ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನೇ ದಿನ ಕಾರ್ ಪೂಲಿಂಗ್ ಕಾವು ಹೆಚ್ಚುತ್ತಲೇ ಇದೆ. ಯಾಕೆಂದರೆ ಸಂಸದ ತೇಜಸ್ವಿ ಸೂರ್ಯ, ಸಿಎಂ ಸಿದ್ದರಾಮಯ್ಯನವರಿಗೆ ಕಾರ್ ಪೂಲಿಂಗ್ ನಿಷೇಧ ಮಾಡದಂತೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಆಟೋ ಚಾಲಕರ ಸಂಘಗಳು ತೇಜಸ್ವಿ ಸೂರ್ಯ ವಿರುದ್ಧ ಫುಲ್ ಗರಂ ಆಗಿದ್ದವು. ಇನ್ನು ಅಷ್ಟೇ ಸಾಲದ್ದಕ್ಕೆ ಆಟೋ ಚಾಲಕನೊಬ್ಬ ತನ್ನ ಆಟೋ ಹಿಂದೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಧಿಕ್ಕಾರ ಕೂಗುವ ಪೋಸ್ಟರ್ ಅಂಟಿಸಿಕೊಂಡಿದ್ದ, ಇದನ್ನ ನಾಲ್ಕು ಜನ ಗೂಂಡಾಗಳು ಬಂದು ಪ್ರಶ್ನೆ ಮಾಡಿ ಆತನನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿ ಥಳಿಸಿದ್ದರು. ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಆಟೋ ಚಾಲಕರ ಸಂಘಗಳು ಆಕ್ರೋಶ ಹೊರ ಹಾಕಿದ್ದವು.
ಕಾರ್ ಪೂಲಿಂಗ್ ಎಂದರೇನು.?
ಪ್ರತಿದಿನ ಕಚೇರಿಗಳಿಗೆ ಕಾರಿನಲ್ಲಿ ಹೋಗುವ ಉದ್ಯೋಗಿಗಳಲ್ಲಿ ಕಾರ್ ಪೂಲಿಂಗ್ ಜನಪ್ರಿಯ. ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜೊತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು.ಕ್ವಿಕ್ ರೈಡ್ (QuickRide), ಝೂಮ್ (Zoom Car), ಬ್ಲಾಬ್ಲಾ ಕಾರ್ (BlaBlaCar) ಇತ್ಯಾದಿ ಮೊಬೈಲ್ ಆ್ಯಪ್ಗಳನ್ನು ಕಾರ್ ಪೂಲಿಂಗ್ ಗೆ ಬಳಸಲಾಗುತ್ತೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಖಾಸಗಿ ಸಾರಿಗೆ ಒಕ್ಕೂಟಗಳ ಅಧ್ಯಕ್ಷ ನಟರಾಜ್ ಶರ್ಮಾ, ಸಂಸದ ತೇಜಸ್ವಿ ಸೂರ್ಯ ನಡೆಗೆ ಛೀಮಾರಿ ಹಾಕಿದ್ದಾರೆ. ಕಾರ್ ಪೂಲಿಂಗ್ ಬಗ್ಗೆ ಮಾತನಾಡಬೇಕಾದ್ರೆ ಮೊದಲು ಮೋಟಾರ್ ಆ್ಯಕ್ಟ್ ಬಗ್ಗೆ ತಿಳಿದುಕೊಂಡು ಮಾತನಾಡಬೇಕು.ಏನೂ ತಿಳಿಯದೆ ಮಕ್ಕಳ ರೀತಿ ಮಾತನಾಡಿ ಆಟೋ ಚಾಲಕರ ಹೊಟ್ಟೆ ಮೇಲೆ ಹೊಡೆಯುವುದರಲ್ಲಿ ಯಾವ ನೈತಿಕತೆ ಇದೆ.? ಸಂಚಾರ ದಟ್ಟಣೆ ಕಡಿಮೆ ಮಾಡಲು ನೀವು ಸಂಸದರು ಹಾಗೂ ಇನ್ನು ಳಿದ ಸರ್ಕಾರದ ಅಧಿಕಾರಿಗಳಯ ಯಾಕೆ ಪ್ರತ್ಯೇಕವಾದ ವಾಹನಗಳನ್ನ ಬಳಕೆ ಮಾಡ್ತೀರಾ.? ಜೀರೋ ಟ್ರಾಫಿಕ್ ಬಳಸ್ತೀರಾ.? ಬದಲಾಗಿ ನೀವೆಲ್ಲಾ ಇಂತಿಷ್ಟು ಜನಕ್ಕೆ ಒಂದು ವಾಹನ ಎಂದು ಮಾಡಿಕೊಂಡು ಸುತ್ತಾಡಿ. ಅಲ್ಲದೆ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರಿ ಬಸ್ ಉಪಯೋಗ ಮಾಡುವುದಕ್ಕೆ ಪ್ರೇರೆಪಿಸಿ ಅಥವಾ ಬೇರೆ ಪರಿಹಾರ ಕಂಡು ಹಿಡಿಯಿರಿ ಅದು ಬಿಟ್ಟು ಬಡ ಚಾಲಕರ ಮೇಲೆ ಬಕಾಸುರರಂತೆ ಬಿದ್ದು ಅವರ ಅನ್ನ ಕಸಿದುಕೊಳ್ಳಬೇಡಿ ಎಂದು ಆಕ್ರೋಶ ಹೊರ ಹಾಕಿದರು.
ವೈಟ್ ಬೋರ್ಡ್ ನಲ್ಲಿ ಕಾರ್ ಪೂಲಿಂಗ್ ಮಾಡಲು ಯಾಕೆ ಅವಕಾಶವಿಲ್ಲ .?
ವೈಟ್ ಬೋರ್ಡ್ ಇರುವ ಖಾಸಗಿ ವಾಹನಗಳನ್ನು ಕಾರ್ ಪೂಲಿಂಗ್ ಮೂಲಕ ಕಮರ್ಷಿಯಲ್ ಲಾಭಕ್ಕೆ ಬಳಕೆ ಮಾಡ್ತಿದ್ದಾರೆ. ಬೇರೆ ಬೇರೆ ಟ್ರಾನ್ಸ್ಪೋರ್ಟ್ ಆ್ಯಪ್ಗಳನ್ನು ಬಳಸಿ ಕಾರ್ ಪೂಲಿಂಗ್ ಮಾಡಲಾಗುತ್ತಿದೆ. ಇದರಿಂದ ಕಮರ್ಷಿಯಲ್ ಲೈಸೆನ್ಸ್ ಹೊಂದಿರುವ ಟ್ಯಾಕ್ಸಿ ವಾಹನಗಳ ಆರ್ಥಿಕ ವ್ಯವಹಾರಗಳಿಗೆ ಕುತ್ತಾಗುತ್ತಿದೆ ಎಂಬ ವ್ಯಾಪಕ ವಿರೋಧ ಕೇಳಿ ಬರುತ್ತಿದೆ. ಟ್ಯಾಕ್ಸಿ ಕಾರುಗಳು ಸಾಕಷ್ಟು ದುಬಾರಿ ಶುಲ್ಕ ತೆತ್ತು ಕಮರ್ಷಿಯಲ್ ಲೈಸೆನ್ಸ್ ಪಡೆದಿರುತ್ತವೆ. ಪ್ರೈವೇಟ್ ವಾಹನಗಳನ್ನು ಈ ರೀತಿ ಶುಲ್ಕ ಇಲ್ಲದೇ ಕಮರ್ಷಿಯಲ್ ಆಗಿ ಬಳಕೆ ಮಾಡಲು ಅವಕಾಶ ಕೊಡುವುದು ಎಷ್ಟು ಸರಿ ಎಂಬುದು ಟ್ಯಾಕ್ಸಿ ಚಾಲಕರ ಪ್ರಶ್ನೆ? ಪ್ರಯಾಣಿಕರ ಸುರಕ್ಷತೆ, ಇನ್ಶುರೆನ್ಸ್ , ದರ ಇದ್ಯಾವುದರ ಬಗ್ಗೆ ಕೂಡ ನಿಗಧಿತ ಮಾಹಿತಿ ಇಲ್ಲ. ಹೀಗಾಗಿ ಇದು ಖಾಸಗಿ ಚಾಲಕರಿಗೆ ಬಹುತೇಕ ಸಮಸ್ಯೆಯಾಗ್ತಿದೆ.
ಅಭಿಜಿತ್ ರೆವಿನ್ಯೂ ಫ್ಯಾಕ್ಟ್ ನ್ಯೂಸ್. ಬೆಂಗಳೂರು