32.2 C
Bengaluru
Wednesday, April 17, 2024

ಏ ಬಿಎಂಟಿಸಿ ನಿನಗೆ ಇನ್ನೆಷ್ಟು ಮುಗ್ಧ ಜೀವಗಳ ಬಲಿ ಬೇಕು ? ಮುದ್ದು ಪೂರ್ವಿಯನ್ನು ಬಲಿ ಪಡೆದ BMTC ಬಸ್ !

#BMTC Accident, #Child death in Bengaluru, #Traffic police,

ಬೆಂಗಳೂರು, ಅದು ನಾಲ್ಕು ವರ್ಷದ ಪುಟ್ಟ ಕಂದಮ್ಮ. ಕಂಗಳಲ್ಲಿ ಮುಗ್ದ ನಗು. ಹೆತ್ತವರದ್ದು ನೂರಾರು ಕನಸು. ಈಗಷ್ಟೇ ಸ್ಲೇಟು ಬಳಪ ಹಿಡಿದು ಅಕ್ಷರ ಕಲಿಯುತ್ತಿದ್ದ ಮುದ್ದು ಮಗುವನ್ನು ಕಿಲ್ಲರ್ ಬಿಎಂಟಿಸಿ ಬಲಿ ಪಡೆದಿದೆ. ಬಿಎಂಟಿಸಿ ಚಾಲಕರ ಉಡಾಫೆ ಚಾಲಕತ್ವದಿಂದ ಬೆಂಗಳೂರಿನಲ್ಲಿ ಅಮಾಯಕ ಜೀವಗಳ ಉಸಿರು ರಸ್ತೆಯಲ್ಲೇ ನಿಂತು ಹೋಗುತ್ತಿದೆ. ಅದರ ಸಾಲಿಗೆ ಪೂರ್ವಿ ಎನ್ನುವ ಮುಗ್ಧ ಕಂದಮ್ಮನ ಹೆಸರು ಸೇರ್ಪಡೆಯಾಗಿದೆ.

ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿಯ ವಿದ್ಯಾರ್ಥಿಯ ಜೀವವನ್ನು ಬಿಎಂಟಿಸಿ ಬಲಿ ಪಡೆದಿತ್ತು. ಇದೀಗ ನಾಲ್ಕು ವರ್ಷದ ಹಸು ಗೂಸಿನ ಜೀವವನ್ನೇ ಕಸಿದುಕೊಂಡಿದೆ. ಚಾಲಕನ ನಿರ್ಲಕ್ಷ್ಯ ತನಕ್ಕೆ ಪುಟ್ಟ ಕನಸು ಕಾಣುತ್ತಿದ್ದ ಮುದ್ದಾದ ಕಂದಮ್ಮ ಕಮರಿ ಹೋಗಿದೆ.

BMTC Killed 4 year old child

ಆತನ ಹೆಸರು ಪ್ರಸನ್ನ. ಮನೆ ಇರುವುದು ಉತ್ತರಹಳ್ಳಿಯಲ್ಲಿ. ತನ್ನ ಮಗಳ ಬಗ್ಗೆ ದೊಡ್ಡ ಕನಸು ಕಂಡಿದ್ದ. ನಾಲ್ಕು ವರ್ಷದ ಕಂದಮ್ಮನನ್ನು ಕಿಂಡರ್ ಗಾರ್ಟನ್ ಶಾಲೆಗೆ ಸೇರಿಸಿದ್ದ. ವ್ಯಾನ್ ಶುಲ್ಕ ಭರಿಸಲಾರದ ಸ್ಥಿತಿ. ಮಿಗಿಲಾಗಿ ತನ್ನ ಮಗುವನ್ನು ತಾನೇ ಕರೆದುಕೊಂಡು ಶಾಲೆಗೆ ಬಿಟ್ಟಾಗ ಸಿಗುವ ಖುಷಿಯಲ್ಲಿ ಪ್ರಸನ್ನ ತೇಲಾಡುತ್ತಿದ್ದರು. ಬುಧವಾರ ಬೆಳಗ್ಗೆ ತನ್ನ ನಾಲ್ಕು ವರ್ಷದ ಮುದ್ದು ಮಗಳು ಪೂರ್ವಿಯನ್ನು ಹೀರೋಹೋಂಡಾ ಬೈಕ್ ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡಲು ಉತ್ತರಹಳ್ಳಿಯಿಂದ ಕುಮಾರಸ್ವಾಮಿ ಲೇಔಟ್ ಕಡೆ ಹೋಗುತ್ತಿದ್ದರು.

ಬಲ ದಿಕ್ಕಿನಿಂದ ಎಡ ದಿಕ್ಕಿಗೆ ಬೈಕ್ ತಿರುವು ಪಡೆಯುವಾಗ ಅತಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಪ್ರಸನ್ನ ಎಡಗಡೆ ಬಿದ್ದರೆ, ಬೈಕ್ ನಲ್ಲಿ ಕೂತಿದ್ದ ಮುದ್ದು ಮಗು ಪೂರ್ವಿ ಬಲಭಾಗಕ್ಕೆ ಬಿದ್ದಿದೆ. ಅತಿ ವೇಗದಲ್ಲಿದ್ದ ಬಿಎಂಟಿಸಿ ಬಸ್ ಚಕ್ರ ಹರಿದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮಗುವನ್ನು ಅಸ್ಪತ್ರೆಗೆ ದಾಖಲಿಸಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಬಿಎಂಟಿಸಿ ಬಸ್ ಚಾಲಕ ಬಸವರಾಜ ಪೂಜಾರಿಯನ್ನು ವಶಕ್ಕೆ ಪಡೆದು ಕೇಸು ದಾಖಲಿಸಿದ್ದಾರೆ.

ಆದರೆ ಮಗುವಿನ ಸಾವು ನೋಡಿ ನೆರೆದಿದ್ದವರ ಕಣ್ಣಾಲಿಗಳೇ ಒದ್ದೆಯಾಗಿದ್ದವು. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಬಹುದು ಚಾಲಕನಿಗೆ ಶಿಕ್ಷೆಯೂ ಆಗಬಹುದು. ಆದ್ರೆ, ಕಳೆದು ಹೋದ ಪೂರ್ವಿ ವಾಪಸು ಬರಲು ಸಾಧ್ಯವೇ ಇಲ್ಲ! ಒಬ್ಬ ತಂದೆ ತಾಯಿಗೆ ಬದುಕನ್ನೇ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾರೆ. ದುರದಾದೃಷ್ಟ ವಶಾತ್ ವ್ಯವಸ್ಥೆಯು ಆಕಸ್ಮಿಕ ಅವಘಡಗಳಲ್ಲಿ ಬಲಿ ಪಡೆಯುತ್ತವೆ. ಅಂತಹ ಧಾರಣ ಸಾವುಗಳು ಎಂಥವರ ಕರುಳು ಹಿಂಡುತ್ತವೆ.

ಪ್ರಸನ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಪೂರ್ವಿಯನ್ನು ಕುಮಾರಸ್ವಾಮಿ ಲೇಔಟ್‌ ನಲ್ಲಿರುವ ಬೆಂಗಳೂರಿನ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಕೆಜಿ -೧ ತರಗತಿಗೆ ಸೇರಿಸಿದ್ದರು. ಪ್ರತಿ ದಿನ ತನ್ನ ಮಗಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದರು. ಬುಧವಾರ ಬೆಳಗ್ಗೆ ಮಗುವನ್ನು ಶಾಲೆಗೆ ಬಿಡುವಾಗ ಈ ಅವಘಡ ಸಂಭವಿಸಿದೆ.

BMTC Bus accident and child death case

ಕೆಲಸದ ಒತ್ತಡವೋ, ಉಡಾಫೆಯೂ ಗೊತ್ತಿಲ್ಲ. ಬಹುತೇಕ ಬಿಎಂಟಿಸಿ ಬಸ್ ಗಳು ಬೆಂಗಳೂರಿನ ರಸ್ತೆಗಳಲ್ಲಿ ಯಮನಂತೆ ಸಂಚರಿಸುತ್ತವೆ. ಬಿಎಂಟಿಸಿ ಚಾಲಕರು ಒಂದು ಕ್ಷಣ ತಾಳ್ಮೆ ವಹಿಸಿದ್ರೆ ಅದೆಷ್ಟೋ ಕಳೆದು ಹೋಗಲಿರುವ ಜೀವಗಳು ಉಳಿಯುತ್ತವೆ. ಆದ್ರೆ ಬಿಎಂಟಿಸಿ ಚಾಲಕರಿಗೆ ಆ ತಾಳ್ಮೆಯೇ ಇಲ್ಲ. ತಾನು ಕೂತಿರುವುದು ಗಗನದೆತ್ತರ ಸೀಟಿನಲ್ಲಿ ಎಂಬ ಹುಂಬುತನದಲ್ಲಿ ವಾಹನಗಳನ್ನು ಚಾಲನೆ ಮಾಡುತ್ತಾರೆ. ಬಿಎಂಟಿಸಿ ಚಾಲಕರ ಹುಂಬತನಕ್ಕೆ ಬೆಂಗಳೂರಿನಲ್ಲಿ ಮುಗ್ಧ ಜೀವಗಳ ಪ್ರಾಣ ಪಕ್ಷಿ ರಸ್ತೆಯಲ್ಲಿಯೇ ಹಾದು ಹೋಗುತ್ತಿವೆ. ಬಿಎಂಟಿಸಿ ಚಾಲಕರ ರಾಕ್ಷಸಿ ಪ್ರವೃತ್ತಿ ಚಾಲನೆಗೆ ಬ್ರೇಕ್ ಹಾಕದ ಹೊರತು ಇಂತಹ ಇನ್ನೆಷ್ಟು ಕಂದಮ್ಮಗಳು ಜೀವ ಕಳೆದುಕೊಳ್ಳುತ್ತಾರೋ ದೇವರೇ ಬಲ್ಲ. ಈ ಕುರಿತು ಹಾಲಿ ಸಾರಿಗೆ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಚಾಲಕರಿಗೆ ಜೀವಗಳ ಮಹತ್ವ ತಿಳಿಸಬೇಕು. ಅಗ ಮಾತ್ರ ಇಂತಹ ಅನ್ಯಾಯದ ಸಾವುಗಳಿಗೆ ಬ್ರೆಕ್ ಹಾಕಲು ಸಾಧ್ಯ.

 

Related News

spot_img

Revenue Alerts

spot_img

News

spot_img