28.2 C
Bengaluru
Wednesday, July 3, 2024

ಕಾವೇರಿ ತಂತ್ರಾಂಶ ಅನುಷ್ಠಾನ ಸಮಸ್ಯೆ: ಮೇಲ್ಮನವಿ ಸಲ್ಲಿಸಲು ಸಂಬಂಧಿಸಿದ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ.

ಅಡೆತಡೆ ರಹಿತ ನೋಂದಣಿ ವ್ಯವಸ್ಥೆ ಒದಗಿಸುವ ಉದ್ದೇಶದ ಕಾವೇರಿ 2.0 ತಂತ್ರಾಂಶ ಜಾರಿಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ವಿವರವಾದ ಮನವಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ತಂತ್ರಾಂಶದ ಜಾರಿಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಬಿ ರಾಮಾಚಾರ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರು, ತಂತ್ರಾಂಶ ಅನುಷ್ಠಾನದಿಂದ ಜನರಿಗೆ ತೊಂದರೆ ಆಗುತ್ತಿದೆ. ನೋಂದಣಿಗೆ ಹಾಜರುಪಡಿಸಿರುವ ದಸ್ತಾವೇಜನ್ನು ತಿರಸ್ಕರಿಸಲು ಅಥವಾ ರದ್ದು ಪಡಿಸಲು ಅವಕಾಶ ನೀಡಲಾಗಿದೆ. ಆದರೆ, ನಿಯಮದ ಪ್ರಕಾರ ಆ ರೀತಿ ನೋಂದಣಿಗೆ ಸಲ್ಲಿಸಿದ ದಸ್ತಾವೇಜನ್ನು ತಿರಸ್ಕರಿಸಲು ಅವಕಾಶವಿಲ್ಲ. ಈ ಕುರಿತು ನ್ಯಾಯಾಲಯಗಳ ಹಲವು ಆದೇಶಗಳಿವೆ ಎಂದರು.

ಆದರೆ, ದಾಖಲೆಗಳನ್ನು ಪರಿಶೀಲಿಸಿದ ಪೀಠವು ಈ ವಿಷಯದ ಬಗ್ಗೆ ಅರ್ಜಿದಾರರು ಮೇ 2ರಂದು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಆನಂತರ ಅದರ ಉತ್ತರಕ್ಕೂ ಕಾಯದೇ ಮೇ 5ಕ್ಕೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿದೆ. ಇಲಾಖೆಗೆ ಮನವಿಗೆ ಉತ್ತರಿಸಲು ಕಾಲಾವಕಾಶ ನೀಡದೆ ಅರ್ಜಿ ಸಲ್ಲಿಸಿರುವುದು ಸರಿಯಲ್ಲ ಎಂದಿತು.

ಅಲ್ಲದೆ, ಅರ್ಜಿದಾರರು ಕಾವೇರಿ 2.0 ತಂತ್ರಾಂಶ ಜಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಆ ಬಗ್ಗೆ ವಿವರ ನೀಡುವಂತೆ ಸೂಚಿಸಿತು. ಅರ್ಜಿದಾರರ ಪರ ವಕೀಲರು ಸರಿಯಾದ ಉತ್ತರ ನೀಡಲಿಲ್ಲ.

ಆಗ ಸರ್ಕಾರಿ ವಕೀಲರು, ಕಾವೇರಿ 2.0 ತಂತ್ರಾಂಶ ಪಾರದರ್ಶಕ ವ್ಯವಸ್ಥೆಯಾಗಿದ್ದು, ರಾಜ್ಯಾದ್ಯಂತ ಈಗಾಗಲೇ 152 ಉಪ ನೋಂದಣಾಕಾರಿಗಳ ಕಚೇರಿಗಳಲ್ಲಿ ಜಾರಿಯಾಗಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.

ಕೊನೆಗೆ ನ್ಯಾಯಾಲಯ ಅರ್ಜಿದಾರರಿಗೆ ಪಿಐಎಲ್ ಹಿಂಪಡೆಯಲು ಸೂಚನೆ ನೀಡಿತು ಮತ್ತು ಅದಕ್ಕೆ ಅರ್ಜಿದಾರರ ಪರ ವಕೀಲರು ಒಪ್ಪಿದರು. ಆನಂತರ ಇದನ್ನು ದಾಖಲಿಸಿಕೊಂಡ ಪೀಠವು ಸಂಬಂಧಿಸಿದ ಪ್ರಾಧಿಕಾರಕ್ಕೆ ವಿವರವಾದ ಮನವಿ ಸಲ್ಲಿಸುವಂತೆ ನಿರ್ದೇಶನ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತು.

Related News

spot_img

Revenue Alerts

spot_img

News

spot_img