28.2 C
Bengaluru
Wednesday, July 3, 2024

ರೇರಾದಲ್ಲಿ ನೋಂದಣಿ ಇಲ್ಲದ 1000 ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳಿವೆ.. ಹುಷಾರ್!

ಬೆಂಗಳೂರು, ನ. 21: ರಿಯಲ್ ಎಸ್ಟೇಟ್ ನಲ್ಲಿ ಆಗುವ ಅಕ್ರಮ ಮತ್ತು ವಂಚನೆ ತಪ್ಪಿಸಲು ಹಾಗೂ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ರಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಯಾ ರಾಜ್ಯಗಳು ಪ್ರತ್ಯೇಕ ಕಾಯ್ದೆಯನ್ನು ರೂಪಿಸಿವೆ. ಇಷ್ಟಾಗಿಯೂ ರಾಜ್ಯದಲ್ಲಿ ಪ್ರತಿಷ್ಠಿತ ಬಿಲ್ಡರ್ ಗಳು ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿವೆ.

ಯಾವುದೇ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನ್ನು ಕಂಪನಿಗಳು ಕಡ್ಡಾಯವಾಗಿ ರೇರಾದಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿ ಮಾಡಿಸದ ರಿಯಲ್ ಎಸ್ಟೇಟ್ ಕಂಪನಿಗಳ ಪ್ರಾಜೆಕ್ಟ್ ಗಳಲ್ಲಿ ಸಾರ್ವಜನಿಕರು ಪ್ಲಾಟ್ ಅಥವಾ ನಿವೇಶನ ಖರೀದಿ ಮಾಡುವುದು ಒಳ್ಳೆಯದಲ್ಲ ಯಾಕೆಂದರೆ, ರೇರಾದಲ್ಲಿ ನೋಂದಣಿಯಾಗದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಿಂದ ಅನ್ಯಾಯಕ್ಕೆ ಒಳಗಾದರೆ, ರೇರಾ ಅಡಿಯಲ್ಲಿ ನ್ಯಾಯ ಪಡೆಯಲು ಅಸಾಧ್ಯ. ಹೀಗಾಗಿ ನೋಂದಣಿಯಲ್ಲದ ರಿಯಲ್ ಎಸ್ಟೇಟ್ ಕಂಪನಿಗಳ ಪ್ರಾಜೆಕ್ಟ್ ಗಳಲ್ಲಿ ವಹಿವಾಟು ನಡೆಸಬಾರದು ಎಂದು ಕರ್ನಾಟಕ ರೇರಾ ಪದೇ ಪದೇ ಎಚ್ಚರಿಕೆ ನೀಡುತ್ತಲೇ ಬಂದಿದೆ.

1 ಸಾವಿರ ಪ್ರಾಜೆಕ್ಟ್ ನೋಂದಣಿ ಆಗಿಲ್ಲ: ಕರ್ನಾಟಕದಲ್ಲಿ ಬರೋಬ್ಬರಿ 1051 ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳು ಕರ್ನಾಟಕ ರೇರಾದಲ್ಲಿ ನೋಂದಣಿ ಆಗಿಲ್ಲ. ರೇರಾ ನಿಯಮದ ಪ್ರಕಾರ ಪ್ರಾಜೆಕ್ಟ್ ನ್ನು ಮೂರು ತಿಂಗಳ ಒಳಗಾಗಿ ನೋಂದಣಿ ಮಾಡಿಸಬೇಕು. ಇಂತಹ ನೋಂದಣಿಯಾಗದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ಹೂಡಿಕೆ ಮಾಡಬಾರದು ಎಂದು ರೇರಾ ಸೂಚಿಸಿದೆ. ಒಂದು ವೇಳೆ ಹೂಡಿಕೆ ಮಾಡಿ ಮೋಸ ಹೋದರೆ, ರೇರಾ ಹೊಣೆಯಲ್ಲ ಎಂದು ಸೂಚಿಸಿದೆ. ರೇರಾದಲ್ಲಿ ನೋಂದಣಿ ಅಗದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದ್ದಾರೆ.

1051 ನೋಂದಣಿ ಆಗದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ ಗಳ ಬಗ್ಗೆ ಕರ್ನಾಟಕ ರೇರಾ ತನಿಖೆ ನಡೆಸುತ್ತಿದೆ. ಅಚ್ಚರಿ ಏನೆಂದರೆ ರೇರಾ ಸಾರ್ವಜನಿಕರ ದೂರು ಆಧರಿಸಿ ಕೊಟ್ಟಿರುವ ನೋಟಿಸ್ ಗಳಿಗೆ ರಿಯಲ್ ಎಸ್ಟೇಟ್ ಕಂಪನಿಗಳು ಸೊಪ್ಪು ಹಾಕಿಲ್ಲ. ಉತ್ತರ ಸಹ ನೀಡಿಲ್ಲ. ಹೀಗಾಗಿ ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮುನ್ನ ಅಥವಾ ಪ್ಲಾಟ್, ನಿವೇಶನ ಖರೀದಿ ಮಾಡುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ರೇರಾದಲ್ಲಿ ನೋಂದಣಿ ಆಗದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡಿ ಮೋಸ ಹೋದರೆ ರೇರಾದಲ್ಲಿ ನ್ಯಾಯ ಪಡೆಯಲು ಅಸಾಧ್ಯ. ಗ್ರಾಹಕ ವೇದಿಕೆ ನ್ಯಾಯಾಲಯ ಅಥವಾ ನ್ಯಾಯಾಲಯದಲ್ಲಿ ಮೊರೆ ಹೋಗಬೇಕು. ನ್ಯಾಯಾಲಯದಲ್ಲಿ ಕಾನೂನು ಸಮರ ಮಾಡಿ ನ್ಯಾಯ ಪಡೆಯಬೇಕು. ಹೀಗಾಗಿ ರೇರಾದಲ್ಲಿ ನೋಂದಣಿ ಆಗದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ.

ಕರ್ನಾಟಕ ರೇರಾದಲ್ಲಿ ನೋಂದಣಿ ಮಾಡಿಸದೇ ಇರುವ ಪಟ್ಟಿಯಲ್ಲಿ ಮ್ಯಾಕ್ಸ್ ವರ್ಥ ರಿಯಾಲಿಟಿ ಇಂಡಿಯಾ ಪ್ರೆ. ಲಿ, ನಿತೇಶ್ ಎಸ್ಟೇಟ್ ಪ್ರೆ. ಲಿ. ಬಿಎಸ್‌ಎನ್ಎಲ್ ವೆಲ್‌ಬೇರ್ ಹೌಸಿಂಗ್ ಸೊಸೈಟಿ, ಎಂ. ಲೋಗನಾಥನ್, ಬಿಡಿಎ ಪಂಚವಟಿ ಅಪಾರ್ಟ್‌ಮೆಂಟ್, ಕೆನೋಪಿ ಎಸ್ಟೇಟ್ ಪ್ರೆ. ಲಿ. ಶೋಭಾ ಸಿಟಿ ಕಾಸಾ ಸೇರೆನಿಟಾ ರಾಧಾಕೃಷ್ಣನ್, ಮಾರ್ವಲ್ ಒಮೆಗಾ ಬಿಲ್ಡರ್, ಗೋದ್ರೇಜ್ ಪ್ರಾ ಲಿ. ಶೋಭಾ ಲಿ. ಟ್ರಿಂಕೋ ಇನ್‌ಫ್ರಾ ಲಿ ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಬಿಲ್ಡರ್ ಕಂಪನಿಗಳ ವಿರುದ್ಧ ರೇರಾದಲ್ಲಿ ದೂರುಗಳು ದಾಖಲಾಗಿವೆ.

ರೇರಾದಿಂದ ತನಿಖೆ: ಯಾವುದೇ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಅನುಷ್ಠಾನ ಸಂಬಂಧ ಸಿಸಿ ಇಲ್ಲದಿದ್ದರೆ ರೇರಾ ಅಡಿಯಲ್ಲಿ ಮೂರು ತಿಂಗಳ ಒಳಗೆ ರೇರಾದಲ್ಲಿನೋಂದಣಿ ಮಾಡಬೇಕು. ರೇರಾ ಒಂದು ತಿಂಗಳ ಒಳಗಾಗಿ ಅಂಗೀಕರಿಸಬೇಕು ಇಲ್ಲವೇ ತಿರಸ್ಕರಿಸಬೇಕು. ಈ ನಿಯಮ ಪಾಲಿಸದೇ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಅನುಷ್ಠಾನ ಗೊಳಿಸಿದರೆ ಅಂತಹ ಪ್ರಾಜೆಕ್ಟ್ ಬಗ್ಗೆ ರೇರಾದಲ್ಲಿ ದೂರು ದಾಖಲಿಸಬಹುದು. ನೋಂದಣಿಯಾಗದ ಪ್ರಾಜೆಕ್ಟ್ ಗಳ ಬಗ್ಗೆ ರೇರಾ ತನಿಖೆ ನಡೆಸಿಇ ತಪ್ಪಿತಸ್ಥ ಬಿಲ್ಡರ್ ಕಂಪನಿ ವಿರುದ್ಧ ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶವಿದೆ.

ಯಾವುದೇ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನ ಪ್ರಗತಿ ಬಗ್ಗೆ ಕಾಲ ಕಾಲಕ್ಕೆ ಗ್ರಾಹಕರಿಗೆ ಕಂಪನಿ ಮಾಹಿತಿ ನೀಡಬೇಕು. ಒಂದು ವೇಳೆ ನೀಡದೇ ವಿಳಂಬ ಮಾಡಿದರೆ, ಅಥವಾ ಹೇಳಿದ ಸಮಯದೊಳಗೆ ನಿವೇಶನ, ಪ್ಲಾಟ್ ನೀಡದಿದ್ದರೆ ಅಂತಹ ಕಂಪನಿ ವಿರುದ್ಧ ಗ್ರಾಹಕರು ರೇರಾಗೆ ದೂರು ಕೊಡಬಹುದು. ನ್ಯಾಯಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವ ರೇರಾ ತಪ್ಪಿತಸ್ಥ ಕಂಪನಿ ವಿರುದ್ಧ ದಾವೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತದೆ. ಗ್ರಾಹಕರಿಗೆ ಮೋಸ ಮಾಡಿರುವುದು , ಅನ್ಯಾಯ ಮಾಡಿರುವುದು ಇಲ್ಲವೇ ಕರಾರು ಉಲ್ಲಂಘನೆ ಮಾಡಿರುವುದು ಗೊತ್ತಾದರೆ ಅಂತಹ ಕಂಪನಿ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತದೆ. ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ ಸೆಕ್ಷನ್ 31 ಎ ಅಡಿಯಲ್ಲಿ ದೂರು ನೀಡಬಹುದು.

ಒಂದು ವೇಳೆ ರೇರಾದಲ್ಲಿ ನೋಂದಣಿ ಮಾಡದ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ವಹಿವಾಟು ನಡೆಸಿದ ಸಂದರ್ಭದಲ್ಲಿ ಗ್ರಾಹಕರು ನ್ಯಾಯಾಲಯದಲ್ಲಿ ದೂರು ದಾಖಲಿಸಬೇಕಾಗುತ್ತದೆ. ನ್ಯಾಯಾಲಯದ ಸೂಚನೆ ಮೇರೆಗೆ ರೇರಾ ತನಿಖೆ ನಡೆಸಬಹುದು. ಇಲ್ಲವೇ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥ ಕಂಪನಿ ವಿರುದ್ಧ ಕ್ರಮ ಜರುಗಿಸಬಹುದು.

ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ನಲ್ಲಿ ಹೇಳಿದ ಕಾಲ ಮಿತಿಯಲ್ಲಿ ಪ್ಲಾಟ್ ಅಥವಾ ನಿವೇಶನ ನೀಡದಿದ್ದರೆ, ಅಥವಾ ಸುಳ್ಳು ಜಾಹಿರಾತು ನೀಡಿದರೆ, ಮುಂಗಡ ಹಣ ಪಡೆಯುವುದರಲ್ಲಿ ಶೇ. ೧೦ ಕ್ಕಿಂತಲೂ ಹೆಚ್ಚು ಹಣ ಪಡೆದಿದ್ದರೆ, ಅಂತಹ ಪ್ರಾಜೆಕ್ಟ್ ಗಳ ಬಗ್ಗೆ ಸಾರ್ವಜನಿಕರು ದೂರು ನೀಡಬಹುದು.

Related News

spot_img

Revenue Alerts

spot_img

News

spot_img