19.2 C
Bengaluru
Wednesday, February 5, 2025

ಜಮೀನು ಖರೀದಿ ಮಾಡುವಾಗ ಈ ಕೆಳಗಿನ 13 ದಾಖಲೆಗಳು ಪಕ್ಕಾ ಇರಬೇಕು ಗಮನವಿರಲಿ!

ಆತ ಜಮೀನಿನ ದಾಖಲೆ ಪರಿಶೀಲಿಸದೇ ಬೆಂಗಳೂರಿನಲ್ಲಿ ದೊಡ್ಡ ನಿವೇಶನ ಖರೀದಿ ಮಾಡಿದ್ದ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಆ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಬಾಡಿಗೆಗೆ ನೀಡಿದ್ದ. ಆದರೆ ಜಮೀನಿನ ಅಸಲಿ ಮಾಲೀಕ ನ್ಯಾಯಾಲಯದ ಮೆಟ್ಟಿಲೇರಿದ್ದ. ಆ ಜಮೀನಿನ ಮೂಲ ಮಾಲೀಕನ ಅರ್ಜಿ ಮನ್ನಿಸಿದ ನ್ಯಾಯಾಲಯ, ವಾಣಿಜ್ಯ ಕಟ್ಟಡ ಸಮೇತ ಜಮೀನಿನ ಸ್ವಾಧೀನ ಮೂಲ ಮಾಲೀಕನಿಗೆ ನೀಡಿ ಆದೇಶ ಮಾಡಿತ್ತು. ನಕಲಿ ದಾಖಲೆಗಳನ್ನು ನಂಬಿ ಜಮೀನು ಖರೀದಿ ಮಾಡಿದ್ದ ವ್ಯಕ್ತಿ ನಿವೇಶನ ಜತೆಗೆ ಕಟ್ಟಡ ಎಲ್ಲವನ್ನೂ ಕಳೆದುಕೊಂಡಿದ್ದ!

ಇಂತಹ ಪ್ರಸಂಗಗಳು ನಿಮಗೂ ಎದುರಾಗಬಹುದು ಎಚ್ಚರ. ಜಮೀನು ಖರೀದಿ ಮಾಡುವಾಗ ಯಾವ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಎಂಬುದರ ಸಮಗ್ರ ವಿವರ ಇಲ್ಲಿದೆ.
ಯಾವುದೇ ಜಮೀನನ್ನು ಖರೀದಿ ಮಾಡಬೇಕಾದರೆ, ಮೊದಲು ದಾಖಲೆಗಳನ್ನು ಪರಿಶೀಲಿಸಬೇಕು. ಸ್ವಲ್ಪ ಎಡವಟ್ಟು ಆದರೂ ಜಮೀನಿನ ಒಡೆತನವೇ ಕೈ ತಪ್ಪಿ ಹೊಗುವ ಅಪಾಯ ಇರುತ್ತದೆ. ಹೀಗಾಗಿ ಜಮೀನು ಖರೀದಿ ಮಾಡುವಾಗ ಯಾವೆಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು ಎಂಬುದು ಗೊತ್ತಿರಬೇಕು.

ಕೃಷಿ ಭೂಮಿ ಖರೀದಿ: ಕೃಷಿ ಭೂಮಿ ಖರೀದಿ ಮಾಡಬೇಕಾದರೆ, ಇತ್ತೀಚಿನ
1.ಆರ್‌ಟಿಸಿ, ( ಪಹಣಿ ಪತ್ರಿಕೆ),
2. ಮ್ಯುಟೇಷನ್
3. ಇತ್ತೀಚೆಗೆ ಕಂದಾಯ ಪಾವತಿ ಮಾಡಿದ ರಶೀದಿಗಳು.
4. ಹಿಂದಿನ ಆರ್‌ಟಿಸಿಗಳು ( ಕನಿಷ್ಠ 30 ರಿಂದ ಗರಿಷ್ಠ 60 ವರ್ಷ )
5. ಗ್ರಾಮದ ನಕ್ಷೆ
6. ಟಿಪ್ಪಣಿ
7. ಆಕಾರ ಬಂಧು
8. ಸರ್ವೆ ನಕ್ಷೆ
9. ಮೂಲ ಕ್ರಯ ಹಾಗೂ ಇನ್ನಿತರ ನೋಂದಾಯಿಸಿರುವ ದಾಖಲೆ ಪ್ರಮಾಣ ಪತ್ರಗಳು.
10. ಸಾಲ ತೀರುವಳಿ ಪತ್ರಗಳು
11. ವಂಶ ವೃಕ್ಷ
12. ಸಂಬಂಧಪಟ್ಟ ವ್ಯಕ್ತಿಗಳ ಆಧಾರ್ , ಅಥವಾ ಚುನಾವಣಾ ಗುರುತಿನ ಚೀಟಿ, ಅಥವಾ ಪಾನ್ ಕಾರ್ಡ್ ಇನ್ನಿತರ ಅಧಿಕೃತ ದಾಖಲೆಗಳು.
13. ಎಸ್‌ಸಿಎಸ್‌ಟಿ, ಭೂ ಸ್ವಾಧೀನ ಆಗಿಲ್ಲ ಎಂಬುದಕ್ಕೆ ಖಾತ್ರಿ ಪಡಿಸಿಕೊಳ್ಳಲು ಸರ್ಕಾರದ ಅಧಿಕೃತ ದಾಖಲೆಗಳು. ಕೃಷಿಯೇತರ ಭೂಮಿಯಾಗಿದ್ದಲ್ಲಿ, ಕೃಷಿಯೇತರ ಭೂಮಿಯನ್ನಾಗಿ ಪರಿವರ್ತನೆ ಮಾಡಿದ ಪ್ರಮಾಣ ಪತ್ರಗಳು ಬೇಕು.

ನಿವೇಶನ / ಪ್ಲಾಟ್ ಖರೀದಿಗೆ ಬೇಕಾದ ದಾಖಲೆಗಳು:
1. ಖಾತಾ ಎಕ್ಸ್‌ಟ್ರಾಕ್ಟ್ ,
2. ಖಾತಾ ಸರ್ಟಿಫಿಕೇಟ್
3. ಇತ್ತೀಚೆಗೆ ಕಂದಾಯ ಪಾವತಿ ಮಾಡಿದ ರಶೀದಿಗಳು.
4. ನೋಂದಣಿಯಾದ ಕ್ರಯ ಪತ್ರಗಳು.
5. ಅಡಮಾನ/ತೀರುವಳಿ/ ಇನ್ನಿತರ ದಾಖಲೆಗಳು
6. ನಿವೇಶನ ಮಂಜೂರಾತಿ ಪ್ರಮಾಣ ಪತ್ರ
7. ನಿವೇಶನ ಸ್ವಾಧೀನ ಪ್ರಮಾಣ ಪತ್ರ
8. ಲೇಔಟ್ ಪ್ಲಾನ್
9. ಭೂ ಪರಿವರ್ತನೆ ಆದೇಶ
10. ರೇರಾ ನೋಂದಣಿ ಪ್ರಮಾಣ ಪತ್ರ
11. ಪರಿತ್ಯಾಜನಾಪತ್ರ
12. ಆರ್‌ಟಿಸಿ ಪ್ರಮಾಣ ಪತ್ರ
13. ವಂಶವೃಕ್ಷ
14. ಸಂಬಂಧಪಟ್ಟ ವ್ಯಕ್ತಿಗಳ ಆಧಾರ್ , ಅಥವಾ ಚುನಾವಣಾ ಗುರುತಿನ ಚೀಟಿ, ಅಥವಾ ಪಾನ್ ಕಾರ್ಡ್ ಇನ್ನಿತರ ಅಧಿಕೃತ ದಾಖಲೆಗಳು.

ಪ್ಲಾಟ್ ಮತ್ತು ಅಪಾರ್ಟ್ಮೆಂಟ್ ಆಗಿದ್ದಲ್ಲಿ ಈ ಮೇಲಿನ ಎಲ್ಲಾ ದಾಖಲೆಗಳ ಜತೆಗೆ ಆಕ್ಯೂಪೆನ್ಸಿ ಪತ್ರವನ್ನು ಕಡ್ಡಾಯವಾಗಿ ಪಡೆಯಲೇಬೇಕು. ಯಾವುದೇ ಜಮೀನು, ಮನೆ, ನಿವೇಶನ, ಪ್ಲಾಟ್ ಖರೀದಿ ಮಾಡುವ ಮುನ್ನ ಭಾರೀ ಎಚ್ಚರಿಕೆ ವಹಿಸಬೇಕು! ಖರೀದಿ ಮಾಡುವ ಜಾಗದ ದಾಖಲೆಗಳಲ್ಲಿ ಸ್ವಲ್ಪ ವ್ಯತ್ಯಾಸ ವಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ.

Related News

spot_img

Revenue Alerts

spot_img

News

spot_img