ಪಟ್ಟಣಗೆರೆ ಗ್ರಾಮದಲ್ಲಿರುವ ಸುಮಾರು 40 ಕೋಟಿ ಮೌಲ್ಯದ 3 ಎಕರೆ ಆಸ್ತಿ ತಮ್ಮದಾಗಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪದಡಿ ಬಿಬಿಎಂಪಿ ದ್ವೀತಿಯ ದರ್ಜೆ ಸಹಾಯಕ (ಎಸ್.ಡಿ.ಎ)ಸೇರಿದಂತೆ 5 ಜನರನ್ನು ಬಂಧಿಸುವಲ್ಲಿ ಬೆಂಗಳೂರಿನ ಕೇಂದ್ರ ವಿಭಾಗದ ಹಲಸೂರು ಗೇಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ದೂರುದಾರರಾದ ರಾಮಕೃಷ್ಣಯ್ಯ ರವರಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಸರ್ವೇ ನಂಬರ್ 68 ರಲ್ಲಿರುವ (ಹಳೇ ನಂ-10) 3 ಎಕರೆ ಆಸ್ತಿಯನ್ನು ವ್ಯವಸಾಯೇತರ ವಾಸದ ಉದ್ದೇಶಕ್ಕಾಗಿ ಬದಲಾಯಿಸಿ ಜಿಲ್ಲಾಧಿಕಾರಿಯವರು 1992 ರಲ್ಲಿ ಆದೇಶ ನೀಡಿದ್ದರು, ಮೇ 5 ರಂದು ಆಸ್ತಿಗೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿಗಳು ತಮ್ಮ ಜಾಗವೆಂದು ಗಲಾಟೆ ಮಾಡಿದ್ದರು. ಇದನ್ನು ಪ್ರಶ್ನಿಸಿದ ರಾಮಕೃಷ್ಣಯ್ಯ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಆರೋಪಿಗಳು ನಕಲಿ ಮರಣ ಪ್ರಮಾಣ ಪತ್ರ, ನಕಲಿ ಭೂ ಪರಿವರ್ತವನ ಪತ್ರ ಹಾಗೂ ಇತರೆ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಿಂದ ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಹಲಸೂರು ಗೇಟ್ ಪೊಲೀಸ್ ಠಾಣಾ ಮೊಕದ್ದಮೆ ಸಂಖ್ಯೆ:-285/2022 ರಂತೆ ದೂರು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿತ್ತು.
ತನಿಖೆಯನ್ನು ಕೈಗೊಂಡಿದ್ದ ಪಿ.ಎಸ್.ಐ ಶ್ರೀ.ಕುಮಾರ್ ಹಾಗೂ ಅವರ ತಂಡ ರಾಜರಾಜೇಶ್ವರಿನಗರ ಬಿಬಿಎಂಪಿ ಕಚೇರಿಯ ಎಸ್‌ಡಿಎ ನವೀನ್, ಕೃತ್ಯಕ್ಕೆ ಸಹಕರಿಸಿದ್ದ ಜನಾರ್ಧನ್, ನಾರಾಯಣ ಸ್ವಾಮಿ ಹಾಗೂ ಆಸ್ತಿಯನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿಕೊಂಡು ನಿವೇಶನ ಅಭಿವೃದ್ದಿ ಪಡಿಸಲು ಮುಂದಾಗಿದ್ದ ಟ್ರಿಂಕೋ ಇನ್‌ಪ್ರಾ ಪ್ರೈವೇಟ್ ಲಿಮಿಟೆಡ್‌ನ ಎಂಎಸ್. ಪ್ರಸಾದ್, ಎಂಎಸ್.ದಿವ್ಯ ರವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆಯನ್ನು ಮುಂದುವರೆಸಿದ್ದು ಉಳಿದ ಆರೋಪಿಗಳನ್ನು ಸಹ ಪತ್ತೆ ಮಾಡಲಾಗುವುದೆಂದು ಹಲಸೂರು ಗೇಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಜಗದೀಶ್ ರವರು ತಿಳಿಸಿರುತ್ತಾರೆ.