21.1 C
Bengaluru
Monday, July 8, 2024

ಅಮಾಲ್ಗೇಮೇಶನ್ ಖಾತೆ ಮಾಡೋಕೆ 4 ಲಕ್ಷ ಲಂಚ: ಬಿಬಿಎಂಪಿ ಜಂಟಿ ಆಯುಕ್ತ ಲೋಕಾ ಬಲೆಗೆ : ಅಮಾಲ್ಗೇಮೇಶನ್ ಅಂದ್ರೆ ಏನು?

ಬೆಂಗಳೂರು, ಸೆ. 14: ಎರಡು ಆಸ್ತಿಗಳನ್ನು ಒಗ್ಗೂಡಿಸಿ ಅಮಾಲ್ಗೇಮೇಶನ್ ಖಾತೆ ಮಾಡಿಕೋಡೋಕೆ ನಾಲ್ಕು ಲಕ್ಷ ರೂ. ಲಂಚ ಸ್ವೀಕರಿಸಿ ಬಿಬಿಎಂಪಿ ಜಂಟಿ ಆಯುಕ್ತ ಶ್ರೀನಿವಾಸ್ ಆತನ ಸಹಾಯಕ ಉಮೇಶ್ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ನಾಗರಬಾವಿ ನಿವಾಸಿ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ಕು ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಈ ಮೂಲಕ ಅಮಾಲ್ಗಮೇಶನ್ ಖಾತೆ ಕರಾಳ ದಂಧೆಯನ್ನು ಲೋಕಾಯುಕ್ತ ಪೊಲೀಸರು ಬಯಲಿಗೆ ಎಳೆದಿದ್ದಾರೆ.
ಅಚ್ಚರಿ ಏನೆಂದರೆ, ಲಂಚಕ್ಕೆ ಬೇಡಿಕೆ ಇಟ್ಟಿರುವುದು ಬರೋಬ್ಬರಿ 12 ಲಕ್ಷ ರೂ.ಗಳು. ಮುಂಗಡವಾಗಿ ನಾಲ್ಕು ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಕಾನೂನು ಬದ್ಧವಾಗಿ ಐದು ಪೈಸೆ ಲಂಚ ಪಡೆಯದೇ ಮಾಡಿಕೊಬೇಕಾದ ಅಮಾಲ್ಗೇಮೇಶನ್ ಖಾತೆಗೆ ಈ ಪರಿ ಸುಲಿಗೆ ಮಾಡಲು ಹೋಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಇನ್ನು ದುಬಾರಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಶ್ರೀನಿವಾಸ್ ಅವರ ಆಸ್ತಿ ವಿವರಗಳನ್ನು ಲೋಕಾಯುಕ್ತ ಪೊಲೀಸರು ಜಾಲಾಡುತ್ತಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗ ಮಾಹಿತಿ ದೊರೆತ ಕೂಡಲೇ ಅವರ ಮನೆ ಮೇಲೆ ದಾಳಿ ಮಾಡಿ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿದರೂ ಅಚ್ಚರಿ ಪಡಬೇಕಿಲ್ಲ. ಎಸಿಬಿ ರದ್ದಾದ ಬಳಿಕ ದೊಡ್ಡ ಬೇಟೆಯಾಡಿರುವ ಲೋಕಾಯುಕ್ತ ಪೊಲೀಸರು ದುಬಾರಿ ಲಂಚ ಪ್ರಕರಣದಲ್ಲಿ ಕೆಎಎಸ್ ಅಧಿಕಾರಿಯನ್ನೇ ಬಂಧಿಸಿದ್ದಾರೆ.

ಅಮಾಲ್ಗೇಮೇಶನ್ ಎಂದರೆ ಏನು ? ಅಮಾಲ್ಗೇಶನ್ ಎಂದರೆ ಸೇರಿಸುವುದು ಅಥವಾ ಒಟ್ಟಿಗೂಡಿಸುವುದು ಎಂದರ್ಥ. ಅಮಾಲ್ಗೇಮೇಶನ್ ಎಂಬುದರ ಬಗ್ಗೆ ಕಂಪನಿ ಆಕ್ಟ್ ನಲ್ಲಿ ಉಲ್ಲೇಖಿಸಲಾಗಿದೆ . ಒಂದು ಕಂಪನಿಯನ್ನು ಮತ್ತೊಂದು ಕಂಪನಿ ಜತೆ ವಿಲೀನಗೊಳಿಸುವುದನ್ನು ಅಮಾಲ್ಗೇಮೇಶನ್ ಎಂದು ಕರೆಯಲಾಗುತ್ತದೆ. ಅಥವಾ ಒಂದು ಸ್ಥಿರ ಸ್ವತ್ತನ್ನು ( ಸೈಟ್ , ಆಸ್ತಿ) ಮತ್ತೊಂದು ಸ್ಥಿರ ಸ್ವತ್ತಿನ ಜತೆ ಒಂದು ಗೂಡಿಸುವುದಕ್ಕೆ ಕುಡ ಅಮಾಲ್ಗಮೇಶನ್ ಎಂದು ಕರೆಯಬಹುದು.

ಅಮಾಲ್ಗೇಮೇಶನ್ ಬಗ್ಗೆ ಕಂಪನಿ ಕಾಯ್ದೆ ಮತ್ತು ಭೂಮಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಉಲ್ಲೇಖಿಸಲಾಗಿದೆ. ಅಮಾಲ್ಗಮೇಶನ್ ಪ್ರಕಾರ ಎರಡು ರೋಗಗ್ರಸ್ಥ ಕಂಪನಿ, ಅಥವಾ ಒಂದು ಅಭಿವೃದ್ಧಿ ಆಗಿರುವ ಅಥವಾ ಇನ್ನೊಂದು ರೋಗಗ್ರಸ್ಥ ಕಂಪನಿ ಅಥವಾ ಸಣ್ಣ ಸ್ಥಿರ ಸ್ವತ್ತು ಅಥವಾ ಎರಡೂ ಸಣ್ಣ ಅಥವಾ ಹೆಚ್ಚು ಸ್ಥಿರ ಸ್ವತ್ತುಗಳನ್ನು ಒಟ್ಟು ಗೂಡಿಸುವುದು ಇದರ ಉದ್ದೇಶ. ಒಟ್ಟು ಗೂಡಿಸಿದ ನಂತರ, ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಪಡಿಸದ ಅಪಾರ್ಟ್ಮೆಂಟ್, ನಿವೇಶನ ಇನ್ನಿತರ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಅಮಾಲ್ಗಮೇಶನ್ ಮಾಡುತ್ತಾರೆ. ಅಮಾಲ್ಗೇಶನ್ ಮಾಡಿದ ನಂತರ, ಸಂಬಂಧ ಪಟ್ಟ ಕಂದಾಯ ಕಚೇರಿಗಳಲ್ಲಿ ಖಾತಾ, ಹಾಗೂ ಯೋಜನಾ ನಿರ್ದೇಶಕ ಕಚೇರಿಯಲ್ಲಿ ಪ್ಲಾನ್ ಪಡೆಯಲು ಸಹಾಯವಾಗುತ್ತದೆ.
ಕಂಪನಿ ಕಾಯ್ದೆ ಪ್ರಕಾರ ಎರಡು ಕಂಪನಿಗಳ ವಿಲೀನವನ್ನು ರಿಜಿಸ್ಟ್ರಾರ್ ಆಫ್ ಕಂಪನೀಸ್ ಇವರಲ್ಲಿ ಅಮಾಲ್ಗಮೇಶನ್ ಮಾಡಿಸಬೇಕು. ಕಂಪನಿಗಳ ಸ್ಥಿರ ಸ್ವತ್ತುಗಳನ್ನು ನೋಂದಣಿ ಕಚೇರಿಗಳಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ.

ಅಮಾಲ್ಗಮೇಶನ್ ಪ್ರಕ್ರಿಯೆ : ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಸೇಲ್ ಡೀಡ್ ಮಾದರಿಯಲ್ಲಿ ಅಮಾಲ್ಗಮೇಶನ್ ಡೀಡ್ ಮಾಡಿ ಸ್ವತ್ತಿಗೆ ಸಂಬಂದಿಸಿದ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗುತ್ತದೆ. ನೊಂದಣಿ ಮಾಡಿದ ಆಸ್ತಿಯನ್ನು ಖಾತೆ ಮಾಡಲು ಸಂಬಂಧಪಟ್ಟ ಕಂದಾಯ ಅಧಿಕಾರಿಗಳ ಕಚೇರಿಗೆ ಪಾರ್ಟಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಭೂ ಕಂದಾಯ ಕಾಯ್ದೆ ಪ್ರಕಾರ, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾದ ಆಸ್ತಿಯನ್ನು ಕಂದಾಯ ಅಧಿಕಾರಿಗಳು ಕಡ್ಡಾಯವಾಗಿ ಖಾತೆ ಮಾಡಿಕೊಡಬೇಕು. ಅಮಾಲ್ಗಮೇಶನ್ ಮಾಡಿಸಿದ ನಂತರ ದಾಖಲೆಗಳು ಜಂಟಿಯಾಗಿ ಮುಂದುವರೆಯುತ್ತವೆ. ಅಮಾಲ್ಗಮೇಶನ್ ಖಾತೆಯನ್ನು ಆಸ್ತಿಯ ಮೌಲ್ಯ ಆಧರಿಸಿ ಸರ್ಕಾರಿ ಶುಲ್ಕ ಪಾವತಿಸಿ ಮಾಡಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ಸ್ಥಿರ ಸ್ವತ್ತುಗಳಿಗೆ ಸಂಬಂಧಿಸಿದಂತೆ ಅಮಾಲ್ಗಮೇಶನ್ ಖಾತೆ ಮಾಡಿಸಬೇಕಾದರೆ ಸಂಬಂಧಪಟ್ಟ ಬಿಬಿಎಂಪಿ ಕಂದಾಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರಿ ಶುಲ್ಕ ಪಾವತಿಸಿ ಮಾಡಿಸಿಕೊಳ್ಳಬೇಕು.

Related News

spot_img

Revenue Alerts

spot_img

News

spot_img