ಬೆಂಗಳೂರು, ಏ. 14 : ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಕೂಡ ಒಬ್ಬರು. ವಿಶ್ವದಲ್ಲೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿದ್ದು, ಬಕಿಂಗ್ಹ್ಯಾಮ್ ಅರಮನೆಯ ನಂತರ ವಿಶ್ವದ ಎರಡನೇ ಅತ್ಯಂತ ಅದ್ದೂರಿ ಆಸ್ತಿ ಎಂದು ಅಂದಾಜಿಸಲಾಗಿದೆ. ಇವರ ಆಂಟಿಲಿಯಾ ಮನೆಯು ಭಾರತದ ವ್ಯಾಪಾರ ರಾಜಧಾನಿಯಾಗಿರುವ ಮುಂಬೈನಲ್ಲಿ ಇದೆ. 27 ಅಂತಸ್ತಿನ ಈ ಕಟ್ಟಡದಲ್ಲಿ ಮುಖೇಶ್ ಅಂಬಾನಿ ಕುಟುಂಬ ನೆಲೆಸಿದೆ. ಮುಖೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ಎಲ್ಲರೂ ಈ ಮನೆಯಲ್ಲಿ ನೆಲೆಸಿದ್ದಾರೆ.
ಆಂಟಿಲಿಯಾ ಮನೆಗೆ ಪ್ರವೇಶಿಸುವ ಮೊದಲು ಮುಖೇಶ್ ಅಂಬಾನಿ ಕುಟುಂಬ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಮುಂಬೈನ ಭುಲೇಶ್ವರದಲ್ಲಿರುವ ಎರಡು ಬೆಡ್‌ರೂಮ್ ನ ಒಂದು ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಈ ಮನೆ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿದೆ. 400,000 ಚದರ ಅಡಿ ಕಟ್ಟಡಕ್ಕೆ ಆಂಟಿಲಿಯಾ ಎಂದು ಹೆಸರಿಸಲಾಗಿದೆ. ಈ ಕಟ್ಟಡವನ್ನು ನಿರ್ಮಾಣ ಮಾಡಲು 2006 ರಲ್ಲಿ ಪ್ರಾರಂಭಿಸಿ 2012 ರಲ್ಲಿ ಪೂರ್ಣಗೊಂಡಿತು. ಒಟ್ಟು 600 ಉದ್ಯೋಗಿಗಳು ಕಟ್ಟಡ ನಿರ್ಮಿಸಿದ್ದರು.
ಆಂಟಿಲಿಯಾದ ವಾಸ್ತುಶಿಲ್ಪದ ವಿನ್ಯಾಸವನ್ನು ಸೂರ್ಯ ಮತ್ತು ಕಮಲದ ಹೂವಿನಿಂದ ಪ್ರೇರಿತಗೊಂಡಿದೆ. ಈ ಕಟ್ಟಡ 8 ತೀವ್ರತೆಯ ಭೂಕಂಪವನ್ನು ಸಹ ತಡೆದುಕೊಳ್ಳಬಲ್ಲದು. ಆಂಟಿಲಿಯಾ ಕಟ್ಟಡದ ಮೊದಲ 6 ಮಹಡಿಗಳು ಪಾರ್ಕಿಂಗ್ಗಾಗಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಒಟ್ಟು 168 ಕಾರುಗಳನ್ನು ಪಾರ್ಕ್ ಮಾಡಬಹುದು. ಪಾರ್ಕಿಂಗ್ ಲಾಟ್ನ ಬಳಿಕ ಮಹಡಿಯಲ್ಲಿ 50 ಆಸನಗಳಿರುವ ಸಿನಿಮಾ ಹಾಲ್ ಇದೆ. ಇದರ ಮೇಲೆ ಹೊರಾಂಗಣ ಗಾರ್ಡನ್ ಇದೆ.
ಅಂಬಾನಿಯವರ ಆಂಟಿಲಿಯಾ ಮನೆಯಲ್ಲಿ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಲಿಫ್ಟ್ಗಳಿದ್ದು, ಒಟ್ಟು 9 ಲಿಫ್ಟ್ ಇದೆ. ಮನೆಯಲ್ಲಿ 1 ಸ್ಪಾ, ಸ್ನೋ ರೂಮ್, ಯೋಗ ಸ್ಟುಡಿಯೋ, ಐಸ್ ಕ್ರೀಂ ರೂಮ್, ದೇವಸ್ಥಾನ, ಮೂರು ಈಜುಕೊಳಗಳು ಮತ್ತು ಹೆಲಿಪ್ಯಾಡ್ ವ್ಯವಸ್ಥೆ ಇದೆ. ಕರಕುಶಲ ವಿನ್ಯಾಸಗಳನ್ನು ಒಳಗೊಂಡಂತೆ ವಿಶಿಷ್ಟವಾದ ಥೀಮ್ ನಲ್ಲಿದೆ. ಆಂಟಿಲಿಯಾ ಮನೆ, ಅಂದಾಜು 15,000 ಕೋಟಿ ಬೆಲೆ ಬಾಳುವ ಕಟ್ಟಡವಾಗಿದೆ.