ಬೆಂಗಳೂರು: ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಆಸ್ತಿ ತೆರಿಗೆ(Property tax) ಹೆಚ್ಚಳ ಮಾಡಿಲ್ಲ ಎಂದು ಪಾಲಿಕೆ ಸ್ಪಷ್ಟನೆ ನೀಡಿದೆ.ಸಾಮಾಜಿಕ ಜಾಲತಾಣದಲ್ಲಿ ಅನುರಾಗ್ ಸಿಂಗ್ ಎಂಬುವವರು ಏಪ್ರಿಲ್ 1ರಿಂದ ಬಿಬಿಎಂಪಿ ಸೇರಿದಂತೆ ರಾಜ್ಯದೆಲ್ಲೆಡೆ ಆಸ್ತಿ ತೆರಿಗೆ ಹೆಚ್ಚಳವಾಗಲಿದೆ. ಸಾಮಾಜಿಕ ಜಾಲತಾಣ ಇನ್ಸ್‌ಸ್ಟಾಗ್ರಾಮ್‌ನ Index.daily ಎಂಬ ಪೇಜ್‌ನಲ್ಲಿ (https://www.instagram.com/reel/C4c-4klyOlJ/?igsh=ajc0dHVwdjJ3YTBr) ನಲ್ಲಿ ಅನುರಾಗ್ ಸಿಂಗ್ ಎಂಬುವವರು 13ನೇ ಮಾರ್ಚ್ 2024ರಂದು ಕರ್ನಾಟಕದಲ್ಲಿ ಬಾರಿ ತೆರಿಗೆ ಹೆಚ್ಚಳವಾಗಲಿದೆ ಎಂಬ ವೀಡಿಯೋ ಒಂದನ್ನು ಹರಿದುಬಿಟ್ಟಿದ್ದಾರೆ. ಸದರಿ ವಿಡಿಯೋದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಬಾಡಿಗೆ ಮನೆಗಳ ಮೇಲಿನ ಆಸ್ತಿ ತೆರಿಗೆಯನ್ನು 2 ಪಟ್ಟು ಮತ್ತು ವಾಣಿಜ್ಯ ಸಂಸ್ಥೆಗಳಿಗೆ 3-5 ಪಟ್ಟು ಹೆಚ್ಚಿಸುವುದು ಸೇರಿದಂತೆ ಇನ್ನಿತರೆ ವಿಷಗಳ ಕುರಿತು ಮಾತನಾಡಿರುತ್ತಾರೆ.ಇನ್ಸ್ ಸ್ಟಾಗ್ರಾಮ್ ನಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಹೇಳಿರುವ ಅಂಶಗಳು ಸತ್ಯಕ್ಕೆ ದೂರವಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1ನೇ ಏಪ್ರಿಲ್ 2024ರಿಂದ ಯಾವುದೇ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುವುದಿಲ್ಲ. ಆಸ್ತಿ ತೆರಿಗೆಯನ್ನು 2016ರಲ್ಲಿ ಪರಿಷ್ಕರಿಸಲಾಗಿದ್ದು, ಆ ದರದಂತೆಯೇ ಪ್ರಸ್ತುತ ಆಸ್ತಿ ತೆರಿಗೆ ದರಗಳು ಚಾಲ್ತಿಯಲ್ಲಿರುತ್ತದೆ ಹಾಗೂ ಮುಂದುವರಿಯಲಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸುಳ್ಳು ಸುದ್ದಿ ಹರಿಬಿಡುವವರ ಮೇಲೆ ನಿಯಮಾನುಸಾರ ಕಾನೂನು ಕ್ರಮ ವಹಿಸಲು ಬೆಂಗಳೂರು ನಗರ ಪೋಲಿಸ್ ಆಯುಕ್ತರು ರವರಿಗೆ ಪತ್ರ ಬರೆಯಲಾಗಿದೆ. ನಾಗರೀಕರು ಇಂತಹ ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಲು ಬಿಬಿಎಂಪಿ ಮನವಿ ಮಾಡಿಕೊಂಡಿದೆ.