32.4 C
Bengaluru
Friday, April 18, 2025

ಸರ್ವೆ ಮಾರ್ಕ್ ಎಂದರೇನು ? ಇದರ ಉಪಯೋಗ ಏನು ಗೊತ್ತಾ ?

ಬೆಂಗಳೂರು, ಡಿ.09: ಯಾವುದೇ ಒಬ್ಬ ವ್ಯಕ್ತಿಯ ಜಮೀನಿನ ಗುರುತು ಕಂಡು ಹಿಡಿಯಲು ಸರ್ವೆ ದಾಖಲೆ ತುಂಬಾ ಮಹತ್ವ. ಪ್ರತಿ ಜಮೀನಿಗೂ ಒಂದೊಂದು ಸರ್ವೆ ನಂಬರ್ ನೀಡಲಾಗಿರುತ್ತದೆ. ಸರ್ವೆ ನಿರ್ವಹಣೆ ಮಾಡಲು ಕಂದಾಯ ಇಲಾಖೆಯಲ್ಲಿ ಪ್ರತ್ಯೇಕ ಇಲಾಖೆಯನ್ನೇ ರಚಿಸಲಾಗಿದೆ. ಮೋಜಿಣಿ ಅಥವಾ ಸರ್ವೆ ಇಲಾಖೆ ಎಂದೇ ಕರೆಯುತ್ತೇವೆ.

ಸರ್ವೆ ಕಾರ್ಯವನ್ನು ಸರ್ಕಾರವೇ ಮಾಡುತ್ತದೆ. ಜಮೀನುಗಳ ಮಾಲಿಕತ್ವಕ್ಕೆ ಸಂಬಂಧಿಸಿದಂತೆ ಒಡಕು ಉಂಟಾದರೆ ಸರ್ವೆ ಮೂಲಕವೇ ಪರಿಹಾರ ಕಂಡುಕೊಳ್ಳಲಾಗುತ್ತದೆ. ಸರ್ವೆ ಬ್ರಿಟೀಷರ ಕಾಲದಿಂದಲೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು.

ಸರ್ವೆ ಎಂದರೆ ಆಸ್ತಿಯ ಅಳತೆಯನ್ನು ಕಂಡು ಹಿಡಿಯುವುದು ಎಂದರ್ಥ. ಅಸ್ತಿಗಳನ್ನು ಸರ್ವೆ ಮೂಲಕ ಅಳತೆ ಮಾಡಿ ಅದಕ್ಕೆ ಚೆಕ್ಕು ಬಂದಿ ( ಬೌಂಡರಿ) ಗುರುತಿಸಿ ಅದನ್ನು ಸರ್ಕಾರಿ ದಾಖಲೆಗಳಲ್ಲಿ ನಿಗದಿ ಪಡಿಸುವ ಒಂದು ಕ್ರಮವಾಗಿದೆ.

ಸರ್ವೆ ನಂಬರ್ ಎಂದರೆ, ಜಮೀನಿನ ಒಂದು ಭಾಗಕ್ಕೆ ನೀಡಿರುವ ಗುರುತಿನ ಸಂಖ್ಯೆ. ಜಮೀನಿನ ಏರಿಯಾ, ಅಸೆಸ್‌ಮೆಂಟ್ ಹಾಗೂ ಇನ್ನಿತರ ಜಮೀನಿಗೆ ಸಂಬಂಧಪಟ್ಟ ವಿಷಯಗಳನ್ನು ಆ ಸರ್ವೆ ನಂಬರ್ ಭೂ ದಾಖಲೆಯಲ್ಲಿ ದಾಖಲಿಸಲಾಗುತ್ತದೆ. ಸರ್ವೆ ನಂಬರ್ ನಿ ಹಿಸ್ಸಾ ನಂಬರ್ ಎಂದರೆ, ಆ ಸರ್ವೆ ನಂಬರ್ ನ ಭಾಗವಾಗಿರುತ್ತದೆ. ಇದರ ಅಳತೆಯನ್ನು ಸಹ ಪ್ರತ್ಯೇಕವಾಗಿ ದಾಖಲಿಸಲಾಗುತ್ತದೆ. ಸರ್ವೆ ನಂಬರ್ ಭಾಗವಾಗಿ ಅದಕ್ಕೆ ಇನ್ನೊಂದು ನಂಬರ್ ನೀಡುವ ಕ್ರಮವನ್ನು ಹಿಸ್ಸಾ ನಂಬರ್ ಎಂದು ಕರೆಯುತ್ತಾರೆ.

ಸರ್ವೆ ಗುರುತು ಎಂದರೆ, ಒಂದು ಜಮೀನಿನ ಚಕ್ಕು ಬಂದಿ ನಿರ್ಣಯಿಸಲು ಹಾಕುವ ಒಂದು ಗುರತು. ಸಾಮಾನ್ಯವಾಗಿ ಕಲ್ಲನ್ನು ಸರ್ವೆ ಗುರುತನ್ನಾಗಿ ಬಳಸುತ್ತಾರೆ.   ಸರ್ವೆ ಮೂಲತಃ ಬ್ರಿಟೀಷರ ಆಳ್ವಿಕೆಯಲ್ಲಿ ಕಂದಾಯ ವಸೂಲಿ ಮಾಡಲು ಪರಿಚಯಿಸಿದ ಪದ್ದತಿ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಜಮೀನುಗಳ ಪ್ರಕಾರಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಭೂ ಕಂದಾಯ ನಿಗದಿ ಪಡಿಸುತ್ತಿದ್ದರು. ಸ್ವಾತಂತ್ರ್ಯದ ನಂತರವೂ ಸರ್ವೆ ಅಸ್ತಿತ್ವದಲ್ಲಿದ್ದು, ಭೂಮಿಯನ್ನು ತರಿ, ಬಾಗಾಯ್ತು, ಖುಷ್ಕಿ ಎಂದು ವಿಂಗಡಣೆ ಮಾಡಿದ್ದು, ಜಮೀನಿನ ಪ್ರಕಾರವಾಗಿ ತೆರಿಗೆಯನ್ನು ವಿಧಿಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.

ತರಿ ಎಂದರೆ, ನಿರಾವರಿ ಸೌಲಭ್ಯ ಇರುವ ಜಮೀನು. ಬಾಗಾಯ್ತು ಎಂದರೆ, ತೋಟ ಜಮೀನು. ಖುಷ್ಕಿ ಎಂದರೆ ಮಳೆ ಆಶ್ರಿತ ಬರ ಪೀಡಿತ ಪ್ರದೇಶ. ಸಾಮಾನ್ಯವಾಗಿ ಬಾಗಾಯ್ತು ಜಮೀನಿಗೆ ಹೆಚ್ಚಿನ ಕಂದಾಯ ವಿಧಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಗರೀಕರಣ ಪರಿಣಾಮ ನಗರಗಳಲ್ಲಿ ಎಲ್ಲಾ ಸ್ವರೂಪದ ಜಮೀನಿನ ಮೌಲ್ಯ ಹೆಚ್ಚಾಗಿರುತ್ತದೆ.

Related News

spot_img

Revenue Alerts

spot_img

News

spot_img