22 C
Bengaluru
Sunday, December 22, 2024

ಜಮೀನಿನ ಟಿಪ್ಪಣೆ ಎಂದರೇನು; ಟಿಪ್ಪಣಿ ಕಳೆದು ಹೋಗಿದ್ದರೆ ಏನು ಮಾಡಬೇಕು

ಜಮೀನು ಎಲ್ಲಿದೆ, ಅದರ ಮೂಲ ದಾಖಲೆ ಹೇಗಿತ್ತು ಎಂಬುದನ್ನು ಈ ಮೂಲ ಟಿಪ್ಪಣಿಯಲ್ಲಿ ಸಿಗುತ್ತದೆ. ಹೀಗಾಗಿ ಟಿಪ್ಪಣಿ ಇಲ್ಲದೆ ಯಾವುದೇ ಜಮೀನಿನ ನೋಂದಣಿ ಆಗುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಈ ಟಿಪ್ಪಣಿ ಲಭ್ಯ ಇರುತ್ತದೆ. ಆದರೆ, ಕೆಲವೊಮ್ಮ ಅದು ಸರ್ಕಾರಿ ಭೂ ದಾಖಲೆಗಳಲ್ಲಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಹೊಸದಾಗಿ ಟಿಪ್ಪಣಿ ರಚನೆಯಾಗದೆ ಜಮೀನು ನೋಂದಣಿ ಸಾಧ್ಯವಾಗುವುದಿಲ್ಲ.

ಟಿಪ್ಪಣಿ ಎಂದರೆ ಸರ್ವೆ ಇಲಾಖೆಯಲ್ಲಿ ಜಮೀನಿನ ಬಗ್ಗೆ ಸಿಗುವ ಒಂದು ದಾಖಲೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಸರ್ವೆ ಮಾಡಿಸಿ ಜಮೀನುಗಳ ಬಗ್ಗೆ ತಕ್ಕಮಟ್ಟಿಗೆ ದಾಖಲೆ ಸೃಷ್ಟಿ ಮಾಡಿರುತ್ತಾರೆ.

ಈ ದಾಖಲೆಯನ್ನು ಮೂಲ ಟಿಪ್ಪಣಿ ಎಂದು ಕರೆಯುತ್ತೇವೆ. ಮೂಲ ಟಿಪ್ಪಣಿ ಮಾಡುವಾಗ ಜಮೀನಿಗೆ ಬೌಂಡರಿ ಗುರುತಿಸಿ ಕಲ್ಲು ನೆಡುವುದು, ಮರ, ಕೆರೆ ಇವುಗಳನ್ನು ಗುರುತು ಸ್ಥಳಗಳಾಗಿ (ರೆಫರೆನ್ಸ್ ಪಾಯಿಂಟ್ಸ್) ಆಗಿ ಇಟ್ಟುಕೊಂಡು ಸರ್ವೆ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ನಕಾಶೆ ತಯಾರು ಮಾಡಿ ಭೂ ದಾಖಲೆಗಳ ಇಲಾಖೆಯಲ್ಲಿ ಶೇಖರಣೆ ಮಾಡಿರುತ್ತಾರೆ. ಇದು ಒಂದು ಕಚ್ಚಾ ಮಾದರಿಯ ಭೂಮಿಯ ಅಳತೆ ಮಾಡುವ ವಿಧಾನವಾಗಿತ್ತು.

ತದನಂತರ ಸ್ವಾತಂತ್ರ್ಯ ಬಂದ ಬಳಿಕ ಪುನಃ ಆ ಜಮೀನುಗಳನ್ನು ಸರ್ವೆ ಮಾಡಿಸಿ ಆಗಿರುವ ಸಣ್ಣಪುಟ್ಟ ವ್ಯತ್ಯಾಸಗಳು ಹಾಗೂ ಭೂಮಿಯ ಮೇಲಾಗುವ ಸ್ವಾಭಾವಿಕ ಪರಿಸರ ಬದಲಾವಣೆಗೆ ಅನುಗುಣವಾಗಿ ಆಗಿರುವ ವ್ಯತ್ಯಾಸಗಳನ್ನು ದಾಖಲಿಸಿ ಸರ್ವೆ
ಇಲಾಖೆಯಲ್ಲಿ ಶೇಖರಣೆ ಮಾಡಿರುತ್ತಾರೆ. ಇದನ್ನು ಹಿಸ್ಸಾ ಟಿಪ್ಪಣಿ ಎಂದು ಎಂದು ಕರೆಯುತ್ತಾರೆ.

11E ನಕ್ಷೆ ಮಾಡಿಸಬೇಕು:
ಪ್ರತಿಯೊಂದು ಜಮೀನುಗಳಿಗೆ ಟಿಪ್ಪಣಿ ರೆಫರೆನ್ಸ್ ಪಾಯಿಂಟ್ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜಮೀನುಗಳ ಕ್ರಯ, ವಿಭಾಗ, ದಾನ ಪತ್ರಗಳನ್ನು ಮಾಡಿಸಿ ನೋಂದಣಿ ಮಾಡುವಾಗ 11E ನಕ್ಷೆಗಳನ್ನು ಉಪನೋಂದಣಾಧಿಕಾರಿಗಳು ಕೇಳುತ್ತಾರೆ. 11E ನಕ್ಷೆ ಮಾಡುವಾಗ ಸಂಬಂಧಿಸಿದ ವ್ಯಕ್ತಿಯು ಆರ್‌ಟಿಸಿಯೊಡನೆ ಭೂ ದಾಖಲೆಗಳ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ನಂತರ ಭೂ ದಾಖಲೆಯ ಇಲಾಖೆಯವರ ಪರವಾನಗಿ ಹೊಂದಿದ ಭೂ ಮಾಪಕರಿಗೆ ಆ ಅರ್ಜಿಯನ್ನು ಸ್ಥಳ ಪರಿಶೀಲನೆ ಮಾಡಿ ಟಿಪ್ಪಣಿಯೊಡನೆ 11E ನಕ್ಷೆ ತಯಾರಿಸಲು ವಹಿಸುತ್ತಾರೆ. ಪರವಾನಗಿ ಪಡೆದ ಭೂ ಮಾಪಕರು ಸರ್ವೆ ಇಲಾಖೆಯಿಂದ ಟಿಪ್ಪಣಿಯನ್ನು ಪಡೆದು ಸ್ಥಳಕ್ಕೆ ಹೋಗಿ ಟಪ್ಪಣಿ ಆನುಸಾರ 11E ನಕ್ಷೆಯನ್ನು ತಯಾರಿಸಿ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಅದರ ಬಳಿಕ ಉಪನೋಂದಣಾಧಿಕಾರಿ ಕಚೇರಿಯಲ್ಲಿ 11E ನಕ್ಷೆ ನಮೂದಿಸಿ ವರ್ಗಾವಣೆ ಪತರ್ರಗಳು ಅಂದರೆ ಕ್ರಯ, ದಾನ, ವಿಭಾಗ ಪತ್ರಗಳು ನೋಂದಣಿಯಾದ ನಂತರ ಉಪನೋಂದಣಾಧಿಕಾರಿ ಕಚೇರಿಯಿಂದ
J-ಫಾರಂ ತಹಶೀಲ್ದಾರ್ ಕಚೇರಿಗೆ ವಿದ್ಯುನ್ಮಾನ ಮೂಲಕ ಹೋಗಿ ತದನಂತರ ಆರ್‌ಟಿಸಿ ಅಪ್‌ಡೇಟ್ ಮಾಡಲು ಸಹಕಾರಿ ಆಗುತ್ತದೆ.

ಕೆಲವು ಸಂದರ್ಭಗಳಲ್ಲಿ ಕೆಲವು ಜಮೀನುಗಳಿಗೆ ಟಿಪ್ಪಣಿ ಇರುವುದಿಲ್ಲ. ಅಥವಾ ಹುಡುಕಿದಾಗ ಸಿಗದೇ ಇದ್ದ ಪಕ್ಷದಲ್ಲಿ 11E ನಕ್ಷೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ತದನಂತರ ಸರ್ವೆಯರ್‌ಗಳು ಸ್ಥಳ ಪರಿಶೀಲನೆ ಮಾಡಿ ಟಿಪ್ಪಣಿ ತಯಾರಿಸಿ ಸಂಬಂಧಪಟ್ಟ ಭೂ ದಾಖಲೆಗಳ ಇಲಾಖೆಯ ಮೇಲಾಧಿಕಾರಿಗಳಿಂದ ಅನುಮೋದನೆ ಪಡೆದು ಟಿಪ್ಪಣಿ ವಹಿಗೆ ಆ ಟಿಪ್ಪಣಿಯನ್ನು ಸೇರಿಸಿ ನಂತರ 11E ನಕ್ಷೆ ಕೊಡುವ ಪದ್ಧತಿ ಇದೆ.

Related News

spot_img

Revenue Alerts

spot_img

News

spot_img