22.9 C
Bengaluru
Saturday, July 6, 2024

ಮನೆ ದೊಡ್ಡದಾಗಿರಲಿ, ಚಿಕ್ಕದಾಗಿರಲಿ: ಮನೆಯೊಳಗೊಂದು ಹೂದೋಟ ಹೀಗಿರಲಿ..

ಮನೆ ಎದುರು, ಸುತ್ತಮುತ್ತ ಸುಂದರ ಹೂದೋಟ ನಿರ್ಮಾಣಕ್ಕೆ ತುಂಬಾ ಜನರು ಆಸೆ ಪಡುತ್ತಾರೆ. ಆದರೆ ಈಗ ಅಪಾರ್ಟ್‌ಮೆಂಟ್‌ನಂತಹ ಸಣ್ಣ ಸಣ್ಣ ಮನೆಗಳಲ್ಲಿ, ಅಂಗಳ ಇಲ್ಲದೇ ಇರುವಾಗ ಹೂದೋಟ ಹೊಂದುವುದು ಕಷ್ಟ. ನಗರದಲ್ಲಿ ಇಂಚು ಜಾಗಕ್ಕೂ ಲಕ್ಷಗಟ್ಟಲೆ ಖರ್ಚು ಮಾಡಬೇಕಾದ ಸಂದರ್ಭದಲ್ಲಿ ಹೂದೋಟಕ್ಕೆ ಪ್ರತ್ಯೇಕ ಸ್ಥಳ ಮೀಸಲಿಡಲಾಗುವುದಿಲ್ಲ. ಅಂತಹವರಿಗೆ ರೂಫ್‌ಟಾಪ್‌ ಗಾರ್ಡನ್‌ ಹಾಗೂ ಒಳಾಂಗಣ ಹೂದೋಟ ಉತ್ತಮ ಆಯ್ಕೆ. ಅಪಾರ್ಟ್‌ಮೆಂಟ್‌ಗಳಲ್ಲಿನ ಸಣ್ಣ ಜಾಗವನ್ನೇ ಇದಕ್ಕೆ ಬಳಸಿಕೊಂದು ದಿನನಿತ್ಯ ಅಂದವಾದ ಹಸಿರು ವಾತಾವರಣವನ್ನು ಕಣ್ತುಂಬಿಕೊಳ್ಳಬಹುದು. ಅದಕ್ಕಾಗಿ ಕೆಲ ಸಲಹೆಗಳನ್ನು ಇಲ್ಲಿವೆ.

ಓಪನ್‌ ಹೂದೋಟ:
ರೂಫ್‌ಟಾಪ್‌ ಸಣ್ಣದಾಗಿದ್ದರೂ ಅಲ್ಲಿ ಹೂಕುಂಡ, ಗಿಡಗಳನ್ನು ಸರಿಯಾಗಿ ಇಟ್ಟರೆ ಅದೇ ಜಾಗವನ್ನು ಆಕರ್ಷಕವಾಗಿ ಮಾರ್ಪಡಿಸಬಹುದು. ಕೆಲವು ಕಡೆ ಪಾರದರ್ಶಕ ಹೂಕುಂಡ ಅಥವಾ ಗ್ಲಾಸ್‌ಗಳನ್ನು ಬಳಸಿ ವಿನ್ಯಾಸ ಮಾಡಿದರೆ ಚಂದ ಕಾಣುತ್ತದೆ. ಹಾಗೇ ಸಸ್ಯಗಳನ್ನು ಬೆಳೆಯುವ ಆಸಕ್ತಿ ಹೊಂದಿದವರಿಗೆ ಗುಲಾಬಿ, ಇಂಗ್ಲಿಷ್‌ ಐವಿ ಉತ್ತಮ ಆಯ್ಕೆಗಳು. ಹಾಗೇ ಬಿದಿರಿನ ಪದರಗಳನ್ನು ಬಳಸಿ ವಿನ್ಯಾಸಗೊಳಿಸಬಹುದು.

ರೂಫ್‌ಟಾಪ್‌ ಗಾರ್ಡನ್‌ನಲ್ಲಿ ಬೆಳೆಯುವ ಸಸ್ಯಗಳನ್ನು, ಅಲಂಕಾರಿಕ ಗಿಡಗಳನ್ನು ಬೆಳೆಸಬಹುದು. ಗಿಡಗಳು ನಾನಾ ತರಹದವು ಆಗಿರಲಿ. ಕೆಲವು ದೊಡ್ಡ ಸಸ್ಯಗಳು, ಹೂವು ಬಿಡುವ ಗಿಡಗಳು, ಬಳ್ಳಿ, ಕುರುಚಲು ಗಿಡಗಳು ಹೀಗೆ ನಾನಾ ತರಹದವು ಇರಲಿ. ಬಣ್ಣ ಹಾಗೂ ಹೂವುಗಳಿಂದ ಅವು ಪರಿಸರವನ್ನು ತಾಜಾವಾಗಿ ಇಡುತ್ತವೆ. ಮಧ್ಯದಲ್ಲಿ ಸ್ವಲ್ಪ ಜಾಗದಲ್ಲಿ ಮರದಕುರ್ಚಿಗಳು, ಟೇಬಲ್‌, ಈಸಿ ಚೇರ್‌ಗಳನ್ನು ಜೋಡಿಸಿ. ರೂಫ್‌ಟಾಪ್‌ಗೆ ಫರ್ನೀಚರ್‌ಗಳನ್ನು ಖರೀದಿಸುವಾಗ ಅವು ಅಲ್ಲಿನ ವಿನ್ಯಾಸ ಹಾಗೂ ಥೀಮ್‌ಗೆ ತಕ್ಕಂತೆ ಇರಲಿ. ಅಲ್ಲಿ ಪ್ರೀತಿಪಾತ್ರದವರ ಜೊತೆ ಬಿಡುವಿನ ಅವಧಿಯಲ್ಲಿ, ಸಂಜೆ ಟೀ ಕುಡಿಯುತ್ತ ಕಾಲ ಕಳೆಯಬಹುದು.

ಹಾಗೇ ರೂಫ್‌ ಟಾಪ್‌ನಲ್ಲಿ ನೀರಿನ ಝರಿಗಳನ್ನು ನಿರ್ಮಿಸಬಹುದು. ಗಿಡ ಹಾಗೂ ಕೆಲವು ಅಲಂಕಾರಿಕ ವಸ್ತುಗಳು, ಬಣ್ಣದ ಬೆಳಕಿನ ಮಧ್ಯೆ ಝರಿ ಆಕರ್ಷಕವಾಗಿರುತ್ತದೆ. ಹಿತವಾದ ಸಂಗೀತದ ಜೊತೆಗೆ ಇಲ್ಲಿ ಸಮಯ ಕಳೆಯಲು ಹಿತವಾಗಿರುತ್ತದೆ.

ರೂಫ್‌ಟಾಪ್‌ನಲ್ಲಿ ಹೂಕುಂಡ ಬೇರೆ ಬೇರೆ ಬಣ್ಣದಾಗಿದ್ದರೆ ಚೆನ್ನ. ಬಿಳಿ, ಕಂದು, ಕಡು ಹಸಿರು, ನೀಲಿ ಸೇರಿದಂತೆ ಗಾಢಬಣ್ಣಗಳು ರೂಫ್‌ಟಾಪ್‌ ಗಾರ್ಡನ್‌ಗೆ ಹೊಂದುತ್ತದೆ. ಗಾರ್ಡನ್‌ ಗೋಡೆಗಳಲ್ಲಿ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಬಹುದು. ಇಲ್ಲಿ ಬಳ್ಳಿ ಹೋಗುವ ಗಿಡಗಳನ್ನು ನೆಡಬಹುದು. ಹಾಗೇ ಬಾಟಲಿ ಅಥವಾ ಸಣ್ಣ ಹೂಕುಂಡಗಳಲ್ಲಿ ಗಿಡ ನೆಟ್ಟು ತೂಗು ಹಾಕಬಹುದು.

ಒಳಾಂಗಣ ವಿನ್ಯಾಸದಲ್ಲಿ ಹೂದೋಟ
ಮನೆಯೊಳಗೆ ಹೂವಿನ ಗಿಡಗಳು ಮನೆ, ಮನವನ್ನು ಉತ್ಸಾಹಭರಿತವಾಗಿರಿಸುವುದಲ್ಲದೇ, ಮನೆಯ ಒಳಾಂಗಣ ವಿನ್ಯಾಸವನ್ನು ಅದ್ದೂರಿಯನ್ನಾಗಿ ತೋರಿಸುತ್ತದೆ. ಒಳಾಂಗಣ ಗಾರ್ಡನ್‌ ಅನ್ನು ಇಷ್ಟಪಡುವವರು ಕೆಲವು ಅರೆಂಜ್‌ಮೆಂಟ್‌ ಟ್ರಿಕ್‌ಗಳು, ಡು ಇಟ್‌ ಯುವರ್‌ಸೆಲ್ಫ್‌ ಐಡಿಯಾಗಳ ಜೊತೆಗೆ ಸಣ್ಣ ಖಾಲಿ ಜಾಗವನ್ನು ಅದ್ಭುತವಾಗಿ ಮಾರ್ಪಡಿಸುವ ಜಾಣ್ಮೆ ಇದ್ದವರಿಗೆ ಅದ್ಭುತವಾದ ಹೂದೋಟವನ್ನು ಮನೆಯಲ್ಲಿಯೇ ನಿರ್ಮಿಸಿಕೊಳ್ಳಬಹುದು.

ವಾಲ್‌ ಮೌಂಟೇಡ್‌ ಸ್ಟೋರೇಜ್‌ನಲ್ಲಿ ಕುಂಡ:
ಕಿಟಕಿ ಅಥವಾ ಗೋಡೆ ಬದಿಯ ಸಣ್ಣ ಜಾಗದಲ್ಲಿ ಉದ್ದಕ್ಕೆ ಐದು– ಆರು ಅಂತಸ್ತು ಹೊಂದಿದ ಸ್ಟೋರೇಜ್‌ ಬಾಕ್ಸ್‌ನಲ್ಲಿ ಸಣ್ಣ ಹೂಕುಂಡದಲ್ಲಿ ಗಿಡ ನೆಟ್ಟು ಆಕರ್ಷಣೀಯವಾಗಿ ಕಾಣಿಸಬಹುದು. ಇಲ್ಲಿ ಸಣ್ಣ ಆಲಂಕಾರಿಕ ಗಿಡಗಳು ಬೆಳೆಯಲು ಸೂಕ್ತ. ಸಣ್ಣ ಪೆಗ್‌ ಬೋರ್ಡ್‌ ಸ್ಟೋರೆಜ್‌ನಲ್ಲೂ ಗಿಡ ಬೆಳೆಸಬಹುದು. ಇವುಗಳ ನಿರ್ಮಾಣ ಹಾಗೂ ಆರೈಕೆ ಮಾಡಲು ಸಹ ಸುಲಭ. ಯೂಟ್ಯೂಬ್‌ನಲ್ಲಿ ಹುಡುಕಾಡಿದರೆ ಪೆಗ್‌ಬೋರ್ಡ್‌ ನಿರ್ಮಾಣದ ಬಗ್ಗೆ ಹತ್ತಾರು ಐಡಿಯಾಗಳು ಲಭಿಸುತ್ತವೆ.

ಏಣಿ ಶೆಲ್ಫ್‌:
ನಿಮ್ಮ ಮನೆಯಲ್ಲಿ ಸಣ್ಣ ಏಣಿಯಿದ್ದರೆ ಅದನ್ನು ಮನೆಯೊಳಗೆ ಹೂದೋಟ ನಿರ್ಮಾಣಕ್ಕೆ ಬಳಸಬಹುದು. ಏಣಿಯ ಒಂದೊಂದು ಮೆಟ್ಟಿಲಿನಲ್ಲಿ ಬೇರೆ ಬೇರೆ ಬಗೆಯ ಸಣ್ಣ ಸಸ್ಯಗಳ್ಳುಳ್ಳ ಸಣ್ಣ ಕುಂಡಗಳನ್ನು ನೀಟಾಗಿ ಜೋಡಿಸಿದರೆ ಅಂದವಾಗಿ ಕಾಣುತ್ತದೆ.

ಜಾರ್‌ಗಳಲ್ಲಿ ಗಿಡ:
ಜಾರ್‌ಗಳಲ್ಲಿ ಬೇರೆ ಬೇರೆ ಬಗೆಯ ಹೂ, ಗಿಡಮೂಲಿಕೆಗಳನ್ನು ಬೆಳೆಸಬಹುದು. ಬಳಸಿ ಬಿಸಾಕುವ ಜಾರ್‌ಗಳನ್ನು ಇದಕ್ಕೆ ಉಪಯೋಗಿಸಬಹುದು. ಹಾಗೇ ಮನೆಯಲ್ಲಿ ಹಳೆ ಕುರ್ಚಿಗಳು ಅಥವಾ ಟೀಪಾಯಿಗಳಿದ್ದರೆ ಅವುಗಳನ್ನೂ ಬಳಸಬಹುದು. ಹಾಗೇ ಮನೆಯ ಹಾಲ್‌, ಲಿವಿಂಗ್‌ ರೂಮ್‌ಗಳ ಮೂಲೆಗಳಲ್ಲಿ, ಪ್ರವೇಶ ದ್ವಾರ, ಬಾಲ್ಕನಿಗಳಲ್ಲಿ ನೇತಾಕುವ ಹೂಕುಂಡ ಬಳಸಬಹುದು. ಇದನ್ನು ನಿರ್ವಹಣೆ ಮಾಡಲು ಸುಲಭ. ಹಾಗೇ ಸರಳ ವಿನ್ಯಾಸವಾಗಿದ್ದರೂ ಮನೆಗೆ ವಿಭಿನ್ನ ಲುಕ್‌ ನೀಡುತ್ತದೆ.

ಫೇರಿ ಗಾರ್ಡನ್‌:
ಅಗಲವಾದ ದೊಡ್ಡದಾದ ಹೂಕುಂಡದಲ್ಲಿ ಬಣ್ಣದ ಬಣ್ಣದ ಪ್ಲಾಸ್ಟಿಕ್‌ ಮಶ್ರೂಮ್‌, ಮರದ ಸಣ್ಣ ತುಂಡು, ಪ್ಲಾಸ್ಟಿಕ್‌ ಆಲಂಕಾರಿಕ ವಸ್ತುಗಳ ಜೊತೆ ಗಿಡ ಬೆಳೆಸಿ ಫೇರಿ ಗಾರ್ಡನ್‌ ನಿರ್ಮಾಣ ಮಾಡಬಹುದು. ಹಾಗೇ ಮನೆಯ ಹಾಲ್‌ನಲ್ಲಿ ಟೀಪಾಯಿ ಮೇಲೆ ಸಣ್ಣ ಸಣ್ಣ ಹೂಕುಂಡ ಇಡುವುದು ಮನೆಯ ಒಳಾಂಗಣ ವಿನ್ಯಾಸಕ್ಕೆ ಶೋಭೆ ತರುತ್ತದೆ.

Related News

spot_img

Revenue Alerts

spot_img

News

spot_img