ಬೆಂಗಳೂರು, ಮಾ. 30 : ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದಲ್ಲಿ ಸಮಸ್ಯೆ ಎದುರಾಗಿದೆ. ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಮತ್ತು ಬಿಡಿಎ ನಡುವೆ ಹಗ್ಗ ಜಗ್ಗಾಟ ಉಂಟಾಗಿದೆ. ಇದರಿಂದ ಗುತ್ತಿಗೆದಾರರು ಮೂಲಸೌಕರ್ಯ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ. ಇದು ಮನೆ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುತ್ತಿರುವ ನಿವೇಶನದಾರರು ಆಸೆಗೆ ತಣ್ಣಿರೆರಚುವಂತಾಗಿದೆ. ಅಪ್ಪ ಅಮ್ಮನ ಜಗಳದಲ್ಲಿ ಮಗು ಬಡವಾಯ್ತು ಎಂಬಂತೆ. ಬಿಡಿಎ ಹಾಗೂ ಗುತ್ತಿಗೆದಾರರ ಕಿತ್ತಾಟದಲ್ಲಿ ನಿವೇಶನದಾರರು ಸಮಸ್ಯೆ ಅನ್ನು ಎದುರಿಸಬೇಕಾಗಿದೆ.
2014ರಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಟೆಂಡರ್ ಕರೆದಿತ್ತು. ಸಂಸ್ಥೆಯೊಂದಕ್ಕೆ ಇದರ ಗುತ್ತಿಗೆಯನ್ನು ನೀಡಿತ್ತು. ಆದರೆ, ಜಮೀನನ್ನು ಹಂತ ಹಂತವಾಗಿ ಸ್ವಾಧೀನಪಡಿಸಿಕೊಂಡ ಬಿಡಿಎ ಭೂಮಿಯನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸುವಾಗ ತಡವಾಯ್ತು, ಇದರಿಂದಾಗಿ ಗುತ್ತಿಗೆದಾರರು ಕಾಮಗಾರಿಯನ್ನು ನಿಧಾನಗತಿಯಲ್ಲಿ ಮಾಡಲು ಶುರು ಮಾಡಿದರು. ಇಂದಿಗೂ ಕೂಡ ಕಾಮಗಾರಿ ಪೂರ್ಣಗೊಂಡಿಲ್ಲ. ಭೂಮಿ ಹಸ್ತಾಮತರ ಪ್ರಕ್ರಿಯೆ ತಡವಾಗಿದ್ದರಿಂದ ಕಟ್ಟಡ ಸಾಮಾಗ್ರಿಗಳ ಬೆಲೆ ಹೆಚ್ಚಾಗಿದೆ. 2014 ರಿಂದ ಈ ವರೆಗೆ ಶೇ. 60 ರಿಂದ 70 ರಷ್ಟು ಕಟ್ಟಡ ಸಾಮಾಗ್ರಿಗಳ ಬೆಲೆ ಹೆಚ್ಚಳವಾಗಿದೆ.
ಹೀಗಾಗಿ ಕಾಮಗಾರಿ ವೆಚ್ಚ ಹೆಚ್ಚಾಗಿದ್ದು, ಇದನ್ನು ಪರಿಷ್ಕರಣೆ ಮಾಡುವಂತೆ ಗುತ್ತಿಗೆದಾರರು ಬಿಡಿಎಗೆ ಒತ್ತಾಯಿಸಿದ್ದಾರೆ. ಆದರೆ, ಬಿಡಿಎ ವೆಚ್ಚ ಪರಿಷ್ಕರಿಸಲು ನಿರಾಕರಿಸಿದೆ. ಇವರಿಬ್ಬರ ಈ ಹಗ್ಗ-ಜಗ್ಗಾಟದಿಂದ ಈಗ ಬಡಾವಣೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಒಳಚರಂಡಿ, ಕುಡಿಯುವ ನೀರಿನ ಕೊಳವೆ, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಅಷ್ಟೇ ಅಲ್ಲದೇ, ಲೇಔಟ್ ವಿಭಾಗದ ಗುತ್ತಿಗೆದಾರರಿಗೆ 250 ಕೋಟಿ ರೂಪಾಯಿ ಅನ್ನು ಬಿಡಿಎ ಬಾಕಿ ಉಳಿಸಿಕೊಂಡಿದೆ.
ಈಗಾಗಲೇ ಬೇಸಿಗೆ ಕಾಲ ಅರ್ಧ ಮುಗಿದಿದ್ದು, ಬಡಾವಣೆ ನಿರ್ಮಾಣ ಕಾರ್ಯ ಹೀಗೆ ಕುಂಟುತ್ತಾ ಸಾಗಿದರೆ, ನಿವೇಶನದಾರರಿಗೆ ಸಮಸ್ಯೆ ಎದುರಾಗಲಿದೆ. ಕಾಮಗಾರಿ ಮುಗಿಯುವ ಮುನ್ನವೇ ಮಳೆಗಾಲ ಶುರುವಾದರೆ, ಬಡಾವಣೆ ನಿರ್ಮಾಣ ಕಾರ್ಯ ಇನ್ನೂ ಮುಂದಕ್ಕೆ ಹೋಗುತ್ತದೆ. ಇದರಿಂದ ನಿವೇಶನಗಳನ್ನು ಕಟ್ಟಿಕೊಳ್ಳಬೇಕು ಎಂದು ಆಸೆ ಪಟ್ಟಿರುವ ನಿವೇಶದಾರರಿಗೆ ನಿರಾಸೆ ಉಂಟಾಗಿದೆ.