26.3 C
Bengaluru
Friday, October 4, 2024

ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ಮುಂದಾದ ಸರ್ಕಾರ

ಬೆಂಗಳೂರು, ಜೂ. 28 : ಈ ಹಿಂದೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿ-ಖಾತಾ ಆಸ್ತಿಗಳನ್ನು ಸಕ್ರಮಗೊಳಿಸುವ ಕಲ್ಪನೆಯನ್ನು ಮೊದಲು 2018 ರಲ್ಲಿ ಪ್ರಸ್ತಾಪಿಸಲಾಯಿತು. ಈ ವರ್ಷದ ಆರಂಭದಲ್ಲಿ ಕರ್ನಾಟಕ ವಿಧಾನಸಭೆಯು ಬಿಬಿಎಂಪಿ (ತಿದ್ದುಪಡಿ) ಮಸೂದೆ, 2023 ಅನ್ನು ಅಂಗೀಕರಿಸಿತು. ಇದು ಬಿಬಿಎಂಪಿಯ ವ್ಯಾಪ್ತಿಯಲ್ಲಿ ಅನಧಿಕೃತ ಅಥವಾ ಅಕ್ರಮ ಆಸ್ತಿಗಳ ಮೇಲಿನ ದಂಡವನ್ನು ತೆಗೆದುಹಾಕಲು ಪ್ರಸ್ತಾಪಿಸಿತು.

ಇದೀಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಬೆಂಗಳೂರು ನಗರ ಹೊರತು ಪಡಿಸಿ ರಾಜ್ಯದ ಇತರೆ ನಗರಗಳಲ್ಲಿರುವ ಅನಧಿಕೃತ ನಿವೇಶನ ಹಾಗೂ ಕಟ್ಟಡಗಳನ್ನು ಸಕ್ರಮಗೊಳಿಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿ ಖಾತಾ ನೀಡಲು ನಿರ್ಧರಿಸಲಾಗಿದೆ. ಇದರ ರೂಪುರೇಷೆಯನ್ನು ಆದಷ್ಟು ಬೇಗನೆ ಸಿದ್ಧಪಡಿಸಲಿದ್ದು, ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ನಗರಗಳಲ್ಲಿ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು.

ರಾಜ್ಯದ ನಗರಗಳಲ್ಲಿ ಅನಧಿಕೃತ ಸ್ವತ್ತುಗಳಿಗೆ ಬಿ ಖಾತಾ ನೀಡಿದರೆ ಇದರಿಂದ 1,100 ಕೋಟಿ ಹಣ ಸರ್ಕಾರದ ಬೊಕ್ಕಸಕ್ಕೆ ಸೇರಲಿದೆ. ಜೊತೆಗೆ ಆಸ್ತಿದಾರರು ಸಾಲ ಪಡೆಯಲು ಅನುಕೂಲವಾಗುತ್ತದೆ. ಆಸ್ತಿ ಮಾರಾಟ ಮಾಡಲು ಕೂಡ ಮಾಲೀಕರಿಗೆ ಅನುಕೂಲವಾಗುತ್ತದೆ. ನಗರದ ಪ್ರದೇಶಗಳಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಈ ಹಿಂದೆಯೇ ಕಾನೂನು ರೂಪಿಸಲಾಗಿತ್ತು. ಅಕ್ರಮ ಕಟ್ಟಡಗಳ 94 ಸಿ ಪ್ರಕರಣವು ಸುಪ್ರೀಂಕೋರ್ಟ್ನಲ್ಲಿದ್ದು, ಸಮಿತಿಯ ವರದಿ ಪಡೆದ ನಂತರ ಕೋರ್ಟ್ ಗಮನಕ್ಕೆ ತರಲಾಗುವುದು.

ಬಳಿಕ ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು. ನೆನೆಗುದಿಗೆ ಬಿದ್ದಿರುವ ಸಕ್ರಮಗೊಳಿಸುವ ಕೆಲಸಗಳನ್ನು ಮುಂದುವರೆಸಬಹುದು. ಹೀಗಾಗಿ ಸರ್ಕಾರ ಅನಧಿಕೃತ ಕಟ್ಟಡಗಳಿಗೆ ಬಿ ಖಾತಾ ನೀಡಲು ನಿರ್ಧರಿಸಿದೆ ಎಂದು ನಗರಾಭಿವೃದ್ಧೀ ಸಚಿವ ಭೈರತಿ ಸುರೇಶ್ ಹೇಳಿದರು.

Related News

spot_img

Revenue Alerts

spot_img

News

spot_img