ಭಾರತದ ಸಿಲಿಕಾನ್ ವ್ಯಾಲಿ ಎಂದೇ ಕರೆಯಿಸಿಕೊಳ್ಳುವ ಬೆಂಗಳೂರು, ಜಗತ್ತಿನ ವಿವಿಧ ಭಾಗಗಳ ಮಾಹಿತಿ ತಂತ್ರಜ್ಞಾನ (ಐಟಿ) ವೃತ್ತಿಪರರನ್ನು ತನ್ನತ್ತ ಸೆಳೆಯುತ್ತದೆ. ನೀವು ಇಂಥ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ಕನಸು ಇದ್ದಲ್ಲಿ, ಇಲ್ಲಿ ಮನೆ ನಿರ್ಮಾಣ ವೆಚ್ಚದ ಮೇಲೆ ಪ್ರಭಾವ ಬೀರುವ ಹಲವು ಅಂಶಗಳನ್ನು ತಿಳಿದುಕೊಳ್ಳಲೇಬೇಕು.
ಬೆಂಗಳೂರು ವಿಶ್ವ ದರ್ಜೆಯ ವಸತಿಗೃಹಗಳು ಮತ್ತು ವಿಲ್ಲಾಗಳನ್ನು ಒದಗಿಸುತ್ತದೆ. ಆದಾಗ್ಯೂ ಕೆಲವರು ನಿವೇಶನ ಖರೀದಿಸಿ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಕನಸಿನ ಮನೆ ನಿರ್ಮಾಣ ಮಾಡಬಯಸುತ್ತಾರೆ.
ಮನೆ ಕಟ್ಟುವುದು ಸಾಮಾನ್ಯವಾಗಿ ದೀರ್ಘ ಪ್ರಕ್ರಿಯೆ ಮತ್ತು ಕಚ್ಚಾ ಸಾಮಗ್ರಿ, ಕಾರ್ಮಿಕರ ಸಂಭಾವನೆ, ಅನುಮತಿ ಪಡೆಯುವುದು, ಮೂಲ ಸೌಕರ್ಯಗಳನ್ನು ಒಳಗೊಂಡಂತೆ ಹಲವು ರೀತಿಯ ವೆಚ್ಚವನ್ನು ಒಳಗೊಂಡಿದೆ. ಪ್ರಸಿದ್ಧ ವಾಸ್ತುಶಿಲ್ಪಿಯೊಬ್ಬರ ಪ್ರಕಾರ, ʻಈ ಅಂಶಗಳು ಮನೆ ನಿರ್ಮಾಣ ವೆಚ್ಚದ ಮೇಲೆ ಗಮನಾರ್ಹ ಪ್ರಭಾವ ಉಂಟುಮಾಡುತ್ತವೆ. ಸಾರಿಗೆ ಮತ್ತು ಕಚ್ಚಾ ಸಾಮಗ್ರಿ ವೆಚ್ಚದ ಆಧಾರದಲ್ಲಿ 2021ರಲ್ಲಿ ಬೆಂಗಳೂರಿನಲ್ಲಿ ಮನೆ ನಿರ್ಮಾಣ ವೆಚ್ಚವು ಚದರ ಅಡಿಗೆ 1,500 ರೂಪಾಯಿಯಿಂದ 3,000 ರೂಪಾಯಿಗಳ ವರೆಗೂ ಇತ್ತು. 2022ರಲ್ಲಿ ಈ ವೆಚ್ಚವು 1,650 ರೂಪಾಯಿಗಳಿಂದ 3,500 ರೂಪಾಯಿಗಳ ವರೆಗೂ ಹೆಚ್ಚಳವಾಗಿದೆ.
ನಿವೇಶನದ ಸ್ಥಿತಿ:
ನಿವೇಶನದ ಸ್ಥಿತಿಗತಿ ಕೂಡ ಮನೆ ನಿರ್ಮಾಣ ವೆಚ್ಚದ ಮೇಲೆ ಪ್ರಭಾವ ಬೀರುತ್ತದೆ. ಮಣ್ಣಿನ ಕಳಪೆ ಗುಣಮಟ್ಟ, ಸುಟ್ಟ ಪೈಪ್‌ಗಳು, ಕೇಬಲ್ ಅಥವಾ ವಿಷಕಾರಿ ತ್ಯಾಜ್ಯಗಳು ಭೂಮಿಯ ಗುಣಮಟ್ಟವನ್ನು ತಗ್ಗಿಸಬಲ್ಲವು. ನಿರ್ಮಾಣ ಆರಂಭಕ್ಕೂ ಮುನ್ನ ಇವನ್ನೆಲ್ಲ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಇನ್ನು, ಜೌಗು ಪ್ರದೇಶವಾಗಿದ್ದರೆ, ವಿಮಾನ ನಿಲ್ದಾಣದ ಸಮೀಪ ಇದ್ದರೆ ಭೂಮಿ ಅಗೆಯುವ ಮುನ್ನ ಸಂಬಂಧಿಸಿದ ಇಲಾಖೆಯಿಂದ ಅನುಮತಿಯನ್ನೂ ಪಡೆಯಬೇಕು.
ನಿಯಂತ್ರಕ ನಿಯಮಗಳು
ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ನಿಯಮಗಳು ಕಾಲಕ್ರಮೇಣ ಕಟ್ಟುನಿಟ್ಟಾಗಿವೆ. ಫ್ಲೋರ್ ಸ್ಪೇಸ್ ಇಂಡೆಕ್ಸ್ ಮತ್ತು ಸೆಟ್ಬ್ಯಾಕ್ ನಿಯಮ ಪಾಲನೆ ಕಡ್ಡಾಯ. ಮಹಾನಗರ ಪಾಲಿಕೆ ವತಿಯಿಂದ ಖಾತಾ ಪ್ರಮಾಣಪತ್ರವನ್ನೂ ಪಡೆಯಬೇಕು. ಮೂಲಸೌಕರ್ಯಗಳಿಗಾಗಿ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿಗಳಿಂದ ಅಗತ್ಯ ಅನುಮತಿ ಪಡೆದುಕೊಳ್ಳಬೇಕು. ಹೀಗೆ ಎಲ್ಲ ಬಗೆಯ ಅನುಮತಿ ಗಿಟ್ಟಿಸಲು ಅಂದಾಜು 30,000 ರೂಪಾಯಿಯಿಂದ ಒಂದು ಲಕ್ಷ ರೂಪಾಯಿ ವರೆಗೂ ಖರ್ಚಾಗುತ್ತದೆ.
ಕಚ್ಚಾ ಸಾಮಗ್ರಿ
ಕಚ್ಚಾ ಸಾಮಗ್ರಿ ವೆಚ್ಚವು ಬಿಲ್ಟ್ಅಪ್ ಏರಿಯಾ ಮತ್ತು ಗುಣಮಟ್ಟದ ಸಾಮಗ್ರಿ ಬಳಸುವುದಕ್ಕೆ ಅನುಗುಣವಾಗಿರುತ್ತದೆ. ಸಾಮಾನ್ಯ ಮನೆಗಿಂತ ಐಷಾರಾಮಿ ಮನೆ ನಿರ್ಮಾಣದ ಸಾಮಗ್ರಿ ವೆಚ್ಚ ಹೆಚ್ಚು.
ನೀವು ಮಾರ್ಬಲ್ ನೆಲಹಾಸು ಹಾಕುವುದಾದರೆ ಗ್ರಾನೈಟ್‌ಗಿಂತ ಹೆಚ್ಚು ವೆಚ್ಚದಾಯಕ. ಉಸುಕು, ಇಟ್ಟಿಗೆ, ಸಿಮೆಂಟ್, ಪೈಪುಗಳು, ವಿದ್ಯುತ್ ಸಾಮಗ್ರಿ, ಕಬ್ಬಿಣ ಸಾಮಗ್ರಿಗಳೂ ವೆಚ್ಚವನ್ನು ನಿರ್ಧರಿಸುತ್ತವೆ. ಒಟ್ಟಾರೆ ನಿರ್ಮಾಣ ವೆಚ್ಚದ ಶೇ 50ರಷ್ಟು ಮೊತ್ತ ಕಚ್ಚಾ ಸಾಮಗ್ರಿಗಳಿಗೇ ಮೀಸಲಾಗಿರುತ್ತದೆ.
ಕೂಲಿ, ಸಂಭಾವನೆ
ನಿವೇಶನದ ಅಳತೆ ಮತ್ತು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿನ್ಯಾಸದಲ್ಲಿ ಬದಲಾವಣೆ ಮಾಡುವುದರ ಮೇಲೆ ವಾಸ್ತುಶಿಲ್ಪಿಗಳ ಸಂಭಾವನೆ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಸಾವಿರ ಚದರ ಅಡಿಗೆ 20,000 ರೂಪಾಯಿ ಸಂಭಾವನೆ ಇದೆ. ಇನ್ನು ಕಾರ್ಮಿಕರ ವೆಚ್ಚ ಚದರ ಅಡಿಗೆ 200-300 ರೂಪಾಯಿ ಇರುತ್ತದೆ.
“ಈ ಎಲ್ಲ ಅಂಶಗಳನ್ನು ಗಮನಿಸಿದರೆ ಬೆಂಗಳೂರಿನಲ್ಲಿ 1,000-1,500 ಚದರ ಅಡಿಯ ಮನೆ ನಿರ್ಮಾಣ ವೆಚ್ಚವು 40 ಲಕ್ಷ ರೂಪಾಯಿಯಿಂದ 70 ಲಕ್ಷ ರೂಪಾಯಿ ವರೆಗೂ ಆಗಿರಲಿದೆ,” ಎನ್ನುತ್ತಾರೆ ತಜ್ಞರು.