ಬೆಂಗಳೂರು, ಫೆ. 06: ಡಾ|| ಕೆ. ಶಿವರಾಮ ಕಾರಂತ ಬಡಾವಣೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ 2013 ರ ಭೂ ಸ್ವಾಧೀನ ಕಾಯ್ದೆ ಅಡಿಯಲ್ಲಿ ಪರಿಹಾರಕ್ಕಾಗಿ ಒತ್ತಾಯಿಸಿ ರೈತರು ಇಂದು ಪೊರಕೆ ಚಳುವಳಿಯನ್ನು ಹಮ್ಮಿಕೊಂಡಿದ್ದಾರೆ. ರೈತರು ನಿಂರಂತರವಾಗಿ ಈ ಬಗ್ಗೆ ಧರಣಿ ನಡೆಸಿದ್ದರೂ ಕೂಡ ಏಕಾಏಕಿ ಬಿಡಿಎ ಅಧಿಕಾರಿಗಳು ಭೂ ಸ್ವಾದೀನಕ್ಕೆ ಮುಂದಾಗಿದ್ದಾರೆ. ಇದರಿಂದ 17 ಗ್ರಾಮಗಳ ರೈತರಿಗೆ ಮೋಸವಾಗುತ್ತಿದೆ ಎಂದು ಹೇಳಿ ಅನ್ನದಾತರು ಪೊರಕೆ ಚಳುವಳಿಯನ್ನು ನಡೆಸುತ್ತಿದ್ದಾರೆ.
ಈ ಬೃಹತ್ ಪೊರಕೆ ಚಳುವಳಿಯಲ್ಲಿ ರೈತರು ರಾಮಗೊಂಡನಹಳ್ಳಿಯಿಂದ ಬಿ.ಡಿ.ಎ. ಕಛೇರಿಯ ವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಮುಖ್ಯಮಂತ್ರಿಗಳು ಹಾಗೂ ಬಿಡಿಎ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ. ಡಾ ಕೆ.ಶಿವರಾಮ ಕಾರಂತ ಬಡಾವಣೆಗಾಗಿ ಕ್ರೂರ ಮತ್ತು ಶೋಷಣೆಯ ಪ್ರತೀಕವಾಗಿರುವ ವಸಾಹತುಶಾಹಿ ಪಳೆಯುಳಿಕೆ ಭೂಸ್ವಾಧೀನ ಕಾಯಿದೆ. 1894 ರಡಿಯಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ 17 ಗ್ರಾಮಗಳ ರೈತರ, ದಲಿತರ, ಹಿಂದುಳಿದ ವರ್ಗಗಳ ಹಾಗೂ ಇತರೆ ಸಮುದಾಯಗಳ ಜನರಿಗೆ ಸೇರಿದ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.
ಭೂ ಸ್ವಾಧೀನ ಮಾಡಿಕೊಳ್ಳುವಾಗ 2013ರ ಭೂ ಸ್ವಾಧೀನ ಕಾಯ್ದೆಯ ಅನ್ವಯ ಪರಿಹಾರ ನೀಡುವುದಾಗಿ ಬಿಡಿಎ ಭರವಸೆ ನೀಡಿತ್ತು. ಆದರೆ, ಈಗ 1894ರ ಭೂ ಸ್ವಾಧೀನ ಕಾಯ್ದೆಯ ಅನ್ವಯ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಇದರಿಂದ ಸಾಕಷ್ಟು ರೈತರಿಗೆ ಅನ್ಯಾಯವಾಗಲಿದೆ ಎಂದು ರೈತ ಮಹಿಳೆಯರು ಆರೋಪಿಸಿದ್ದಾರೆ. ಇನ್ನು ಈ ಪೊರಕೆ ಚಳುವಳಿಗೆ ಕಾಂಗ್ರೆಸ್ ಕೂಡ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಮಂಜುನಾಥ್ ಅದ್ದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರೈತರ ಜಮೀನಿನಲ್ಲಿ ಡಾ| ಕೆ.ಶಿವರಾಮ ಕಾರಂತ ಬಡಾವಣೆಯನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಧರಿಸಿದ್ದು ಬೆಂಗಳೂರು ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ಹೆಸರಘಟ್ಟ ಹೋಬಳಿ, ಯಶವಂತಪುರ ಹೋಬಳಿಯ 17 ಗ್ರಾಮಗಳ 3546 ಎಕರೆ 12 ಗುಂಟೆ ಜಮೀನು ರೈತರಗಳಾದ ನಮ್ಮ ಭೂಮಿಯನ್ನು ವಸಾಹತುಶಾಹಿ ಕಾಲದಲ್ಲಿ ಜಾರಿಗೊಳಿಸಲಾಗಿದ್ದ, ಕ್ರೂರವಾಗಿರುವ ಮತ್ತು ಭೂಮಿ ಕಳೆದುಕೊಳ್ಳುವ ರೈತರನ್ನು ಮತ್ತಷ್ಟು ಶೋಷಿಸುವ ಭೂಸ್ವಾಧೀನ ಕಾಯ್ದೆ 1894 ರ ನಿಯಮಗಳಡಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ.
ಆಗುತ್ತಿರುವ ಈ ಘೋರ ಅನ್ಯಾಯಗಳ ಬಗ್ಗೆ ಬಹಳಷ್ಟು ಮನವಿಯನ್ನು ನೀಡಿದ ನಂತರವೂ, ಇವುಗಳ ವಿರುದ್ಧ ನಡೆದ ಅನೇಕ ಪ್ರತಿಭಟನೆಗಳ ಹೊರತಾಗಿಯೂ ನಮ್ಮ ಜಮೀನು ಶಿವರಾಮ ಕಾರಂತ ಬಡಾವಣೆಗೆ ನಿಜವಾಗಿಯೂ ಅಗತ್ಯವಿದ್ದರೆ ನಮಗೆ LARR 2013 ರ ಅಡಿಯಲ್ಲಿ ಪರಿಹಾರ ನೀಡಬೇಕು ಎಂಬ ನಮ್ಮ ಬೇಡಿಕೆಯನ್ನು ಆಲಿಸದೆಯೇ ನಮ್ಮ ಭೂಮಿಯನ್ನು ಕಿತ್ತುಕೊಂಡು, ನಮ್ಮನ್ನು ಬೀದಿಪಾಲು ಮಾಡಲು ಹಲವು ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ. ನಮ್ಮ ಕೂಗನ್ನು ರಾಜ್ಯ ಸರ್ಕಾರ ಕೇಳಿಸಿಕೊಳ್ಳುತ್ತಲೇ ಇಲ್ಲ. ಸದರಿ ಪ್ರಕರಣದಲ್ಲಿ LARR 2013 ಅನ್ನು ಹೊರತುಪಡಿಸಿ ಇನ್ಯಾವುದೇ ಕಾನೂನು ನಮಗೆ ಅನ್ವಯಿಸುವುದಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.