ಬೆಂಗಳೂರು, ಜು. 22 : ನೀವು ಲಾಟರಿ, ಬಹುಮಾನ, ಉಡುಗೊರೆ ರೂಪದಲ್ಲಿ ಹಣ ಗಳಿಸಿದಲ್ಲಿ ಆತ ಭಾರತದಲ್ಲಿ ಅಥವಾ ವಿದೇಶದಲ್ಲಿರಲಿ ಶೇ.30 ರಷ್ಟು ತೆರಿಗೆಯನ್ನು ಪಾವತಿ ಮಾಡಲೇಬೇಕು. ಹಾಗಾದರೆ ಬನ್ನಿ, ಲಾಟರಿ ಇಂದ ಗಳಿಸುವ ಹಣಕ್ಕೆ ತೆರಿಗೆಯನ್ನು ಎಲ್ಲಿ ಹೇಗೆ ಕಟ್ಟಬೇಕು ಎಂಬ ಎಲ್ಲಾ ಮಾಹಿತಿ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. 1961ರ ಭಾರತೀಯ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 194B ಬಿ ಅಡಿಯಲ್ಲಿ ಲಾಟರಿ ಹಣಕ್ಕೆ ಟಿಡಿಎಸ್ ಅನ್ನು ವಿಧಿಸಲಾಗುತ್ತದೆ. ಲಾಟರಿ ಅಷ್ಟೇ ಅಲ್ಲದೇ, ಕಾರ್ಡ್ ಗೇಮ್, ಟಿವಿ ಪ್ರೋಗ್ರಾಂ, ಕ್ರಾಸ್ವರ್ಡ್ ಪಜಲ್ ಸೇರಿದಂತೆ ಇತರೆ ಆಟಗಳ ಮೇಲೆ ಗಳಿಸಿದ ಆದಾಯದ ಮೊತ್ತಕ್ಕೆ ಟಿಡಿಎಸ್ ಅನ್ನು ವಿಧಿಸಲಾಗುತ್ತದೆ.
ನೀವು ಪಡೆಯುವ ನಗದು ಬಹುಮಾನ 10 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಮಾತ್ರವೇ ಆ ಹಣಕ್ಕೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ನಿಮಗೆ ಬರುವ ನಗದು ಬಹುಮಾನದ ತೆರಿಗೆ ಅನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ನಿಮಗೆ ನೀಡುತ್ತಾರೆ. ನಗದು ಬಹುಮಾನದ ಮೇಲೆ ಸರ್ ಚಾರ್ಜ್ ಮತ್ತು ಸೆಸ್ ಸೇರಿಸಿ ಶೇಕಡ 31.2ರಷ್ಟು ಬಡ್ಡಿದರ ವಿಧಿಸಲಾಗುತ್ತದೆ.ಇನ್ನು ತೆರಿಗೆಯನ್ನು ವಿಧಿಸದೇ ಹೋದಲ್ಲಿ ಭಾರತದ ಕಾನೂನಿ ಪ್ರಕಾರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಹಾಗಾಗಿ ಭಾರತೀಯರು ತಾವು ಗಳಿಸುವ ಪ್ರತಿಯೊಂದು ಆದಾಯಕ್ಕೂ ಕೂಡ ತಪ್ಪದೇ ತೆರಿಗೆಯನ್ನು ಪಾವತಿ ಮಾಡುವುದು ಸೂಕ್ತ. ಕಾಲ ಕಾಲಕ್ಕೆ ತೆರಿಗೆ ಪಾವತಿಸಿ, ಸರ್ಕಾರಕ್ಕೆ ಮೋಸ ಮಾಡದೇ ಇರುವುದರಿಂದ ಬೇಡದ ತೊಂದರೆಗಳಿಂದ ಆದಷ್ಟು ದೂರ ಇರಬಹುದು. ಇನ್ನು ಭಾರತದಲ್ಲಿ ಲಾಟರಿಯನ್ನು ಹಲವು ರಾಜ್ಯಗಳಲ್ಲಿ ನಿಷೇಧ ಮಾಡಲಾಗಿದೆ. ಕೇರಳ ಸೇರಿದಮತೆ ಕೆಲ ರಾಜ್ಯಗಳಲ್ಲಿ ಮಾತ್ರವೇ ಲಾಟರಿಗೆ ಅವಕಾಶವಿದ್ದು, ಇದರಲ್ಲಿ ಗೆಲ್ಲುವ ಮೊತ್ತಕ್ಕೆ ತೆರಿಗೆಯನ್ನು ಕಟ್ಟಬೇಕು.
ಇನ್ನು ನಮ್ಮ ಭಾರತದಲ್ಲಿ ಮೂರು ರೀತಿಯಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ. ಮೂಲದಲ್ಲಿ ಕಡಿತಗೊಳಿಸುವ ತೆರಿಗೆ ಇದನ್ನು ಟಿಡಿಎಸ್ ಎಂದು ಕೂಡ ಕರೆಯಲಾಗುತ್ತದೆ. ಮೂಲದಿಂದ ಸಂಗ್ರಹಿಸಲಾದ ತೆರಿಗೆ ಅನ್ನು ಟಿಸಿಎಸ್ ಎಂದು ಹಾಗೂ ಮುಂಗಡ ತೆರಿಗೆ ಅಂತ ಹೇಳಲಾಗುತ್ತದೆ. ಕೊನೆಯ ಮೂರನೇಯದಾಗಿ ಸೆಲ್ಫ್ ಅಸೆಸ್ಮೆಂಟ್ ಟ್ಯಾಕ್ಸ್ ಎಂದು ಕರೆಯಲಿದ್ದು, ಈ ವಿಧಗಳಲ್ಲಿ ತೆರಿಗೆಯನ್ನು ಪಾವತಿ ಮಾಡಬೇಕು. ಆದಾಯ ತೆರಿಗೆ ಪಾವತಿ ಮಾಡುವವರಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡುವ ವಿವಿಧ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಈ ತೆರಿಗೆಯಿಂದ ವಿನಾಯಿತಿ ಪಡೆಯಲು, ಹೂಡಿಕೆ, ಪಾಲಿಸಿ ಸೇರಿದಂತೆ ಹಲವು ಕಡೆ ಹಣವನ್ನು ವಿನಿಯೋಗಿಸಿ ತೆರಿಗೆ ವಿನಾಯ್ತಿಗಳನ್ನು ಪಡೆಯಬಹುದು.