22.2 C
Bengaluru
Thursday, November 21, 2024

ಜಮೀನು ಅಥವಾ ನಿವೇಶನ ನೋಂದಣಿ ಬಳಿಕ ಏನು ಮಾಡಬೇಕು: ವಿವರ ಇಲ್ಲಿದೆ

ಜಮೀನು ಅಥವಾ ನಿವೇಶನಗಳು ನೋಂದಣಿ ಆದ ನಂತರ ಮುಂದಿನ ಪ್ರಕ್ರಿಯೆ ಹೇಗಿರುತ್ತದೆ, ಆ ಕಡತಗಳು ಯಾವ ಕಚೇರಿಗೆ ಹೋಗುತ್ತವೆ, ನಮ್ಮ ಹೆಸರಿಗೆ ಅಧಿಕೃತವಾಗಿ ದಾಖಲೆ ಮಾಡುವವರು ಯಾರು, ಎಷ್ಟು ದಿನಗಳಲ್ಲಿ ನೋಂದಣಿ ಆಗುತ್ತದೆ ಮತ್ತು ನೋಂದಣಿಯಲ್ಲಿ ಎಷ್ಟು ವಿಧಗಳು ಎಂದು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಯಾವುದೇ ಪತ್ರಗಳು ಅಂದರೆ ಕೃಷಿ ಜಮೀನು ಇರಲಿ ಅಥವಾ ನಿವೇಶನಗಳು ಇರಲಿ ನೋಂದಾವಣೆ ಆದ ನಂತರ ಆ ಸ್ವತ್ತುಗಳು ಯಾವ ಪ್ರಾಧಿಕಾರಗಳಿಗೆ ಬರುತ್ತದೆ.

ಉದಾಹರಣೆಗೆ ಕ್ರಯ, ದಾನ, ಹಕ್ಕು ಬಿಡುಗಡೆ, ವಿಭಾಗ ಮತ್ತು ವ್ಯವಸ್ಥಾ ಪತ್ರ ಆದ ನಂತರ ಕೃಷಿ ಜಮೀನು ಆದರೆ ಆನ್‌ಲೈನ್‌ಲ್ಲಿ ಪತ್ರಾಂಶದ ಮುಖಾಂತರ ಸಂಬಂಧಿಸಿದ ತಹಶೀಲ್ದಾರರ ಕಚೇರಿಗೆ ನೋಂದಣಿಯಾದ ಬಗ್ಗೆ ಜೆ- ನಮೂನೆ ಹೋಗುತ್ತದೆ. ಇನ್ನುಳಿದ ಸ್ವತ್ತುಗಳಿಗೆ ಸಂಬಂಧಪಟ್ಟಂತೆ ನೋಂದಣಿ ಮಾಡಿಕೊಂಡವರು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಖಾತಾ ಹಾಗೂ ಇನ್ನಿತರ ದಾಖಲೆಗಳನ್ನು ತಮ್ಮ ಹೆಸರಿಗೆ ಅಪ್‌ಡೇಟ್ ಮಾಡಲು ಋಣಭಾರ ಪತ್ರ ಹಾಗೂ ನೋಂದಣಿಯಾದ ದಸ್ತಾವೇಜಿನ ಪ್ರತಿ, ಆಧಾರ್ ಪತ್ರ ಹಾಗೂ ಇನ್ನಿತರ ದಾಖಲೆಗಳೊಡನೆ ಅರ್ಜಿ ಸಲ್ಲಿಸಬೇಕಿರುತ್ತದೆ.

ಅರ್ಜಿ ಸಲ್ಲಿಕೆಯಾದ ನಂತರ ನಿವೇಶನ ಗ್ರಾಮಗಳಲ್ಲಿದ್ದರೆ ಗ್ರಾಮ ಪಂಚಾಯತಿ ಕಚೇರಿಗೆ, ನಿವೇಶನ ಪುರಸಭೆ ವ್ಯಾಪ್ತಿಗಳಲ್ಲಿದ್ದರೆ ಪುರಸಭೆ ಮುಖ್ಯಾಧಿಕಾರಿಗೆ, ನಗರಸಭೆ ವ್ಯಾಪ್ತಿಗೆ ಇದ್ದರೆ ಆಯುಕ್ತರು ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿದ್ದರೆ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಅವರು 45 ದಿನಗಳ ಒಳಗೆ ಯಾರ ಹೆಸರಿಗೆ ನೋಂದಣಿ ಆಗಿದೆ ಅವರ ಹೆಸರಿಗೆ ಖಾತಾವನ್ನು ಕೂಡಿಸಿ, ಕಂದಾಯ ಇನ್ನಿತರ ದಾಖಲೆಗಳನ್ನು ಅಪ್‌ಡೇಟ್ ಮಾಡಿ ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕಗಳನ್ನು ಪಡೆಯುತ್ತಾರೆ.

ಭೂ ಹಕ್ಕು ದಾಖಲೆ ಖಾತಾಗಳಲ್ಲಿ ಕೆಳಕಂಡ ವಿಧಗಳು ಇವೆ:

* ಪವತಿ (ಪೋತಿ ಖಾತಾ) ಬದಲಾವಣೆ:
ಇದರಲ್ಲಿ ಯಾವುದೇ ಖಾತಾ ಉಳ್ಳ ವ್ಯಕ್ತಿಯು ನಿಧನರಾದರೆ ನಂತರ ಅವರ ವಾರಸುದಾರರಿಗೆ ಖಾತಾ ಮಾಡುವ ಪದ್ಧತಿ.

* ವಿಭಾಗದ ಮೂಲಕ ಖಾತಾ ಬದಲಾವಣೆ:
ವಂಶಸ್ಥರು ಸ್ವತ್ತುಗಳ ವಿಭಾಗ ಮಾಡಿಕೊಂಡ ನಂತರ ಆಗುವ ಅವರವರ ಹೆಸರಿಗೆ ಖಾತಾ ಬದಲಾವಣೆ ಪದ್ಧತಿ.

* ಕ್ರಯದ ಖಾತಾ ಬದಲಾವಣೆ:
ಕ್ರಯಪತ್ರ ನೋಂದಣಿ ಆದ ನಂತರ ಇದರಲ್ಲಿ ಬರೆಸಿಕೊಂಡವರ ಹೆಸರಿಗೆ ಖಾತಾ ಬದಲಾವಣೆ ಆಗುತ್ತದೆ.

* ಮಾರ್ಟಗೇಜ್, ನ್ಯಾಯಾಲಯದ ನಿರ್ದೇಶನಗಳು, ಅಟ್ಯಾಚ್‌ಮೆಂಟ್‌ಗಳು ಇತ್ಯಾದಿ ವಿಚಾರಗಳನ್ನು ಆರ್‌ಟಿಸಿ ಕಾಲಂ 11ರಲ್ಲಿ ನಮೂದು ಮಾಡುವ ಪದ್ಧತಿ:
ಯಾವುದೇ ಬ್ಯಾಂಕ್‌ಗಳು ಕೃಷಿ ಜಮೀನಿಗೆ ಸಾಲ ಕೊಟ್ಟಿದ್ದರೆ ಬ್ಯಾಂಕ್‌ನ ಹೆಸರು, ಸಾಲದ ಮೊತ್ತವನ್ನು ಆರ್‌ಟಿಸಿಯಲ್ಲಿ ಸಾರ್ವಜನಿಕರ ಗಮನಕ್ಕೆ ಹಾಕಲಾಗುತ್ತದೆ. ಕೆಲವೊಮ್ಮೆ ನ್ಯಾಯಾಲಯಗಳು ಚೆಕ್‌ಬೌನ್ಸ್ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಜಮೀನುಗಳಿಗೆ ಋಣಭಾರ ಪತ್ರ ಹಾಕಲು ಸಬ್‌ರಿಜಿಸ್ಟ್ರಾರ್‌ಗಳಿಗೆ ನಿರ್ದೇಶನ ನೀಡಿರುತ್ತದೆ. ಅದರಂತೆ ಇಸಿ ನಂತರ ಆರ್‌ಟಿಸಿಯಲ್ಲೂ ನಮೂದು ಆಗಿರುತ್ತದೆ. ಕೆಲವೊಮ್ಮೆ ಸರ್ಕಾರಕ್ಕೆ ಬರಬೇಕಾದ ಭೂಕಂದಾಯ ಹಾಗೂ ಇನ್ನಿತರ ಹಣ ಬರಬೇಕಿದ್ದರೂ ಕೆಲವು ಪ್ರಾಧಿಕಾರಗಳು ಜಮೀನುಗಳನ್ನು ಅಟ್ಯಾಚ್‌ಮೆಂಟ್ ಮಾಡುತ್ತಾರೆ. ಅವುಗಳು ಕೂಡಾ ಸಂಬಂಧಪಟ್ಟ ದಾಖಲೆಗಳಲ್ಲಿ ಎಂಟ್ರಿ ಆಗಿರುತ್ತವೆ. ಉದಾಹರಣೆಗೆ ಇನ್‌ಕಮ್‌ಟ್ಯಾಕ್ಸ್ ಟ್ರಿಬ್ಯೂನಲ್, ಜಾರಿ ನಿರ್ದೇಶನಾಲಯ, ಜಾಮೀನುಗಳಿಗೆ ನೀಡುವ ಆಸ್ತಿ ಭದ್ರತೆಗಳನ್ನು ಸಹ ಖಾತಾ ಮಾಡಿ ಋಣಗಳನ್ನು ನಮೂದಿಸಲಾಗುತ್ತದೆ.

* ಭೂ ಮಂಜೂರಾದ ಬಾಬ್ತು ಖಾತಾ ಬದಲಾವಣೆ:
ಕೆಲವೊಮ್ಮೆ ಸರ್ಕಾರವು ಸಾಮಾಜಿಕ ಕಲ್ಯಾಣ ಕಾರ್ಯಕ್ರಮದಡಿ ಭೂಮಿಯನ್ನು ನೀಡುತ್ತದೆ. ಉದಾಹರಣೆಗೆ ಮಿಲಿಟರಿಯಿಂದ ನಿವೃತ್ತಿಯಾದ ಅಧಿಕಾರಿ/ ಸಿಬ್ಬಂದಿಗೆ ಅವರ ಜೀವನೋಪಾಯಕ್ಕಾಗಿ ಜಮೀನುಗಳನ್ನು ಮಂಜೂರು ಮಾಡುತ್ತದೆ. ಅಂತವುಗಳು ಕೂಡ ಆರ್‌ಟಿಸಿಯಲ್ಲಿ ನಮೂದಾಗಿರುತ್ತದೆ.

* ಭೂ ಸುಧಾರಣಾ- ಇನಾಮು ಪ್ರಕರಣಗಳ ಆದೇಶದಂತೆ ಖಾತಾ ಬದಲಾವಣೆ:
ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಸಾಮಾಜಿಕ ಹಿಂದುಳಿದ ವರ್ಗಗಳಿಗೆ ಜೀವನ ಸುಧಾರಿಸಲು ಜಮೀನುಗಳನ್ನು ನೀಡುತ್ತದೆ. ಅದನ್ನು ಸಹ ನಮೂದು ಮಾಡಲಾಗುತ್ತದೆ.

Related News

spot_img

Revenue Alerts

spot_img

News

spot_img