ನವದೆಹಲಿ ಮೇ 15 : ಕರ್ನಾಟಕ ಡಿಜಿಪಿ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಆಗಿರುವ ಪ್ರವೀಣ್ ಸೂದ್ ಅವರನ್ನು ಸಿಬಿಐ ಡೈರೆಕ್ಟರ್ ಆಗಿ ಪ್ರಧಾನಿ ಮೋದಿ ನೇತೃತ್ವದ ಉನ್ನತಮಟ್ಟದ ಆಯ್ಕೆ ಸಮಿತಿ ನೇಮಕ ಮಾಡಿದೆ.ಅವರು ಮುಂದಿನ ಎರಡು ವರ್ಷಗಳ ಕಾಲ ಸಿಬಿಐ ಮುಖ್ಯಸ್ಥರಾಗಿ ಅಧಿಕಾರ ಹೊಂದಿರುತ್ತಾರೆ. ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯು ಸೂದ್ ಹೆಸರನ್ನು ಅಂತಿಮಗೊಳಿಸಿದೆ.
ಹಾಲಿ ಸಿಬಿಐ ನಿರ್ದೇಶಕ ಸುಭೋದ್ ಕುಮಾರ್ ಜೈಸ್ವಾಲ್ ಅವರ ಎರಡು ವರ್ಷಗಳ ಅವಧಿ ಮೇ 25 ರಂದು ಕೊನೆಗೊಳ್ಳಲಿದೆ. ಹೀಗಾಗಿ ಶನಿವಾರ ಪ್ರಧಾನಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಸಿಬಿಐ ನಿರ್ದೇಶಕರ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರನ್ನು ಅಂತಿಮಗೊಳಿಸಿತ್ತು.
ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್, ಮಧ್ಯಪ್ರದೇಶದ ಡಿಜಿಪಿ ಸುಧೀರ್ ಸಕ್ಸೇನಾ ಮತ್ತು ಅಗ್ನಿಶಾಮಕ ಸೇವೆ, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ ದಳದ ಡಿಜಿಪಿ ತಾಜ್ ಹಸನ್ ಅವರ ಹೆಸರು ಸಿಬಿಐ ನಿರ್ದೇಶಕರ ಹುದ್ದೆಗೆ ಮುಂಚೂಣಿಯಲ್ಲಿತ್ತು. ಕೊನೆಗೆ ಸೇವಾನುಭವ, ಅಮೇರಿಕಾರದಲ್ಲಿ ಮೂರು ವರ್ಷಗಳ ತರಬೇತಿ ಪರಿಗಣಿಸಿ ಪ್ರವೀಣ್ ಸೂದ್ ನೇಮಕಗೊಳಿಸಿ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಕರ್ನಾಟಕ ಕೇಡರ್’ನ 1986ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್, 2020ರ ಜನವರಿ ತಿಂಗಳಲ್ಲಿ ಕರ್ನಾಟಕದ ಡಿಜಿಪಿ ಆಗಿ ನೇಮಕಗೊಂಡಿದ್ದರು.
ಕಳೆದ ಮಾರ್ಚ್ ನಲ್ಲಿ ಡಿಜಿಪಿ ಪ್ರವೀಣ್ ಸೂದ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಲಾಯಕ್ ಎಂದು ಜರೆದಿದ್ದರು. ಸೂದ್ ಬಿಜೆಪಿ ಸರ್ಕಾರದ ಪರ ವಹಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಮಾತ್ರ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಗಂಭಿರ ಆರೋಪ ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪ್ರವೀಣ್ ಸೂದ್ ವಿರುದ್ಧ ಕ್ರಮ ಕೈಗೊಳ್ಳುತ್ತೀವಿ ಎಂದು ಡಿಕೆಶಿ ಹೇಳಿದ್ದರು.ಮೂಲತಃ ಹಿಮಾಚಲ ಪ್ರದೇಶದ ಇವರು ಐಐಟಿ ದೆಹಲಿಯ ವಿದ್ಯಾರ್ಥಿಯಾಗಿದ್ದರು. 1985ರಲ್ಲಿ ಐಪಿಎಸ್ ಪರೀಕ್ಷೆ ತೇರ್ಗಡೆಗೊಂಡು ಕರ್ನಾಟಕದಲ್ಲಿ ಪೊಲೀಸ್ ಸೇವೆ ಆರಂಭಿಸಿದ್ದರು. ಮೊದಲು ಬಳ್ಳಾರಿ, ರಾಯಚೂರಿನಲ್ಲಿ ಸೇವೆ ಕೈಗೊಂಡು ನಂತರ ಬೆಂಗಳೂರಿನಲ್ಲಿ ಡಿಸಿಪಿಯಾಗಿ ರಾಜಧಾನಿಯಲ್ಲಿ ಕರ್ತವ್ಯ ವಹಿಸ್ಕೊಂಡಿದ್ದರು.