ಬೆಂಗಳೂರು;ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳ ಪರಿಷ್ಕರಣೆಗಾಗಿ ರಚನೆಗೊಂಡಿದ್ದಂತ ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿನ 7ನೇ ರಾಜ್ಯ ವೇತನ ಆಯೋಗದ ( 7th State Pay Commission ) ಅವಧಿಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯಪಾಲರ ಆದೇಶದಂತೆ ಮೇ 19ರಿಂದ 6 ತಿಂಗಳ ಕಾಲ ಆಯೋಗದ ಅವಧಿ ವಿಸ್ತರಣೆ ಮಾಡಿ, ಸರ್ಕಾರ ಆದೇಶ ಹೊರಡಿಸಿದೆ.ಈ ಸಂಬಂಧ ಇಂದು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಗಳು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ದಿನಾಂಕ 19-11-2022ರಂದು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯವೇತನ ಆಯೋಗವನ್ನು ರಚಿಸಿ, 6 ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಲಾಗಿತ್ತು ಎಂದಿದ್ದಾರೆ. ಆಯೋಗದ ಶಿಫಾರಸ್ಸು ಆಧರಿಸಲು ಮುಂದಿನ ಕ್ರಮ ಕೈಗೊಳ್ಳಲು 2023-24ನೇ ಸಾಲಿನಲ್ಲಿ ಹಣವನ್ನೂ ತೆಗೆದಿಡಲಾಗಿತ್ತು.