ಕೃಷಿ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಎಂತಹ ದೊಡ್ಡ ಹುದ್ದೆಯಲ್ಲಿ ಇದ್ದವರೂ ಸಹ ಒಂದಷ್ಟು ಕೃಷಿ ಜಮೀನು ಇದ್ದರೆ ಸಾಕು ಹಾಯಾಗಿ ಕೃಷಿ ಮಾಡಿಕೊಂಡು ಕಾಲ ಕಳೆಯುತ್ತೇವೆ ಎಂದು ಯೋಚಿಸುತ್ತಾರೆ. ಆದರೆ, ನಿಮ್ಮ ಹೆಸರಿನಲ್ಲಿ ಎಷ್ಟೇ ಜಮೀನು ಇದ್ದರೂ ಸಹ ಅದು ಅಧಿಕೃತವಾಗಿ ನಿಮ್ಮ ಹೆಸರನಲ್ಲಿದೆ ಎಂಬುದಕ್ಕೆ ಆರ್‌ಟಿಸಿ (Record of Rights, Tenancy and Crops) ಅಥವಾ ಪಹಣಿ ಎಂದು ಕರೆಯಲಾಗುವ ದಾಖಲೆ ನಿಮ್ಮ ಬಳಿ ಇರಬೇಕು.
ಆರ್‌ಟಿಸಿಯನ್ನು ಪಹಣಿ ಎಂದಲೂ, ಉತ್ತರ ಕರ್ನಾಟಕ ಭಾಗದಲ್ಲಿ ಉತಾರ ಎಂದಲೂ ಕರೆಯುತ್ತಾರೆ. ಮುಖ್ಯವಾಗಿ ನಿಮ್ಮ ಹೆಸರಿನಲ್ಲಿ ಪಹಣಿ ಇದ್ದರೆ ನೀವು ಭೂಮಿಯ ಒಡೆಯರು ಎಂದೇ ಲೆಕ್ಕ
ಕೃಷಿ ಜಮೀನು ನಿಮ್ಮ ಹೆಸರಿನಲ್ಲಿ ಇರುವುದರ ದಾಖಲೆಯೇ ಆರ್‌ಟಿಸಿ. ಆರ್‌ಟಿಸಿ ಎಂದರೆ ಕೃಷಿ ಭೂಮಿಗೆ ಸಂಬಂಧಿಸಿದಂತೆ ಸವಿವವರ ಉಳ್ಳ ಸರ್ಕಾರಿ ಅಧಿಕೃತ ಖಾತೆ. ಆರ್‌ಟಿಸಿಯಲ್ಲಿ ಒಟ್ಟಾರೆ 16 ಕಾಲಂಗಳು ಇರುತ್ತವೆ. ಅವುಗಳು ಏನೆಂದು ಮುಂದೆ ತಿಳಿಯುತ್ತಾ ಹೋಗೋಣ.
ಪಹಣಿಯಲ್ಲಿ ಇರುವ ವಿವರಗಳೇನು?
ಒಂದು ಪಹಣಿಯನ್ನು ಸಂಪೂರ್ಣವಾಗಿ ಗಮನಿಸಿ ನೋಡಿದಾಗ ಅದರಲ್ಲಿ ವಿವಿಧ ಕಾಲಂಗಳು ಇರುತ್ತವೆ. ಕಾಲಂ ನಂಬರ್ 3ರಲ್ಲಿ ಜಮೀನು ಒಟ್ಟಾರೆ ಎಷ್ಟಿದೆ ಎಂದು ಹೇಳುತ್ತದೆ. ಕಾಲಂ ನಂಬರ್ 9ರಲ್ಲಿ ಖರಾಬು ಜಮೀನು ಕಳೆದು ಒಟ್ಟಾರೆ ಜಮೀನು ಎಷ್ಟಿದೆ ಎಂಬ ವಿವರಗಳು ಇರುತ್ತವೆ.
ಇದಲ್ಲದೆ, ಆರ್‌ಟಿಸಿಯಲ್ಲಿ ಸರ್ವೆ ಸಂಖ್ಯೆಗಳು, ಹಿಸ್ಸಾ (ಒಂದೇ ಸರ್ವೆ ಸಂಖ್ಯೆಯಲ್ಲಿ ಭಾಗ ಮಾಡಲಾದ ಜಮೀನುಗಳ ಪ್ರತಿ ವ್ಯಕ್ತಿಗೆ ಒಂದು ಹಿಸ್ಸಾ ಸಂಖ್ಯೆ ನೀಡಲಾಗುತ್ತದೆ), ಮಾಲೀಕರ ಹೆಸರು, ಯಾವ ರೀತಿ ಮಾಲೀಕತ್ವ ಬಂತು ಎಂಬ ಮ್ಯುಟೇಷನ್ ಸಂಖ್ಯೆ ಆರ್‌ಟಿಸಿಯಲ್ಲಿ ಇರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್‌ಸಿಎಸ್‌ಟಿ) ಜಮೀನಿನ ಬಗ್ಗೆ ಅಥವಾ ದರಖಾಸ್ತು ಇನ್ನಿತರ ಜಮೀನುಗಳ ನಮೂದು ಸಹ ಇರುತ್ತದೆ. ಜೊತೆಗೆ ಋಣಗಳು ಕಾಲಂನಲ್ಲಿ ಆ ಜಮೀನಿಗೆ ಸಂಬಂದಿಸಿದಂತೆ ಸಾಲ ಇನ್ನಿತರ ನಮೂದುಗಳು ಇರುತ್ತದೆ. ಎಷ್ಟು ಮೊತ್ತದ ಸಾಲ ಮತ್ತು ಯಾವ ಬ್ಯಾಂಕ್‌ನ ನಡುವೆ ಸಾಲ ಇದೆ ಎಂಬುದರ ವಿವರ ಇರಲಿದೆ.
ಹೆಸರು ಇದ್ದರೆ ಸಾಲದು..
ಅನುಭವದಾರ ಕಾಲಂನಲ್ಲಿ ಯಾರು ಜಮೀನನ್ನು ಅನುಭವಿಸುತ್ತಿದ್ದಾರೆ ಎಂಬುದರ ಉಲ್ಲೇಖ ಇರುತ್ತದೆ. ಮಾಲೀಕರ ಕಾಲಂನಲ್ಲಿ ಹೆಸರಿರುವವರು ಅನುಭವದಾರರ ಕಾಲಂನಲ್ಲಿ ಇರಬೇಕೆಂದೇನಿಲ್ಲ, ಅನುಭವದಾರರ ಕಾಲಂನಲ್ಲಿದ್ದವರು ಮಾಲೀಕರ ಕಾಲಂನಲ್ಲಿ ಇರಬೇಕೆಂದೇನಿಲ್ಲ. ಆರ್‌ಟಿಸಿ ನಮೂದು ಇದ್ದ ತಕ್ಷಣವೇ ಭೂ ಮಾಲೀಕರು ಎಂದು ಹೇಳಿಕೊಳ್ಳುವಂತಿಲ್ಲ. ಎಷ್ಟೋ ಆರ್‌ಟಿಸಿಗಳಲ್ಲಿ ನಮೂದು ಇರುವವರು ನೋಂದಾದ ದಾಖಲೆಗಳಲ್ಲಿ ನಮೂದು ಇರುವುದಿಲ್ಲ.
ಕೆಲವೊಮ್ಮೆ ಭೂ ಸುಧಾರಣಾ ಕಾಯ್ದೆ ಮತ್ತು ಭೂಕಂದಾಯ ಕಾಯ್ದೆ ಅನ್ವಯ ಕೃಷಿ ಜಮೀನು ಎಷ್ಟು ಇರಬೇಕು ಎಂಬೆಲ್ಲಾ ವಿಚಾರಗಳ ಬಗ್ಗೆ ಉಲ್ಲೇಖವಿದೆ. ಈ ಕಾಯ್ದೆಗಳು ಉಲ್ಲಂಘನೆಯಾದ ಸಂದರ್ಭದಲ್ಲಿ ಅವುಗಳನ್ನು ಸಹ ಸೂಕ್ತ ಕಂದಾಯ ಅಧಿಕಾರಿಗಳ ಅರೆನ್ಯಾಯಿಕ ಆದೇಶಗಳ ಅನ್ವಯ ಆರ್‌ಟಿಸಿ ಕಲಂನಲ್ಲಿ ನಮೂದು ಇರುತ್ತದೆ.
ಆರ್‌ಟಿಸಿಯಲ್ಲಿ ಆ ಜಮೀನಿನಲ್ಲಿ ಯಾವ ಬೆಳೆ ಬೆಳೆದಿದ್ದಾರೆ ಎಂಬ ಬಗ್ಗೆ ಸಹ ನಮೂದು ಇರುತ್ತದೆ. ಆ ಜಮೀನಿನ ತರಹೆ ಕಾಲಂನಡಿ ಖುಷ್ಕಿ (ಒಣ ಭೂಮಿ), ತರಿ (ನೀರಾವರಿ), ಭಾಗಾಯತ್ (ಪ್ಲಾಂಟೇಷನ್ ಬೆಳೆಗಳು) ಎಂಬ ಬಗ್ಗೆಯೂ ಸಹ ವಿವರಣೆ ಇರಲಿದೆ. ಇದಲ್ಲದೆ, ಮಣ್ಣಿನ ಬಣ್ಣ ಉದಾಹರಣೆಗೆ ಕೆಂಪು, ಕಪ್ಪು ಇನ್ನಿತರ ವಿಚಾರಗಳು ಸಹ ಆರ್‌ಟಿಸಿಯಲ್ಲಿ ನಮೂದು ಇರುತ್ತದೆ.
ಆರ್‌ಟಿಸಿಯಲ್ಲಿನ ಅಂಶಗಳನ್ನು ಬದಲಾವಣೆ ಮಾಡುವ ತಿದ್ದುಪಡಿ ಮಾಡುವ ಎಲ್ಲಾ ವಿಚಾರಗಳು ತಹಶೀಲ್ದಾರ್ ಕಚೇರಿಯಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ, ಒಟ್ಟಾರೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಕೃಷಿ ಜಮಿನಿಗೆ ಕಂದಾಯ ಎಷ್ಟು ಸಹ ಎಂಬ ಮಾಹಿತಿಯನ್ನು ಸಹ ಒಳಗೊಂಡಿರುತ್ತದೆ.
ಆರ್‌ಟಿಸಿಯಲ್ಲಿನ ನಮೂದೂ ಮತ್ತು ಅಕಾರಬಂದ್ ನಮೂದು ಬೇರೆ ಬೇರೆ ಇದ್ದರೆ ಆರ್‌ಟಿಸಿಯನ್ನು ಅಕಾರಬಂದ್‌ವಿನಂತೆ ಬದಲಾವಣೆ ಮಾಡಬೇಕಿರುತ್ತದೆ. ಆದರೆ, ಆರ್‌ಟಿಸಿಯಂತೆ ಅಕಾರಬಂದ್‌ವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ.