# School boy# Father # Pornographic # Maharastra#Sollapura#, Poisoning# Maharastra Police
ಸೊಲ್ಲಾಪುರ: ಹದಿಹರೆಯದಲ್ಲಿ ಮಕ್ಕಳು ಓದೋದನ್ನ ಬಿಟ್ಟು ಕೆಟ್ಟ ದಾರಿ ಹಿಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಇಲ್ಲೊಂದು ಪ್ರಕರಣ ಸಾಕ್ಷಿಯಾಗಿದೆ. ಆತನಿಗೆ ಕೇವಲ 14 ವರ್ಷವಷ್ಟೇ ಆದ್ರೆ ಈ ವಯಸ್ಸಿನಲ್ಲೇ ಭವಿಷ್ಯ ರೂಪಿಸಿಕೊಳ್ಳೋದನ್ನು ಬಿಟ್ಟು ಬೇರೆಯದ್ದೇ ಹಾದಿ ತುಳಿದಿದ್ದ. ಇದೇ ಕಾರಣಕ್ಕೆ ಆತ ಕೊಲೆಯಾಗಿ ಹೋಗಿದ್ದಾನೆ. ಅಷ್ಟಕ್ಕೂ ಆತನನ್ನ ಕೊಂದಿದ್ದು ಮತ್ಯಾರೂ ಅಲ್ಲ.. ಸ್ವಂತ ತಂದೆಯೇ ಅನ್ನುವುದು ವಿಪರ್ಯಾಸ. ಇದು ನಡೆದಿರೋದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ.
ಇಲ್ಲಿ ತಂದೆಯಿಂದಲೇ ಹತ್ಯೆಯಾದ ಬಾಲಕನ ಹೆಸರು ವಿಶಾಲ್. ತಂದೆ ವಿಜಯ್ ಬಟ್ಟು ಟೈಲರ್ ಕೆಲಸ ಮಾಡುತ್ತಾ ಇದ್ದರೂ ಮಗನಿಗೆ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಿದ್ದರು. ಆದರೆ ಮಗ ಓದದೇ ಶಾಲೆಯಲ್ಲಿ ಹುಡುಗಿಯರನ್ನ ರೇಗಿಸುವುದು, ಪ್ರತಿದಿನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನ ನೋಡುವುದು ಇದನ್ನೇ ಮಾಡುತ್ತಿದ್ದನಂತೆ. ಇದರಿಂದ ನಿತ್ಯ ಶಾಲಾ ಆಡಳಿತ ಮಂಡಳಿಯಿಂದ ದೂರುಗಳು ಬರುತ್ತಿದ್ದವು. ತಂದೆ ಎಷ್ಟೇ ತಿಳಿ ಹೇಳಿದರೂ ವಿಶಾಲ್ ಮಾತ್ರ ತಲೆಗೆ ಹಾಕಿಕೊಳ್ಳಲೇ ಇಲ್ಲ. ಬೇಸತ್ತ ತಂದೆ ವಿಜಯ್ ಬುಟ್ಟು ಮಗನನ್ನ ಕೊಲ್ಲಲು ನಿರ್ಧಾರ ಮಾಡಿದ್ರು. ಅದರಂತೆ ಕಳೆದ ತಿಂಗಳ 13ರಂದು ತನ್ನ ಬೈಕ್ ನಲ್ಲಿ ವಿಶಾಲ್ ನನ್ನ ತುಳಜಾಪುರ ರಸ್ತೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಬೆರಸಿ ನೀಡಿದ್ದಾರೆ. ಕೂಲ್ ಡ್ರಿಂಕ್ಸ್ ಕುಡಿದ ಮಗ ವಿಶಾಲ್ ತಕ್ಷಣ ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದಾನೆ. ಬಳಿಕ ತಂದೆ ವಿಜಯ್ ವಿಶಾಲ್ ನ ಮೃತದೇಹವನ್ನ ಸ್ಥಳದಲ್ಲೇ ಬಿಟ್ಟು ಮನೆಗೆ ಬಂದಿದ್ದಾರೆ.
ಇದರ ನಡುವೆ ವಿಶಾಲ್ ಕಾಣೆಯಾಗಿರುವ ಬಗ್ಗೆ ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ತುಳಜಾಪುರ ರಸ್ತೆಯ ಬಳಿ ಅನಾಥವಾಗಿ ಬಿದ್ದಿದ್ದ ವಿಶಾಲ್ ಶವವನ್ನ ಪತ್ತೆ ಮಾಡಿದರು. ಶವವನ್ನು ಕುಟುಂಬದವರಿಗೆ ನೀಡುವ ಮೊದಲು ಪೊಲೀಸರು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಆಗ ಬಾಲಕ ವಿಷ ಸೇವನೆಯಿಂದ ಮೃತನಾಗಿದ್ದಾನೆ ಅನ್ನುವ ಅಂಶ ಬೆಳಕಿಗೆ ಬಂದಿದೆ. ತನಿಖೆ ಆರಂಭಿಸಿದ ಪೊಲೀಸರಿಗೆ ಯಾಕೋ ತಂದೆಯ ವರ್ತನೆ ಮೇಲೆ ಅನುಮಾನ ಬಂದಿದೆ. ಸರಿಯಾಗಿ ವಿಚಾರಣೆ ಮಾಡಿದಾಗ ವಿಷಯ ಹೊರಗೆ ಬಂದಿದೆ. ವಿಶಾಲ್ ನ ವರ್ತನೆಯಿಂದ ಬೇಸತ್ತು ತಾನೇ ಆತನನ್ನ ಕೊಂದಿರುವುದಾಗಿ ವಿಜಯ್ ಬುಟ್ಟು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಬಾಲಕನ ತಂದೆಯನ್ನ ಬಂಧಿಸಿರೋ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.