#Formation #13-member #India #Alliance #Coordination Committee
ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸುವ ದೃಢ ಸಂಕಲ್ಪದೊಂದಿಗೆ ಮುಂಬೈನಲ್ಲಿ ಇಂದು ನಡೆದ ಪ್ರತಿಪಕ್ಷಗಳ ಒಕ್ಕೂಟ -ಇಂಡಿಯಾದ ಮೂರನೇ ಸಭೆ ಶುಕ್ರವಾರ ಮುಕ್ತಾಯಗೊಂಡಿದೆ. ಒಟ್ಟಿಗೆ ಒಕ್ಕೂಟದ ನಿರ್ವಹಣೆಗಾಗಿ ಎಲ್ಲ ಪಕ್ಷಗಳ 13 ನಾಯಕರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಗಿದೆ. ಮೂಲಗಳ ಪ್ರಕಾರ 13 ಸದಸ್ಯರ ವಿರೋಧ ಸಮಿತಿಯು ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಸಪ್ಟೆಂಬರ್ 30ರೊಳಗೆ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಲಾಗಿದೆ. ಮುಂಬೈನ ಹೋಟೆಲ್ ಹಯಾತ್‌ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸಿ, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಪಟ್ಟವೇರುವುದನ್ನು ತಡೆಯಲು ಕೈಗೊಳ್ಳಬೇಕಾದ ಪರಿಣಾಮಕಾರಿ ಕಾರ್ಯತಂತ್ರಗಳ ಬಗ್ಗೆ ಗುರುವಾರ ಮತ್ತು ಶುಕ್ರವಾರ ವ್ಯಾಪಕವಾಗಿ ಚರ್ಚಿಸಲಾಯಿತು.
INDIAದ ‘ಸಮನ್ವಯ ಸಮಿತಿ’ ಯಲ್ಲಿನ ನಾಯಕರ ಪಟ್ಟಿ
13 ಸದಸ್ಯರ ಸಮನ್ವಯ ಸಮಿತಿಯು ಈ ಕೆಳಗಿನವರನ್ನು ಒಳಗೊಂಡಿದೆ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್, ಆರ್‌ಜೆಡಿ ನಾಯಕ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಎಎಪಿ ಸಂಸದ ರಾಘವ್ ಚಡ್ಡಾ, ಸಮಾಜವಾದಿ ಪಕ್ಷದ ಜಾವೇದ್ ಖಾನ್, ಜನತಾ ದಳ ಯುನೈಟೆಡ್ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್, ಸಿಪಿಐ ನಾಯಕ ಡಿ ರಾಜಾ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ.