ರಿಯಲ್ ಎಸ್ಟೇಟ್ ಗೆ ಬೂಸ್ಟರ್ ಡೋಸ್ ಅನ್ನೋ ಆಲೋಚನೆಯಲ್ಲಿ ಬಿಜೆಪಿ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿಬಿಟ್ಟಿತು. ಆದ್ರೆ ಕೃಷಿ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ. ಕೃಷಿಯಿಂದ ಎಷ್ಟೇ ಕೋಟಿ ಗಳಿಸಿದರೂ ಅದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧ ತೆಗೆದರೆ ಕೃಷಿ ಭೂಮಿ ಕಳ್ಳ ಕಾಕರ ಪಾಲಾಗುತ್ತದೆ. ಕರಾಳ ದಂಧೆಗಳಿಂದ ಗಳಿಸಿದ ಅಕ್ರಮ ಸಂಪತ್ತಿಗೆ ಕೃಷಿ ಆದಾಯದ ಬಣ್ಣ ಲೇಪಿಸುತ್ತಾರೆ ಎಂಬ ಕಿಂಚಿತ್ತು ಜ್ಞಾನ ಬಿಜೆಪಿ ಸರ್ಕಾರಕ್ಕೆ ಮತ್ತು ತಿದ್ದುಪಡಿ ಮಸೂದೆ ತಯಾರಿಸಿದ ಅಧಿಕಾರಿಗಳಿಗೆ ಇದ್ದಂತೆ ಕಾಣಲಿಲ್ಲ. ಹೀಗಾಗಿ ರಾಜ್ಯದಲ್ಲಿ ಕೃಷಿ ಭೂಮಿ ಕಾಳ ಧನ ವಹಿವಾಟಿಗೆ ಸ್ವರ್ಗವಾಗಿ ಬದಲಾಗಿದೆ. ಬಿಜೆಪಿ ರೈತರಿಗೆ ಮಾಡಿದ ಮಹಾ ದ್ರೋಹದಿಂದ ಆಗಿರುವ ಸಮಸ್ಯೆ ಅಸಲಿ ಚಿತ್ರಣ ಇಲ್ಲಿದೆ. ಓದಿ. ರೈತರಿಗೆ ತಲುಪಿಸಿ…
ಬೆಂಗಳೂರು, ಜ. 18 : ಕೃಷಿ ಭೂಮಿಯನ್ನು ಕೃಷಿಯೇತರರು ಖರೀದಿಗೆ ಅವಕಾಶ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕ್ಕೆ ತಿದ್ದುಪಡಿ ತಂದು ಎರಡು ವರ್ಷ ಆಗಿದೆ. ಕೃಷಿಯೇತರರು ಕೃಷಿ ಭೂಮಿ ಖರೀದಿಸಲು ತಿದ್ದುಪಡಿ ಮುಕ್ತ ಅವಕಾಶ ನೀಡಿದೆ. ಇದರಿಂದ ಕೃಷಿ ಭೂಮಿಯ ಬೆಲೆ ದುಪ್ಪಟ್ಟು ಏರಿದೆ. ಆದ್ರೆ ಈ ಕೃಷಿ ಭೂಮಿಯ ಹಿಂದೆ ಬ್ಲಾಕ್ ಅಂಡ್ ವೈಟ್ ದಂಧೆ ಶುರುವಾಗಿದೆ. ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಿಕೊಳ್ಳಲು ಕೃಷಿ ಭೂಮಿ ಸ್ವರ್ಗವಾಗಿದೆ!
ಹೀಗಾಗಿ ದೋ ನಂಬರ್ ದಂಧೆ ಮಾಡುವ ವ್ಯಾಪಾರಿಗಳು ಮಾರುಕಟ್ಟೆ ಬೆಲೆಗಿಂತಲೂ ದುಪ್ಪಟ್ಟು ಹಣ ಕೊಟ್ಟು ಕೃಷಿ ಭೂಮಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ವ್ಯಾಪಾರಿಗಳು ಕೃಷಿ ಭೂಮಿ ಖರೀದಿ ಬೆನ್ನಿಗೆ ಬಿದ್ದಿರುವ ಪರಿ ನೋಡಿದ್ರೆ, ಭವಿಷ್ಯದಲ್ಲಿ ಕರ್ನಾಟಕದ ಕೃಷಿ ಭೂಮಿ ಬ್ಲಾಕ್ ಮನಿ ದಂಧೆಯ ಸ್ವರ್ಗವಾಗಲಿದೆ. ಕೃಷಿ ಭೂಮಿಯೇ ಕಣ್ಮರೆಯಾಗುವ ಅಪಾಯ ಎದುರಾಗಿದೆ. ಕರ್ನಾಟಕ ಬಿಜೆಪಿ ಸರ್ಕಾರ ಮಾಡಿದ ಮಹಾ ಎಡವಟ್ಟಿನಿಂದ ಭವಿಷ್ಯದಲ್ಲಿ ಕರ್ನಾಟಕ ರೈತರು ದೊಡ್ಡ ಬೆಲೆ ತೆತ್ತಲಿದ್ದಾರೆ! ಕೃಷಿ ಭೂಮಿ ಖರೀದಿ ಮೂಲಕ ವ್ಯಾಪಾರಿಗಳು ತಮ್ಮ ಕಪ್ಪು ಹಣವನ್ನು ವೈಟ್ ಮನಿಯನ್ನಾಗಿ ಪರಿವರ್ತಿಸಿಕೊಂಡು ತೆರಿಗೆ ವಂಚಿಸುವ ಬಹುದೊಡ್ಡ ರಾಜ ಮಾರ್ಗವನ್ನು ಕಂಡುಕೊಂಡಿರುವ ಸಂಗತಿಯನ್ನು ಕಂದಾಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಏನಿದು 79A ಮತ್ತು 79B ರೂಲ್ :
ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರರು ಖರೀದಿ ಮಾಡಲು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ನಿರ್ಬಂಧ ವಿಧಿಸಿತ್ತು. ರೈತರ ಕೃಷಿ ಭೂಮಿ ಉಳಿಸುವ ಸದುದ್ದೇಶದಿಂದ ಈ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿ ಮಾಡಲಾಗಿತ್ತು. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕಲಂ 79 ಎ ಪ್ರಕಾರ ಕೃಷಿ ಭೂಮಿಯನ್ನು ಕೃಷಿಯೇತರ ಮೂಲದಿಂದ ಕನಿಷ್ಠ 25 ಲಕ್ಷ ರೂ. ವಾರ್ಷಿಕ ಆದಾಯ ಇರುವರು ಖರೀದಿ ಮಾಡುವುದನ್ನು ನಿರ್ಬಂಧಿಸಿತ್ತು. ಇದರ ಜತೆಗೆ 79 B ಪ್ರಕಾರ ಕೃಷಿಯೇತರರು ಕೃಷಿ ಭೂಮಿಯನ್ನು ಖರೀದಿ ಮಾಡುವಂತಿಲ್ಲ. ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಅಥವಾ ಕುಟುಂಬದಿಂದ ಕೃಷಿ ಭೂಮಿ ಬಂದಿದ್ದಲ್ಲಿ ಮಾತ್ರ ಕೃಷಿ ಭೂಮಿ ಖರೀದಿ ಮಾಡಬಹುದಿತ್ತು. ಈ ಎರಡು ಸೆಕ್ಷನ್ ಗಳಿಂದ ಕಾರ್ಪೋರೇಟ್ ಗಳು, ವ್ಯಾಪಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಕೃಷಿ ಭೂಮಿಯ ಖರೀದಿಯನ್ನು ನಿರ್ಬಂಧ ವಿಧಿಸಿತ್ತು. ಹೀಗಾಗಿ ಕೃಷಿ ಭೂಮಿಯ ಖರೀದಿಗೆ ಬಹುತೇಕರು ಮುಂದಾಗುತ್ತಿರಲಿಲ್ಲ. ಕೃಷಿ ಭೂಮಿಯನ್ನುಕೃಷಿಕರಷ್ಟೇ ಖರೀದಿಸಿ ಕೃಷಿ ಮಾಡಲು ಮಹತ್ವದ ಅವಕಾಶ ಕಲ್ಪಿಸಿತ್ತು.
79A ಮತ್ತು 79 B ಗೆ ತಿದ್ದುಪಡಿ ಮಾಡಿ ಎಡವಟ್ಟು:
ಕೃಷಿ ಭೂಮಿ ಕೃಷಿಯೇತರರ ಖರೀದಿಗೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79A ಮತ್ತು 79 B ಗೆ ಕರ್ನಾಟಕ ಬಿಜೆಪಿ ಸರ್ಕಾರ 2020 ಸೆಪ್ಟಂಬರ್ ನಲ್ಲಿ ತಿದ್ದುಪಡಿ ತಂದಿತು. ಈ ಬಿಲ್ ನ್ನು ವಿರೋಧ ಪಕ್ಷದವರ ವಿರೋಧದ ನಡುವೆಯೂ ಪಾಸ್ ಮಾಡಿತು. ಇದು ಬ್ಲಾಕ್ ಬಿಲ್ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಕೂಗಾಡಿದರೂ ಆಡಳಿತ ರೂಢ ಬಿಜೆಪಿ ಸರ್ಕಾರ ಕಿವಿಗೊಡಲಿಲ್ಲ. ಇದರ ಮುಂದಿನ ಸಾಧಕ ಬಾಧಕಗಳ ಬಗ್ಗೆ ಆಲೋಚನೆ ಮಾಡಿಲ್ಲ! ಅದರ ಪರಿಣಾಮ ಈಗ ಕರ್ನಾಟಕದಲ್ಲಿ ಕಾಣತೊಡಗಿದೆ.
ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ 1961
ಕಲಂ 79A ನಿಂದ ವಾರ್ಷಿಕ 25 ಲಕ್ಷ ರೂ. ಕೃಷಿಯೇತರ ಅದಾಯ ಹೊಂದಿರುವರೂ ಸಹ ಕೃಷಿ ಭೂಮಿಯನ್ನು ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿತು. ಕಲಂ 79 B ಕೃಷಿ ಭೂಮಿಯನ್ನು ಕೃಷಿಯೇತರರು ಖರೀದಿ ಮಾಡಲು ಅವಕಾಶ ಕೊಟ್ಟು, ಕೃಷಿ ಭೂಮಿಯನ್ನು ಕೃಷಿಯೇತರರು ಖರೀದಿಸಲು ಹಾಕಿದ್ದ ನಿರ್ಬಂಧವನ್ನು ತೆಗೆದು ಹಾಕಲಾಯಿತು. ಒಂದು ವೇಳೆ ಸುಳ್ಳು ಮಾಹಿತಿ ನೀಡಿ ಕೃಷಿ ಭೂಮಿ ಖರೀದಿ ಮಾಡುವರ ಮೇಲಿನ ಕ್ರಮದ ಬಗ್ಗೆ 79c ಬಗ್ಗೆ ಪ್ರಸ್ತಾಪಿಸಿತು. ಈ ಕಾಯ್ದೆ 2020 ಸೆಪ್ಟೆಂಬರ್ ನಿಂದ ಕರ್ನಾಟಕದಲ್ಲಿ ಜಾರಿಗೆ ಬಂದಿತು. ಇದರ ಜತೆಗೆ ಕೃಷಿ ಭೂಮಿ ಹೊಂದಬಹುದಾದ ಪ್ರಮಾಣದ ಬಗ್ಗೆಯೂ ಹಲವು ತಿದ್ದುಪಡಿ ಮಾಡಿತು.
ಬಿಜೆಪಿ ಸರ್ಕಾರ ಮಾಡಿದ ಈ ತಿದ್ದುಪಡಿಯಿಂದ ರೈತರ ಕೃಷಿ ಭೂಮಿ ಬೆಲೆ ಒಂದೇ ಸಲ ದುಪ್ಪಟ್ಟು ಅಯಿತು. ರಾಜ್ಯದೆಲ್ಲೆಡೆ ಕೃಷಿ ಭೂಮಿಗೆ ಬಹು ಬೇಡಿಕೆ ಸೃಷ್ಟಿಯಾಗಿರುವುದು ವಾಸ್ತವ. ಒಂದು ರೀತಿಯಲ್ಲಿ ಕೃಷಿ ಭೂಮಿಗೆ ದುಪ್ಪಟ್ಟು ಬೆಲೆ ಬಂದಿದ್ದು ಸಂತಸವೇ. ಅದ್ರೆ ಈ ತಿದ್ದುಪಡಿಯಿಂದಾಗಿ ರಾಜ್ಯದಲ್ಲಿ ಹೊಸ ದಂಧೆ ಶುರುವಾಗಿದೆ. ಇದು ಕೃಷಿ ಬದುಕಿಗೆ ಚರಮ ಗೀತೆ ಹಾಡುವ ಜತೆಗೆ ಭವಿಷ್ಯದಲ್ಲಿ ಕೃಷಿ ಆದಾಯಕ್ಕೂ ತೆರಿಗೆ ಬೀಳುವ ದುಸ್ಥಿತಿಗೆ ನಾಂದಿ ಹಾಡುವ ಗಂಭೀರ ಬೆಳವಣಿಗೆ ನಡೆದಿದೆ.
ಕೃಷಿ ಭೂಮಿ ಖರೀದಿ ಹಿಂದಿನ ಸತ್ಯ:
ಕರ್ನಾಟಕ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ, ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಗೆ ದಂಬಾಲು ಬಿದ್ದಿರುವರು ಅಧಿಕಾರಿಗಳು ಅಲ್ಲ. ರಾಜಕಾರಣಿಗಳೂ ಅಲ್ಲ. ಬದಲಿಗೆ ದೇಶದಲ್ಲಿ ತೆರಿಗೆ ವಂಚಿಸಿ ದೋ ನಂಬರ್ ದಂಧೆ ಮಾಡುತ್ತಿರುವ ವ್ಯಾಪಾರಿಗಳು. ಅಲ್ಯೂಮಿಲಿನಿಯಂ,ಸ್ಟೀಲ್, ಕಬ್ಬಿಣ ಸೇರಿದಂತೆ ವಿವಿಧ ವ್ಯಾಪಾರಿ ವರ್ಗದ ಜನರು ಮಾರುಕಟ್ಟೆ ಬೆಲೆಗಿಂತಲೂ ಇನ್ನೂ ಹೆಚ್ಚು ಬೆಲೆ ನೀಡಿ ರೈತರಿಂದ ಕೃಷಿ ಭೂಮಿ ಖರೀದಿ ಮಾಡುತ್ತಿದ್ದಾರೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಬಹುತೇಕ ವ್ಯಾಪಾರಿಗಳೇ ಕೃಷಿ ಭೂಮಿಯನ್ನು ತಮ್ಮ ಹೆಸರಿಗೆ ಖರೀದಿ ಮಾಡುತ್ತಿದ್ದಾರೆ. ಹಾಗಂತ ಯಾರೂ ಕೃಷಿ ಮಾಡಲು ಇವರು ಖರೀದಿ ಮಾಡಿಲ್ಲ. ಕಳೆದ ಎರಡು ವರ್ಷದಲ್ಲಿ ಮಾರ್ವಡಿಗಳು ಸೇರಿದಂತೆ ವ್ಯಾಪಾರಿ ವರ್ಗವೇ ಈ ಭೂಮಿಯನ್ನು ಖರೀದಿ ಮಾಡುತ್ತಿದ್ದಾರೆ. ರಾಜ್ಯದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಭೂಮಿ ಪರಭಾರೆ ದಾಖಲೆಗಳನ್ನು ಪರಿಶೀಲಿಸಿದರೆ ಈ ಸತ್ಯ ಗೊತ್ತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ರು.
ತೆರಿಗೆ ವಂಚಿಸಲು ಕೃಷಿ ಭೂಮಿ ಬಳಕೆ :
ದೇಶದಲ್ಲಿ ಈಗ ಜಿಎಸ್ ಟಿ ತೆರಿಗೆ ಪದ್ಧತಿ ಇದೆ. ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳುವುದು ಕಷ್ಟವಾಗಿ ಪರಿಣಮಿಸಿದೆ. ಕೃಷಿ ಭೂಮಿಯಿಂದ ಗಳಿಸುವ ಆದಾಯಕ್ಕೆ ತೆರಿಗೆ ಇಲ್ಲ! ಈ ಸತ್ಯ ಅರಿತಿರುವ ವ್ಯಾಪಾರಿಗಳು ಕೃಷಿ ಭೂಮಿ ಖರೀದಿ ಮಾಡಿ ಕೃಷಿ ಆದಾಯ ತೋರಿಸುತ್ತಿದ್ದಾರೆ. ತೆರಿಗೆ ವಂಚಿಸಲು ಕೃಷಿ ಭೂಮಿಯನ್ನೇ ದಾಳವಾಗಿ ಬಳಸುತ್ತಿದ್ದಾರೆ. ತೆರಿಗೆ ವಂಚಿಸಿ ಗಳಿಸುವ ಹಣವನ್ನು ರಕ್ಷಣೆ ಮಾಡಲು ಇದೀಗ ತೆರಿಗೆ ಇಲ್ಲದ ಕೃಷಿ ಆದಾಯ ಮೂಲ ತೋರಿಸುವ ಕಳ್ಳ ಹಾದಿ ಹಿಡಿದುಕೊಂಡಿದ್ದಾರೆ. ಕಪ್ಪು ದಂಧೆಯ ರಕ್ಷಣೆಗಾಗಿ ಕೃಷಿ ಭೂಮಿ ಆದಾಯ ಅಂತ ಲೆಕ್ಕ ತೋರಿಸುತ್ತಿದ್ದಾರೆ. ಹೀಗಾಗಿ ಕೆಲ ವ್ಯಾಪಾರಿಗಳು ಕೃಷಿ ಭೂಮಿಗೆ ದುಪ್ಪಟ್ಟು ಬೆಲೆ ಕೊಟ್ಟು ಕೃಷಿ ಭೂಮಿ ಖರೀದಿ ಮಾಡುತ್ತಿದ್ದಾರೆ. ಹಾಗಂತ ಖರೀದಿ ಮಾಡಿದ ಭೂಮಿಯಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡುತ್ತಿಲ್ಲ. ತರಕಾರಿ, ಕೃಷಿ ಉತ್ಪನ್ನ ಮಾರುಕಟ್ಟೆ ಗಳ ಲಿಂಕ್ ಇಟ್ಟುಕೊಂಡು ಕೊಟ್ಟಿ ಬಿಲ್ ಪಡೆದು ತೆರಿಗೆ ವಂಚಿಸಿ ಗಳಿಸಿದ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ತೋರಿಸಲು ಕೃಷಿ ಭೂಮಿಯನ್ನೇ ದಾಳವಾಗಿ ಬಳಸುತ್ತಿದ್ದಾರೆ.
ರೈತರು ಅಸಹಾಯಕರು:
ಅನಿಶ್ಚಿತ ಮಳೆ, ಬೆಲೆಯ ದೊಂಬರಾಟ, ಕೃಷಿ ಕಾರ್ಮಿಕರ ಕೊರತೆಯಿಂದ ಕೃಷಿ ಇವತ್ತು ದುಬಾರಿ ಕೆಲಸವಾಗಿ ಪರಿಣಮಿಸಿದೆ. ಎಕರೆ ಗಟ್ಟಲೆ ಭೂಮಿ ಇದ್ದರೂ ಕೃಷಿ ನಂಬಿ ಜೀವನ ಮಾಡುವುದೇ ದುಸ್ಸಾಹಸಮಯವಾಗಿದೆ. ಹೀಗಾಗಿ ರೈತರು ಇರುವ ಕೃಷಿ ಭೂಮಿ ಮಾರಾಟ ಮಾಡಲು ದುಂಬಾಲು ಬಿದ್ದಿದ್ದಾರೆ. ಈ ಸತ್ಯ ಅರಿತಿರುವ ವ್ಯಾಪಾರಿಗಳು ತಮ್ಮ ಅಕ್ರಮ ಗಳಿಕೆಯನ್ನು ಕೃಷಿ ಆದಾಯವನ್ನಾಗಿ ತೋರಿಸಲು ಕೃಷಿ ಭೂಮಿ ಖರೀದಿಗೆ ಬೆನ್ನು ಬಿದ್ದಿದ್ದಾರೆ. ಕಂದಾಯ ಅಧಿಕಾರಿಗಳು ಹೇಳುವ ಪ್ರಕಾರ ರಾಜ್ಯದಲ್ಲಿ ಇದೇ ರೀತಿ ಕೃಷಿ ಭೂಮಿ ಪರಭಾರೆ ನಡೆದರೆ ಮುಂದಿನ ಐದಾರು ವರ್ಷದಲ್ಲಿ ಕೃಷಿ ಮಾಡುವರೇ ಕಣ್ಮರೆಯಾಗುತ್ತಾರೆ. ಆಹಾರ ಭದ್ರತೆಗೆ ದೊಡ್ಡ ಪೆಟ್ಟಾಗಲಿದೆ. ಕೃಷಿ ಭೂಮಿ ಕೃಷಿಯೇತರರ ಖರೀದಿಗೆ ಅವಕಾಶ ಮಾಡಿಕೊಟ್ಟಿರುವುದು ದಂಧೆಗೆ ನಾಂದಿ ಹಾಡಿದೆ ಎಂದು ಕಂದಾಯ ಅಧಿಕಾರಿ ರೆವಿನ್ಯೂಫ್ಯಾಕ್ಟ್ಸ್ ಜತೆ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಎಡವಟ್ಟು: ಮೇಲ್ನೋಟಕ್ಕೆ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದ್ದು ಒಳ್ಳೆಯದು ಎಂಬ ಭಾವನೆ ಮೂಡಿತ್ತು. ಅದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಬಿಜೆಪಿ ಸರ್ಕಾರ ಅಧ್ಯಯನ ಮಾಡಿದಂತೆ ಕಾಣುತ್ತಿಲ್ಲ. ರಿಯಲ್ ಎಸ್ಟೇಟ್ ಗೆ ಬೂಸ್ಟರ್ ಡೋಸ್ ಅನ್ನೋ ಆಲೋಚನೆಯಲ್ಲಿ ಬಿಜೆಪಿ ಸರ್ಕಾರ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿಬಿಟ್ಟಿತು. ಆದ್ರೆ ಕೃಷಿ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ. ಕೃಷಿಯಿಂದ ಎಷ್ಟೇ ಕೋಟಿ ಗಳಿಸಿದರೂ ಅದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧ ತೆಗೆದರೆ ಕೃಷಿ ಭೂಮಿ ಕಳ್ಳ ಕಾಕರ ಪಾಲಾಗುತ್ತದೆ. ಕರಾಳ ದಂಧೆಗಳಿಂದ ಗಳಿಸಿದ ಅಕ್ರಮ ಸಂಪತ್ತಿಗೆ ಕೃಷಿ ಆದಾಯದ ಬಣ್ಣ ಲೇಪಿಸುತ್ತಾರೆ ಎಂಬ ಕಿಂಚಿತ್ತು ಜ್ಞಾನ ಬಿಜೆಪಿ ಸರ್ಕಾರಕ್ಕೆ ಮತ್ತು ತಿದ್ದುಪಡಿ ಮಸೂದೆ ತಯಾರಿಸಿದ ಅಧಿಕಾರಿಗಳಿಗೆ ಇದ್ದಂತೆ ಕಾಣಲಿಲ್ಲ. ಹೀಗಾಗಿ ರಾಜ್ಯದಲ್ಲಿ ಕೃಷಿ ಭೂಮಿ ಕಾಳ ಧನ ವಹಿವಾಟಿಗೆ ಸ್ವರ್ಗವಾಗಿ ಬದಲಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಸರ್ಕಾರ ಕೃಷಿ ಭೂಮಿ ಖರೀದಿ ಹಾಗೂ ಕೃಷಿ ಚಟುವಟಿಕೆ ನಿರ್ವಹಣಾ ಸೆಲ್ ರಚಿಸಬೇಕು.
ಪ್ರತಿ ಎಕರೆ ಕೃಷಿ ಭೂಮಿ ಕೃಷಿಯಾಗಿಯೇ ಬಳಕೆಯಾಗುತ್ತಿದೆಯಾ ? ಪರಭಾರೆ ಮಾಡಿದ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆಯಾ ? ಕೃಷಿ ಭೂಮಿ ಆದಾಯದ ಮೂಲ ಕುರಿತು ಪ್ರತ್ಯೇಕ ಸೆಲ್ ರಚಿಸಿ ಆಧುನಿಕ ತಂತ್ರಜ್ಞಾನ ನಿರ್ವಹಣೆ ಮಾಡಬೇಕು. ಕೃಷಿ ಭೂಮಿಯ ಪರಭಾರೆ ಮತ್ತು ಅದರ ಆದಾಯದ ಲೆಕ್ಕ ಇಡುವಂತಾಗಬೇಕು. ಕೃಷಿ ಮಾಡದೇ ಕೃಷಿ ಆದಾಯ ತೋರಿಸುವ ಕಳ್ಳ- ಕಾಕರ ವಿರುದ್ಧ ಕ್ರಿಮಿನಲ್ ದಾವೆ ಹೂಡಿ ಜೈಲಿಗೆ ಹಾಕುವಂತಹ ನಿಯಮಗಳನ್ನು ಸರ್ಕಾರ ತುರ್ತಾಗಿ ತರಬೇಕು. ತಪ್ಪಿದಲ್ಲಿ ಬಂಜರು ಭೂಮಿಯಲ್ಲಿ ಚಿನ್ನದ ಬೆಲೆ ಗಳಿಸಿದ ಲೆಕ್ಕ ತೋರಿಸಿ ದೋ ನಂಬರ್ ದಂಧೆಗಳಿಗೆ ಕೃಷಿ ಭೂಮಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲಾಗದು!