ಬೆಂಗಳೂರು ಜು.26 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಇನ್ನಷ್ಟು ಸರಳವಾಗಿದೆ. ಅರ್ಹ ಫಲಾನುಭವಿಗಳು ತಮ್ಮ ದಾಖಲೆಗಳೊಂದಿಗೆ ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಈ ಮೊದಲು, ಅರ್ಹ ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ (ಶೆಡ್ಯೂಲಿಂಗ್) ಬಂದ ತಕ್ಷಣ ನೋಂದಣಿ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಇನ್ನು ಮುಂದೆ ಎಸ್ಎಂಎಸ್(SMS) ಅವಲಂಬಿಸದೆ ನೇರವಾಗಿ ದಾಖಲಾತಿಗಳೊಂದಿಗೆ ನೋಂದಣಿ ಕೇಂದ್ರಗಳಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಸಚಿವರು ತಿಳಿಸಿದರು.
ಯೋಜನೆ ಜಾರಿಯಾದ 7 ದಿನಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಗೃಹಲಕ್ಷ್ಮಿ ನೋಂದಣಿಗೆ ಹಣ ಪಡೆದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಸೇವಾ ಕೇಂದ್ರಗಳಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಮನೆ ಮಾಲೀಕರಿಗೆ 2,000 ರೂ. ಸಬ್ಸಿಡಿ ಸಹಿತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಒಂದು ಸೇವಾ ಕೇಂದ್ರದಲ್ಲಿ ದಿನಕ್ಕೆ 60 ಜನರಿಗೆ ಮಾತ್ರ ಅವಕಾಶವಿದೆ. ಗೃಹಿಣಿಯರು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ, ಗಂಡ ಅಥವಾ ಮಕ್ಕಳು ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್, ಕರ್ನಾಟಕ, ಒನ್ ಬೆಂಗಳೂರು ಒನ್ ಅಥವಾ ಬಾಪೂಜಿ ಸೇವೆಗಳಲ್ಲಿ ಎಸ್‌ಎಂಎಸ್ ಇಲ್ಲದಿದ್ದರೂ ಯಾರಾದರೂ ಹೋಗಿ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.