ಬೆಂಗಳೂರು, ಅ. 26: ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಕೇವಲ 40 ದಿನಕ್ಕೆ ಜಾಗ ಖಾಲಿ ಮಾಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಅವರ ಮೂಗಿನ ನೇರಕ್ಕೆ ಕಡತಗಳಿಗೆ ಸಹಿ ಮಾಡದ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತು ಇಲಾಖೆಯಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಟಿ.ಕೆ. ಅನೀಲ್ ಕುಮಾರ್ ಅವರಿಗೆ ನೀಡಿದ್ದಾರೆ. ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ಎತ್ತಂಗಡಿ ಮಾಡಲಾಗಿದೆ.
ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗಾವಣೆಯಾಗಿದ್ದರು. ಆ ಜಾಗಕ್ಕೆ ಇದೇ ಹಿರಿಯ ಐಎಎಸ್ ಅಧಿಕಾರಿ ಟಿ.ಕೆ ಅನೀಲ್ ಕುಮಾರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿತ್ತು. ಆ ಬಳಿಕ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರಿಗೆ ಪೂರ್ಣ ಪ್ರಮಾಣವಾಗಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆ ನೀಡಲಾಗಿತ್ತು. ಇಲಾಖೆಯಲ್ಲಿ ಕಂದಾಯ ಸಚಿವರು ಸೂಚಿಸಿದ ಕೆಲವು ಕಡತಗಳಿಗೆ ಕಪಿಲ್ ಮೋಹನ್ ಸಹಿ ಹಾಕಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಇಲಾಖೆಯಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಸಾಮಾನ್ಯವಾಗಿ ಒಬ್ಬ ಐಎಎಸ್ ಅಧಿಕಾರಿಯನ್ನು ಒಂದು ಹುದ್ದೆಗೆ ವರ್ಗಾವಣೆ ಮಾಡಿದ ಬಳಿಕ ಕನಿಷ್ಠ ಎರಡು ವರ್ಷ ಸೇವೆಗೆ ಅವಕಾಶ ಕಲ್ಪಿಸಬೇಕು ಎಂಬ ನಿಯಮವಿದೆ. ರಾಜ್ಯದಲ್ಲಿ ತುರ್ತು ಸಂದರ್ಭ ಹೊರತು ಪಡಿಸಿ ಹಿರಿಯ ಅಧಿಕಾರಿಗಳನ್ನು ಕಾಲಾವಧಿಗೂ ಮುನ್ನ ವರ್ಗಾವಣೆ ಮಾಡುವುದಿಲ್ಲ. ಒಂದು ವೇಳೆ ಮಾಡಿದರೂ ಸಹ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ತಂದು ಅದೇ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಸಚಿವರ, ರಾಜಕಾರಣಿಗಳ ಮೂಗಿನ ನೇರಕ್ಕೆ ಕೆಲಸ ಮಾಡಲು ಇಚ್ಛೆ ಇಲ್ಲದ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಬೇರಡೆ ತೆರಳುತ್ತಾರೆ.
ಕಪಿಲ್ ಮೋಹನ್ ಕರ್ನಾಟಕದಲ್ಲಿ ಹಿರಿಯ ಐಎಎಸ್ ಅಧಿಕಾರಿ. ಅವರನ್ನು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಆಗಿದ್ದು ಸೆ. ೦8 ರಂದು. ಅಕ್ಟೋಬರ್ 21 ರಂದು ಅದಾಗಲೇ ( ಎರಡು ತಿಂಗಳು ಆಗಿಲ್ಲ) ಪ್ರವಾಸೋದ್ಯಮ ಇಲಾಖೆಗೆ ಎತ್ತಂಗಡಿ ಮಾಡಲಾಗಿದೆ. ಅಧಿಕಾರಿಗಳನ್ನು ಕನಿಷ್ಠ ಅವಧಿಗೆ ಒಂದು ಹುದ್ದೆಯಲ್ಲಿ ಮುಂದುವರೆಸದಿದ್ದರೆ ಇಲಾಖೆಯ ಕೆಲಸಗಳು ಅರ್ಥಮಾಡಿಕೊಂಡು ಕಾರ್ಯಗತ ಮಾಡುವುದು ಕಷ್ಟ. ಹೀಗಾಗಿ ಕನಿಷ್ಠ ಒಂದು ಹುದ್ದೆಯಲ್ಲಿ ಎರಡು ವರ್ಷ ಮುಂದುವರೆಸಬೇಕು ಎಂಬ ನಿಯಮವಿದೆ. ಆದರೆ ನಿಯಮ ಮೀರಿ ವರ್ಗಾವಣೆ ಮಾಡಿದರೂ ಕಪಿಲ್ ಮೋಹನ್ ಕೂಡ ಚಕಾರ ಎತ್ತದೇ ವರ್ಗಾವಣೆಯಾಗಿದ್ದು, ಸಚಿವರೊಂದಿಗಿನ ಮನಸ್ಥಾಪದಿಂದ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಸಕರು, ಮಂತ್ರಿಗಳು ಶಾಸನೀಯ ಕಾರ್ಯಗಳನ್ನು ಮಾತ್ರ ಮಾಡಬೇಕು. ಸರ್ಕಾರದ ತೀರ್ಮಾನಗಳನ್ನು ಯೋಜನೆಗಳನ್ನು ಕಾರ್ಯಗತ ಮಾಡುವುದು ಕಾರ್ಯಾಂಗದ ಭಾಗವಾಗಿರುವ ಐಎಎಸ್ ಹಾಗೂ ಇನ್ನಿತರೆ ಅಧಿಕಾರಿಗಳದ್ದು. ಕಾರ್ಯಗಂದ ಕೆಲಸದಲ್ಲಿ ಸಚಿವರ ಹಸ್ತಕ್ಷೇಪ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಪ್ರತಿಯೊಂದು ವಿಚಾರಕ್ಕೂ ಅಧಿಕಾರಿಗಳಿಗೆ ಸಲಹೆ ನೀಡುವುದು, ಒತ್ತಡ ಹಾಕುವುದು ಕರಗತವಾಗಿ ಹೋಗಿದ್ದು ಸಂವಿಧಾನ ಬದ್ಧ ಆಡಳಿತ ನೀತಿಯೇ ಕಣ್ಮರೆಯಾಗಿದೆ.