20 C
Bengaluru
Tuesday, July 9, 2024

ನೀವು ಖರೀದಿಸುವ ನಿವೇಶನದಲ್ಲಿ ಈ ಗಿಡವಿದ್ದರೆ ಹಣ ಸುರಿಯುವ ಮುನ್ನ ಒಮ್ಮೆ ಯೋಚಿಸಿ!

ಜೀವನದಲ್ಲಿ ಒಮ್ಮೆ ನಿವೇಶನ ಖರೀದಿ ಮಾಡಿ ಅಲ್ಲೊಂದು ಕನಸಿನ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಮಹದಾಸೆ. ದುಡಿಯುವ ವರ್ಗದ ಯಾರದ್ದೇ ಕನಸುಗಳನ್ನು ಪ್ರಶ್ನಿಸಿದರೂ ನಾನೊಂದು ಮನೆ ಮಾಡಬೇಕು ಎಂದು ಹೇಳುವವರೇ ಅಧಿಕ. ಅದರಲ್ಲಿ ಅನೇಕರು ಭೂಮಿ ಖರೀದಿಸುವ ಅದೃಷ್ಟ ಇದ್ದವರಿಗೆ ಇದು ಸಾಧ್ಯವೂ ಆಗುತ್ತದೆ. ಕಷ್ಟಪಟ್ಟು ನಿವೇಶನ ಖರೀದಿ ಮಾಡಿ ಅಲ್ಲೊಂದು ಮನೆ ಕಟ್ಟಬೇಕು ಎಂದು ಕನಸಿಟ್ಟುಕೊಂಡವರು ಸಹಜವಾಗಿಯೇ ವಾಸ್ತು ಮೊರೆ ಹೋಗುತ್ತಾರೆ. ವಾಸ್ತು ನೋಡದೆಯೂ ಮನೆ ಕಟ್ಟಿ ಬದುಕು ಕಟ್ಟಿಕೊಂಡವರು ಅನೇಕರಿದ್ದಾರೆ. ಆದರೆ, ಜೀವನದಲ್ಲಿ ನಡೆಯುವ ಯಾವುದೇ ವಿಘ್ನಗಳಿಗೆ ಮನೆಯ ವಾಸ್ತುವೇ ಕಾರಣವಾಗಿರಬಹುದು ಎಂಬ ನಂಬಿಕೆಯಿಂದ ಮೊದಲೇ ವಾಸ್ತು ಪುರುಷನಿಗೆ ಮನ್ನಣೆ ನೀಡಿ ಕನಸಿನ ಸೌಧ ನಿರ್ಮಿಸಿಕಳ್ಳುವುದೇ ಒಳ್ಳೆಯದು ಎಂದು ನಿರ್ಧಾರಕ್ಕೆ ಬರುತ್ತಾರೆ.

ವೇದಿಕ್ ವಾಸ್ತು ಪ್ರಕಾರ ಒಂದು ನಿವೇಶನ ಖರೀದಿ ಮಾಡುವಾಗ ಕೆಲವು ಸೂಕ್ಷ್ಮ ಅಂಶಗಳನ್ನು ಗಮನಿಸಬೇಕು. ಅವುಗಳಲ್ಲಿ ಒಂದು ಅಂಶ ಕಂಡು ಬಂದರೂ ಅಂತಹ ನಿವೇಶನ ಖರೀದಿಸುವುದಕ್ಕಿಂತಲೂ ಅಲ್ಲಿಗೇ ನಿರ್ಧಾರ ಕೈಬಿಡುವುದು ಸೂಕ್ತ. ಒಂದು ನಿವೇಶನ ಖರೀದಿ ಮಾಡುವ ಮುನ್ನ ವೇದಿಕ್ ವಾಸ್ತು ಪ್ರಕಾರ ವಾಸ್ತು ನೋಡಿ ಖರೀದಿ ಮಾಡುವ ಬಗ್ಗೆ ವೇದಿಕ್ ಮನೆ ವಾಸ್ತು ತಜ್ಞ ನಯನ್ ಕುಮಾರ್ ‘ತ್ರಿಡಿ’ ಚಿತ್ರಪಟದ ಮೂಲಕ ವಿವರಿಸಿದ್ದಾರೆ.

ಸಾಮಾನ್ಯವಾಗಿ ನಿವೇಶನ ಖರೀದಿ ಮಾಡುವಾಗ ಅದು ಯಾವ ಏರಿಯಾದಲ್ಲಿ ಇದೆ ಎಂದು ನೋಡುತ್ತಾರೆ ವಿನಃ, ಅದರ ಹಿನ್ನೆಲೆ ಮೂಲದ ಬಗ್ಗೆ ತಿಳಿದುಕೊಳ್ಳಲು ಹೋಗುವುದಿಲ್ಲ. ಸಾಮಾನ್ಯವಾಗಿ ನಿವೇಶನ ಖರೀದಿ ಮಾಡುವಾಗ ಅತಿ ಸೂಕ್ಷ್ಮವಾಗಿ ಕೆಲವು ಅಂಶಗಳನ್ನು ಗಮನಿಸಬೇಕು. ಮಾತ್ರವಲ್ಲ ಅವುಗಳಲ್ಲಿ ಒಂದು ನಕಾರಾತ್ಮಕ ಅಂಶವಿದ್ದರೂ ಆ ನಿವೇಶನ ಖರೀದಿಸದೇ ಇರುವುದು ಸೂಕ್ತ. ಹೀಗಾಗಿ ಯಾರೇ ಆಗಲಿ ನಿವೇಶನ ಖರೀದಿ ಮಾಡುವಾಗ ಪಾಲಿಸಬೇಕಾದ ನಿಯಮಗಳನ್ನು ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಇಲ್ಲಿ ವಿಶ್ಲೇಷಣೆ ಮಾಡಿದ್ದಾರೆ. ಇದು ವಾಸ್ತು ಅಗತ್ಯದ ವೈಜ್ಞಾನಿಕ ವಿಶ್ಲೇಷಣೆಯೇ ಹೊರತು ಮೂಡನಂಬಿಕೆ ಪಸರಿಸುವುದು ಅಲ್ಲ. ಇದನ್ನು ಪಾಲಿಸಬೇಕೆ ಎಂಬುದು ಅವರವರ ವೈಯಕ್ತಿಕ ವಿವೇಚನೆಗೆ ಬಿಟ್ಟದ್ದು.

ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು: ಯಾವುದೇ ಒಂದು ನಿವೇಶನ ಖರೀದಿ ಮಾಡುವ ಮುನ್ನ ಮೊದಲು ಆ ನಿವೇಶನಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನಿವೇಶನದಲ್ಲಿ ಈ ಮೊದಲು ಸ್ಮಶಾನ ಇದ್ದರೆ, ಹುತ್ತ ಇದ್ದರೆ ಅಥವಾ ಎಲೆಕ್ಟ್ರಿಕ್ ಟ್ರಾನ್ಸ್ ಫರ್ಮರ್ ಇದ್ದರೆ ಅಥವಾ ಮುಳ್ಳಿನ ಗಿಡ ಬೆಳೆದಿದೆಯೇ ಎಂಬುದನ್ನು ನೋಡಬೇಕು. ನೆಗಟೀವ್ ಎನರ್ಜಿ ಇದ್ದರೆ ಮಾತ್ರ ಅಲ್ಲಿ ಮುಳ್ಳಿನ ಗಿಡ ಬೆಳೆಯುತ್ತದೆ. ಇನ್ನು ಹುತ್ತ ಇರುವ ಜಾಗದಲ್ಲಿ ಸಾಮಾನ್ಯವಾಗಿ ನೀರು ಹರಿಯುತ್ತದೆ. ಹುತ್ತ ಇರುವ ನಿವೇಶನದಲ್ಲಿ ಮನೆ ಕಟ್ಟಿದರೆ ನೀರು ಹರಿಯುವಂತೆ ಆ ಮನೆಯಲ್ಲಿ ನೆಲೆಸಿರುವ ಜೀವನವನ್ನು ಅಲ್ಲಾಡುತ್ತಿರುತ್ತದೆ ಎನ್ನುತ್ತದೇ ವೇದಿಕ ವಾಸ್ತು ಶಾಸ್ತ್ರ. ಹೀಗಾಗಿ ಯಾವುದೇ ಮುಳ್ಳಿನ ಗಿಡ, ಹುತ್ತ, ಟ್ರಾನ್ಸ್ ಫಾರ್ಮರ್ ಇರಬಾರದು.

ನಿವೇಶನಕ್ಕೂ ಸ್ಮಶಾನಕ್ಕೂ ಕನಿಷ್ಠ 500 ಮೀಟರ್ ದೂರದಲ್ಲಿರಬೇಕು. ಅದಕ್ಕಿಂತಲೂ ಸಮೀಪ ಇರಬಾರದು. ಸ್ಮಶಾನದಲ್ಲಿ ನಿರ್ಮಿಸಿರುವ ಗೋಪುರಗಳು ಮನೆ ಮೇಲೆ ಬೀಳಬಾರದು. ಅದೇ ರೀತಿ ದೇವಸ್ಥಾನದ ಗರ್ಭಗುಡಿಯ ಗೋಪುರದ ನೆರಳು ಮನೆ ಅಥವಾ ನಿವೇಶನದ ಮೇಲೆ ಬೀಳಬಾರದು. ಮತ್ತು ದೇವಸ್ಥಾನಕ್ಕೆ ಎದುರು ನಿವೇಶನ ಇರಬಾರದು.

ನಿವೇಶನ ಖರೀದಿ ಮಾಡುವ ವೇಳೆ ಇಂತಹ ನಿಯಮಗಳನ್ನು ಕಡ್ಡಾಯವಾಗ ಪಾಲಿಸಬೇಕು. ಒಂದು ವೇಳೆ ಗೊತ್ತಿಲ್ಲದೇ ನಿವೇಶನ ಖರೀದಿ ಮಾಡಿ ಅಲ್ಲಿ ಮನೆ ನಿರ್ಮಿಸಿದ್ದರೆ, ಆ ಮನೆಯಲ್ಲಿ ಸಮಸ್ಯೆ ಉಂಟಾಗುವುದು ಸಹಜ. ಆದರೆ ಅದಕ್ಕೂ ಭಯಪಡಬೇಕಿಲ್ಲ. ಅದಕ್ಕೂ ಸಹ ವೇದಿಕ್ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ಅದಕ್ಕೆ ಶೇ. 100 ರಷ್ಟು ಪರಿಹಾರ ಸಿಗಲು ಸಾಧ್ಯವಿಲ್ಲ, ಒಂದಷ್ಟು ಪರಿಹಾರಗಳನ್ನು ರೂಪಿಸಿ ಮುಂಬರುವ ಅಪಾಯಗಳಿಂದ ಪಾರಾಗಬಹುದು ಎಂದು ಹೇಳುತ್ತದೆ ವಾಸ್ತು ಶಾಸ್ತ್ರ. ಅದಕ್ಕಿಂತಲೂ ಉತ್ತಮ ಎಂದರೆ ನಿವೇಶನ ಖರೀದಿಸುವ ಮುನ್ನವೇ ಮುಂಜಾಗ್ರತೆ ವಹಿಸುವುದು ಉತ್ತಮ ಎನ್ನುತ್ತಾರೆ ವೇದಿಕ್ ಮನೆ ವಾಸ್ತು ತಜ್ಞ ನಯನ್ ಕುಮಾರ್.

ನಿವೇಶನ ಆಕಾರ ವಾಸ್ತು: ಯಾವುದೇ ಒಂದು ನಿವೇಶನ ಖರೀದಿ ಮಾಡುವ ಮುನ್ನ ಅದರ ಅಕಾರ, ಎತ್ತರ – ತಗ್ಗುಗಳನ್ನು ಕೂಡ ಗಮನಿಸಬೇಕು ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ. ಒಂದು ನಿವೇಶನ ಯಾವಾಗಲೂ ಪೂರ್ವ ಧಿಕ್ಕಿನಿಂದ ಈಶಾನ್ಯ ಮೂಲೆ ಮತ್ತು ಉತ್ತರ ಧಿಕ್ಕಿನ ಕಡೆಗೆ ತಗ್ಗಾಗಿರಬೇಕು. ನೀರು ಸರಾಗವಾಗಿ ಹರಿಯುವಂತಿರಬೇಕು. ದಕ್ಷಿಣ ಮತ್ತು ನೈರುತ್ಯ ಮತ್ತು ಪಶ್ಚಿಮ ದಿಕ್ಕಿನಲ್ಲಿ ನಿವೇಶನ ಎತ್ತರದಲ್ಲಿರಬೇಕು. ನಿವೇಶನದ ಪೂರ್ವ, ಉತ್ತರ, ಈಶಾನ್ಯ ದಿಕ್ಕು ತಗ್ಗಾಗಿರಬೇಕು. ಆಗ ಅಂದುಕೊಂಡಂತೆ ಕೆಲಸಗಳು ಆಗುತ್ತವೆ.

ಸಾಮಾನ್ಯವಾಗಿ ನಿವೇಶನಗಳು ಚೌಕ ಆಕಾರವಾಗಿ ಅಥವಾ ಆಯುತ ಅಕಾರದಲ್ಲಿ ಇರುವುದು ಒಳ್ಳೆಯದು. ವಕ್ರವಾಹಿ, ಡಂಬಲ್, ಧನಸ್ಸು ರೂಪದ ನಿವೇಶನಗಳು ವಾಸಕ್ಕೆ ಯೋಗ್ಯವಲ್ಲ. ಎಲ್ ಮತ್ತು ವಿ ಮಾದರಿಯ ನಿವೇಶನಗಳು ಕೂಡ ವಾಸಕ್ಕೆ ಯೋಗ್ಯವಲ್ಲ ಎಂದು ವೇದಿಕ್ ವಾಸ್ತು ಹೇಳುತ್ತದೆ ಎಂದು ಮಾಹಿತಿ ನೀಡಿದ್ದಾರೆ ನಯನ್ ಕುಮಾರ್.

ವಾಸ್ತು ನಿವೇಶನ ಖರೀದಿಯಿಂದ ಅನುಕೂಲ: ವಾಸ್ತು ಪ್ರಕಾರ ನಿವೇಶನ ಖರೀದಿ ಮಾಡಿದರೆ ಆ ನಿವೇಶನದಲ್ಲಿ ಬೇಗ ಮನೆ ನಿರ್ಮಾಣವಾಗುತ್ತದೆ. ಅಲ್ಲಿ ವಾಸ ಮಾಡಿದರೂ ಶಾಂತಿ, ನೆಮ್ಮದಿ, ಸಂಪತ್ತು ವೃದ್ಧಿಯಾಗುತ್ತದೆ. ಅದರಲ್ಲೂ ಭಾರತೀಯ ಸಂಪ್ರದಾಯದಲ್ಲಿ ಮನೆ ವಾಸ್ತುವಿಗೆ ಪುರಾತನ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಭಾರತದಲ್ಲಿ ವಾಸ್ತು ಇಲ್ಲದ ದೇವಸ್ಥಾನಗಳೇ ಇಲ್ಲ. ಇನ್ನು ಜನ ಸಾಮಾನ್ಯರ ಜೀವನಕ್ಕೆ ಬಂದರೆ ಬಹುತೇಕರು ವಾಸ್ತು ನೋಡಿಯೇ ನಿವೇಶನ ಖರೀದಿ ಮಾಡುತ್ತಾರೆ. ಕೆಲವರು ಹಣದಾಸೆಗೆ ತಪ್ಪು ನಿಯಮ ಹೇಳಿ ಜನರ ದಿಕ್ಕು ತಪ್ಪಿಸುತ್ತಾರೆ. ಅದಕ್ಕೆ ಕಿವಿಗೊಡಬಾರದು. ವಾಸ್ತು ಪಾಲಿಸುವುದಿದ್ದರೆ ಅದನ್ನು ಸರಿಯಾದ ಕ್ರಮದಲ್ಲಿ ಪಾಲಿಸಬೇಕು ಎಂಬುದಷ್ಟೇ ಆಶಯ.

Related News

spot_img

Revenue Alerts

spot_img

News

spot_img