22.6 C
Bengaluru
Saturday, July 27, 2024

ಯುಗಾದಿ ಹಬ್ಬಕ್ಕೆ ಎರಡು ಬಗೆಯ ಮಾವಿನಕಾಯಿಯ ಚಿತ್ರಾನ್ನ ಮಾಡುವ ವಿಧಾನ

ಬೆಂಗಳೂರು, ಮಾ. 22 : ಯುಗಾದಿ ಹಬ್ಬಕ್ಕೆ ಬೆಳಗ್ಗೆ ಯಾವ ತಿಂಡಿ ಮಾಡುವುದು ಎಂದು ಯೋಚಿಸುತ್ತಿದ್ದೀರಾ. ಬೇಸಿಗೆಯ ಸ್ಪೆಷಲ್‌ ಕಾಯಿ ಎಂದರೆ ಅದು ಮಾವಿನ ಕಾಯಿ. ಇದರಲ್ಲಿ ತೋತಾಪುರಿ ಹಾಗೂ ಹುಳಿ ಮಾವಿನಕಾಯಿ ಎರೆಡು ಬಗೆ ಸಿಗುತ್ತದೆ. ಇದೆರಡರಲ್ಲೂ ಚಿತ್ರಾನ್ನ ಮಾಡಿದರೆ, ಸೂಪರ್‌ ಆಗಿರುತ್ತದೆ. ಹಬ್ಬದ ದಿನ ಇದನ್ನು ಮಾಡಿ ಬೆಳಗ್ಗಿನ ತಿಂಡಿಯನ್ನು ಖುಷಿ ಖುಷಿತಯಾಗಿ ಸವಿಯಿರಿ.

ತೋತಾಪುರಿ ಮಾವಿನಕಾಯಿ ಚಿತ್ರಾನ್ನ: 1/4 ಕಪ್ ತೆಂಗಿನ ತುರಿ, 1/2 ಕಪ್ ಮಾವಿನಕಾಯಿ ತುರಿ, 1 – 2 ಹಸಿರು ಮೆಣಸಿನಕಾಯಿ, 1/2 ಟೀಸ್ಪೂನ್ ಸಾಸಿವೆ, 2 ಟೇಬಲ್ ಸ್ಪೂನ್ ಕಡಲೆಕಾಯಿ ಬೀಜ, 1 ಟೀ ಸ್ಪೂನ್ ಉದ್ದಿನ ಬೇಳೆ, 1 ಟೀ ಸ್ಪೂನ್ ಕಡ್ಲೆಬೇಳೆ, 1/2 ಟೀ ಸ್ಪೂನ್ ಉಪ್ಪು, 5 – 6 ಕರಿಬೇವಿನ ಎಲೆ, 2 ಟೀ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/4 ಟೀಸ್ಪೂನ್ ಅರಿಶಿನ ಪುಡಿ, ದೊಡ್ಡ ಚಿಟಿಕೆ ಇಂಗು, 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ.

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಕಡಲೆಕಾಯಿ ಬೀಜವನ್ನು ಕೆಂಪಗಾಗುವ ವರೆಗೂ ಹುರಿದುಕೊಳ್ಳಿ. ಅದನ್ನು ಬಟ್ಟಲಿಗೆ ತೆಗದಿಟ್ಟುಕೊಂಡು, ಅದೇ ಎಣ್ಣೆಯಲ್ಲಿ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆಯನ್ನು ಹುರಿದುಕೊಂಡು, ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಅರಿಶಿನ ಮತ್ತು ಇಂಗು ಸೇರಿಸಿ. ಹಸಿರು ಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಹುರಿಯಿರಿ. ಆ ಮೇಲೆ ತುರಿದ ಮಾವಿನಕಾಯಿ ಹಾಕಿ ಹುರಿಯಿರಿ. ನಂತರ ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ. ನಂತರ ಸ್ಟೋವ್ ಆಫ್ ಮಾಡಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ. ನಂತರ ಬೇಯಿಸಿದ ಅನ್ನ ಸೇರಿಸಿ. ಬಿಸಿಯಾಗಿರುವಾಗಲೇ ಬಡಿಸಿ.

ಹುಳಿ ಮಾವಿನಕಾಯಿ ಚಿತ್ರಾನ್ನ: 8-10 ಒಣ ಮೆಣಸಿನ ಕಾಯಿ, 1/4 ಕಪ್ ತೆಂಗಿನ ತುರಿ, 1/2 ಕಪ್ ಮಾವಿನಕಾಯಿ ತುರಿ, 1/2 ಟೀ ಜೀರಿಗೆ, 1/4 ಟೀ ಸ್ಪೂನ್ ಕಾಳು ಮೆಣಸು, 1/2 ಟೀ ಸ್ಪೂನ್ ಸಾಸಿವೆ, 2 ಟೇಬಲ್ ಸ್ಪೂನ್ ಕಡಲೆಕಾಯಿ ಬೀಜ, 1 ಟೀ ಸ್ಪೂನ್ ಉದ್ದಿನ ಬೇಳೆ, 1 ಟೀ ಸ್ಪೂನ್ ಕಡ್ಲೆಬೇಳೆ, 1/2 ಟೀ ಸ್ಪೂನ್ ಉಪ್ಪು, 5 – 6 ಕರಿಬೇವಿನ ಎಲೆ, 1/4 ಟೀ ಸ್ಪೂನ್ ಅರಿಶಿನ ಪುಡಿ, ದೊಡ್ಡ ಚಿಟಿಕೆ ಇಂಗು, 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ.

ಮೊದಲು ಜೀರಿಗೆ, ಕಾಳು ಮೆಣಸು, ಒಣ ಮೆಣಸಿನಕಾಯಿ, ತೆಂಗಿನ ತುರಿ, ಒಂದೆರಡು ಚಮಚ ಹುಳಿ ಮಾವಿನಕಾಯಿ ತುರಿ, ಅರಿಶಿನವನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ಬಾಣಲೆಗೆ ಎಣ್ಣೆ ಹಾಕಿ, ಕಡಲೆಕಾಯಿ ಬೀಜವನ್ನು ಕೆಂಪಗಾಗುವ ವರೆಗೂ ಹುರಿದುಕೊಳ್ಳಿ. ಅದನ್ನು ಬಟ್ಟಲಿಗೆ ತೆಗದಿಟ್ಟುಕೊಂಡು, ಅದೇ ಎಣ್ಣೆಯಲ್ಲಿ ಕಡಲೆ ಬೇಳೆ ಹಾಗೂ ಉದ್ದಿನ ಬೇಳೆಯನ್ನು ಹುರಿದುಕೊಂಡು, ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಇಂಗು ಸೇರಿಸಿ. ಬಳಿಕ ರುಬ್ಬಿದ ಮಿಶ್ರಣ ಹಾಗೂ ಮಾವಿನಕಾಯಿ ತುರಿ ಸೇರಿಸಿ. ಎರಡು ನಿಮಿಷ ಕುದಿಸಿ ಉಪ್ಪು ಹಾಕಿ ಸ್ಟೌವ್‌ ಆಫ್ ಮಾಡಿ. ಇದನ್ನು ಅನ್ನಕ್ಕೆ ಕಲಸಿಕೊಂಡು ಸವಿಯಿರಿ.

Related News

spot_img

Revenue Alerts

spot_img

News

spot_img