ಬೆಂಗಳೂರು, ಜ. 02: ರೆವಿನ್ಯೂ ನಿವೇಶನ ಎಂಬುದಕ್ಕೆ ಕಂದಾಯ ನಿಯಮಗಳಲ್ಲಿ ಅಧಿಕೃತ ವಿವರಣೆ ಇಲ್ಲ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೇ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆಯ ಅನುಮೋದಿತ ನಕ್ಷೆ ಪಡೆಯದ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ರೆವಿನ್ಯೂ ಸೈಟ್ ಎಂದು ಕರೆಯುತ್ತೇವೆ.
ರೆವಿನ್ಯೂ ನಿವೇಶನ:
ಯಾವುದೇ ಜಮೀನು ಹಳದಿ ವಲಯದಲ್ಲಿ ಇದ್ದರೆ ಆ ಜಮೀನನ್ನು ಭೂ ಪರಿವರ್ತನೆ ಮಾಡಿ ವಸತಿ ಸೌಲಭ್ಯಕ್ಕೆ ಬಳಸಬಹುದು. ಆದರೆ ಲೇಔಟ್ ನಿರ್ಮಾಣದ ಯೋಜನೆ ರೂಪಿಸಿ ಅದಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಆ ನಿಯಮಗಳಿಗೆ ಸಂಬಂಧ ಪಟ್ಟಂತೆ ನಿವೇಶನಗಳನ್ನು ರೂಪಿಸಬೇಕು. ಕೃಷಿಗೆ ಮೀಸಲಿಟ್ಟಿರುವ ಹಸಿರು ವಲಯದಲ್ಲಿ ಬರುವ ಕೃಷಿ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸುವಂತಿಲ್ಲ. ಬಳಸಬೇಕಿದ್ದರೆ, ಕರ್ನಾಟಕ ಸರ್ಕಾರದಿಂದ ಸಕಾರಣ ನೀಡಿ ಭು ಬದಲಾವಣೆ ಆದೇಶ ಪಡೆದು ಆನಂತರ ಸಂಬಂಧಪಟ್ಟ ಜಿಲ್ಲಾಕಾರಿಗಳಿಂದ ಭೂ ಪರಿವರ್ತನೆ ಆದೇಶ ಪಡೆಯಬೇಕು. ಆನಂತರ ಲೇಔಟ್ ಪ್ಲಾನ್ ರೂಪಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಯೋಜನೆ ಮಂಜೂರಾತಿ ಪಡೆದು ಅದರಂತೆ ಲೇಔಟ್ ನಿರ್ಮಾಣ ಮಾಡಬೇಕು.
ಬಿಲ್ಡರ್ ಗಳ ಹಣದಾಸೆಗೆ ಹುಟ್ಟಿಕೊಂಡ ದಂಧೆ:
ಆದರೆ, ಹಣ ಮಾಡುವ ದುರಾಸೆಯಿಂದ ಕೆಲವು ಬಿಲ್ಡರ್ ಗಳು ಭೂ ಪರಿವರ್ತನೆ ಮಾಡಿಸಿದರೂ ಯೋಜನೆ ರೂಪಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೇ ನಿವೇಶನ ವಿಂಗಡಿಸಿ ಮಾರಾಟ ಮಾಡುತ್ತಾರೆ. ಜಮೀನನ್ನು ನಿಯಮ ಬದ್ಧವಾಗಿ ಪರಿವರ್ತನೆ ಮಾಡಿ ಸಕ್ಷಮ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯಬೇಕಾದರೆ,ಉದ್ದೇಶಿತ ಯೋಜನೆಯ ಶೇ. 55 ರಷ್ಟು ಭೂಮಿಯನ್ನು ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಡಬೇಕಾಗುತ್ತದೆ. ಅಂದರೆ, ಚರಂಡಿ, ರಸ್ತೆ, ಪಾರ್ಕ್, ಸಮುದಾಯ ಭವನ, ಒಳಚರಂಡಿ, ನೀರಿನ ಟ್ಯಾಂಕ್ ಮತ್ತಿತರ ಸೌಲಭ್ಯಕ್ಕಾಗಿ ಬಿಡಬೇಕಾಗುತ್ತದೆ. ಇಷ್ಟು ಪ್ರಮಾಣದ ಭೂಮಿ ಬಿಟ್ಟರೆ, ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚು ಲಾಭ ಗಳಿಸುವುದು ಕಷ್ಟ. ಹೀಗಾಗಿ ಕೇವಲ 30 ಅಡಿ ಯಷ್ಟು ರಸ್ತೆ ಬಿಟ್ಟು ಬಹುತೇಕ ಜಾಗದಲ್ಲಿ ನಿವೇಶನ ವಿಂಗಡಿಸಿ ಮಾರಾಟ ಮಾಡುತ್ತಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಡಿಮೆ ಬೆಲೆಗೆ ನಿವೇಶನ ಸಿಗುತ್ತವೆ ಎನ್ನುವ ಕಾರಣಕ್ಕೆ ಈ ರೆವಿನ್ಯೂ ನಿವೇಶನಗಳಿಗಾಗಿ ಮುಗಿಬಿದ್ದು ಖರೀದಿ ಮಾಡುತ್ತಾರೆ.
ಈ ರೀತಿಯ ಲೇಔಟ್ ಗಳ ನಿರ್ಮಾಣದಿಂದ ಮಳೆ ಬಿದ್ದರೆ ಲೇಔಟ್ ಗಳು ಜಲಾವೃತವಾಗಿ ಸಮಸ್ಯೆ ಎದುರಾಗುತ್ತದೆ. ಸರಿಯಾಗಿ ನೀರು ಹೋಗಲು ಸೌಲಭ್ಯ ಮಾಡಿರುವುದಿಲ್ಲ. ಇದರಿಂದ ನಿವೇಶನ ಖರೀದಿದಾರರು ಸಮಸ್ಯೆಗೆ ಸಿಲುಕುತ್ತಾರೆ. ಇಂತಹ ನಿವೇಶನಗಳನ್ನು ನೋಂದಣಾಧಿಕಾರಿಗಳು ನೋಂದಣಿ ಮಾಡುವ ಮೂಲಕ ಅಕ್ರಮ ಗಳಿಕೆ ಹಾದಿ ಮಾಡಿಕೊಂಡಿದ್ದಾರೆ. ಇದನ್ನೇ ಆದಾಯದ ಮೂಲ ಮಾಡಿಕೊಂಡು ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನೋಂದಣಾಧಿಕಾರಿಗಳು ರೆವಿನ್ಯೂ ನಿವೇಶನಗಳನ್ನು ನೋಂದಣಿ ಮಾಡಿಸಿಕೊಟ್ಟಿದ್ದಾರೆ.
ನೋಂದಣಿ ಕಾಯ್ದೆ ಮೂಲ ನಿಯಮ:
ನೋಂದಣಿ ನಿಯಮ 1965 ನಿಯಮ 73 ರ ಅನ್ವಯ ಯಾವುದೇ ಆಸ್ತಿಗೆ ಸಂಬಂಧಿಸಿದಂತೆ ದಸ್ತಾವೇಜುಗಳನ್ನು ನೋಂದಣಿ ಅಧಿಕಾರಿಗಳು ನೋಂದಣಿ ಮಾಡಬಹುದು. ನೋಂದಣಾಧಿಕಾರಿಗಳು ಕೇವಲ ರಾಜಸ್ವ ಸಂಗ್ರಹಿಸಲು ನೇಮಕಗೊಂಡಿರುವ ಅಧಿಕಾರಿಗಳೇ ಹೊರತು, ಅವರು ಮಾಡುವ ನೋಂದಣಿ ಅಕ್ರಮ ಮತ್ತು ಸಕ್ರಮದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದನ್ನು ನೋಂದಣಿ ನಿಯಮಗಳು ಹೇಳುತ್ತವೆ. ಮಾತ್ರವಲ್ಲ ಹಲವು ಪ್ರಕರಣಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಸಹ ಈ ನಿಯಮ ಪುಷ್ಟೀಕರಿಸಿ ಆದೇಶ ನಿಡಿದೆ.
ಕಂದಾಯ ಇಲಾಖೆ ತಿದ್ದುಪಡಿ ಸುತ್ತೋಲೆ:
ರೆವಿನ್ಯೂ ನಿವೇಶನ ನೋಂದಣಿಯು ಹಲವು ಸಮಸ್ಯೆಗಳನ್ನು ಹುಟ್ಟು ಹಾಕಿತು. ನಗರಗಳ ಅವ್ಯವಸ್ಥಿತ ಬೆಳವಣಿಗೆಗೆ ಕಾರಣವಾಯಿತು. ರೆವಿನ್ಯೂ ನಿವೇಶನಗಳ ನೋಂದಣಿಯು ಖರೀದಿದಾರರನ್ನು ಅನಾವಶ್ಯಕ ವ್ಯಾಜ್ಯಗಳಲ್ಲಿ ಸಿಲುಕಿಸುವಂತಾಯಿತು. ಇವುಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ನೋಂದಣಿ ನಿಯಮಗಳಿಗೆ ತಿದ್ದುಪಡಿ ತಂದು ಕಂದಾಯ ಇಲಾಖೆ ಹೊಸ ಸುತ್ತೋಲೆಯನ್ನು 2009 ರಲ್ಲಿ ( ಕಂ.ಇ.344ಮುನೋಮು2008 ಬೆಂಗಳೂರು- ದಿನಾಂಕ 06-04-2009 ) ಹೊರಡಿಸಲಾಯಿತು. ಈ ಸುತ್ತೋಲೆಯ ಪ್ರಕಾರ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ಮಹಾನಗರ ಪಾಲಿಕೆಯ ವ್ಯಾಪ್ತಿಯ ಸ್ವತ್ತುಗಳ ನೋಂದಣಿಗೆ ಸಂಬಂಧಿಸಿದಂತೆ ನೋಂದಣಿದಾರರು ಸಲ್ಲಿಸಬೇಕಾದ ದಾಖಲೆಗಳು ಹಾಗೂ ನೋಂದಣಾಧಿಕಾರಿಗಳು ಪಾಲಿಸಬೇಕಾದ ಕರ್ತವ್ಯಗಳನ್ನು ಉಲ್ಲೇಖಿಸಿ ಸುತ್ತೋಲೆ ಹೊರಡಿಸಿತ್ತು.
ತಂತ್ರಾಂಶ ಕ್ರೋಢೀಕರಣ:
ಈ ರೆವಿನ್ಯೂ ನಿವೇಶನಗಳ ನೋಂದಣಿ ತಡೆಯಲು ಹಾಗೂ ಪತ್ತೆ ಹಚ್ಚಲು ರಾಜ್ಯ ಸರ್ಕಾರ ನೋಂದಣಿಗೆ ಸಂಬಂಧಿಸದಿಂತೆ ಕಾವೇರಿ ತಂತ್ರಾಂಶ ಅಭಿವೃದ್ಧಿ ಪಡಿಸಿತ್ತು. ಕೃಷಿ ಭೂಮಿಗೆ ಸಂಬಂಧಿಸಿದಂತೆ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇ ಸ್ವೊತ್ತು ತಂತ್ರಾಂಶ, ನಗರ ಪ್ರದೇಶಗಳಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಪ್ರಾಧಿಕಾರಗಳ ಇ- ಸ್ವೊತ್ತು ತಂತ್ರಾಂಶಗಳನ್ನು ಇಂಟಿಗ್ರೇಡ್ ಮಾಡಲಾಗಿದೆ. ಈ ಸ್ವೊತ್ತುಗಳಲ್ಲಿನ ಡಿಜಿಟಲ್ ಕೋಡ್ ಉಲ್ಲೇಖಿಸಿದ ಕೂಡಲೇ ಇದು ರೆವಿನ್ಯೂ ನಿವೇಶನ ಹೌದೋ ಅಲ್ಲವೇ ಎಂಬುದನ್ನು ತಂತ್ರಾಂಶದಲ್ಲಿಯೇ ಪತ್ತೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಆದರೂ ಸಹ ಉಪ ನೋಂದಣಾಧಿಕಾರಿಗಳು ತಂತ್ರಾಂಶದಲ್ಲಿ ಇ ಸ್ವೊತ್ತು ಇಲ್ಲದಿದ್ದರೂ ಕಳ್ಳ ಮಾರ್ಗ ಹಿಡಿದು ನೋಂದಣಿ ಮಾಡಿ ಇದೀಗ ಇಂಗು ತಿಂದ ಮಂಗನಂತಾಗಿದ್ದಾರೆ.
ರೆವಿನ್ಯೂಸೈಟ್ ರಿಜಿಸ್ಟ್ರೇಷನ್ ಭಾಗ 2 ರಲ್ಲಿ ಓದಿ
ಇದು ರೆವಿನ್ಯೂ ನಿವೇಶನಗಳ ನೋಂದಣಿ ಹಿಂದಿನ ಅಸಲಿ ಚಿತ್ರಣ. ಇನ್ನೂ ಸರ್ಕಾರದ ಈ ಸುತ್ತೋಲೆ ಮೂಲ ನೋಂದಣಿ ನಿಯಮಗಳಿಗೆ ವಿರುದ್ಧವಾದದು ಎಂಬ ವಾಸ್ತವ ಸಂಗತಿ ಆಧರಿಸಿ ಕಂದಾಯ ಇಲಾಖೆಯ ತಿದ್ದುಪಡಿ ಸುತ್ತೋಲೆ ವಿರುದ್ಧ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆರ್ಜಿ ಏನಾಯಿತು ? ಸುಪ್ರೀಂಕೋರ್ಟ್ ಕೊಟ್ಟಿರುವ ತಡೆಯಾಜ್ಞೆ ತೆರವಿಗೆ ಉಪ ನೋಂದಣಾಧಿಕಾರಿಗಳು ಯಾಕೆ ಮುಂದಾಗಲಿಲ್ಲ? ಎಂಬುದರ ಸಮಗ್ರ ವಿವರ ರೆವಿನ್ಯೂಸೈಟ್ ರಿಜಿಸ್ಟ್ರೇಷನ್ ಭಾಗ 2 ರಲ್ಲಿ ಓದಿ!