28.2 C
Bengaluru
Wednesday, July 3, 2024

ರೂ. 2,000 ನೋಟು ಹಿಂಪಡೆತ: ಕರೆನ್ಸಿ ಅಮಾನ್ಯೀಕರಣವಲ್ಲ ಎಂದ ಆರ್ಬಿಐ; ಆದೇಶ ಕಾಯ್ದಿರಿಸಿದ ದೆಹಲಿ ಹೈಕೋರ್ಟ್.

ಭಾರತೀಯ ರಿಸರ್ವ್ ಬ್ಯಾಂಕ್ ₹ 2,000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ಕಾಯ್ದಿರಿಸಿದೆ.

ಆರ್ಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಪರಾಗ್ ತ್ರಿಪಾಠಿ , ₹2,000 ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದು ಆರ್ಬಿಐನ ಶಾಸನಬದ್ಧ ಕ್ರಮವೇ ವಿನಾ ಅಮಾನ್ಯೀಕರಣವಲ್ಲ ಎಂದರು.

ತಾನು ಈ ಸಂಬಂಧ ಸೂಕ್ತ ಆದೇಶ ಹೊರಡಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಯಲ್ಲಿ ಆರ್ಬಿಐ ಯಾವುದೇ ರಿಕ್ವಿಸಿಷನ್ ಸ್ಲಿಪ್ ಮತ್ತು ಗುರುತಿನ ಪುರಾವೆಗಳನ್ನು ಪಡೆಯದೆ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿರುವುದು ಮನಸೋಇಚ್ಛೆಯಿಂದ ಕೂಡಿದ್ದು ಅತಾರ್ಕಿಕವಾದುದಾಗಿದೆ ಎಂದು ವಾದಿಸಲಾಗಿತ್ತು.

“ಚಲಾವಣೆಯಲ್ಲಿರುವ ₹ 2000 ಮುಖಬೆಲೆಯ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯ ₹ 6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಕುಸಿದಿದೆ ಎಂದು ಆರ್ಬಿಐ ಪ್ಯಾರಾ-2 ರಲ್ಲಿ ಒಪ್ಪಿಕೊಂಡಿದೆ ಎಂದು ಹೇಳುವುದು ಅನಿವಾರ್ಯವಾಗಿದೆ. ಇದರಲ್ಲಿ ₹ 3.11 ಲಕ್ಷ ಕೋಟಿ ಮೊತ್ತ ವ್ಯಕ್ತಿಗಳ ಲಾಕರ್ನಲ್ಲಿ ಉಳಿದಿರಬಹುದು ಇಲ್ಲವೇ ಪ್ರತ್ಯೇಕತಾವಾದಿಗಳು, ಭಯೋತ್ಪಾದಕರು, ಮಾವೋವಾದಿಗಳು, ಡ್ರಗ್ ಸ್ಮಗ್ಲರ್ಗಳು, ಗಣಿ ಮಾಫಿಯಾಗಳು ಮತ್ತು ಭ್ರಷ್ಟರ ಬಳಿ ಸಂಗ್ರಹಗೊಂಡಿರಬುದು” ಎಂದು ಅರ್ಜಿ ಆತಂಕ ವ್ಯಕ್ತಪಡಿಸಿದೆ.

ಉಪಾಧ್ಯಾಯ ಅವರು, ತಾವು ಇಡಿಯಾಗಿ ಆರ್ಬಿಐನ ಅಧಿಸೂಚನೆ ಪ್ರಶ್ನಿಸಿಲ್ಲ. ಬದಲಿಗೆ ಯಾವುದೇ ಗುರುತಿನ ಪುರಾವೆಗಳಿಲ್ಲದೆ ಕರೆನ್ಸಿ ವಿನಿಮಯಕ್ಕೆ ಅವಕಾಶ ನೀಡುವುದಕ್ಕೆ ಇರುವ ನಿಬಂಧನೆ ಉಲ್ಲಂಘಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಮೊದಲ ಬಾರಿಗೆ ಜನರು ಹಣದೊಂದಿಗೆ ಬ್ಯಾಂಕ್ಗಳಿಗೆ ಬಂದು ಅದನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ, (ಇದರಿಂದ) ಪಾತಕಿಗಳು ಮತ್ತು ಮಾಫಿಯಾ ದೊರೆಗಳು ಅವರ ಹಿಂಬಾಲಕರು ತಮ್ಮ ಹಣ ಬದಲಾಯಿಸಿಕೊಳ್ಳಬಹುದಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಮೇ 19ರಂದು ₹ 2000 ನೋಟುಗಳನ್ನು ಹಿಂತೆಗೆದುಕೊಳ್ಳುವ ಸೂಚನೆ ನೀಡಿದ್ದರೂ ಕರೆನ್ಸಿ ಕಾನೂನುಬದ್ಧವಾಗಿ ಮುಂದುವರಿಯಲಿದೆ ಎಂದು ಆರ್ಬಿಐ ಹೇಳಿತ್ತು. ತಮ್ಮ ಬ್ಯಾಂಕ್ ಖಾತೆಗಳಿಗೆ ₹ 2000 ಮುಖಬೆಲೆಯ ನೋಟುಗಳನ್ನು ಜಮಾ ಮಾಡಲು ಇಲ್ಲವೇ ಬ್ಯಾಂಕ್ ಶಾಖೆಗಳಲ್ಲಿ ಇತರೆ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಆರ್ಬಿಐ ಜನರಿಗೆ ಸಲಹೆ ನೀಡಿತ್ತು.

Related News

spot_img

Revenue Alerts

spot_img

News

spot_img