ಬೆಂಗಳೂರು, ಮೇ. 01 : ಬ್ಯಾಂಕ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಪಡೆದು ಅರಾಮವಾಗಿ ಏನು ಬೇಕಿದ್ದರೂ ಖರೀದಿಸಬಹುದು. ನಮ್ಮ ಬ್ಯಾಂಕ್ ಖಾತೆಯ ವಹಿವಾಟನ್ನು ನೋಡಿ, ಬ್ಯಾಂಕ್ ಗಳೇ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತವೆ. ಈ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಸಂಬಳ ಬರುವುದಕ್ಕೂ ಮುನ್ನವೇ ಏನು ಬೇಕೋ ಅದನ್ನು ಖರೀದಿಸಬಹುದು. ಹಾಗಾಗಿ ಈಗ ಎಲ್ಲರೂ ಕ್ರೆಡಿಟ್ ಕಾರ್ಡ್ ಅನ್ನು ಬಳಸಲು ಇಷ್ಟ ಪಡುತ್ತಾರೆ. ಆದರೆ ಈ ಕ್ರೆಡಿಟ್ ಕಾರ್ಡ್ ಬಳಸುವುದರ ಬಗ್ಗೆ ಎಚ್ಚರ ಇರಬೇಕು.
ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಲ್, ಮಾರ್ಟ್ ಗಳು, ಹೋಟೆಲ್ ಗಳು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಸ್ವೈಪ್ ಮಾಡಬಹುದು. ನಿಮ್ಮ ಕಾರ್ಡ್ ನಲ್ಲಿ ಹಣದ ಲಿಮಿಟ್ ಎಷ್ಟಿರುತ್ತದೋ ಅಷ್ಟನ್ನೇ ಬಳಸುವುದು ಸೂಕ್ತ. ಇನ್ನು ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ ಹಣವಿದೆ ಎಂದು ಡೆಬಿಟ್ ಕಾರ್ಡ್ ಬಳಸಿದಂತೆ ಬಳಸಿದರೆ ಕಷ್ಟವಾಗುತ್ತದೆ. ಎಟಿಎಂಗಳಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಹಣ ವಿತ್ ಡ್ರಾ ಮಾಡದಿರಿ. ಹಣ ವಿತ್ ಡ್ರಾ ಮಾಡಿದರೆ ಹೆಚ್ಚಿನ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಇದರಿಂದ ನಿಮಗೆ ಹೊರೆಯಾಗುತ್ತದೆ.
ಹಣ ವಿತ್ ಡ್ರಾ ಮಾಡಲು ಬ್ಯಾಂಕ್ ಗಳು ಅವಕಾಶ ಕೊಟ್ಟಿರುತ್ತವೆ. ಹಾಗಿದ್ದರೂ ಬಡ್ಡಿದರ ಹೆಚ್ಚಿರುವುದರಿಂದ ಕೊಂಚ ಜಾಗರೂಕರಾಗಿರಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ನಲ್ಲಿ ಶೇ. 20 ರಿಂದ 40ರಷ್ಟು ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿರುತ್ತದೆ. ಅಂದರೆ, ನಿಮ್ಮ ಕ್ರೆಡಿಟ್ ಕಾರ್ಡ್ ನಲ್ಲಿ 5 ಲಕ್ಷ ರೂಪಾಯಿ ಹಣವನ್ನು ಬಳಸಬಹುದು ಎಂದಾದರೆ, ಕನಿಷ್ಠ 2 ಲಕ್ಷ ರೂಪಾಯಿ ಅನ್ನು ವಿತ್ ಡ್ರಾ ಮಾಡಿಕೊಳ್ಳಲು ಅನುಮತಿ ಇರುತ್ತದೆ. ಆದರೆ ಇದಕ್ಕೆ ನೀವು ಹೆಚ್ಚಿನ ದರದಲ್ಲಿ ಬಡ್ಡಿ ಹಣವನ್ನು ಕಟ್ಟ ಬೇಕಾಗುತ್ತದೆ. ಇದು ನಿಮಗೆ ಹೊರೆಯಾಗುವುದರಲ್ಲಿ ಡೌಟೇ ಇಲ್ಲ.
ಕ್ರೆಡಿಟ್ ಕಾರ್ಡ್ ನಲ್ಲಿ ನೀವು 2 ಲಕ್ಷ ರೂಪಾಯಿ ಹಣವನ್ನು ವಿತ್ ಡ್ರಾ ಮಾಡಿದ್ದೀರಿ ಎಂದಾದರೆ, ಶೇಕಡಾ ಎರಡು ಮೂರು ಪಟ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಎರಡು ಲಕ್ಷ ಹಣಕ್ಕೆ ಕನಿಷ್ಠ ಎಂದರೂ 5 ರಿಂದ 6 ಸಾವಿರ ರೂಪಾಯಿ ವರೆಗೂ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಇದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತದೆ. ಯಾಕಾದರೂ ಹಣವನ್ನು ವಿತ್ ಡ್ರಾ ಮಾಡಿದೆನೋ ಎಂದು ಯೋಚಿಸಬೇಕಾಗುತ್ತದೆ. ಅಲ್ಲದೇ, ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಭಾರೀ ದೊಡ್ಡ ಪರಿಣಾಮ ಬೀರುತ್ತದೆ. ನೀವು ಪದೇ ಪದೇ ಹಣವನ್ನು ವಿತ್ ಡ್ರಾ ಮಾಡುತ್ತಿದ್ದರೆ, ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತಿರುತ್ತದೆ. ಇದರಿಂದ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಬಡ್ಡಿ ರಹಿತ ಗ್ರೇಸ್ ಕೂಡ ಪಡೆಯಲು ಸಾಧ್ಯವಾಗುವುದಿಲ್ಲ.