಂಗಳೂರು ನಂತಹ ಮಹಾ ನಗರದಲ್ಲಿ ದಿನ ನಿತ್ಯ ಸಾಕಷ್ಟು ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ಜನ ಸಾಮಾನ್ಯರು ಪೊಲೀಸ್ ಠಾಣೆಗೆ ಹೋಗಿ ನ್ಯಾಯ ಪಡೆಯಬಹುದೇ ? ಬಾಡಿಗೆದಾರರ ಅಕ್ರಮ ಸ್ವಾಧೀನತೆ, ಮನೆ ಮಾಲೀಕರು ಅಡ್ವಾನ್ಸ್ ಹಣ ನೀಡದೇ ದೋಖಾ ಮಾಡುವ ಪ್ರಸಂಗಗಳಲ್ಲಿ ಪೊಲೀಸರು ಮಧ್ಯ ಪ್ರವೇಶಿಸಬಹುದೇ ? ಈ ಕುರಿತು ಬರುವ ದೂರುಗಳನ್ನು ಪೊಲೀಸರು ಏನು ಮಾಡಬೇಕು? ಇನ್ನು ಸರ್ಕಾರಿ ಭೂಮಿ ಒತ್ತುವರಿ, ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿ, ಸರ್ಕಾರಿ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಜರುಗಿಸದ ಕಂದಾಯ ಅಧಿಕಾರಿಗಳ ಮೇಲೆ ತನಿಖೆ ನಡೆಸಲು ಪೊಲಿಸರಿಗೆ ಇರುವ ಅಧಿಕಾರ ಏನು ? ಈ ಕುರಿತ ಪೊಲೀಸ್ ಮಾರ್ಗಸೂಚಿ ವಿವರ ಇಲ್ಲಿದೆ.

ಅಕ್ರಮ ಸ್ವಾಧೀನತೆ ಪ್ರಕರಣದಲ್ಲಿ ಪೊಲೀಸರಿಗೆ ಇರುವ ಅಧಿಕಾರ:
ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ ಹಾಗೂ ಕಟ್ಟಡಗಳ ಪಹಣಿ ಪತ್ರ/ಖಾತಾ ಪತ್ರಗಳ ಆಧಾರದಲ್ಲಿ ಈ ಆಸ್ತಿಗಳ ಮಾಲಿಕತ್ವವನ್ನು ಹಾಗೂ ಸ್ವಾಧಿನತೆಯನ್ನು ಹೊಂದಿರುವ ವ್ಯಕ್ತಿಯು ಸದರಿ ಪಹಣಿ ಪತ್ರ ಅಥವಾ ಸ್ಥಳಿಯ ಪ್ರಾಧಿಕಾರ(ಗ್ರಾಮಪಂಚಾಯಿತಿ, ಮುನಿಸಿಪಾಲಿಟಿ, ನಗರಸಭೆ) ದವರು ನೀಡಿದ ಖಾತಾ ಪತ್ರಗಳ ಆಧಾರದಲ್ಲೂ ಸಹ ತಾವು ಸದರಿ ಆಸ್ತಿಗಳ ಮಾಲೀಕ ಹಾಗೂ ಸ್ವಾಧಿನತೆ ಹೊಂದಿದ್ದರೆ, ಅಂತಹ ವ್ಯಕ್ತಿಯ ಜಾಗದಲ್ಲಿ ಬೇರೆ ವ್ಯಕ್ತಿ ಸ್ವಾಧೀನದಲ್ಲಿದ್ದರೆ ಅಂತಹ ವ್ಯಕ್ತಿ ವಿರುದ್ಧ ನೈಜ ಮಾಲೀಕ ಪೊಲೀಸ್ ಠಾಣೆಗೆ ದೂರು ನೀಡಿದರೆ, ಇದು ಸಿವಿಲ್ ಡಿಸ್‌ಪೂಟ್ ಕೇಸು ಮಾಡಲ್ಲ ಎಂದು ಸಬೂಬು ಹೇಳಿ ವಾಪಸು ಕಳಿಸುವಂತಿಲ್ಲ. ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಯು ಭಾರತೀಯ ದಂಡ ಸಮಿತೆ (IPC) ಕಲಂ-447 ರ ಅಡಿ ಅಪರಾಧಕ್ಕಾಗಿ ಎಫ್ಐಆರ್ ದಾಖಲು ಮಾಡಿಕೊಳ್ಳತಕ್ಕದ್ದು. ಹಾಗೂ ಪಹಣಿಪತ್ರ/ಖಾತೆಯ ದಾಖಲೆಯಲ್ಲಿ ಮಾಲೀಕತ್ವ ಅಥವಾ ಸ್ವಾಧಿನತೆ ಹೊಂದಿರುವ ವ್ಯಕ್ತಿಯ ಹೇಳಿಕೆಯನ್ನು ಪಡೆದುಕೊಂಡು ತನಿಖೆಯನ್ನು ಮುಂದುವರೆಸತಕ್ಕದು. ತನಿಖೆಯ ನಂತರ ಅಕ್ರಮ ಸ್ವಾಧಿನತೆಯನ್ನು ಹೊಂದಿದ ವ್ಯಕ್ತಿಯನ್ನು ಸದರಿ ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ ಅಥವಾ ಕಟ್ಟಡದಿಂದ ಹೊರಗೆ ಹಾಕಬೇಕು.

ಬಾಡಿಗೆ/ ಗುತ್ತಿಗೆ ಕಟ್ಟಡಗಳ ತಕರಾರುಗಳು:
ಕೃಷಿಯೇತರ ಜಮೀನು, ವಸತಿ, ವಾಣಿಜ್ಯ ಭೂಮಿ ಯಾವುದೇ ಕಟ್ಟಡಗಳನ್ನು ಬಾಡಿಗೆ/ಗುತ್ತಿಗೆಯಿಂದ ಪಡೆದು, ಬಾಡಿಗೆ/ಗುತ್ತಿಗೆ ಒಪ್ಪಂದ ಅವಧಿ ಮುಗಿದ ನಂತರ ಬಾಡಿಗೆ/ಗುತ್ತಿಗೆ ಒಪ್ಪಂದವನ್ನು ಬಾಡಿಗೆ/ಗುತ್ತಿಗೆ ಪಡೆದ ವ್ಯಕ್ತಿಯು ನವೀಕರಿಸಿಕೊಳ್ಳಬೇಕಾಗುತ್ತದೆ. ಬಾಡಿಗೆ/ಗುತ್ತಿಗೆ ಒಪ್ಪಂದವನ್ನು ನವೀಕರಿಸಿದೆ ಆ ವ್ಯಕ್ತಿಯು ಸದರಿ ಆಸ್ತಿಯ ಸ್ವಾಧಿನದಲ್ಲಿ ಮುಂದುವರೆದಲ್ಲಿ ಅದು ಅಕ್ರಮ ಸ್ವಾಧಿನ ಹೊಂದಿದಂತಾಗುತ್ತದೆ. ಇಂತಹ ಸಂದರ್ಭದಲ್ಲೂ ಸದರಿ ಆಸ್ತಿಯ ಮಾಲೀಕನು ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದಾಗ, ಬಾಡಿಗೆ/ಗುತ್ತಿಗೆ ಪಡೆದುಕೊಂಡ ವ್ಯಕ್ತಿಗೆ ಆಸ್ತಿಯ ಮಾಲೀಕನು ನೋಟಿಸ್ ನೀಡಲು ಹಾಗೂ ಬಾಡಿಗೆ/ಗುತ್ತಿಗೆ ಪಡೆದುಕೊಂಡ ವ್ಯಕ್ಯಿಯು ಒಪ್ಪಂದ ನವೀಕರಿಸದೆ ಇದ್ದಾಗ ಅಥವಾ ಆಸ್ತಿಯನ್ನು ಖಾಲಿ ಮಾಡದೇ ಇದ್ದಾಗ ಭಾರತೀಯ ದಂಡ ಸಮಿತೆ (IPC) ಕಲಂ-447 ರ ಅಡಿ ಕೇಸು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸಬೇಕು. ತನಿಖೆಯಿಂದ ಸದರಿ ಬಾಡಿಗೆ/ಗುತ್ತಿಗೆಯನ್ನು ಪಡೆದ ವ್ಯಕ್ತಿಯು ಸದರಿ ಆಸ್ತಿಯಲ್ಲಿ ಅಕ್ರಮವಾಗಿ ಸ್ವಾಧಿನತೆಯನ್ನು ಮುಂದುವರೆಸಿಕೊಂಡು ಹೋಗುತ್ತಾನೆಂದು ಕಂಡುಬಂದಲ್ಲಿ, ಆ ವ್ಯಕ್ತಿಯನ್ನು ಸದರಿ ಕೃಷಿಯೇತರ ಜಮೀನು, ನಿವೇಶನ ಅಥವಾ ಕಟ್ಟಡದಿಂದ ಹೊರಗೆ ಹಾಕತಕ್ಕದ್ದು. ಅದೇ ರೀತಿ ಕಟ್ಟಡ, ಕೃಷಿಯೇತರ ಜಮೀನು, ನಿವೇಶನ ಗುತ್ತಿಗೆ/ ಬಾಡಿಗೆ ಅವಧಿ ಮುಗಿದ ಬಳಿಕ ಕೊಡಬೇಕಾದ ಮುಂಗಡ ಹಣ ನೀಡದೇ ಮೋಸ ಮಾಡಿದಲ್ಲಿ ಅಂತಹ ಸಂದರ್ಭದಲ್ಲಿ ಮೋಸಕ್ಕೆ ಒಳಗಾದವರು ನೀಡುವ ದೂರನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ತನಿಖೆ ಬಳಿಕ ಆರೋಪ ಸಾಬೀತಾದರೆ ತಪ್ಪಿತಸ್ಥ ಕಟ್ಟಡ ಮಾಲೀಕರ ವಿರುದ್ದ ಕ್ರಮ ಜರುಗಿಸಬಹುದು.

ಮಾರಾಟ ಮಾಡಿದ ಆಸ್ತಿಗೆ ತಕರಾರು ತೆಗೆದರೆ :
ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ ಅಥವಾ ಕಟ್ಟಡವನ್ನು ಮಾರಾಟ ಮಾಡಿದ ನಂತರ ಪಹಣಿ ಪತ್ರಿಕೆ/ಖಾತೆಗಳಲ್ಲಿ ಖರಿದೀಸಿದ ವ್ಯಕ್ತಿಯ ಹೆಸರಿಗೆ ಬದಲಾವಣೆ ಆಗಿದ್ದು, ನಂತರದ ಅವಧಿಯಲ್ಲಿ ಸದರಿ ಆಸ್ತಿಯ ಬೆಲೆ ಹೆಚ್ಚಳದಿಂದ ಈ ಆಸ್ತಿಗಳ ಮಾರಾಟ ಮಾಡಿದ ವ್ಯಕ್ತಿಗಳು ತಾವು ಮಾಡಿಕೊಟ್ಟ ಖರೀದಿ ಪತ್ರ ಸಮರ್ಪಕವಿಲ್ಲವೆಂದು ಹಾಗೂ ಖರೀದಿ ಪತ್ರ ಕಾನೂನು ಬದ್ದವಲ್ಲವೆಂದು ಹೇಳುತ್ತಾ ಸದರಿ ಆಸ್ತಿಗೆ ತಮ್ಮ ಪರವಾಗಿ ರಕ್ಷಣೆ ನೀಡುವಂತೆ ಕೋರಿಕೊಂಡಾಗ, ಠಾಣಾಧಿಕಾರಿಯು ಆ ವ್ಯಕ್ತಿಗಳು ಈ ಬಗ್ಗೆ ನ್ಯಾಯಾಲಯದಿಂದ ಸೂಕ್ತ ಆದೇಶವನ್ನು ಪಡೆದುಕೊಂಡು ನಂತರ ತಹಶೀಲ್ದಾರರಿಂದ ಸದರಿ ಆಸ್ತಿಗಳ ದಾಖಲೆಗಳಲ್ಲಿ ಈ ಬಗ್ಗೆ ಸೂಕ್ತ ಬದಲಾವಣೆ ನೊಂದಣಿ ಮಾಡಿಕೊಂಡು ಬಂದಲ್ಲಿ ರಕ್ಷಣೆ ನೀಡುವುದು. ಈ ಕುರಿತು ಹಿಂಬರಹವನ್ನು ನೀಡಬೇಕು.

ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಕಡಿಮೆ ಪರಿಹಾರ : ಸರ್ಕಾರವು ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಕಡಿಮೆ ಪರಿಹಾರ ನೀಡಿದ ಎಂಬ ಕಾರಣವನ್ನು ನೀಡುತ್ತಾ ಸದರಿ ಜಮೀನಿನ ಮಾಲೀಕರು ರಕ್ಷಣೆ ಕೋರಿ ನೀಡಿದರೆ, ಅಂತಹ ದೂರುಗಳನ್ನು ಪೊಲೀಸರು ದಾಖಲಿಸಿಕೊಳ್ಳುವಂತಿಲ್ಲ. ದೂರು ನೀಡುವ ವ್ಯಕ್ತಿಯು ಸಂಬಂಧಿಸಿದ ಸಿವಿಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಸೂಕ್ತ ಆಜ್ಞೆಯನ್ನು ಪಡೆದುಕೊಳ್ಳಲು ಹಾಗೂ ನಂತರ ಸ್ಥಳಿಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಖಾತೆಗಳಲ್ಲಿ ಸೂಕ್ತ ಬದಲಾವಣೆ ಮಾಡಿಸಿ ತನ್ನ ಹೆಸರನ್ನು ಖಾತೆಗಳಲ್ಲಿ ದಾಖಲು ಮಾಡಿಸಿಕೊಂಡ ನಂತರ ಪೊಲೀಸ್ ಠಾಣೆಗೆ ದೂರು ನೀಡಲು ತಿಳಿಸಬೇಕು. ಅಲ್ಲಿಯ ವರೆಗೆ ಸದರಿ ಜಮೀನನ್ನು ಸ್ವಾಧಿನ ಪಡಿಸಿಕೊಂಡ ಸರ್ಕಾರಕ್ಕೆ ಅಥವಾ ಸದರಿ ಜಮೀನನ್ನು ಸರ್ಕಾರವು ಯಾವ ವ್ಯಕ್ತಿ/ಇಲಾಖೆಗೆ ನೀಡಿರುತ್ತಾರೆಯೋ ಅವರಿಗೆ ರಕ್ಷಣೆಯನ್ನು ನೀಡತಕ್ಕದು.

Related News

spot_img

Revenue Alerts

spot_img

News

spot_img