ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿಯಲ್ಲಿ ಬಾಡಿಗೆಯನ್ನೂ ತೆರಿಗೆ ವ್ಯಾಪ್ತಿಗೆ ಒಳಪಡುವ ಸೇವೆ ಎಂದು ಪರಿಗಣಿಸಲಾಗಿದೆ. ನಿರ್ದಿಷ್ಟ ಸಂದರ್ಭದಲ್ಲಿ ಸ್ವತ್ತುಗಳನ್ನು ಬಾಡಿಗೆಗೆ ನೀಡುವುದು ಮತ್ತು ಬಾಡಿಗೆಗೆ ಪಡೆಯುವುದು ಎರಡೂ ಸೇವಾ ವಿಸ್ತರಣೆ ಎಂದೇ ಪರಿಗಣಿಸಲಾಗಿದೆ. ಪರಿಣಾಮವಾಗಿ ಬಾಡಿಗೆಯಿಂದ ಬರುವ ಆದಾಯ ಹಾಗೂ ಪಾವತಿಸುವ ಬಾಡಿಗೆಗೂ ಜಿಎಸ್ಟಿ ಅನ್ವಯವಾಗುತ್ತದೆ.
ಬಾಡಿಗೆ ಮೇಲಿನ ತೆರಿಗೆಯು ಸ್ವತ್ತಿನ ಅಂತಿಮ ಬಳಕೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆಯೇ ಹೊರತು ಆಸ್ತಿಯ ಸ್ವರೂಪದ ಮೇಲೆ ಅಲ್ಲ. ಅಂದರೆ, ವಾಣಿಜ್ಯ ಅಥವಾ ವ್ಯಾಪಾರಿ ಉದ್ದೇಶಕ್ಕೆ ಬಳಕೆ ಆಗುತ್ತಿದೆ ಎಂದಾದರೆ ಅದು ವಸತಿ ಪ್ರಕಾರದ ಆಸ್ತಿ ಆಗಿದ್ದರೂ ಅದರಿಂದ ಬರುವ ಬಾಡಿಗೆಗೆ ಶೇ 18ರಷ್ಟು ತೆರಿಗೆ ಅನ್ವಯ ಆಗಲಿದೆ.
ಭೂಮಿಯ ಒಡೆಯ ಜಿಎಸ್ಟಿ ಅಡಿ ನೋಂದಣಿ ಮಾಡಿಕೊಂಡಿರದಿದ್ದರೂ ಸ್ವತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗುತ್ತಿದೆ ಎಂದಾದರೆ ಜಿಎಸ್‌ಟಿ ನೋಂದಾಯಿತ ಬಾಡಿಗೆದಾರರು ಬಾಡಿಗೆಗೆ ತೆರಿಗೆ ಪಾವತಿಸಲೇಬೇಕು.
ಕಂಪನಿಗಳು ಅತಿಥಿ ಗೃಹಗಳು ಅಥವಾ ಸಿಬ್ಬಂದಿ ವಸತಿಗೃಹಗಳನ್ನು ಬಾಡಿಗೆ ನೀಡುವುದರ ಮೇಲೆಯೂ ಈ ನಿಯಮ ಅನ್ವಯವಾಗಲಿದೆ. ಕಳೆದ ಜುಲೈ 13ರಂದು ನಡೆದ ಜಿಎಸ್‌ಟಿ ಮಂಡಳಿಯ 42ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ʻಖಾಸಗಿ ವ್ಯಕ್ತಿಗಳಿಗೆ ಸ್ವಂತ ಬಳಕೆಗಾಗಿ ಬಾಡಿಗೆಗೆ ನೀಡಿದ್ದರೆ ಆ ಆದಾಯಕ್ಕೆ ಜಿಎಸ್‌ಟಿ ಪಾವತಿಸುವ ಅವತ್ಯವಿಲ್ಲ. ಒಂದು ವೇಳೆ ಉದ್ಯಮಿಗಳು ಅಥವಾ ಉದ್ಯಮ ಪಾಲುದಾರರು ಸ್ವಂತ ಬಳಕೆಗಾಗಿ ಸ್ವತ್ತುಗಳನ್ನು ಬಾಡಿಗೆಗೆ ಪಡೆದಿದ್ದರೂ ಜಿಎಸ್‌ಟಿ ಪಾವತಿಸಬೇಕಾಗಿಲ್ಲʼ ಎಂದು ಪಿಐಬಿ ಸುದ್ದಿ ಸಂಸ್ಥೆ ತಿಳಿಸಿದೆ.
ಪಾವತಿಸಿದ ಬಾಡಿಗೆಗೆ ಐಟಿಸಿ ಕ್ಲೇಮ್:
ಹೊಸ ನಿಯಮದ ಪ್ರಕಾರ ರಿವರ್ಸ್ ಚೇಂಜ್ ಮೆಕ್ಯಾನಿಸಂ ಅಡಿಯಲ್ಲಿ ಜಿಎಸ್‌ಟಿ ನೋಂದಾಯಿತ ಬಾಡಿಗೆದಾರರು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಅನಂತರ ಪಾವತಿಸಿದ ಬಾಡಿಗೆಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಕ್ಲೇಮ್ ಮಾಡಬಹುದು. ಆದರೆ, ವೈಯಕ್ತಿಕ ಬಳಕೆ ಸೇವೆಗೆ ಪಾವತಿಸಿದ ತೆರಿಗೆಗೆ ಐಟಿಸಿ ಕ್ಲೇಮ್ ಮಾಡಲು ಅವಕಾಶವಿಲ್ಲ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗಿದ್ದಲ್ಲಿ ಮಾತ್ರ ಅವಕಾಶ ನೀಡಲಾಗಿದೆ.
ಬಾಡಿಗೆ ಮನೆಗಳ ಮೇಲೆ ಪರಿಣಾಮ:
ಈ ನಿರ್ಧಾರವು ಬಾಡಿಗೆ ರಿಯಲ್ ಎಸ್ಟೇಟ್ ವಿಸ್ತರಣೆಗೆ ಅಡ್ಡಿಯಾಗಬಹುದು. ಐಷಾರಾಮಿ ಮನೆಗಳು ಮತ್ತು ಯೋಜನೆಗಳ ಮೇಲೂ ಪರಿಣಾಮ ಬೀರಬಹುದು. ಅಂತಿಮವಾಗಿ ಅದು ಸರ್ಕಾರದ ಆದಾಯದ ಮೇಲೂ ಹೊಡೆತ ನೀಡಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಬಾಡಿಗೆ ಮೇಲೆ ಜಿಎಸ್‌ಟಿ ಮತ್ತು ಬಾಡಿಗೆ ಆದಾಯದ ಮೇಲೆ ಜಿಎಸ್‌ಟಿ:
ಬಾಡಿಗೆ ಮೇಲೆ ಜಿಎಸ್‌ಟಿ ಮತ್ತು ಬಾಡಿಗೆಯ ಆದಾಯದ ಮೇಲೆ ಜಿಎಸ್‌ಟಿ ಎರಡೂ ಭಿನ್ನ. ಬಾಡಿಗೆಯ ಆದಾಯದ ಮೇಲೆ ಜಿಎಸ್‌ಟಿ ಎಂದರೆ ಭೂಮಾಲೀಕ ಬಾಡಿಗೆ ರೂಪದಲ್ಲಿ ವಾರ್ಷಿಕ 20 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸುತ್ತಿದ್ದಲ್ಲಿ ಅದಕ್ಕೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಬಾಡಿಗೆ ಮೇಲೆ ಜಿಎಸ್‌ಟಿ ಎಂದರೆ ಬಾಡಿಗೆದಾರರು ಜಿಎಸ್‌ಟಿ ನೋಂದಣಿ ಮಾಡಿಕೊಂಡವರಾಗಿದ್ದಲ್ಲಿ, ವಸತಿ ಸ್ವತ್ತನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಲ್ಲಿ ಪಾವತಿಸುವ ಬಾಡಿಗೆಗೆ ತೆರಬೇಕಾದ ಜಿಎಸ್‌ಟಿ. ಅಂದರೆ ವಸತಿ ಮಾದರಿ ಸ್ವತ್ತು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವಾಗ ಬಾಡಿಗೆದಾರ ಮತ್ತು ಮಾಲೀಕ ಇಬ್ಬರೂ ಜಿಎಸ್‌ಟಿ ನೋಂದಣಿ ಮಾಡಿಕೊಂಡಿದ್ದರೆ, ಮಾಲೀಕ ವಾರ್ಷಿಕ 20 ಲಕ್ಷ ರೂಪಾಯಿಗೂ ಅಧಿಕ ಬಾಡಿಗೆ ಆದಾಯ ಪಡೆಯುತ್ತಿದ್ದರೆ ಇಬ್ಬರೂ ತಲಾ ಶೇ 18ರಷ್ಟು ತೆರಿಗೆ ಪಾವತಿಸುವುದರಿಂದ ಒಟ್ಟಾರೆಯಾಗಿ ಶೇ 36ರಷ್ಟು ಜಿಎಸ್‌ಟಿ ಪಾವತಿಸಿದಂತಾಗುತ್ತದೆ.