21.9 C
Bengaluru
Saturday, July 13, 2024

ಭಾರತದ ಎಂಟು ನಗರಗಳಲ್ಲಿ ವಸತಿ ದರ ಹೆಚ್ಚಳ: ಯಾವ ಯಾವ ನಗರ ಗೊತ್ತೇ..?

ಬೆಂಗಳೂರು, ಫೆ. 08 : ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವು ಬೆಳೆಯುತ್ತಿದ್ದು, ಹೆಚ್ಚುತ್ತಿರುವ ಕಟ್ಟಡ ವೆಚ್ಚಗಳು ಮತ್ತು ಬೇಡಿಕೆಯ ಪರಿಣಾಮವಾಗಿ ವಸತಿ ಬೆಲೆಗಳು ಸರಾಸರಿಯಾಗಿ ಏರಿಕೆ ಕಂಡಿದೆ. 2021 ರ ವರ್ಷಕ್ಕೆ ಹೋಲಿಸಿದರೆ, ಎಂಟು ಪ್ರಮುಖ ನಗರಗಳಲ್ಲಿ ಸರಾಸರಿ ಮನೆಯ ಬೆಲೆಯು ಕಳೆದ ವರ್ಷ 7% ರಷ್ಟು ಅಧಿಕವಾಗಿದೆ. ಪ್ರಾಪ್‌ ಟೈಗರ್.ಕಾಂ ವರದಿಯ ಪ್ರಕಾರ, ಕೋವಿಡ್‌ -19 ಸಾಂಕ್ರಾಮಿಕದ ಪರಿಣಾಮವಾಗಿ ವಸತಿಗಳ ಮೇಲಿನ ಬೇಡಿಕೆಯಲ್ಲಿ ಕುಸಿತ ಕಂಡಿತ್ತು. ಆದರೆ, 2020 ಮತ್ತು 2021 ರಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಳವಾಯ್ತು. ಆದರೆ ಕೋವಿಡ್‌ ನಿಂದಾಗಿ ಹೆಚ್ಚಿನ ಪರಿಣಾಮ ಬೀರದೆ ಈಗ 2022 ರಲ್ಲಿ ಪ್ರತಿ ಚದರ ಅಡಿಗೆ 6,700 ಇದ್ದದ್ದು, 6,900 ರೂ. ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

2016-21ರ ಅವಧಿಯಲ್ಲಿ ವಸತಿ ದರಗಳು ಯಾವುದೇ ಬದಲಾವಣೆಯನ್ನು ಕಾಣದೆ ಸ್ಥಿರವಾಗಿದ್ದವು. ಆದರೆ, 2022ರಲ್ಲಿ ದೇಶದಲ್ಲಿ ನಿರ್ಮಾಣ ವೆಚ್ಚದಲ್ಲೂ ಏರಿಕೆಯಾಗಿದೆ. ಇದರಿಂದಾಗಿ ವಸತಿ ದರಗಳು ಹೆಚ್ಚಳವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಸಲಕರಣೆಗಳ ಪೂರೈಕೆಯಲ್ಲಿ ಕೊರತೆ ಉಂಟಾಯ್ತು. ಆಗ ಸಲಕರಣೆಗಳ ಬೇಡಿಕೆ ಹೆಚ್ಚಿದಂತೆ ದರವೂ ಹೆಚ್ಚಳವಾಯ್ತು. ಇದು ಸಹಜವಾಗಿಯೇ ವಸತಿ ದರದ ಮೇಲೂ ಪರಿಣಾಮವನ್ನು ಬೀರಿತು. ನಿರ್ಮಾಣದ ವೆಚ್ಚ ಹೆಚ್ಚಾದ ಕಾರಣ ಅಪಾರ್ಟ್ ಮೆಂಟ್ ಗಳ ಬೇಸಿಕ್ ಸೆಲ್ಲಿಂಗ್ ಪ್ರೈಸ್ ಕೂಡ ಅಧಿಕವಾಗಿದೆ ಎಂದು ವರದಿ ಹೇಳಿದೆ.

ಭಾರತದ ಎಂಟು ನಗರಗಳಾದ ಬೆಂಗಳೂರು, ಗುರುಗ್ರಾಮ್, ದೆಹಲಿ, ಅಹಮದಾಬಾದ್, ಲಖನೌ, ಕೊಲ್ಕತ್ತಾ, ಹೈದರಾಬಾದ್ ಮತ್ತು ಚೆನ್ನೈನಲ್ಲಿ ವಸತಿ ದರಗಳು ಹೆಚ್ಚಳವಾಗಿವೆ. ಬೆಂಗಳೂರಿನಲ್ಲಿ ವಸತಿ ದರ ಚದರ ಅಡಿಗೆ 6,000 ರೂಪಾಯಿ ಇತ್ತು. 2022ರಲ್ಲಿ ಇದು 6,200 ರೂ.ಗೆ ಹೆಚ್ಚಳವಾಗಿದೆ. ಶೇ. 9 ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಗುರುಗ್ರಾಮ್ ನಲ್ಲಿ ವಸತಿ ದರ ಅಧಿಕವಾಗಿ ಹೆಚ್ಚಳವಾಗಿದೆ. ಶೇ. 13ರಷ್ಟು ದರ ಏರಿಕೆಯಾಗಿದ್ದು, ಚದರ ಅಡಿಗೆ 7,000 ರೂ. ಇದ್ದದ್ದು ಈಗ 7,200 ರೂ. ಆಗಿದೆ. ಇನ್ನು ಅಹಮದಾಬಾದ್ನಲ್ಲಿ ವಸತಿ ದರ ಶೇ. 7 ರಷ್ಟು ಹೆಚ್ಚಳವಾಗಿದ ಎಂದು ವರದಿಯಲ್ಲಿ ಹೇಳಲಾಗಿದೆ. ಅಹಮದಾಬಾದ್ ನಲ್ಲಿ ಚದರ ಅಡಿಗೆ 3,600 ರೂ. ಇದ್ದದ್ದು 2022ರಲ್ಲಿ 3,800 ರೂ.ಗೆ ಏರಿಕೆಯಾಗಿದೆ.

ಇನ್ನು ದೆಹಲಿಯಲ್ಲಿ ಶೇ.8 ರಷ್ಟು ವಸತಿ ದರ ಹೆಚ್ಚಳವಾಗಿದೆ. ಅದರಂತೆ ಕೊಲ್ಕತ್ತಾ ಹಾಗೂ ಪುಣೆಯಲ್ಲಿ ಶೇ.9 ರಷ್ಟು ಏರಿಕೆಯಾಗಿದೆ. ಇನ್ನು ಚೆನ್ನೈನಲ್ಲಿ ಶೇ.5 ರಷ್ಟು ಏರಿಕೆಯಾಗಿದ್ದು, ಪ್ರತೀ ಚದರ ಅಡಿಗೆ 5,600 ರೂ.ನಿಂದ 5,800 ರೂ.ವರೆಗೂ ಏರಿಕೆಯಾಗಿದೆ. ಹೈದರಾಬಾದ್ ಹಾಗೂ ಲಖನೌನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಎರಡೂ ನಗರಗಳಲ್ಲಿ 4ರಷ್ಟು ವಸತಿ ದರದಲ್ಲಿ ಹೆಚ್ಚಳವಾಗಿದ್ದು, ಪ್ರತೀ ಚದರ ಅಡಿಗೆ 6,100 ರೂ.ನಿಂದ 6,300 ರೂ.ವರೆಗೂ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

Related News

spot_img

Revenue Alerts

spot_img

News

spot_img