22.4 C
Bengaluru
Saturday, July 6, 2024

ಬೆಂಗಳೂರಿನ 43 ಉಪ ನೋಂದಣಾಧಿಕಾರಿ ಕಚೇರಿಗಳ ಮೇಲಿನ ದಾಳಿ ಪ್ರಕರಣ: ಲೋಕಾ ಪೊಲೀಸರಿಂದ ಶೀಘ್ರವೇ FIR ?

ಬೆಂಗಳೂರು, ಸೆ. 13: ಬೆಂಗಳೂರಿನ 43 ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಅವರು ನಡೆಸಿದ ದಾಳಿ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. 43 ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲು ಲೋಕಾಯುಕ್ತ ಸಂಸ್ಥೆ ಚಿಂತನೆ ನಡೆಸಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ಸಂಸ್ಥೆ ಅಧಿಕಾರಿಗಳು ನಡೆಸಿದ ದಾಳಿ ಬಗ್ಗೆ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಅವರು revenueufacts.com ಗೆ ನೀಡಿದ ಸಮಗ್ರ ಮಾಹಿತಿ ವಿವರ ಇಲ್ಲಿದೆ.

ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಗೆ ಅನೇಕ ದೂರುಗಳನ್ನು ನಿಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಿಕ ಅಧಿಕಾರಿಗಳು ಮತ್ತು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ ಬೆಂಗಳೂರಿನ 43 ಉಪ ನೋಂದಣಾಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿ ವೇಳೆ ಉಪ ನೋಂದಣಾಧಿಕಾರಿಗಳು ನಡೆಸಿದ್ದ ಭಾರೀ ಅಕ್ರಮಗಳು ಬೆಳಕಿಗೆ ಬಂದಿದ್ದವು.

ಕಳೆದ ಜುಲೈನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ, ಲೋಕಾಯುಕ್ತ ಸಂಸ್ಥೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ಕ್ರಮ ಜರುಗಿಸುವ ಅಧಿಕಾರ ಇರಲಿಲ್ಲ. ಹೀಗಾಗಿ 43 ಉಪ ನೋಂದಣಾಧಿಕಾರಿಗಳ ಕಚೇರಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾ. ಬಿ.ಎಸ್. ಪಾಟೀಲ್ ಅವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆಗೆ ಆದೇಶಿಸಿದ್ದರು. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಉಪ ನೋಂದಣಾಧಿಕಾರಿಗಳು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮುಖ್ಯಸ್ಥರು ಒಳಗೊಂಡಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಆದೇಶಿಸಲಾಗಿತ್ತು. ಈ ಕುರಿತು ಸಮಗ್ರ ವರದಿ ನೀಡುವಂತೆ ಸೆ. 06 ಕ್ಕೆ ಸರ್ಕಾರಕ್ಕೆ ಲೋಕಾಯುಕ್ತ ಸಂಸ್ಥೆ ಗಡುವು ನೀಡಿತ್ತು.

ಲೋಕಾಯುಕ್ತ ಸಂಸ್ಥೆಯ ಗಡುವು ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಉಪ ನೋಂದಣಾಕಾರಿ ಕಚೇರಿಗಳಿಂದಲೂ ಲೋಕಾಯುಕ್ತ ಸಂಸ್ಥೆಗೆ ಹಲವು ವರದಿ ಸಲ್ಲಿಕೆಯಾಗಿವೆ. ವರದಿಗಳು ಹಾಗೂ ದಾಖಲೆಗಳನ್ನು ವಿಚಾರಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಎಫ್ಐಆರ್ ದಾಖಲು ಸಾಧ್ಯತೆ: ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದ ವೇಳೆ ಲೋಕಾಯುಕ್ತ ಸಂಸ್ಥೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸುವ ಅಧಿಕಾರ ಇರಲಿಲ್ಲ. ಹೀಗಾಗಿ ಲೋಕಾಯಕ್ತ ಕಾಯ್ದೆ ಅಡಿ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿತ್ತು. ಇದೀಗ ಎಸಿಬಿ ರದ್ದಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲು ಲೋಕಾಯುಕ್ತಕ್ಕೆ ಪವರ್ ಸಿಕ್ಕಿದ್ದು, ಉಪ ನೋಂದಣಾಧಿಕಾರಿಗಳ ಅಕ್ರಮಕ್ಕೆ ಸಂಬಂದಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಗಂಭೀರ ಚಿಂತನೆ ನಡೆಸಿದ್ದಾರೆ.

ಲೋಕಾಯುಕ್ತರ ಸ್ಪಷ್ಟನೆ: ಬೆಂಗಳೂರಿನ 43 ಉಪ ನೋಂದಣಾಧಿಕಾರಿಗಳ ಕಚೇರಿಗಳ ಮೇಲಿನ ದಾಳಿ ಸಂಬಂಧ ಸೆ. 6 ರೊಳಗೆ ವರದಿ ನೀಡಲು ಕಂದಾಯ ಇಲಾಖೆಗೆ ಗಡುವು ನೀಡಲಾಗಿತ್ತು. 43 ಉಪ ನೋಂದಣಾಧಿಕಾರಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ಆಡಳಿತದಲ್ಲಿನ ಲೋಪ, ಭ್ರಷ್ಟಾಚಾರ, ಕರ್ತವ್ಯಲೋಪದ ಬಗ್ಗೆ ಉಲ್ಲೇಖಿಸಲಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ಕೆಲವು ದಾಖಲೆಗಳನ್ನು ಸಲ್ಲಿಸಿದೆ. ಸ್ಪಷ್ಟೀಕರಣ ನೀಡಿದೆ. ಸದ್ಯಕ್ಕೆ ವಿಚಾರಣಾ ವಿಭಾಗದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನನ್ನ ಬಳಿ ಇನ್ನೂ ವರದಿ ಬಂದಿಲ್ಲ. ಬಂದ ಕೂಡಲೇ ಅಕ್ರಮಕ್ಕೆ ಸಂಬಂದಸಿದಂತೆ ಸೂಕ್ತ ಕ್ರಮ ಜರುಗಿಸಲಾಗುವುದು. ಲೋಕಾಯುಕ್ತ ಸಂಸ್ಥೆ ದಾಳಿ ಮಾಡಿದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲು ಲೋಕಾಯುಕ್ತ ಸಂಸ್ಥೆಗೆ ಅಧಿಕಾರ ಇರಲಿಲ್ಲ. ಇದೀಗ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ಮಾಡಲು ಅವಕಾಶವಿದೆ. ಹಿಗಾಗಿ ನನ್ನ ಬಳಿ ಕಡತ ಬಂದ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಆದೇಶಿಸುತ್ತೇನೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸುವ ಪ್ರಮೇಯ ಒದಗಿ ಬಂದರೆ ಕೇಸು ದಾಖಲಿಸಿ ಆರೋಪಿತರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ಸೂಚಿಸುತ್ತೇನೆ ಎಂದು ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ.

ಕಂದಾಯ ಇಲಾಖೆಯ ಭಾಗವಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿನ ಅಕ್ರಮ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ದುರಾಡಳಿತ, ಕರ್ತವ್ಯಲೋಪ, ಜನ ಪರ ಇಲ್ಲದ ಆಡಳಿತ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಬಳಿಕ ಸರ್ಕಾರಕ್ಕೆ ವರದಿ ನೀಡಲು ಗಡುವು ನೀಡಿದ್ದರು. ದಾಳಿ ವೇಳೆ ಅಧಿಕಾರಿಗಳು ಪದನಾಮ ಫಲಕ ಪ್ರದರ್ಶಿಸಿಲ್ಲ. ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ ಅಳವಡಿಸಿದ್ದರೂ ಕೆಲಸ ಮಾಡುತ್ತಿಲ್ಲ. ಮಧ್ಯವರ್ತಿಗಳ ಹಾವಳಿ, ಆಸ್ತಿ ನೋಂದಣಿ ಸಾಫ್ಟ್ವೇರ್ ಕಾವೇರಿಯಲ್ಲಿನ ಲೋಪ ಸೇರಿದಂತೆ ಹಲವಾರು ಮಹತ್ವದ ವಿಷಯಗಳನ್ನು ಪಟ್ಟಿ ಮಾಡಿದ್ದರು. ಪ್ರತಿ ಉಪ ನೋಂದಣಾಧಿಕಾರಿ ಕಚೇರಿ ವಾರು ಅಕ್ರಮಗಳ ಪಟ್ಟಿಯನ್ನು ತಯಾರಿಸಿ ವರದಿ ನೀಡುವಂತೆ ಕೋರಿ ಸರ್ಕಾರಕ್ಕೆ ಸೂಚಿಸಿದ್ದರು.

Related News

spot_img

Revenue Alerts

spot_img

News

spot_img