ಬೆಂಗಳೂರು, ಡಿ. 30 : ಬ್ಯಾಂಕ್ ನಲ್ಲಿ ಸಾಲ ಪಡೆಯಬೇಕೆಂದರೆ ಸಾಕಷ್ಟು ಬಾರಿ ನಾವು ಯೋಚಿಸುತ್ತೇವೆ. ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರವಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುತ್ತೇವೆ. ಈಗ ಉದ್ಯೋಗದಲ್ಲಿರುವವರು ಪ್ರತಿಯೊಬ್ಬರೂ ಏನಾದರೂ ಒಂದನ್ನು ಖರೀದಿಸಬೇಕೆಂದರೆ ಬ್ಯಾಂಕ್ ಗಳಲ್ಲಿ ಸಾಲದ ಮೊರೆ ಹೋಗುತ್ತಾರೆ. ಕಾರು, ಬೈಕ್, ಮನೆ, ಫ್ಲಾಟ್ ಏನನ್ನೇ ಖರೀದಿಸಬೇಕೆಂದರೂ ಸಾಲದ ಮೊರೆ ಹೋಗುತ್ತೇವೆ. ಸಾಲ ಪಡೆಯುವುದು ಸುಲಭ. ಆದರೆ ಇದನ್ನು ತೀರಿಸುವಾಗ ಬಹಳ ಕಷ್ಟ ಎನಿಸುತ್ತದೆ. ಇನ್ನು ಬ್ಯಾಂಕ್ ಗಳಲ್ಲಿ ಗೃಹ ಸಾಲ ಮತ್ತು ಕಾರು ಸಾಲದ ಮೇಲಿನ ಬಡ್ಡಿದರಕ್ಕೂ ವಯಕ್ತಿಕ ಸಾಲಕ್ಕೂ ಬಹಳಷ್ಟು ವ್ಯತ್ಯಾಸವಿರುತ್ತದೆ.
ಕಾರು ಮತ್ತು ಗೃಹ ಸಾಲದ ಮೇಲಿನ ಬಡ್ಡಿದರ ಕಡಿಮೆ ಇರುತ್ತದೆ. ಆದರೆ ವಯಕ್ತಿಕ ಸಾಲದ ಮೇಲಿನ ಬಡ್ಡಿದರ ಹೆಚ್ಚಿರುತ್ತದೆ. ಇದಕ್ಕೆ ಕಾರಣವೂ ಇದೆ. ಕಾರು ಲೋನ್ ಗೆ ಶೇ.8 ರಿಂದ 10ರಷ್ಟು ಬಡ್ಡಿಯನ್ನು ಬ್ಯಾಂಕ್ ಗಳು ವಿಧಿಸುತ್ತವೆ. ಅದೇ ಗೃಹ ಸಾಲವಾದರೆ, ಶೇ.6 ರಿಂದ 13ರಷ್ಟು ಬಡ್ಡಿದರವಿರುತ್ತದೆ. ಇನ್ನು ವಯಕ್ತಿಕ ಸಾಲವೆಂದರೆ ಶೇ.10 ರಿಂದ 24 ರಷ್ಟು ಬಡ್ಡಿ ದರವನ್ನು ಬ್ಯಾಂಕ್ ಗಳು ವಿಧಿಸುತ್ತವೆ. ಯಾಕೆ ಹೀಗೆ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಹಾಗಾದರೆ ವಯಕ್ತಿಕ ಸಾಲಕ್ಕೆ ಹೋಲಿಸಿದರೆ, ಗೃಹ ಸಾಲ ಮತ್ತು ಕಾರು ಸಾಲ ಯಾಕೆ ಅಗ್ಗ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ವಯಕ್ತಿಕ ಸಾಲ: ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ವಯಕ್ತಿಕ ಸಾಲವನ್ನು ಹೆಚ್ಚು ವಿಧಿಸಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಸಾಲದ ಅವಧಿ. ವಯಕ್ತಿಕ ಸಾಲಗಳು ಸಾಮಾನ್ಯವಾಗಿ ಒಂದು ವರ್ಷದಿಂದ ಐದು ವರ್ಷಗಳವರೆಗೆ ಮಾತ್ರವೇ ತೆಗೆದುಕೊಳ್ಳುತ್ತಾರೆ. ಇದರ ಜೊತೆಗೆ ವಯಕ್ತಿಕ ಸಾಲಕ್ಕೆ ಯಾವುದೇ ಗ್ಯಾರೆಂಟಿ ಇರುವುದಿಲ್ಲ. ವ್ಯಕ್ತಿಯ ಸಂಬಳದ ಆಧಾರದ ಮೇಲೆ ಅಥವಾ ಆತನ ಕ್ರೆಡಿಟ್ ಸ್ಕೋರ್ ಮೇಲೆ ಸಾಲ ನೀಡಿಲಾಗುತ್ತದೆ. ಅಕಸ್ಮಾತ್ ವಯಕ್ತಿಕ ಸಾಲ ಪಡೆದಾತ ಹಣ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ಗೆ ನಷ್ಟವಾಗುತ್ತದೆ. ಹೀಗಾಗಿ ಈ ಸಾಲಕ್ಕೆ ಬಡ್ಡಿ ದರವನ್ನು ಬ್ಯಾಂಕ್ ಗಳು ಹೆಚ್ಚು ವಿಧಿಸುತ್ತವೆ.
ಗೃಹ ಸಾಲ: ಗೃಹ ಸಾಲದ ಬಡ್ಡಿದರ ಬ್ಯಾಂಕ್ ಗಳಲ್ಲಿ 6 ರಿಂದ 13 ಪರ್ಸೆಂಟ್ ಮಾತ್ರವೇ ವಿಧಿಸಲಾಗುತ್ತದೆ. ಇದಕ್ಕಿಂತ ಹೆಚ್ಚು ಬಡ್ಡಿಯನ್ನು ಯಾವ ಬ್ಯಾಂಕ್ ನಲ್ಲೂ ಇರುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಆರ್ಥಿಕ ಬೆಳವಣಿಗೆ ಹಾಗೂ ಸರ್ಕಾರಗಳು ಗೃಹ ಸಾಲವನ್ನು ಉತ್ತೇಜಿಸುತ್ತದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಗೃಹ ಸಾಲಕ್ಕಾಗಿ ಬ್ಯಾಂಕ್ ಮತ್ತು ಎನ್ʼಬಿಎಫ್ʼಸಿಗಳಿಗೆ ಸಾಲ ನೀಡುತ್ತದೆ. ಗೃಹ ಸಾಲ ಪಡೆದರೆ, ಆ ವ್ಯಕ್ತಿ ಮನೆ ನಿರ್ಮಾಣ ಮಾಡುತ್ತಾನೆ. ಇದರಿಂದ ಸಿಮೆಂಟ್, ಮರಳು, ಇಟ್ಟಿಗೆ, ಕಬ್ಬಿಣ, ಮರ ಸೇರಿದಂತೆ ಸಾಕಷ್ಟು ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತದೆ. ಅಲ್ಲದೇ ಮನೆ ನಿರ್ಮಾಣ ಕಾರ್ಯಕ್ಕೆ ಕೂಲಿ ಕಾರ್ಮಿಕರನ್ನು ನೇಮಿಸಲಾಗುತ್ತದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಜೊತೆಗೆ ಗೃಹ ನಿರ್ಮಾಣ ಸ್ಥಳವೇ ಬ್ಯಾಂಕ್ ಗಳಿಗೆ ಗ್ಯಾರೆಂಟಿ ಆಗಿರುತ್ತದೆ. ಇವೆಲ್ಲವೂ ದೇಶದ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗಾಗಿ ಬ್ಯಾಂಕ್ ಗಳೂ ಗೃಹ ಸಾಲದ ಮೇಲಿನ ಬಡ್ಡಿದರ ವಯಕ್ತಿಕ ಸಾಲಕ್ಕಿಂತಲೂ ಅಗ್ಗವಾಗಿರುತ್ತದೆ.
ಕಾರು ಸಾಲ: ಇನ್ನು ಬ್ಯಾಂಕ್ ಗಳು ಕಾರು ಸಾಲದ ಮೇಳಿನ ಬಡ್ಡಿದರವನ್ನೂ ಕೂಡ ಕಡಿಮೆ ವಿಧಿಸುತ್ತದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಕಾರು, ಬೈಕ್ ಗಳು ಮಾರಾಟವಾದಷ್ಟೂ ಸರ್ಕಾರಕ್ಕೆ ಲಾಭವಾಗುತ್ತದೆ. ಇದರಿಂದ ವಾಹನದ ಮಾಲೀಕರು ತೆರಿಗೆ ವಿಧಿಸುತ್ತಾರೆ. ವಾಹನದ ಮೇಲಿನ ಬಡ್ಡಿದರ ಕಡಿಮೆ ಇದ್ದಷ್ಟು ಜನ ಖರೀದಿಸಲು ಮುಂದೆ ಬರುತ್ತಾರೆ. ಇದರಿಂದಲೂ ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗಾಗಿ ಬ್ಯಾಂಕ್ ಗಳಲ್ಲಿ ವಾಹನದ ಮೇಲಿನ ಬಡ್ಡಿದರ ಕಡಿಮೆ ಇರುತ್ತದೆ.