27.4 C
Bengaluru
Monday, July 8, 2024

NPS Row : ಷಡಾಕ್ಷರಿ ಎನ್‌ಪಿಎಸ್ ನೌಕರರ ವಿರೋಧಿ ಯಾಕೆ ? ಷಡಾಕ್ಷರಿ ವಿರುದ್ಧ ಗಾಂಧಿಗಿರಿ ಹೋರಾಟಕ್ಕೆ ಕರ್ನಾಟಕ ಎನ್‌ಪಿಎಸ್ ನೌಕರರ ತಯಾರಿ!

ಬೆಂಗಳೂರು, ಡಿ. 22: ರಾಷ್ಟ್ರೀಯ ಪಿಂಚಣಿ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಧೋರಣೆ ವಿರುದ್ಧ ಕರ್ನಾಟಕದ ಎನ್‌ಪಿಎಸ್ ನೌಕರರು ತಿರುಗಿ ಬಿದ್ದಿದ್ದಾರೆ.  2023 ಜನವರಿ ಮಾಹೆಯ ವೇತನದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ದೇಣಿಗೆ ಕಡಿತಕ್ಕೆ ಅವಕಾಶ ನೀಡದೇ ಕೆಲವು ನೌಕರರು ಷಡಕ್ಷರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಎನ್‌ಪಿಎಸ್ ನೌಕರ. ಪ್ರಸ್ತುತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿ ಅವರು ಎನ್‌ಪಿಎಸ್ ನೌಕರರ ವಿರೊಧಿಯಾಗಿದ್ದಾರೆ. ಹಳೇ ಪಿಂಚಣಿ ಯೋಜನೆ ಜಾರಿಗಾಗಿ ಎನ್‌ಪಿಎಸ್ ನೌಕರರು ಮಾಡುತ್ತಿರುವ ಹೋರಾಟಕ್ಕೆ ಬೆಂಬಲ ಕೊಡುವುದನ್ನು ಬಿಟ್ಟು, ನಮ್ಮ ಹೋರಾಟವನ್ನು ಅವಮಾನಿಸಿ ಹೀಗಳೆದಿದ್ದಾರೆ. ನಮ್ಮ ನೋವನ್ನು ಅಪಹಾಸ್ಯ ಮಾಡಿದ್ದಾರೆ. ನೌಕರರಲ್ಲಿ ಬಿರುಕು ಮೂಡಿಸಿ ನಮ್ಮ ಆತ್ಮ ವಿಶ್ವಾಸ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಇಂತಹ ಅಧ್ಯಕ್ಷರಿಗೆ ನನ್ನ ಧಿಕ್ಕಾರವಿದೆ. ಇವರ ಧೋರಣೆ ವಿರುದ್ಧವಾಗಿ 2023 ಜನವರಿ ಮಾಹೆ ವೇತನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ದೇಣಿಗೆಯಾಗಿ ಕಡಿತಗೊಳ್ಳುವ 200 ರೂ. ಗಳನ್ನು ನನ್ನ ವೇತನದಿಂದ ಕಡಿತಗೊಳಿಸಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂಬ ಒಕ್ಕಣೆಯುಳ್ಳ ಪತ್ರವನ್ನು ಕೆಲವು ಎನ್‌ಪಿಎಸ್ ನೌಕರರು ತಮ್ಮ ನೇಮಕಾತಿ ಪ್ರಾಧಿಕಾರಗಳಿಗೆ ಕಳುಹಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಎನ್‌ಪಿಎಸ್ ಯೋಜನೆ:

ಇದು ರಾಷ್ಟ್ರೀಯ ಪಿಂಚಣಿ ಯೋಜನೆ. ದೇಶದಲ್ಲಿ 2006 ರಿಂದ ಚಾಲನೆಗೆ ತರಲಾಗಿದೆ. ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಶೇ. 10 ರಷ್ಟು ಕಡಿತ ಮಾಡಲಾಗುತ್ತದೆ. ಸರ್ಕಾರದ ವಂತಿಗೆ ಶೇ. 10 ರಷ್ಟು ವಂತಿಗೆ ಕಡಿತ ಮಾಡಿ ಅದನ್ನು ಅದನ್ನು ಖಜಾನೆ ಮೂಲಕ ಟ್ರಸ್ಟೀ ಬ್ಯಾಂಕುಗಳಿಗೆ ರವಾನೆ ಮಾಡಲಾಗುತ್ತಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿ ಕಡಿತವಾಗುವ ಹಣ ದೇಶದ ಷೇರುಮಾರುಕಟ್ಟೆಯನ್ನು ಅವಲಂಭಿಸಿದ್ದು, ಹಳೇ ಪಿಂಚಣಿ ಯೋಜನೆಗೆ ಹೋಲಿಸಿದ್ರೆ, ನೂತನ ಪಿಂಚಣಿ ಯೋಜನೆಗೆ ಒಳಗಾಗುವರು ಅನ್ಯಾಯಕ್ಕೆ ಒಳಗಾಗಿದ್ದಾರೆ. ನಿವೃತ್ತಿ ಬಳಿಕ ಮಾಸಿಕ 500, 1000, 2000 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಅಭದ್ರತೆಗೆ ಒಳಗಾಗಿರುವ ಸರ್ಕಾರಿ ನೌಕರರು ದೇಶ ವ್ಯಾಪ್ತಿ ಎನ್‌ಪಿಎಸ್ ಯೋಜನೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಎನ್‌ಪಿಎಸ್ ವಿರುದ್ಧ ದೇಶವ್ಯಾಪ್ತಿ ಸರ್ಕಾರಿ ನೌಕರರು ದೊಡ್ಡ ಮಟ್ಟದ ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ಭಾಗವಾಗಿ ಈಗಾಗಲೇ ಛತ್ತೀಸ್ ಘಡ, ಹಿಮಾಚಲ ಪ್ರದೇಶದಲ್ಲಿ ಎನ್‌ಪಿಎಸ್ ಯೋಜನೆ ಈಗಾಗಲೇ ರದ್ದು ಪಡಿಸಲಾಗಿದೆ.

ಕರ್ನಾಟಕದಲ್ಲಿ ಎನ್‌ಪಿಎಸ್ ನೌಕರರ ಹೋರಾಟ:

ಕರ್ನಾಟಕದಲ್ಲಿ ಎನ್‌ಪಿಎಸ್ ಯೋಜನೆ ವಿರುದ್ಧ ರಾಜ್ಯ ಸರ್ಕಾರಿ ನೌಕರರು ದೊಡ್ಡ ಮಟ್ಟದಲ್ಲಿ ಹೋರಾಟ ಅರಂಭಿಸಿದ್ದಾರೆ. ಚುನಾವಣೆ ಹೊಸ್ತಿನಲ್ಲಿ ನಮ್ಮ ವೋಟು ಹಳೇ ಪಿಂಚಣಿಗಾಗಿ, ನಮ್ಮ ವೋಟು ನಮ್ಮ ಕುಟುಂಬಕ್ಕಾಗಿ,ನಮ್ಮ ವೋಟು ಸರ್ಕಾರಿ ನೌಕರರ ಬದುಕಿಗಾಗಿ ಎಂಬ ಧ್ಯೇಯ ಮುಂದಿಟ್ಟುಕೊಂಡು ನವೆಂಬರ್ 22 ರಿಂದ ಹೋರಾಟ ಆರಂಭಿಸಿದ್ದಾರೆ. ಶಾಂತಿಯುತ ಹೋರಾಟಕ್ಕೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಮಗೆ ಗೆಲುವು ಸಿಗುವ ವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಎನ್‌ಪಿಎಸ್ ನೌಕರರ ವಿವರ:

ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆಗೆ ಒಳಪಟ್ಟಿರುವ ನೌಕರರಗಿಂತಲೂ ರಾಷ್ಟ್ರಿಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ನೌಕರರೇ ಜಾಸ್ತಿ ಇದ್ದಾರೆ. ರಾಜ್ಯದಲ್ಲಿ 2.60 ಲಕ್ಷ ಸರ್ಕಾರಿ ನೌಕರರು ರಾಷ್ಟ್ರೀಯ ಪಿಂಚಣಿ ಯೋಜನೆ ( ನೂತನ ಪಿಂಚಣಿ ಯೋಜನೆ ) ವ್ಯಾಪ್ತಿಗೆ ಒಳಪಟ್ಟಿದ್ದಾರೆ. ನಿಗಮ, ಮಂಡಳಿ ನೌಕರರು, ಅನುದಾನಿತ ಸಂಸ್ಥೆಗಳು ನೌಕರರು 3.60 ಲಕ್ಷ ನೌಕರರು ಇದ್ದಾರೆ. ಇಷ್ಟು ನೌಕರರು ಎನ್‌ಪಿಎಸ್ ಯೋಜನೆಯ ಅಭದ್ರತೆ ವಿರುದ್ಧ ಧ್ವನಿಯೆತ್ತಿದ್ದಾರೆ. ಈ ಧ್ವನಿ ಹೋರಾಟವಾಗಿ ಬದಲಾಗಿದೆ.

ಷಡಕ್ಷರಿ ಎನ್‌ಪಿಎಸ್ ವಿರೋಧಿ ಧೋರಣೆ:

ಷಡಕ್ಷರಿ ಅವರು ಎನ್‌ಪಿಎಸ್ ನೌಕರರ ಹೋರಾಟದ ಬಗ್ಗೆ ಅಪಹಾಸ್ಯ ಮಾಡಿರುವುದು ಇದೀಗ ಸರ್ಕಾರಿ ನೌಕರರ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ. ನೌಕರರ ಸಂಘಕ್ಕೆ ಕಡಿತವಾಗಲಿದ್ದ 200 ರೂ. ದೇಣಿಗೆ ಕಡಿತಕ್ಕೆ ಅವಕಾಶ ನೀಡದೇ ಅಭಿಯಾನ ಅರಂಭಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಕುಮಾರ್ ಅವರು, ಷಡಾಕ್ಷರಿ ಅವರು ಒಬ್ಬರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ಎನ್‌ಪಿಎಸ್ ವಿರೋಧಿಯಾಗಿದ್ದಾರೆ. ಆದರೆ ರಾಜ್ಯ ಸರ್ಕಾರಿ ನೌಕರರ ಸಂಘದ ಬಹುತೇಕ ಪದಾಧಿಕಾರಿಗಳು ನಮ್ಮೊಂದಿಗೆ ಇದ್ದಾರೆ.

ಯಾವ ಕಾರಣಕ್ಕೂ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಧಕ್ಕೆ ತರುವ ಕೆಲಸ ನಾವು ಮಾಡುವುದಿಲ್ಲ. ನಮ್ಮ ವಿರೋಧ ಕೇವಲ ಷಡಾಕ್ಷರಿ ಅವರ ಧೋರಣೆ ವಿರುದ್ಧ ಮಾತ್ರ. ಸಂಘವನ್ನು ಶಿಥಿಲಗೊಳಿಸುವುದು ನಮ್ಮ ಉದ್ದೇಶವಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಪಾರ್ಟಿ ಸದಸ್ಯರಾಗಿ ಸ್ವ ಹಿತಾಸಕ್ತಿಯಿಂದ ಎನ್‌ಪಿಎಸ್ ರದ್ದು ಹೋರಾಟಕ್ಕೆ ವಿರೋಧ ಮಾಡುತ್ತಿದ್ದಾರೆ. ಅವರಿಗೆ ಪಕ್ಷ ಮತ್ತು ಅಧಿಕಾರ ಮುಖ್ಯವೋ, ಸರ್ಕಾರಿ ನೌಕರರ ಹಿತಾಸಕ್ತಿ ಮುಖ್ಯವೋ ಎಂಬುದನ್ನು ಷಡಾಕ್ಷರಿ ಅವರಿಗೆ ಮಾಧ್ಯಮಗಳೇ ಪ್ರಶ್ನಿಸಬೇಕು. ನಮ್ಮ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಮ್ಮ ಸ್ವಾಭಿಮಾನಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದು ಅಗಿರುವಂತೆ ನಮ್ಮ ರಾಜ್ಯದಲ್ಲಿ ರದ್ದು ಮಾಡುವ ವರೆಗೂ ನಾವು ನಮ್ಮ ಹೋರಾಟ ಕೈ ಬಿಡಲ್ಲ ಎಂದು ಶಾಂತಕುಮಾರ್ ಸ್ಪಷ್ಟಪಡಿಸಿದ್ದಾರೆ.

Related News

spot_img

Revenue Alerts

spot_img

News

spot_img