ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ (ಎಂಎಚ್‌ಯುಎ) ಆಯೋಜಿಸುವ ಪ್ರತಿಷ್ಠಿತ ‘ಇಂಡಿಯಾ ವಾಟರ್ ಪಿಚ್-ಪೈಲಟ್-ಸ್ಕೇಲ್ ಸ್ಟಾರ್ಟ್-ಅಪ್ ಚಾಲೆಂಜ್’ಗೆ ಬೆಂಗಳೂರಿನ ಬೋಸನ್ ವೈಟ್‌ವಾಟರ್ ಕಂಪೆನಿ ಆಯ್ಕೆಯಾಗಿದೆ. ಈ ಕಂಪೆನಿಯು ಕೊಳಚೆ ನೀರಿನ ಸಂಸ್ಕರಣಾ ಘಟಕ (ಎಸ್‌ಟಿಪಿ) ತಂತ್ರಜ್ಞಾನದ ಮೂಲಕ ಬಳಸಿದ ತ್ಯಾಜ್ಯ ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರನ್ನಾಗಿ ಪರಿವರ್ತಿಸಿ, ಬೇರೆ ಬೇರೆ ಕೆಲಸಗಳಿಗೆ ಬಳಕೆಗೆ ಯೋಗ್ಯವನ್ನಾಗಿಸುತ್ತದೆ.
ನೀರು ಸರಬರಾಜು, ಬಳಸಿದ ನೀರಿನ ನಿರ್ವಹಣೆ, ಜಲಮೂಲಗಳ ಪುನರುಜ್ಜೀವನ ಮತ್ತು ಅಂತರ್ಜಲ ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ದೇಶದಾದ್ಯಂತ 76 ಸ್ಟಾರ್ಟ್ ಅಪ್ ಕಂಪೆನಿಗಳು ಈ ಸ್ಪರ್ಧೆಗೆ ಆಯ್ಕೆಯಾಗಿದ್ದು, ಇದರಲ್ಲಿ ಬೋಸನ್ ವೈಟ್‌ವಾಟರ್ ಕೂಡ ಒಂದಾಗಿರುವುದು ವಿಶೇಷ.
ಬೋಸನ್ ವೈಟ್‌ವಾಟರ್ ಕಂಪೆನಿಯು ನೀರಿನ ಮಿತ ಹಾಗೂ ಪುನರ್‌ಬಳಕೆಯನ್ನು ಉತ್ತೇಜಿಸುವ ಕಂಪೆನಿಯಾಗಿದ್ದು, ಕೈಗಾರಿಕೆಗಳು, ಐಟಿ ಪಾರ್ಕ್‌ಗಳು, ಮಾಲ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಬಳಕೆಯಾದ ತ್ಯಾಜ್ಯ ನೀರನ್ನು ಮರು ಬಳಕೆ ಮಾಡುವ ವಿಧಾನವನ್ನು ಬದಲಾಯಿಸುವ ಉದ್ದೇಶ ಹೊಂದಿದೆ.
ಈ ಕಂಪೆನಿಯನ್ನು ವಿಕಾಸ್ ಬ್ರಹ್ಮಾವರ್ ಹಾಗೂ ಗೌತಮನ್ ದೇಸಿಂಗ್ ಅವರು 2011ರಲ್ಲಿ ಸ್ಥಾಪಿಸಿದ್ದು, ಇಲ್ಲಿ ಬೋಸನ್ ವೈಟ್‌ವಾಟರ್ ವ್ಯವಸ್ಥೆ ಮೂಲಕ ಕೊಳಚೆ ನೀರನ್ನು ಕುಡಿಯಲು ಯೋಗ್ಯವಾದ ಗುಣಮಟ್ಟದ ನೀರಾಗಿ ಪರಿವರ್ತಿಸುತ್ತದೆ. ಹೀಗೆ ಪರಿವರ್ತಿಸಿದ ನೀರನ್ನು ವಾಣಿಜ್ಯ ಕಟ್ಟಡಗಳ ಕೇಂದ್ರಿಕೃತ ಹವಾನಿಯಂತ್ರಣ ಘಟಕಗಳಲ್ಲಿ, ಇತರ ಗೃಹಕೃತ್ಯಗಳಿಗೆ ಹಾಗೂ ಇತರ ಕೆಲಸಗಳಲ್ಲಿ ಬಳಸಬಹುದು.
ಬೋಸನ್ ವೈಟ್‌ವಾಟರ್(ಬಿಡಬ್ಲ್ಯುಡಬ್ಲ್ಯು) ವ್ಯವಸ್ಥೆಯಲ್ಲಿ ತ್ಯಾಜ್ಯ ನೀರಿನಲ್ಲಿನಲ್ಲಿರುವ ಬೇರೆ ಬೇರೆ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಮಾಲಿನ್ಯಕಾರಕಗಳನ್ನು ನಿರ್ಮೂಲನೆಗೊಳಿಸಲು 11 ವಿವಿಧ ಹಂತಗಳಲ್ಲಿ ತ್ಯಾಜ್ಯ ನೀರನ್ನು ಫಿಲ್ಟರ್ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಬಿಡಬ್ಲ್ಯುಡಬ್ಲ್ಯು ಫಿಲ್ಟರ್‌ಗಳ ಮೂಲಕ ತ್ಯಾಜ್ಯ ನೀರಿನ ವಾಸನೆ, ಕಬ್ಬಿಣದ ಅಂಶ, ಗಡಸುತನವನ್ನು ಫಿಲ್ಟರ್ ಮಾಡಲಾಗುತ್ತದೆ. ಹಾಗೇ ಮುಂದಿನ ಹಂತಗಳಲ್ಲಿ ಮಾಲಿನ್ಯ ಕಾರಕಗಳನ್ನು ಕಡಿಮೆ ಮಾಡಲು ವಿವಿಧ ರೀತಿಯ ಡೋಸಿಂಗ್, ಮೈಕ್ರಾನ್ ಫಿಲ್ಟರ್ ವ್ಯವಸ್ಥೆ ಬಳಸಲಾಗುತ್ತದೆ. ಹಾಗೇ ನೀರಿನಲ್ಲಿಯ ವಿವಿಧ ರೀತಿಯ ವೈರಸ್ ಹಾಗೂ ಲವಣಗಳನ್ನು ಅಲ್ಟ್ರಾ ವೈಯ್ಲೆಟ್ ಡಿಸ್‌ಇನ್ಫೆಕ್ಟೆಂಟ್ ಸಿಸ್ಟಂ ಬಳಸಿ ತೊಲಗಿಸಲಾಗುತ್ತದೆ.
ಈ 11 ಹಂತಗಳ ನಂತರ ಆ ನೀರಿನಲ್ಲಿ ಯಾವುದೇ ಗಡಸು ಅಥವಾ ಮಾಲಿನ್ಯಕಾರಕಗಳನ್ನು ಹೊಂದಿರುವುದಿಲ್ಲ ಎಂದು ಕಂಪೆನಿಯು ಪ್ರಮಾಣಿಸುತ್ತದೆ. ಇ ಕೋಲಿ, ಕೋಲಿಫಾರ್ಮ್ಸ್, ಲವಣಾಂಶಗಳು, ಗಡಸುತನ, ಜೀವಹಾನಿ ಕೀಟನಾಶಕಗಳಿಂದ ಮುಕ್ತವಾಗಿ ಕುಡಿಯಲು ಯೋಗ್ಯವಾಗಿರುತ್ತದೆ. ಎನ್‌ಎಬಿಎಲ್ ಸರ್ಟೀಫೈಡ್ ಲ್ಯಾಬ್ ರಿಪೋರ್ಟ್ ಈ ಸಂಸ್ಕರಿಸಿದ ನೀರು ಕುಡಿಯಲು ಯೋಗ್ಯ ಎಂದು ಹೇಳಿದೆ ಎಂದು ಕಂಪೆನಿ ಹೇಳಿಕೊಂಡಿದೆ.