26.6 C
Bengaluru
Monday, June 17, 2024

ಕನ್ನಡ ರಾಜ್ಯೋತ್ಸವ : ಆಲೂರು ವೆಂಕಟರಾಯರು ಎಂಬ ಕನ್ನಡ ಹೃದಯದ ಬದುಕಿನ ಕಥೆ

#Kannada Rajyotsava #Aluru venkatarayaru #Karnataka Ekikarana movment, #Kannada

ಬೆಂಗಳೂರು. ಅ. 31:ನಾನು ಕನ್ನಡಿಗನು.. ಕರ್ನಾಟಕ ನನ್ನದು.. ಈ ವಿಚಾರದಲ್ಲಿ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುದಿಲ್ಲವೋ .. ಕನ್ನಡ ತಾಯಿಗೆ ಈಗ ಒದಗಿ ಬಂದಿರುವ ವಿಷಮ ಸ್ಥಿತಿಯಲ್ಲಿ ಯಾವನ ಹೃದಯವು ತಲ್ಲಣಗೊಳ್ಳುವುದಿಲ್ಲವೋ ಅದು ಹೃದಯವೇ ಅಲ್ಲ.. ಕಲ್ಲಿನ ಬಂಡೆ….ದೇಹವಲ್ಲ ಮೋಟು ಮರ.ನಾವು ಕನ್ನಡಿಗರು ನವೆಂಬರ್ ಬಂತೆಂದರೆ ಕನ್ನಡಿಗರಿಗೆ ಹಬ್ಬ. ಕನ್ನಡ ರಾಜ್ಯೋತ್ಸವವನ್ನು ಅಬ್ಬರದಿಂದ ಆಚರಿಸುತ್ತೇವೆ. ಕನ್ನಡ ನಮ್ಮದು ಎಂದು ಕೂಗುತ್ತೇವೆ. ನವೆಂಬರ್ ಬಳಿಕ ನಾವು ಮರೆತು ಬಿಡುತ್ತೇವೆ. ಉಸಿರು ಇರುವ ತನಕ ಕನ್ನಡವನ್ನೇ ಉಸಿರಾಡಿದವರು, ವಿಶ್ವ ಭೂ ಪಟದಲ್ಲಿ ಕರ್ನಾಟಕ ನಕ್ಷೆಯನ್ನು ಮೂಡಿಸಿದ ಮಹಾನ್‌ ಭಾವ ಆಲೂರು ವೆಂಕಟರಾಯರು. ಆಲೂರು ವೆಂಕಟರಾಯರ ನೆನಪಿಲ್ಲದೇ ಕನ್ನಡ ರಾಜ್ಯೋತ್ಸವ ಆಚರಿಸುವುದಕ್ಕೆ ಅರ್ಥವೇ ಇಲ್ಲ! ಕನ್ನಡಕ್ಕಾಗಿ ಬದುಕನ್ನೇ ಮುಡುಪಾಗಿಟ್ಟ ಆಲೂರು ವೆಂಕಟರಾಯರ ಕಿರು ಪರಿಚಯ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಲ್ಲಿ ನೀಡಲಾಗಿದೆ. ಕನ್ನಡ ಮತ್ತು ಕರ್ನಾಟಕವನ್ನೇ ಉಸಿರಾಡಿದ ಕನ್ನಡ ಕುಲ ಪುರೋಹಿತ ರಾಯರ ಮಾತುಗಳಿವು.

ವೆಂಕಟರಾಯರು ಯಾರು ? ಇವತ್ತಿನ ಯುವ ಪೀಳಿಗೆಗೆ ಆಲೂರು ವೆಂಕಟರಾಯರು ಕನ್ನಡ ಕುಲ ಪುರೋಹಿತ, ಕರ್ನಾಟಕ ಏಕೀಕರಣ ಚಳವಳಿಯ ನೇತಾರ ಎಂಬ ವಿಚಾರ ಹೊರತು ಪಡಿಸಿ ಬಹುಶಃ ಬೇರೆ ಯಾವ ಸಂಗತಿಗಳು ಗೊತ್ತಿಲ್ಲ. ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ ಜೀವ ಮುಡುಪಿಟ್ಟ ಕನ್ನಡದ ನಂದಾದೀಪ ಆಲೂರು ವೆಂಕಟರಾಯರ ಜೀವನ ಅಪರೂಪವಾದದು.

ಆಲೂರು ವೆಂಕಟರಾಯರು ಜನಿಸಿದ್ದು 1880 ಜುಲೈ 12 ರಂದು ಬಿಜಾಪುರದಲ್ಲಿ ಜನಿಸಿದರು. ( ಬಾಂಬೆ ಪ್ರೆಸಿಡೆನ್ಸಿ) ತಂದೆ ಭೀಮರಾವ್‌ ಕಂದಾಯ ಇಲಾಖೆಯಲ್ಲಿ ಶಿರಸ್ತೆದಾರ್ ಆಗಿದ್ದರು. ಫರ್ಗೂಸನ್ ಕಾಲೇಜಿನಲ್ಲಿ ಬಿಎ ಮತ್ತು ಎಲ್‌ಎಲ್ ಬಿ ಪದವಿ ಮುಗಿಸಿದರು. ಭಾರತದ ಸ್ವತಂತ್ರ ಸೇನಾನಿಗಳಾದ ಸಾವರ್ಕರ್‌ ಮತ್ತು ಬಾಲಗಂಗಾದರ್ ತಿಲಕ್ ಅವರ ಸಂಪರ್ಕ ಸಿಕ್ಕಿತ್ತು. ತಿಲಕರ ಆತ್ಮೀಯತೆಯಿಂದ ಇದ್ದರು. ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದರು.

ಬದುಕಿನ ಅಲೋಚನೆ ಬದಲಿಸಿದ ಹಂಪಿ: ಒಮ್ಮೆ ಬೇಸಿಗೆ ರಜೆಯಲ್ಲಿ ರಾಯರು ಬಳ್ಳಾರಿಯ ಆನೆಗೊಂದಿಗೆ ಬಂದಿದ್ದರು. ಹಂಪಿಯ ಅವಶೇಷಗಳು ಅವರ ಮೇಲೆ ಪರಿಣಾಮ ಉಂಟು ಮಾಡಿದವು. ಅವರ ಮಾತಲ್ಲೇ ಹೇಳುವುದಾದರೆ, ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನಮ್ಮ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂತಿ್ ಒಡಮೂಡುತ್ತಿತ್ತುಉ. ಆ ದರ್ಶನವು ನನ್ನ ತಲೆಯ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. .ಹೃದಯ ಸಮುದ್ರ ಅಲ್ಲೋಲ ಕಲ್ಲೋಲ ಆಯಿತು. ಆ ದಿಸವ ನನ್ನ ಜೀವನ ಕ್ರಮದಲ್ಲಿ ಕ್ರಾಂತಿ ಮಾಡಲಿಕ್ಕೆ ಕಾರಣವಾಯಿತು ಎಂದಿದ್ದಾರೆ. ಇದರಿಂದ ಆಲೂರು ವೆಂಕಟರಾಯರು ಕರ್ನಾಟಕ ಇತಿಹಾಸ ಸಾಹಿತ್ಯ ವ್ಯಾಸಂಗಕ್ಕೆ ಇಳಿದರು.

ಮುಂಬಯಿ ಪ್ರಾಂತ್ಯದಲ್ಲಿ ಮರಾಠಿಗರ ಪ್ರಾಬಲ್ಯ. ಮದ್ರಾಸ್ ಪ್ರಾಂತ್ಯದಲ್ಲಿ ತೆಲಗು ತಮಿಳು ಪ್ರಾಬಲ್ಯ. ಇಂತಹ ಸಂದರ್ಬದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸೇರಿದ ರಾಯರು ಅದರ ಕಾರ್ಯ ಭಾರ ಹೊತ್ತುಕೊಂಡರು. ಕನ್ನಡಿಗರನ್ನು ಜಾಗೃತಗೊಳಿಸಲು 1906 ರಲ್ಲಿ ವಾಗ್ಭೂಷಣ ಪತ್ರಿಕೆ ಅರಂಭಿಸಿದರು. ವಕೀಲಿ ವೃತ್ತಿ ತೊರೆದು ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿದರು. ಆನಂತರ ಜಯ ಕರ್ನಾಟಕ ಪತ್ರಿಕೆ ಪ್ರಾರಂಭಿಸಿದರು. ಕನ್ನಡಿಗ, ಕರ್ಮವೀರ ಪತ್ರಿಕೆಗಳ ಸಂಪಾದಕತ್ವ ವಹಿಸಿದ್ದರು.

ಆಗಿನ ಕಾಲದಲ್ಲಿ ಕನ್ನಡದಲ್ಲಿ ಸಾಹಿತ್ಯ ಕೊರತೆ ಇತ್ತು. ಇದನ್ನು ನೀಗಿಸಲು ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಲೇಖಕರ ಸಮಾವೇಶ ಕರೆದರು. 1915 ರಲ್ಲಿ ನಡೆದ ಸಮಾವೇಶ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆರಂಭಿಸಿದರು. ರಾಯರು ಬರೆದ ಮೊದಲ ಕೃತಿ ವಿದ್ಯಾದರ ಚರಿತ್ರೆ. ತನ್ನ ಜೀವಿತ ಕಾಲದಲ್ಲಿ ಒಟ್ಟು 27 ಪುಸ್ತಕಗಳನ್ನು ಬರೆದಿದ್ದಾರೆ. ಕರ್ನಾಟಕ ಗೀತ ವೈಭವ, ಕರ್ನಾಟಕ ವೀರ ರತ್ನಗಳು, ಕರ್ನಾಟಕತ್ವ ಸೂತ್ರಗಳು, ಕರ್ನಾಟಕತ್ವ ವಿಕಾಸ ಮತ್ತಿತರ ಪುಸ್ತಕಗಳನ್ನು ಬರೆದಿದ್ದಾರೆ.

ಕರ್ನಾಟಕ ಕುಲ ಪುರೋಹಿತ: 1956 ನವೆಂಬರ್ ಒಂದು ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಅಖಂಕ ಕರ್ನಾಟಕ ಪ್ರಾರಂಭವಾಯಿತು. ನವೆಂಬರ್ 1, 1956 ರಂದು ಹಂಪಿಯಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕರ್ನಾಟಕ ಕುಲ ಪುರೋಹಿತ ಬಿರುದನ್ನು ಸ್ವೀಕರಿಸಿದರು.

ಕರ್ನಾಟಕ ಏಕೀಕರಣ ಚಳವಳಿ ಮತ್ತು ಆಲೂರು : ಕರ್ನಾಟಕ 1956 ರಲ್ಲಿ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಕರ್ನಾಟಕ ರಾಜ್ಯ ( ಮೈಸೂರು ರಾಜ್ಯ) ಸ್ಥಾಪನೆಗೊಂಡಿತು. ಬ್ರಿಟೀಷರ ಅಳ್ವಿಕೆ ಕಾಲದಲ್ಲಿ ಭಾಷಾ ವಾರು ಆಧಾರದ ಮೇಲೆ ಕರ್ನಾಟಕ ರಾಜ್ಯ ರಚನೆಗೆ ಬೇಡಿಕೆ ಇಟ್ಟು ಹೋರಾಟ ಮಾಡಿದವರು ಆಲೂರು ವೆಂಕಟರಾಯರು.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳಿದ್ದವು. ರಾಜ ಮಹಾರಾಜರು ಅಳ್ವಿಕೆ ಮಾಡುತ್ತಿದ್ದರು. ಬ್ರಿಟೀಷರು ಭಾರತ ಬಿಟ್ಟು ತೊಲಗುವಾಗ ಎಲ್ಲಾ ಸಂಸ್ಥಾನಗಳಿಗೆ ಒಂದು ಆಹ್ವಾನ ನೀಡಿದ್ದರು. ಯಾವುದೇ ಸಂಸ್ಥಾನಗಳು ತಾವು ಇಚ್ಚೆ ಪಟ್ಟರೆ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಸೇರಬಹುದು , ಇಲ್ಲವೇ ಪಾಕಿಸ್ಥಾನ ಸೇರಬಹುದು ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟು ಹೋಗಿಬಿಟ್ಟರು. ಈ ಹಿನ್ನೆಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿದ್ದ ಜಮ್ಮು ಕಾಶ್ಮೀರ ರಾಜ ಹರಸಿಂಗ್, ಪಂಜಾಬ್‌ ಪ್ರಾಂತ್ಯದಲ್ಲಿ ಮಹಾರಾಜ್ ಮೋಹಮದ್ ಮಹಾಬತ್, ಹೈದರಾಬಾದ್‌ ನಲ್ಲಿ ಮೀರ್ ಉಸ್ಮಾನ್, ಭಾರತ ಒಕ್ಕೂಟ ಸೇರಲು ನಿರಾಕರಿಸಿದರು. ಅಂತಿಮವಾಗಿ ಕಾಶ್ಮೀರವು ಹಲವು ಷರತ್ತುಗಳನ್ನು ಒಡ್ಡಿ ಭಾರತದ ಒಕ್ಕೂಟಕ್ಕೆ ಸೇರಿತು. ಜುನಾಗಢ ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರಿತು. ಅದರೆ ಹೈದರಾಬಾದ್‌ ನಿಜಾಮರು ಪ್ರತ್ಯೇಕವಾಗಿ ಉಳಿಯಲು ಯೋಚಿಸಿದರು. ಹೀಗಾಗಿ ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿದರೂ ಹಲವು ಸಂಸ್ಥಾನಗಳಿಗೆ ಸ್ವಾತಂತ್ರ್ಯ ದೊರೆಯಲಿಲ್ಲ. ಈ ವಿಷಮ ಪರಿಸ್ಥಿತಿಯಲ್ಲಿ ಈಗಿನ ಅಖಂಡ ಕರ್ನಾಟಕ ಹರಿದು ಹಂಚಿ ಹೋಗಿತ್ತು.
ಒಂದಡೆ ಮೈಸೂರು ಸಂಸ್ಥಾನ, ಬಿಜಾಪುರ ಬೆಳಗಾವಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಹಂಚಿ ಹೋಗಿತ್ತು. ಕಲ್ಯಾಣ ಕರ್ನಾಟಕ ನಿಜಾಮರ ಅಡಳಿತಕ್ಕೆ ಒಳಪಟ್ಟಿತ್ತು. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯದಲ್ಲಿ ಸೇರಿತ್ತು. ಇದರ ಮಧ್ಯೆ ಕೊಡಗು ಸ್ವತಂತ್ರ್ಯವಾಗಿತ್ತು. ಕನ್ನಡಿಗರ ಸಮಗ್ರ ಕರ್ನಾಟಕ ಅಸ್ತಿತ್ವದಲ್ಲಿ ಇರಲಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿ ಪ್ರಾರಂಭಿಸುತ್ತಾರೆ.
ಅತಿ ಶ್ರೀಮಂತ ರಾಜ್ಯವಾಗಿದ್ದ ಮೈಸೂರು ರಾಜ್ಯ ಚಿಕ್ಕದಾಗಿತ್ತು. ಈಗಿನ ಕಲ್ಯಾಣ ಕರ್ನಾಟಕ ಮೈಸೂರು ರಾಜ್ಯದ ಅಡಳಿತಕ್ಕೆ ಒಳಪಟ್ಟಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ಆಲೂರು ವೆಂಕಟರಾಯರು ಏಕೀಕರಣ ಚಳವಳಿ ಆರಂಭಿಸಿದರು. ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪಿಸಿದರು. 1890 ರಲ್ಲಿಯೇ ಪ್ರಾರಂಭವಾಗಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿತು. 1856 ರಲ್ಲಿಯೇ ಆಲೂರು ವೆಂಕಟರಾಯರು ಏಕೀಕರಣ ಕರ್ನಾಟಕಕ್ಕಾಗಿ ಹೋರಾಟ ಅರಂಭಿಸಿದ್ದರು. ಇಂತಹ ಸಂದರ್ಭದಲ್ಲಿ ಅಖಿಲ ಕರ್ನಾಟಕ ಲೇಖಕರ ಸಮಾವೇಶ ನಡೆಸಿ ಕನ್ನಡ- ಕರ್ನಾಟಕ ನಾಡಿನ ಬಗ್ಗೆ ಜಾಗೃತಿ ಮೂಡಿಸಿದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹುಟ್ಟು ಹಾಕಿದರು.

ಭಾವಾಷಾರು ಆಧಾರದ ಮೇಲೆ ಕರ್ನಾಟಕ ಏಕೀಕರಣಕ್ಕಾಗಿ ಅಲೂರು ವೆಂಕಟರಾಯರು ಪರಿಶ್ರಮ ಹಾಕಿದರು. ನಿಧಾನಗತಿಯಲ್ಲಿ ಆರಂಭವಾದ ಎಕೀಕರಣ ಚಳವಳಿ ರಾಜ್ಯದಲ್ಲಿ ಹೋರಾಟಗಳಿಗೆ ನಾಂದಿ ಹಾಡಿತು. ಕರ್ನಾಟಕ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಬೇಡಿಕೆ ಇಡಲಾಗಿತ್ತು. ಆಲೂರು ವೆಂಕಟರಾಯರ ಹೋರಾಟಕ್ಕೆ ಗುಡ್ಲೆಪ್ಪ ಹಳ್ಳಕೇರಿ ಸಿದ್ದಪ್ಪ ಕಾಂಬ್ಲಿ, ಅರ್‌. ಎಚ್‌. ದೇಶಪಾಂಡೆ, ರಂಗಾರಾವ್‌ ದಿವಾಕರ್, ಕೌಜಲಗಿ ಶ್ರೀನಿವಾಸ ರಾವ್, ಕೆಂಗಲ್ ಹನುಮಂತಯ್ಯ, ಗೋರುರು ರಾಮಸ್ವಾಮಿ ಅಯ್ಯಂಗಾರ್, ಎಸ್‌. ನಿಜಲಿಂಗಪ್ಪ, ಹೀಗೆ ಘಟಾನು ಘಟಿಗಳು ಕನ್ನಡ ಮತ್ತು ಕರ್ನಾಟಕ ಅಸ್ಮಿತೆಗಾಗಿ ಹೋರಾಟಕ್ಕೆ ಇಳಿದರು.

ನಾಗಪುರ ಸಮಾವೇಶ: 1920 ರಲ್ಲಿ ಧಾರವಾಡದಲ್ಲಿ ಕರ್ನಾಟಕ ರಾಜ್ಯ ರಾಜಕೀಯ ಸಮಾವೇಶ ಕರೆದು ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಸ್ಥಾಪನೆ ಮಾಡಬೇಕು ಎಂಬ ಠರಾವು ಹೊರಡಿಸಿದರು. ಈ ಹಿನ್ನೆಲೆಯಲ್ಲಿ ನಾಗಪುರದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಆಯೋಜಿಸಿದ್ದ ನಾಗಪುರ ಸಮಾವೇಶದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಸ್ಥಾಪನೆಗೆ ನಾಂದಿ ಹಾಡಿದರು. ಈ ಹೋರಾಟದ ಮುಂದಾಳತ್ವದಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ಎಸ್‌. ನಿಜಲಿಂಗಪ್ಪ ಇದ್ದರು. ಇಬ್ಬರೂ ಕರ್ನಾಟಕದ ಮುಖ್ಯಮಂತ್ರಿಗಳಾಗಿ ಕರ್ನಾಟಕ ಅಭಿವೃದ್ಧಿಗೆ ನಾಂದಿ ಹಾಡಿದವರು.

ಬೆಳಗಾವಿ ಸಮಾವೇಶ: ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ 1924 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಳಗಾವಿಯಲ್ಲಿ ಸಮಾವೇಶ ಏರ್ಪಡಿಸಿತ್ತು. ಇದೇ ಅವಧಿಯಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣ ವಿಚಾರವಾಗಿ ಐತಿಹಾಸಿಕ ಸಮಾವೇಶ ಏರ್ಪಡಿಸಲಾಗಿತ್ತು. ಸಿದ್ದಪ್ಪ ಕಾಂಬ್ಲಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಬಹುತೇಕ ನಾಯಕರು ಎರಡು ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಸಾಹಿತಿ ಉಯ್ಯಿಳಗೋಲ ನಾರಾಯಣ ರಾವ್‌ ಅವರು ಉದಯವಾಗಲಿ ಚೆಲುವ ಕನ್ನಡನಾಡು ಗೀತೆಯನ್ನು ಹಾಡಿದರು. ಕರ್ನಾಟಕ ಏಕೀಕರಣದ ಹೋರಾಟರಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ ಸಹ ಸಂಪೂರ್ಣ ಬೆಂಬಲ ನೀಡಿತು. ಕರ್ನಾಟಕ ಏಕೀಕರಣ ಸಭೆ ಕರ್ನಾಟಕ ಏಕೀಕರಣ ಸಂಘವಾಗಿ ರೂಪಾಂತರಗೊಂಡಿತು.

ನೆಹರು ಸಮಿತಿ ಶಿಫಾರಸು: ಅಖಂಡ ಕರ್ನಾಟಕ ರಚನೆಗಾಗಿ 1928 ರಲ್ಲಿ ಗುದ್ಲೆಪ್ಪ ಹಾಳಕೇರಿ ಅವರ ಪ್ರಭಾವದಿಂದಾಗಿ ನೆಹರು ಸಮಿತಿ ಕನ್ನಡ ಮಾತನಾಡುವರಿಗಾಗಿ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ ಅಖಂಡ ಕರ್ನಾಟಕ ರಾಜ್ಯ ಸ್ಥಾಪನೆಗೆ ಶಿಫಾರಸು ಮಾಡಿತು. ಕರ್ನಾಟಕ ಏಕೀಕರಣಕ್ಕಾಗಿ ಸಾಹಿತಿ ಗೋಕಾಕ್‌, ಕುವೆಂಪು,, ಬೇಂದ್ರೆ ಅವರ ಬೆಂಬಲವು ಸಿಕ್ಕತು. ಇದರಿಂದಾಗಿ ಬೆಂಗಳೂರು, ಶಿವಮೊಗ್ಗ, ರಾಯಚೂರು ಎಲ್ಲಾ ಕಡೆ ಕರ್ನಾಟಕ ರಾಜ್ಯ ಒಗ್ಗೂಡಿಸುವ ಧ್ವನಿ ದೊಡ್ಡ ಮಟ್ಟದಲ್ಲಿ ಮೊಳಗಿತು.ಸೈಮನ್ ಕಮೀಷನ್ ಆಧಾರದ ಮೇಳೆ 1937 ರಲ್ಲಿ ಚುನಾವಣೆ ನಡೆಯಿತು. ಪ್ರತ್ಯೇಕ ಕರ್ನಾಟಕ ರಾಜ್ಯ ರಚನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಟ್ಟಿತ್ತು.

1946 ರಲ್ಲಿ ಹತ್ತನೇ ಕರ್ನಾಟಕ ಏಕೀಕರಣ ಚಳವಳಿಯ ಸಮಾವೇಶ ಬಾಂಬೆಯಲ್ಲಿ ನಡೆಯಿತು. ಸರ್ದಾರ ಪಟೇಲ್ ಇದನ್ನು ಉದ್ಘಾಟಿಸಿದ್ದರು. ಇಲ್ಲಿ ಸಹ ಕರ್ನಾಟಕ ಏಕೀಕರಣ ಧ್ವನಿ ಮೊಳಗಿಸಲಾಯಿತು. ಇದೇ ಸಮಯದಲ್ಲಿ ದಾವಣಗೆರೆಯಲ್ಲಿ ಅಖಿಲ ಕರ್ನಾಟಕ ಸಮಾವೇಶ ನಡೆಯಿತು. ಭಾಷಾವಾರು ಆಧಾರದ ಮೇಲೆ ಕರ್ನಾಟಕ ರಾಜ್ಯ ರಚನೆ ಬೇಡಿಕೆ ಮುಮದಿಟ್ಟಿದ್ದರು.

ಸ್ವಾತಂತ್ರ್ಯ ನಂತರ ಹೊಸ ಸರ್ಕಾರ ಕರ್ನಾಟಕ ಏಕೀಕರಣ ಚಳವಳಿಗೆ ಹೆಚ್ಚು ಒತ್ತು ನೀಡಲಿಲ್ಲ. ಕನ್ನಡ ಭಾಷೆ ಮಾತನಾಡುವರು ಬಾಂಬೆ, ಮದ್ರಾಸ್ ಪ್ರಾಂತ್ಯ, ಕೊಡಗು, ಮೈಸೂರು ರಾಜ್ಯ, ಹೈದರಾಬಾದ್‌ ನಿಜಾಮರ ಆಡಳಿತಕ್ಕೆ ಒಳಪಟ್ಟಿತ್ತು. ಇಂತಹ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ಅಖಿಲ ಕರ್ನಟಕ ಏಕೀಕರಣ ಪರಿಷತ್ ಸಮಾವೇಶ ಸೇರಿ ಕರ್ನಾಟಕ ರಾಜ್ಯ ರಚನೆ ಬೇಡಿಕೆ ಇಟ್ಟಿತ್ತು.

ಮೈಸೂರು ಪ್ರಾಂತ್ಯ ಶ್ರೀಮಂತವಾಗಿತ್ತು. ಅಭಿವೃದ್ಧಿ ಹೊಂದಿದ ಪ್ರದೇಶವಾಗಿತ್ತು. ಭೂಮಿ ಫಲವತ್ತತೆಯಿಂದ ಕೂಡಿತ್ತು. ಅಖಂಡ ಕರ್ನಾಟಕ ರಾಜ್ಯ ರಚನೆಗೆ ಮೈಸೂರು ಸಂಸ್ಥಾನ ಹಾಗೂ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಬೀದರ್, ಕಲಬುರಗಿ, ರಾಯಚೂರು ಭಾಗದಲ್ಲಿ ಕನ್ನಡ ಭಾಷಿಗರು ಹೈದರಾಬಾದ್‌ ನಿಜಾಮ ಸಂಸ್ಥಾನಕ್ಕೆ ಹಂಚಿ ಹೋಗಿತ್ತು. ನಿಜಾಮರ ಹೈದರಾಬಾದ್ ಸಂಸ್ಥಾನ 1948 ಸೆ. 17 ರಂದು ಸ್ವಾತಂತ್ರ್ಯ ಪಡೆದರು. ಈ ದಿನವನ್ನು ಹೈದರಾಬಾದ್ ಕರ್ನಾಟಕ ಸ್ವಾತಂತ್ರ್ಯ ದಿನ ಎಂದೇ ಆಚರಿಸಲಾಗುತ್ತದೆ.

ಕರ್ನಾಟಕ ಏಕೀಕರಣ ಚಳವಳಿಯ ಬೇಡಿಕೆ ಸಂಬಂಧ ಧಾರ್‌ ಮತ್ತು ಜೆವಿಪಿ ಕಮಿಟಿ ರಚಿಸಲಾಯಿತು. ಜವಹರ ಲಾಲ್ ನೆಹರು, ವಲ್ಲಬಾಯಿ ಪಟೇಲ್, ಇನ್ನಿತರು ಕಮಿಟಿಯಲ್ಲಿದ್ದರು. ಹೈದರಾಬಾದ್‌ ಸಂಸ್ಥಾನವನ್ನು ಆಂಧ್ರ ಪ್ರದೇಶವನ್ನು ರಚನೆ ಮಾಡುವಲ್ಲಿ ತೋರಿದ ಉತ್ಸುಕತೆ ಕರ್ನಾಟಕ ಏಕೀಕರಣ ಚಳವಳಿಗೆ ನೀಡಲಿಲ್ಲ. ಇಂತಹ ಸಂದರ್ಭದಲ್ಲಿ 1951 ರಲ್ಲಿ ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿ ಹೋರಾಟಗಾರರು ತಮ್ಮ ಉದ್ದೇಶ ಸಾಧನೆಗೆ ತೊಡೆ ತಟ್ಟಿ ನಿಂತರು.

1953 ರಲ್ಲಿ ಹೈದರಾಬಾದ್‌ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಆಂಧ್ರ ಪ್ರದೇಶ ಸ್ಥಾಪನೆಗೆ ರೆಸುಲೂಷನ್ ಪಾಸು ಮಾಡಿತು. .ಅದರೆ ಕರ್ನಾಟಕದ ಬಗ್ಗೆ ಅಲ್ಲ. ಇದರಿಂದ ಬೇಸತ್ತ ಕರ್ನಾಟಕದ ಕೆಲ ಕಾಂಗ್ರೆಸ್ ನಾಯಕರು ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಧಾರವಾಡ ಹುಬ್ಬಳ್ಳಿ ಸೇರಿದಂತೆ ಹಲವು ಕಡೆ ಅಮರಣಾಂತ ಉಪವಾಸ ಸತ್ಯಾಗ್ರಹಗಳು ನಡೆದವು. ಇದರಿಂದ ಹುಬ್ಬಳ್ಳಿ ಧಾರವಾಡ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೆಲ ಕಚ್ಚಿತು. ಕರ್ನಾಟಕ ಏಕೀಕರಣ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದರು. ಇಂತಹ ಒತ್ತಡದ ಸಂದರ್ಭದಲ್ಲಿ ಪ್ರಧಾನಿ ಜವಹರ ಲಾಲ್ ನೆಹರು ಅವರು ಸ್ಟೇಟ್‌ ರೆಕಗ್ನೈಜೇಷನ್ ಕಮಿಟಿ ಸ್ಥಾಪಿಸಿದರು. ಇದು ಫಜಲ್ ಆಲಿ ಕಮಿಟಿ ಎಂದೇ ಪ್ರಖ್ಯಾತಿ ಪಡೆದಿದೆ. ಅನಂತರ 1956 ನವೆಂಬರ್ 1 ರಂದು ಮೈಸೂರು ರಾಜ್ಯ ( ಕನ್ನಡಿಗರ ಪ್ರತ್ಯೇಕ ರಾಜ್ಯ ) ಸ್ಥಾಪನೆ ಆಯಿತು. ಆದರೆ ಕನ್ನಡ ಮಾತನಾಡುವ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲಿಲ್ಲ. 1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಅಂದಿನ ಮುಖ್ಯಮಂತ್ರಿ ದೇವರಾಜು ಅರಸು ಕರ್ನಾಟಕ ಎಂಬ ಹೆಸರು ನಾಮಕರಣ ಮಾಡಿದರು.

ಆಲೂರು ವೆಂಕಟರಾಯರು ಒಬ್ಬ ಪತ್ರಕರ್ತನಾಗಿ, ಇತಿಹಾಸಕಾರನಾಗಿ ಹೋರಾಟಗಾರನಾಗಿ ಕನ್ನಡಕ್ಕಾಗಿ ಹೋರಾಟ ಮಾಡಿದ ಮಹನೀಯರಲ್ಲಿ ಅಗ್ರಗಣ್ಯರು. ಇವತ್ತಿನ ಅಖಂಡ ಕರ್ನಾಟಕ ಸೃಷ್ಠಿಗೆ ಮೂಲ ಕಾರಣಕರ್ತರಾದರು. ಆಲೂರು ವೆಂಕಟರಾಯರ ಇಡೀ ಜೀವನವನ್ನು ಕನ್ನಡ- ಕರ್ನಾಟಕಕ್ಕೆ ಮುಡುಪಾಗಿಟ್ಟ ಕಾರಣದಿಂದಾಗಿ ಇಂದು ಅಖಂಡ ಕರ್ನಾಟಕ ವಿಶ್ವ ಭೂಪಟದಲ್ಲಿ ಕಾಣುತ್ತಿದೆ. ಇಲ್ಲದಿದ್ದರೆ ಕನ್ನಡಿಗರು ಹರಿದು ಹಂಚಿಹೋಗುತ್ತಿದ್ದರು!

Related News

spot_img

Revenue Alerts

spot_img

News

spot_img