#India # America # Wepon Deal# #Sign major defence deals #Pakistana#China#Modi
ಹೊಸದಿಲ್ಲಿ: ಗಡಿಯಲ್ಲಿ ಒಂದು ಕಡೆ ಪಾಕಿಸ್ತಾನ ಮತ್ತೊಂದು ಕಡೆ ಚೀನಾ ಕಾಲು ಕೆರೆದು ಕೀಟಲೆ ಮಾಡಿದಷ್ಟೂ ಭಾರತ ಮತ್ತಷ್ಟು ಬಲಿಷ್ಠವಾಗುತ್ತಿದೆ. ಜೊತೆಗೆ ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಸಂಬಂಧ ಕೂಡಾ ಇನ್ನಷ್ಟು ಬಲವಾಗುತ್ತಿದೆ. ಈ ಮಾತು ನಿಜ.. ಉಭಯ ದೇಶಗಳ ಬಾಂಧವ್ಯದ ಗುರುತಾಗಿ ಎರಡು ದೇಶಗಳ ಮಧ್ಯೆ ದೊಡ್ಡದೊಂದು ಸೇನಾ ಒಪ್ಪಂದವಾಗಿದೆ. ಭಾರತ ಅಮೆರಿಕದಿಂದ 31 ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್ ಖರೀದಿ ಮಾಡಲು ಪ್ರಸ್ತಾಪ ಸಲ್ಲಿಸಿತ್ತು. ಇದಕ್ಕೆ ಅಮೆರಿಕ ಕಾಂಗ್ರೆಸ್ ಒಪ್ಪಿಗೆ ಕೊಟ್ಟಿದೆ. ಈ ಡ್ರೋನ್ ಖರೀದಿಯಿಂದ ಭಾರತದ ಸೇನಾ ಬಲ ಮತ್ತಷ್ಟು ಹಿಗ್ಗಲಿದೆ.
ಈ ಡ್ರೋನ್ ಖರೀದಿಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷದ ಜೂನ್ ತಿಂಗಳಲ್ಲಿ ಪ್ರಸ್ತಾಪ ಮಾಡಿದ್ದರು. ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದ ವೇಳೆ ಇದು ನಡೆದಿತ್ತು. ಇನ್ನು ಈ ಡ್ರೋನ್ ಬಗ್ಗೆ ಹೇಳಬೇಕು ಅಂದರೆ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಇದೇ ಡ್ರೋನ್ ಗಳನ್ನ ಅಮೆರಿಕ ಈ ಹಿಂದೆ ಅಫ್ಘಾನಿಸ್ತಾನ ಮೇಲೆ ಪ್ರಯೋಗ ಮಾಡಿತ್ತು. ತಾಲಿಬಾನ್ ಮತ್ತು ಐಸಿಸ್ ನಾಯಕರನ್ನು ಬಗ್ಗು ಬಡಿಯುವಲ್ಲಿ ಇದು ಯಶಸ್ವಿಯಾಗಿತ್ತು. ಅಮೆರಿಕ ಈಗಲೂ ಇಂಥಹ ಮಹತ್ತರ ಕಾರ್ಯಾಚರಣೆಗೆ ಇದೇ ಡ್ರೋನ್ಗಳನ್ನ ಬಳಕೆ ಮಾಡುತ್ತಿದೆ.
ಇನ್ನು ಈ ಡ್ರೋನ್ ಗಳ ಬೆಲೆ ಕಡಿಮೆ ಏನೂ ಇಲ್ಲ. ಸುಮಾರು 3.99 ಬಿಲಿಯನ್ ಡಾಲರ್ ಆಗಿದೆ. ಮತ್ತೊಂದು ವಿಚಾರ ಅಂದರೆ ಈ ಖರೀದಿ ಮಾತುಕತೆಯಲ್ಲಿ 31 ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್ ರಿಮೋಟ್ ಪೈಲಟೆಡ್ ಏರ್ ಕ್ರಾಫ್ಚ್ ಜೊತೆ ಸಂಬಂಧಿತ ಸಲಕರಣೆಗಳ ಸಮಗ್ರ ಒಪ್ಪಂದವೂ ಸೇರಿದೆ. ಇದು ಎರಡು ರಾಷ್ಟ್ರಗಳ ನಡುವಿನ ಅತ್ಯಂತ ಉನ್ನತ ಮಟ್ಟದ ರಕ್ಷಣಾ ವಹಿವಾಟುಗಳಲ್ಲಿ ಒಂದಾಗಿದೆ ಅಲ್ಲದೇ ಅಮೆರಿಕ ಹಾಗೂ ಭಾರತ ಇಟ್ಟಿರುವ ಪ್ರಮುಖ ಹೆಜ್ಜೆಯೂ ಆಗಿದೆ. ಭಾರತ ಮತ್ತು ಅಮೆರಿಕದ ಈ ರಕ್ಷಣಾ ಒಪ್ಪಂದ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ನಡುಕ ಹುಟ್ಟಿಸಿರೋದಂತೂ ಸತ್ಯ.