20.4 C
Bengaluru
Friday, December 27, 2024

ಸಿದ್ದರಾಮಯ್ಯರನ್ನ ಕಟ್ಟಿ ಹಾಕಲು ಬಿಜೆಪಿ ಪ್ಲಾನ್ ? ವರುಣಾದಲ್ಲಿ ಮಾಜಿ ಸಿಎಂ ವಿರುದ್ಧ ಸೋಮಣ್ಣ ಸ್ಪರ್ಧೆ!

ಬೆಂಗಳೂರು (ಏ.06): ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ವರುಣದಲ್ಲೇ ಕಟ್ಟಿಹಾಕಲು ಮುಂದಾಗಿರುವ ಬಿಜೆಪಿ ವರಿಷ್ಠರು ವಸತಿ ಸಚಿವ ವಿ.ಸೋಮಣ್ಣ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ಮುಂದಾಗಿದ್ದಾರೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ಪೈಪೋಟಿ ನೀಡಲು, ಬಿಜೆಪಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಸಿದ್ದರಾಮಯ್ಯ ವಿರುದ್ಧ ಸಚಿವ ವಿ.ಸೋಮಣ್ಣ ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಇದೇ ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ, ತಮ್ಮ ಕೊನೆಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ನಾಯಕನನ್ನು ಹಣಿಯಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದೆ.

ಈ ಮೊದಲು ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ವಿಜಯೇಂದ್ರ ಅವರನ್ನು ತಮ್ಮ ಸ್ವಕ್ಷೇತ್ರ ಶಿಕಾರಿಪುರದಿಂದ ಕಣಕ್ಕಿಳಿಸಲು ಬಯಸಿರುವ ಬಿಎಸ್ವೈ, ಈ ಕುರಿತು ಹೈಕಮಾಂಡ್ ಮನವೊಲಿಸುವಲ್ಲಿ ಸಫಲರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಇದೀಗ ಮತ್ತೋರ್ವ ಪ್ರಬಲ ಅಭ್ಯರ್ಥಿಯ ಹುಡುಕಾಟ ನಡೆಸುತ್ತಿದ್ದು, ವಸತಿ ಸಚಿವ ವಿ. ಸೋಮಣ್ಣ ಅವರತ್ತ ದೃಷ್ಟಿ ಹರಿಸಿದೆ. ಇದಕ್ಕೆ ವರುಣಾ ಕ್ಷೇತ್ರದಲ್ಲಿರುವ ಲಿಂಗಾಯತ ಸಮುದಾಯದ ಪ್ರಾಬಲ್ಯ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ವಿ. ಸೋಮಣ್ಣ, ವರುಣಾ ಕ್ಷೇತ್ರದ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಸಮರ್ಥರು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

‘ಬಿ.ಎಸ್. ಯಡಿಯೂರಪ್ಪ ಅವರ ಶಿಫಾರಸನ್ನು ಗಂಭೀರವಾಗಿ ಪರಿಗಣಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸೋಮಣ್ಣ ಅವರಿಗೆ ಕರೆ ಮಾಡಿ, ಸ್ಪರ್ಧೆಗೆ ಅಣಿಯಾಗಿ ಎಂದು ಸಲಹೆ ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

Related News

spot_img

Revenue Alerts

spot_img

News

spot_img