26.4 C
Bengaluru
Wednesday, December 4, 2024

ನಾಡಹಬ್ಬ ದಸರಾಗೆ ಕ್ಷಣಗಣನೆ: ಅಂಬಾರಿ ಸಾಗುವ ಮಾರ್ಗದಲ್ಲಿ ಬಿಗಿ ಪೊಲೀಸ್ ಭದ್ರತೆ

ಮೈಸೂರು: ವಿಶ್ವವಿಖ್ಯಾತ ಸಾಂಪ್ರದಾಯಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ವಿಜಯದಶಮಿ ಮೆರವಣಿಗೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.ಮೈಸೂರಿನಲ್ಲಿ ನಾಡಹಬ್ಬ ದಸರಾ ಸಂಭ್ರಮ ಜೋರಾಗಿದೆ. ಕಳೆದ 9 ದಿನಗಳಿಂದ ವಿವಿಧ ಕಾರ್ಯಕ್ರಮಗಳು ನವರಾತ್ರಿ ಹಬ್ಬಕ್ಕೆ ಸಾಕ್ಷಿಯಾಗಿದ್ದವು,ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯುತ್ತಿವೆ.9 ದಿನಗಳ ನವರಾತ್ರಿಯ ನಂತರ ಹತ್ತನೇ ದಿನ ವಿಜಯದಶಮಿ ಅಥವಾ ದಸರಾ ಆಚರಣೆ ನಡೆಯಲಿದೆ. ದಸರಾ ಸಲುವಾಗಿ ಪ್ರತಿವರ್ಷದಂತೆ ಈ ವರ್ಷವೂ ಮೈಸೂರಿನಲ್ಲಿ ಜಂಬೂಸವಾರಿ ನಡೆಯುತ್ತದೆ. ಇಂದು ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಚಿನ್ನದ ಅಂಬಾರಿಯಲ್ಲಿ ಅಸೀನಳಾಗುವ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ವೈಭವದ ಜಂಬೂ ಸವಾರಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.

ಜಂಬೂ ಸವಾರಿಗೆ ಮಧ್ಯಾಹ್ನ 1.46ರಿಂದ 2.08ರ ಶುಭ ಮೀನ ಲಗ್ನದಲ್ಲಿ CM ಸಿದ್ದರಾಮಯ್ಯ ಸೇರಿದಂತೆ ಮತ್ತಿತರ ಗಣ್ಯರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಮೆರವಣಿಗೆಗೆ ಚಾಲನೆ ಕೊಡಲಿದ್ದಾರೆ. ಮೆರವಣಿಗೆಯಲ್ಲಿ 47 ಸ್ತಬ್ಧ ಚಿತ್ರಗಳು, ಆಯಾ ಕ್ಷೇತ್ರಗಳ ಪ್ರಮುಖ ಕಲಾ ತಂಡಗಳು ಆಗಮಿಸಲಿವೆ. ಅಭಿಮನ್ಯು ಆನೆ ಹೊತ್ತ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.ಈ ಚಿನ್ನದ ಅಂಬಾರಿಯು 750 ಕೆಜಿ ತೂಕ ಹೊಂದಿರುತ್ತದೆ.ಜಂಬೂಸವಾರಿ ಮಧ್ಯಾಹ್ನ 2ಕ್ಕೆ ಅರಮನೆ ಆವರಣದಲ್ಲಿ ಶುರುವಾಗಲಿದೆ. ಆನೆಗಳ ತಂಡದೊಂದಿಗೆ ಸುಮಾರು 100ಕ್ಕೂ ಅಧಿಕ ಕಲಾ ತಂಡಗಳು, 49 ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಇರಲಿವೆ.ಸುಮಾರು 4.5ಕಿ.ಮೀ ಉದ್ದದ ಮಾರ್ಗವನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ತಂಡಗಳು ಕ್ರಮಿಸಲಿವೆ.

6,000ಕ್ಕೂ ಹೆಚ್ಚು ಪೊಲೀಸರನ್ನು ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿದೆ. ಒಬ್ಬರು ಡಿಐಜಿ, 8 ಮಂದಿ ಎಸ್ ​ಪಿಗಳು, 10 ಮಂದಿ ಅಡಿಷನಲ್ ಎಸ್​ ಪಿಗಳು, ಸಿಸಿಟಿವಿ ಕ್ಯಾಮರಾಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು ಸೇರಿದಂತೆ ಭಾರಿ ಬಂದೋಬಸ್ತ್ ಮಾಡಲಾಗಿದೆ.ಬನ್ನಿಮಂಟಪದ ಮೈದಾನದಲ್ಲಿ ರಾತ್ರಿ 7.30ಕ್ಕೆ ಆಕರ್ಷಕ ಪಂಜಿನ ಕವಾಯತು ನಡೆಯಲಿದೆ. ಇದರಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವರು ಭಾಗವಹಿಸಲಿದ್ದಾರೆ.ಸಂಜೆ 7ರಿಂದ ಪಂಜಿತ ಕವಾಯತು ಕೂಡ ಇರಲಿದೆ. ಕರ್ನಾಟಕ ಪೊಲೀಸ್‌ ಪಡೆಯ ವಿಶೇಷ ಪ್ರದರ್ಶನ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಂದ ಗೌರವ ವಂದನೆ, ಸೇನಾ ಪಡೆಯ ಸಾಹನ ಪ್ರದರ್ಶನ, ಕೊನೆಯಲ್ಲಿ ಬಾಣ ಬಿರುಸುಗಳ ಪ್ರದರ್ಶನ ಪಂಜಿನ ಕವಾಯಿತಿನ ಆಕರ್ಷಣೆ. ಇದರ ನೇರ ಪ್ರಸಾರವೂ ಲಭ್ಯವಿರಲಿದೆ

ದಸರಾ ಎಂದರೆ ಅಸತ್ಯದ ವಿರುದ್ಧ ಸತ್ಯದ ಜಯ. ಒಂಭತ್ತು ದಿನಗಳ ಕಾಲ ತಾಯಿ ಚಾಮುಂಡೇಶ್ವರಿಯು ದುಷ್ಟ ಮಹಿಷಾಸುರನ ಜೊತೆ ಹೋರಾಡಿ ಹತ್ತನೆಯ ದಿನದಂದು ಆತನನ್ನು ವಧಿಸಿ ಧರ್ಮಕ್ಕೆ ಜಯವನ್ನಿತ್ತ ದಿನವೇ ವಿಜಯದಶಮಿ.ಜಂಬೂಸವಾರಿಯು 1940ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್ ಅವರಿಂದ ಆರಂಭವಾಯಿತು. ಜಂಬೂಸವಾರಿ ಎಂದರೆ ಆನೆಯ ಮೆರವಣಿಗೆ ಎಂದರ್ಥ.ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಉಳಿದ ಗಜ ಪಡೆಗಳೊಂದಿಗೆ ಪ್ರಧಾನ ಆನೆಯ ಬೆನ್ನ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಿದ ಸುಮಾರು 750 ಕೆಜಿತೂಕದ ಚಿನ್ನದ ಅಂಬಾರಿಯನ್ನಿರಿಸಿ ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೆ ವೈಭವೋಪೇತವಾದ ಮೆರವಣಿಗೆಯಲ್ಲಿ ಸಾಗಲಾಗುತ್ತದೆ.ಅರಮನೆಯಲ್ಲಿ ನಂದಿದ್ವಜಕ್ಕೆ ಪೂಜೆ ಸಲ್ಲಿಸಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಾಗಿರುವ ಸಾಲಂಕೃತಗೊಂಡ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆಗೈದು ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಈ ವೈಭವೋಪೇತ ಮೆರವಣಿಗೆಯಲ್ಲಿ ಪೊಲೀಸ್ ಬ್ಯಾಂಡ್ ನ ಆಕರ್ಷಕ ತಾಳವಾದ್ಯ ಕಂಸಾಳೆ ಕುಣಿತ, ಸ್ಥಬ್ದ ಚಿತ್ರಗಳು ಮನ ರಂಜಿಸುತ್ತವೆ. ಈ ಸಂದರ್ಭದಲ್ಲಿ ಇಡೀ ಮೈಸೂರು ನಗರವೇ ಶೃಂಗಾರಗೊಂಡು ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸುತ್ತದೆ.

ಜಂಬೂ ಸವಾರಿಗೆ ಅಗತ್ಯವಿರುವ ಆನೆಗಳನ್ನು ಒಂದೂವರೆ ತಿಂಗಳು ಮೊದಲೇ ಶಿಬಿರಗಳಿಂದ ಮೈಸೂರಿಗೆ ಕರೆತರಲಾಗುತ್ತದೆ. ಈ ಗಜಪಡೆಗಳಿಗೆ ಮೈಸೂರಿನ ಅರಮನೆಯ ಆವರಣದಲ್ಲಿ ದಿನನಿತ್ಯ ವಿಶೇಷ ಭೋಜನಗಳನ್ನು ನೀಡಲಾಗುತ್ತದೆ. ಅದರಲ್ಲಿಯೂ ದೇವಿಯ ಅಂಬಾರಿಯನ್ನು ಹೊರುವ ಆನೆಗೆ ವಿಶೇಷ ಸತ್ಕಾರಗಳು ನಡೆಯುತ್ತವೆ. ವಿಶೇಷ ಮಜ್ಜನಗಳನ್ನು ಮಾಡಿಸಲಾಗುತ್ತದೆ.ಈ ಗಜಪಡೆಗಳಿಗೆ ಯಾವುದೇ ಪರಿಸ್ಥಿತಿಗಳಿಗೆ ಬೆದರದೆ ಮುನ್ನಡೆಯಲು ಕಠಿಣ ತಾಲೀಮುಗಳನ್ನು ನೀಡಲಾಗುತ್ತದೆ. ಅಂಬಾರಿಯನ್ನು ಹೊರುವ ಆನೆಗೆ ಪ್ರತಿದಿನ 750 ಕೆಜಿ ತೂಕದ ಮರದ ಅಂಬಾರಿಯನ್ನು ಬೆನ್ನಿಗೆ ಕಟ್ಟಿ ಬನ್ನಿಮಂಟಪದವರೆಗೆ ನಡೆಸಿ ನುರಿತ ಮಾವುತರ ನೇತೃತ್ವದಲ್ಲಿ ತರಬೇತಿ ಕೊಡಲಾಗುತ್ತದೆ. ಆನೆಗಳ ದೇಹ ಸ್ಥಿತಿಯನ್ನು ಪ್ರತಿಕ್ಷಣ ಗಮನಿಸಲು ಪಶು ವೈದ್ಯರಿರುತ್ತಾರೆ. ಹೀಗೆ ಸಿದ್ಧಗೊಂಡ ಆನೆಗಳನ್ನು ವಿಜಯದಶಮಿಯಂದು ಸಾಲಂಕೃತವಾಗಿ ಶೃಂಗರಿಸಿ ಅವುಗಳ ಬೆನ್ನ ಮೇಲೆ ದೇವಿ ಸಹಿತವಾದ ಚಿನ್ನದ ಅಂಬಾರಿಯನ್ನಿರಿಸಿ ವಿಶ್ವವಿಖ್ಯಾತವಾದ ದಸರಾದ ಜಂಬೂ ಸವಾರಿಯ ಮೆರವಣಿಗೆಯನ್ನು ಮಾಡಲಾಗುತ್ತದೆ.

Related News

spot_img

Revenue Alerts

spot_img

News

spot_img