20.8 C
Bengaluru
Thursday, December 19, 2024

Land Law ಕೃಷಿ ಜಮೀನು ಖರೀದಿಗೆ ಯಾವೆಲ್ಲಾ ದಾಖಲೆಗಳನ್ನು ನೋಡಬೇಕು ಗೊತ್ತಾ ?

#Land #Agriculture land #list of documents

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರ ಒಲವು ಕೃಷಿಯತ್ತ ವಾಲಿದೆ. ಬಹುತೇಕರು ಕೃಷಿ ಜಮೀನು ಫಾರ್ಮ್ ಲ್ಯಾಂಡ್‌ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಆದರೆ ಒಂದು ನಿವೇಶನ ಖರೀದಿ ಮಾಡುವಷ್ಟು ಸುಲಭ ಕೃಷಿ ಜಮೀನು ಖರೀದಿ ಅಲ್ಲ. ಸ್ವಲ್ಪ ಯಾಮಾರಿದರೂ ವಿವಾದಕ್ಕೆ ಒಳಗಾಗಿ ಭೂಮಿಯೂ ಇಲ್ಲ, ಕೊಟ್ಟ ಹಣವೂ ಇಲ್ಲದಂತಾಗುತ್ತದೆ. ಯಾರೇ ಆಗಲಿ ಕೃಷಿ ಜಮೀನು ಖರೀದಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಪರಿಶೀಲಿಸಿ ಅವುಗಳ ನೈಜತೆ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಕೃಷಿ ಜಮೀನು ಖರೀದಿ ಬಗ್ಗೆ ಏನೆಲ್ಲಾ ಮಾಡಬೇಕು ಎಂಬದರ ಸಮಗ್ರ ವಿವರ ಇಲ್ಲಿ ನೀಡಲಾಗಿದೆ.ಸಾಮಾನ್ಯವಾಗಿ ಒಂದು ಕೃಷಿ ಜಮೀನಿಗೆ ಸಂಬಂಧಿಸಿದಂತೆ ಮುಂಗಡ ಕರಾರು ಮಾಡಿಕೊಳ್ಳುವ ಮುನ್ನ ದಾಖಲೆಗಳ ಪರಿಶೀಲನೆ ಅತಿ ಮುಖ್ಯವಾದುದು.

ಮೊದಲು ದಾರಿ ಖಚಿತಪಡಿಸಿಕೊಳ್ಳಿ:ಯಾರೇ ಆಗಲಿ ಕೃಷಿ ಜಮೀನು ಖರೀದಿಸುವ ಮುನ್ನ ಆ ಜಮೀನಿಗೆ ಇರುವ ದಾರಿಯನ್ನು ಖಾತ್ರಿ ಪಡಿಸಿಕೊಳ್ಳಬೇಕು. ಈ ಸಂಬಂಧ ಜಮೀನಿನ ಸರ್ವೆ ನಕ್ಷೆಯನ್ನು ಪರಿಶೀಲಿಸಬೇಕು. ಭೂಮಿಯ ಆಕಾರಕ್ಕೂ ಸರ್ವೆ ನಕ್ಷೆಗೂ ಹೋಲಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು. ಸರ್ವೆ ನಕ್ಷೆ ಹಾಗೂ ಭೂಮಿಯ ಆಕಾರದಲ್ಲಿ ವ್ಯತ್ಯಾಸವಿದ್ದರೆ ಅದರ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಬೇಕು.

ಆರ್‌ಟಿಸಿ ಪರಿಶೀಲನೆ:ಕೃಷಿ ಜಮೀನಿಗೆ ಸಂಬಂಧಿಸಿದಂತೆ ಮೊದಲು ಆರ್‌ಟಿಸಿ ( ಪಹಣಿ) ಯನ್ನು ನೋಡಬೇಕು. ಜಮೀನು ಮಾಲೀಕರ ಒಡೆತನ ಯಾವ ವರ್ಷದಿಂದ ಇದೆ, ಅದರ ಹಿಂದೆ ಯಾರ ಒಡೆತನದಲ್ಲಿತ್ತು ಎಂಬುದನ್ನು ಸಮಗ್ರವಾಗಿ ಪರಿಶೀಲಿಸಲು ಕನಿಷ್ಠ ಪಕ್ಷ 60 ವರ್ಷಗಳ ಆರ್‌ಟಿಸಿಯನ್ನು ನೋಡಬೇಕು. ಹಕ್ಕು ಬದಲಾವಣೆ ಆಗಿದ್ದರೆ ಅದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಆರ್‌ಟಿಸಿಯಲ್ಲಿ ಹಿಸ್ಸಾಂ ಅಥವಾ ಮ್ಯುಟೇಷನ್ ಕಲಂ ನೋಡಬೇಕು. ಜಮೀನಿನ ಮೇಲೆ ಇರುವ ಋಣಭಾರ ತಿಳಿಯಲು ಇದು ಸಹಕಾರಿಯಾಗುತ್ತದೆ. ಅಂದರೆ ಈ ಜಮೀನು ಮೇಲೆ ಸಾಲ ಪಡೆದಿದ್ದರೆ ಅದರ ವಿವರಗಳನ್ನು ಈ ಕಲಂನಲ್ಲಿ ನೋಡಬೇಕು. ಜಮೀನನ್ನು ಸರ್ಕಾರ ಮಂಜೂರು ಮಾಡಿದ್ದರೆ, (Grant Land ) ಆಗಿದ್ದರೆ, ಅದರ ಮಂಜೂರಾತಿ ಪತ್ರವನ್ನು ನೋಡಬೇಕು. ಗ್ರಾಂಟ್‌ ಕಮಿಟಿಯಲ್ಲಿ ನೈಜವಾಗಿ ಮಂಜೂರು ಆಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಆ ಸರ್ವೆ ನಂಬರ್‌ ನಲ್ಲಿ ಎಷ್ಟು ಎಕರೆ ಜಮೀನು ಇದೆ, ಆ ಜಮೀನು ಪೋಡಿ ಆಗಿದೆಯೇ ? ಹದಬಸ್ತು ಮಾಡಲಾಗಿದೆಯೇ ಎಂಬುದನ್ನ ನೋಡಿ. ಒಂದು ವೇಳೆ ಸರ್ಕಾರದ ಮಂಜೂರಾತಿ ಆಧಾರದ ಮೇಲೆ ಪೋಡಿ ಆಗಿದ್ದರೆ ಅದಕ್ಕೆ ಪ್ರತ್ಯೇಕ ಸರ್ವೆ ನಂಬರ್‌ ಕೊಡಲಾಗಿರುತ್ತದೆ. ಅದನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಆರ್‌ಟಿಸಿ ನೋಡುವಾಗ ಈ ಅಂಶಗಳನ್ನು ಪತ್ತೆ ಮಾಡಬಹುದು.

ವಂಶವೃಕ್ಷ ಮಹತ್ವ:ಒಂದು ವೇಳೆ ಆಸ್ತಿಯು ಪಿತ್ರಾರ್ಜಿತವಾಗಿ ಬಂದಿದ್ದರೆ, ಜಮೀನು ಇಬ್ಬಾಗ ಆಗಿದೆಯೇ ಪಾಲುದಾರರ ಹಕ್ಕುಗಳ ಬಗ್ಗೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪಿತ್ರಾರ್ಜಿತ ಅಸ್ತಿಯಾಗಿದ್ದರೆ, ಅದು ಮಕ್ಕಳಿಗೆ , ಮೊಮ್ಮಕ್ಕಳಿಗೂ ಹಕ್ಕುಗಳು ಇರುತ್ತವೆ ಎಂಬುದನ್ನು ಮರೆಯಬಾರದು. ಅಂತಹ ಆಸ್ತಿಯನ್ನು ಖರೀದಿ ಮಾಡುವ ಮುನ್ನ ವಂಶವೃಕ್ಷವನ್ನು ಪಡೆದು, ಹಕ್ಕುಳ್ಳ ಎಲ್ಲರೂ ಹಕ್ಕು ಬಿಡುಗಡೆ ಪತ್ರ ಮಾಡಿಕೊಡಲು ಒಪ್ಪಿದ್ದಾರೆಯೇ ಎಂಬುದನ್ನು ಖರೀದಿ ಮಾಡುವ ಮುನ್ನ ಖಾತ್ರಿ ಪಡಿಸಿಕೊಳ್ಳಬೇಕು.

EC ಪರಿಶೀಲಿಸಿ:ಇಸಿ ಎಂದರೆ ಎನ್‌ಕಂಬರೆನ್ಸ್‌ ಸರ್ಟಿಫಿಕೇಟ್‌ ಎಂದರ್ಥ. ಯಾವುದೇ ಒಂದು ಆಸ್ತಿಯ ವ್ಯವಹಾರಗಳನ್ನು ತಿಳಿಸುವ ಸರ್ಕಾರಿ ದಾಖಲೆ. ಬರೆದುಕೊಟ್ಟವರು, ಬರೆಸಿಕೊಂಡವರು, ಆಸ್ತಿಯ ಚೆಕ್ಕುಬಂದಿ, ನೋಂದಣಿಯಾದ ದಿನಾಂಕ ಎಲ್ಲಾ ಮಾಹಿತಿಗಳನ್ನು ಇಸಿ ಒಳಗೊಂಡಿರುತ್ತದೆ. ಹೀಗಾಗಿ ಯಾವುದೇ ನಿವೇಶನ ಇರಲಿ, ಕೃಷಿ ಜಮೀನು ಇರಲಿ, ಆಸ್ತಿ ಖರೀದಿ ವೇಳೆ ಇಸಿಯನ್ನು ನೋಡಬೇಕು. ಒಂದು ವೇಳೆ ನ್ಯಾಯಾಲಯದ ದಾವೆ ಬಿದಿದ್ದಿದ್ದು ನಮೂದಿಸಿದ್ದರೆ ಇಸಿಯಲ್ಲಿ ಉಲ್ಲೇಖವಾಗಿರುತ್ತದೆ. ಅಥವಾ ಯಾರಿಗಾದರೂ ಮಾರಾಟದ ಕರಾರು ಮಾಡಿಕೊಂಡು ನೋಂದಣಿ ಮಾಡಿದ್ದರೆ ಅಂತಹ ವಿವರಗಳನ್ನು ಈ ದಾಖಲೆಯಿಂದ ನೋಡಿ ಪರಿಶೀಲಿಸಬಹುದು.

Agri Land purchase rules
what documents need for Agriculture land purchase

ಮ್ಯುಟೇಷನ್‌ : ಇದು ಸರ್ವೆ ಇಲಾಖೆ ನೀಡುವ ದಾಖಲೆ. ಯಾವುದೇ ಕೃಷಿ ಜಮೀನು ಖರೀದಿ ಮುನ್ನ ಆ ಆಸ್ತಿಗೆ ಸಂಬಂಧಿಸಿದ ಮ್ಯುಟೇಷನ್ ಕಾಫಿ ನೋಡಬೇಕು. ಆಸ್ತಿಯ ಆಕಾರ ಬಂದ್‌, ಸರ್ವೆ ನಕ್ಷೆ, ಗ್ರಾಮ ನಕ್ಷೆ ಎಲ್ಲವೂ ಈ ಮ್ಯುಟೇಷನ್‌ ಒಳಗೊಂಡಿರುತ್ತದೆ. ಒಂದು ಆಸ್ತಿಯ ಗಡಿ ಗುರುತು ಮತ್ತು ಅದರ ಆಕಾರ, ಚೆಕ್ಕು ಬಂದಿಗಳನ್ನು ಪರಿಶೀಲಿಸಬೇಕಾದರೆ ಈ ದಾಖಲೆಯನ್ನು ಕಡ್ಡಾಯವಾಗಿ ನೋಡಲೇಬೇಕು.

ಸೇಲ್‌ ಡೀಡ್‌ : ಕೃಷಿ ಜಮೀನಿಗೆ ಸಂಬಂಧಿಸಿದಂತೆ ಅದರ ಮಾರಾಟ ಕ್ರಯಪತ್ರವನ್ನು ನೋಡಬೇಕು. ಯಾರು ಯಾರಿಗೆ ಮಾಡಿಕೊಟ್ಟಿದ್ದಾರೆ. ಆಸ್ತಿಯ ವಹಿವಾಟು ಕಾನೂನು ಬದ್ಧವಾಗಿದೆಯೇ ? ಈ ಹಿಂದೆ ಬೇರೆಯವರು ಮಾರಾಟ ಮಾಡಿದ ಜಮೀನು ಅಗಿದ್ದರೆ ಈ ವ್ಯವಹಾರ ಕಾನೂನು ಬದ್ಧವಾಗಿದೆಯೇ ? ಆಸ್ತಿಯು ಪಿತ್ರಾರ್ಜಿತವಾಗಿ ಪಾರ್ಟಿಷಿಯನ್ ಆಗಿ ಬಂದಿದ್ದರೆ ಅದಕ್ಕೆ ಸಂಬಂಧ ಇಬ್ಬಾಗದ ವಿವರಾಂಶಗಳನ್ನು ಸೇಲ್‌ ಡೀಡ್‌ ನಲ್ಲಿ ನೋಡಬಹುದು. ಮತ್ತು ಆಸ್ತಿ ಮಾರಾಟ ಸಂಪೂರ್ಣ ವಿವರಗಳನ್ನು ಸೇಲ್‌ ಡೀಡ್‌ ನಲ್ಲಿ ನೋಡಲು ಸಹಾಯವಾಗುತ್ತದೆ.

ಗ್ರಾಮ ನಕ್ಷೆ: ಯಾವುದೇ ಕೃಷಿ ಜಮೀನಿನ ನೈಜತೆ ಪರಿಶೀಲಿಸಲು ಗ್ರಾಮ ನಕ್ಷೆಯನ್ನು ನೋಡಬೇಕು. ಅದರಲ್ಲಿ ಜಮೀನು ಯಾವ ಭಾಗದಲ್ಲಿದೆ. ಏನಾದರೂ ಸರ್ಕಾರಿ ಭೂಮಿ ಆಗಿದೆಯೇ ? ಜಮೀನಿನ ಅಕ್ಕ ಪಕ್ಕ ಬೇರೆ ಯಾರ ಜಮೀನು ಇದೆ ? ಈ ಜಮೀನು ನಿರ್ದಿಷ್ಟವಾಗಿ ಎಲ್ಲಿ ಬರುತ್ತದೆ ಎಂಬ ವಿವರ ಅರಿಯಲು ಸಹಾಯ ವಾಗುತ್ತದೆ. ಯಾವುದೇ ಕೃಷಿ ಜಮೀನಿನ ಗ್ರಾಮ ನಕ್ಷೆ ಆಯಾ ಗ್ರಾಮ ಪಂಚಾಯಿತಿ ಅಥವಾ ನಾಡ ಕಚೇರಿಯಲ್ಲಿ ಲಭ್ಯವಾಗುತ್ತದೆ. ಅದನ್ನು ಸಹ ಪರಿಶೀಲಿಸಬೇಕು.

ತೆರಿಗೆ ಪಾವತಿ ರಶೀದಿಗಳು: ಕೃಷಿ ಜಮೀನು ಖರೀದಿ ಮುನ್ನ ಅ ಜಮೀನಿಗೆ ಕಂದಾಯ ಪಾವತಿ ಮಾಡಿರುವ ರಶೀದಿಗಳನ್ನು ಪರಿಶೀಲಿಸಬೇಕು. ವರ್ಷಗಳಿಂದ ಕಂದಾಯ ಪಾವತಿ ಮಾಡದಿದ್ದರೆ ಅಂತಹ ಜಮೀನನ್ನು ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದು ಆದೇಶ ಮಾಡಬಹುದು. ಹೀಗಾಗಿ ಕೃಷಿ ಜಮೀನು ಖರೀದಿ ಮಾಡುವ ಮುನ್ನ ಆ ಜಮೀನಿಗೆ ಕಂದಾಯ ಪಾವತಿ ಮಾಡಿರುವ ಇತ್ತೀಚಿನ ರಶೀದಿಗಳನ್ನು ಪರಿಶೀಲಿಸಬೇಕು.

ಮದರ್ ಡೀಡ್‌ : ಯಾವುದೇ ಒಂದು ಆಸ್ತಿಗೆ ಸಂಬಂಧಿಸಿದಂತೆ ಮೊದಲು ಸೃಷ್ಟಿಯಾಗುವ ಡೀಡ್‌ ಮದರ್‌ ಡೀಡ್‌. ಇದು ಒಂದು ಆಸ್ತಿಯ ಮೂಲದ ಬಗ್ಗೆ ಮಾಹಿತಿ ಒಳಗೊಂಡಿರುತ್ತದೆ. ಆಸ್ತಿ ಮಾರಾಟ ಪ್ರಕ್ರಿಯೆ ಮೊದಲ ವ್ಯವಹಾರ ತಿಳಿಸುತ್ತದೆ. ಈ ದಾಖಲೆ ನೋಡುವುದರಿಂದ ಆಸ್ತಿಯ ನೈಜತೆಯನ್ನು ನೋಡಲು ಅನುಕೂಲವಾಗುತ್ತದೆ.

ಇತರೆ ಡೀಡ್‌ ಗಳು: ಮದರ್‌ ಡೀಡ್‌ ಜತೆಗೆ ಒಂದು ಜಮೀನಿಗೆ ಸಂಬಂಧಿಸಿದ ಇತರೆ ಡೀಡ್‌ಗಳನ್ನು ತಪಾಸಣೆ ನಡೆಸಬೇಕು. ಯಾಕೆಂದರೆ, ಒಂದು ಆಸ್ತಿಗೆ ಸಂಬಂಧಿಸದಿಂತೆ ಬೇರೆ ವ್ಯವಹಾರಗಳು ನಡೆದಿದ್ದರೆ, ಅವುಗಳನ್ನು ಪರಿಶೀಲಿಸುವುದರಿಂದ ವ್ಯಾಜ್ಯಗಳಿಂದ ಮುಕ್ತವಾಗಬಹುದು. ಈ ಹಿಂದೆ ನಡೆದಿರುವ ಮಾರಾಟ ವ್ಯವಹಾರದ ಮಾಹಿತಿಯನ್ನು ನೋಡಲು ಇತರೆ ಡೀಡ್‌ಗಳು ಸಹಕಾರಿಯಾಗುತ್ತದೆ. ಪ್ರಸ್ತತ ಆಸ್ತಿಯ ಅಸಲಿ ಮಾಲೀಕರನ್ನು ಗುರುತು ಮಾಡಲು ಸಹಕಾರಿಯಾಗುತ್ತವೆ.

ಆಸ್ತಿ ಮಾಲೀಕರ ವೈಯಕ್ತಿಕ ದಾಖಲೆಗಳು :ಕೃಷಿ ಜಮೀನು ಮಾರಾಟ ಮಾಡುವ ವ್ಯಕ್ತಿಯ ಆಧಾರ್ ಕಾರ್ಡ್‌, ಬ್ಯಾಂಕ್‌ ಪಾಸ್‌ ಬುಕ್‌ ಮತ್ತಿತರ ಗುರುತಿನ ಚೀಟಿಯನ್ನು ನೋಡಬೇಕು. ಆಸ್ತಿಯ ಮಾಲೀಕರ ಹೆಸರು ಮತ್ತು ಗುರುತಿನ ಚೀಟಿಯಲ್ಲಿನ ಹೆಸರಿಗೆ ಹೋಲಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು.

ಎನ್‌ಓಸಿ : ಕೃಷಿ ಜಮೀನು ಖರೀದಿ ಮಾಡುವಂತಿದ್ದರೆ ಮಾರಾಟ ಗಾರ ಆ ಜಮೀನಿನ ಕಂದಾಯ ಬಾಕಿ, ಯಾವುದಾರೂ ಸ್ವಾಧೀನ, ಸರ್ಕಾರಿ ಸ್ವಾಧೀನ ಇಲ್ಲದಿರುವ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಎನ್‌ಓಸಿ ಪಡೆದಿರಬೇಕು. ಮಾರಾಟಗಾರರು ಎನ್‌ಓಸಿ ಪರಿಶೀಲಿಸಬೇಕು. ಸಾಮಾನ್ಯವಾಗಿ ಸರ್ಕಾರದ ಸ್ವಾಧೀನಕ್ಕೆ ಒಳಗಾಗಿದ್ದರೆ ಅಂತಹ ಜಮೀನಿನ ಅರ್‌ಟಿಸಿಯಲ್ಲಿ ಅದರ ವಿವರ ಉಲ್ಲೇಖಿಸಲಾಗಿರುತ್ತದೆ.. ಆಕಸ್ಮಿಕ ಭೂ ಸ್ವಾಧೀನ ಪ್ರಾಥಮಿಕ ಅಧಿಸೂಚನೆಯಾಗಿ ಆರ್‌ಟಿಸಿಯಲ್ಲಿ ನಮೂದು ಆಗದೇ ಇದ್ದ ಪಕ್ಷದಲ್ಲಿ ಅಥವಾ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ತಕಾರರು ಅರ್ಜಿಗಳು ಬಾಕಿ ಇದ್ದಲ್ಲಿ, ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌  ಎಸಿ ನ್ಯಾಯಾಲಯದಲ್ಲಿ ಯಾವುದಾದರೂ ತಕರಾರು ದಾವೆ ಬಾಕಿ ಇದ್ದಲ್ಲಿ ಅವು ಸಾಮಾನ್ಯವಾಗಿ ಗೊತ್ತಾಗುವುದಿಲ್ಲ. ತಹಶಿಲ್ದಾರ್‌ ಎನ್‌ಓಸಿ ನೀಡಿದಲ್ಲಿ ಅಂತಹ ಜಮೀನು ಖರೀದಿಗೆ ಮುಂದಾಗಬಹುದು.

ಗ್ರಾಂಟ್‌ ಸರ್ಟಿಫಿಕೇಟ್‌ : ಕೃಷಿ ಭೂಮಿ ಮೂಲತಃ ಸರ್ಕಾರದ್ದು ಆಗಿದ್ದು, ಅದನ್ನು ಸಾಗುವಳಿ ಆಧಾರದ ಮೇಲೆ ಭೂ ರಹಿತರಿಗೆ ಮಂಜೂರು ಮಾಡಿದ್ದರೆ ಗ್ರಾಂಟ್‌ ಸರ್ಟಿಫಿಕೇಟ್‌ ಕಡ್ಡಾಯವಾಗಿ ಪಡೆಯಬೇಕು. ಇಂತಿಷ್ಟು ವರ್ಷ ಪರಭಾರೆ ಮಾಡಬಾರದು ಎಂಬ ಷರತ್ತು ಉಲ್ಲಂಘನೆಯಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಬಹುಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಳಪಟ್ಟಿರುವ ವ್ಯಕ್ತಿಗಳ ಜಮೀನು ಆಗಿದ್ದರೆ ಅದಕ್ಕೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಪಿಟಿಸಿಎಲ್ ಕಾಯ್ದೆ ಅಡಿ ಷರತ್ತುಗಳನ್ನು ಪೂರೈಸಬೇಕು. ಅವುಗಳ ಬಗ್ಗೆ ಖಾತ್ರಿ ಪಡಿಸಿಕೊಂಡೇ ಜಮೀನು ಖರೀದಿಗೆ ಮುಂದಾಗಬೇಕು. ಇಲ್ಲದಿದ್ದರೆ ಜಮೀನು ಖರೀದಿಸಿ ಹಣ ಕೊಟ್ಟರೂ ವಾಪಸು ಆ ಜಮೀನು ಧಕ್ಕಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ.

ಸರ್ವೆ ನಕ್ಷೆ:ಕೃಷಿ ಜಮೀನಿನ ಆಕಾರ, ಚೆಕ್ಕುಬಂದಿ, ಅದು ಇರುವ ಜಾಗ ಕುರಿತು ಸರ್ವೆ ಇಲಾಖೆ ನಕ್ಷೆ ನೀಡುತ್ತದೆ. ಕೃಷಿ ಜಮೀನು ಖರೀದಿ ಮುನ್ನ ಸರ್ವೆ ನಕ್ಷೆ ಸಹ ತಪ್ಪದೇ ನೋಡಬೇಕು. ಇಲ್ಲದಿದ್ದರೆ ಹೇಳಿರುವ ಜಮೀನಿಗೂ ಸರ್ವೆ ನಕ್ಷೆಗೂ ತಾಳೆಯಾಗದ ಪ್ರಸಂಗಗಳು ಎದುರಾಗಬಹುದು. ಹೀಗಾಗಿ ಜಮೀನಿನ ಸರ್ವೆ ನಕ್ಷೆಯನ್ನು ನೋಡಬೇಕು.

ಇತರೆ ದಾಖಲೆಗಳು: ಇನ್ನು ಇಷ್ಟು ಬಹುಮುಖ್ಯ ದಾಖಲೆಗಳು. ಇವುಗಳ ಜತೆಗೆ ಜಮೀನಿಗೆ ಸಂಬಂಧಿಸಿದಂತೆ ನೋಂದಣಿ ಇಲ್ಲದ ಸೇಳ್‌ ಅಗ್ರಿಮೆಂಟ್‌ ಜಿಪಿಎ, ಎಸ್‌ಪಿಎ ಇನ್ನಿತರ ದಾಖಲೆಗಳು ಇದ್ದಲ್ಲಿ ಅವುಗಳನ್ನು ಸಹ ಪರಿಶೀಲಿಸಿದ ನಂತರವೇ ಜಮೀನನ್ನು ಖರೀದಿಸಲು ಮುಂದಾಗಬೇಕು.

ಮುಂಗಡ ಕರಾರು ಮತ್ತು ಸೇಲ್‌ ಡೀಡ್‌ : ಇಷ್ಟೆಲ್ಲಾ ದಾಖಲೆಗಳನ್ನು ಖಚಿತಪಡಿಸಿಕೊಂಡು ಆನಂತರ ಆಸ್ತಿ ಖರೀದಿ ಬಗ್ಗೆ ಮುಂಗಡ ಕರಾರು ಮಾಡಿಕೊಂಡು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಬೇಕು. ಆ ನಂತರ ಪೂರ್ಣ ವ್ಯವಹಾರ ಮುಗಿಸಿದ ಬಳಿಕ ಸೇಲ್‌ ಡೀಡ್‌ ಮಾಡಿಸಿಕೊಳ್ಳಬೇಕು. ಸೇಲ್‌ ಡೀಡ್‌ ಆದ ಕೂಡಲೇ ಅದು ಇಸಿಯಲ್ಲಿ ನಮೂದಾಗುತ್ತದೆ. ಆ ನಂತರ ಆಸ್ತಿಗೆ ಸಂಬಂಧಿಸಿದಂತೆ ಖರೀದಿದಾರರು ತನ್ನ ಹೆಸರಿಗೆ ಖಾತೆ ಮಾಡಿಸಿಕೊಳ್ಳಬಹುದು. ದಸ್ತಾವೇಜು ನೋಂದಣಿ ಸಮಯದಲ್ಲಿ ಸರ್ಕಾರಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಬೇಕು. ಸೇಲ್ ಡೀಡ್‌ ನಲ್ಲಿ ಉಲ್ಲೇಖಿಸಿರುವ ವ್ಯಹವಾರದ ಹಣಕಾಸು ಬಗ್ಗೆ ನಿರ್ಧಿಷ್ಟ ವಿವರಗಳನ್ನು ಹಾಗೂ ಮೇಲೆ ಹೇಳಿರುವ ದಾಖಲೆಗಳಂತೆ ಆಸ್ತಿಯ ಚೆಕ್ಕುಬಂಧಿಯನ್ನು ತಪ್ಪದೇ ನಮೂದಿಸಿರಬೇಕು. ಪಿತ್ರಾರ್ಜಿತ ಆಸ್ತಿ ಖರೀದಿ ಮಾಡುತ್ತಿದ್ದರೆ ಅಂತಹ ಆಸ್ತಿಗೆ ಭವಿಷ್ಯದಲ್ಲಿನ ಹಕ್ಕುದಾರರಿಂದ ಒಪ್ಪಿಗೆ ಡೀಡ್‌ ನ್ನು ಮಾಡಿಸಿಕೊಳ್ಳಬೇಕು ಎಂದು ಕಂದಾಯ ಕಾನೂನು ಹೇಳುತ್ತದೆ.

Related News

spot_img

Revenue Alerts

spot_img

News

spot_img